ಶಿವಮೊಗ್ಗ ನಗರದ ಅಂಚಿನಲ್ಲಿರುವ ಶಾಂತಿನಗರ ಅರ್ಥಾತ್ ರಾಗಿಗುಡ್ಡ ಈಗ ಮಾಧ್ಯಮಗಳ ಕೇಂದ್ರಬಿಂದುವಾಗಿದೆ. ಮಾಧ್ಯಮಗಳ ವರದಿ ಹುಟ್ಟು ಹಾಕಿರುವ ಭಯದಿಂದಾಗಿ ಈ ಭಾಗದ ಜನರು ಆತಂಕಿತರಾಗಿದ್ದಾರೆ. ರಾಗಿಗುಡ್ಡದಾಚೆಗೆ ಶಿವಮೊಗ್ಗೆಯ ಇತರ ಭಾಗಗಳು ಎಂದಿನಂತೆ ಶಾಂತವಾಗಿದೆ. ವ್ಯಾಪಾರ ವಹಿವಾಟು ಎಂದಿನಂತೆ ನಡೆಯುತ್ತಿದೆ.
ಕಳೆದ ಭಾನುವಾರದಿಂದ ಮುಖ್ಯವಾಹಿನಿ ಮಾಧ್ಯಮಗಳಲ್ಲಿ ನಾಡಿದ ಜನತೆ ಕೇಳಿದ ಕೆಲವು ಪದಗಳು, “ಶಿವಮೊಗ್ಗ ಧಗ ಧಗ, ಶಿವಮೊಗ್ಗ ಕೊತ ಕೊತ, ಶಿವಮೊಗ್ಗ ನಿಗಿ ನಿಗಿ” ಎಂಬುದಾಗಿತ್ತು. ಹೀಗೆ ವರದಿ ಮಾಡಿದ ಮಾಧ್ಯಮಗಳು ಸತ್ಯವನ್ನು, ಜನರ ನಿಜದ ಭಾವನೆಗಳನ್ನು ಕೇಳಲು ಹೋಗುವುದಿಲ್ಲ.
ಶಿವಮೊಗ್ಗ ನಗರದ ಅಂಚಿನಲ್ಲಿರುವ ಶಾಂತಿನಗರ ಅರ್ಥಾತ್ ರಾಗಿಗುಡ್ಡ ಈಗ ಮಾಧ್ಯಮಗಳ ಕೇಂದ್ರಬಿಂದುವಾಗಿದೆ. ಮಾಧ್ಯಮಗಳ ವರದಿ ಹುಟ್ಟು ಹಾಕಿರುವ ಭಯದಿಂದಾಗಿ ಈಗ ಈ ಭಾಗದಲ್ಲಿ ಅಕ್ಷರಶಃ ಜನರು ಆತಂಕಿತರಾಗಿದ್ದಾರೆ. ಜಿಲ್ಲಾಡಳಿತವು ಸೆಕ್ಷನ್ 144 ಜಾರಿಗೊಳಿಸಿದೆ. ರಾಗಿಗುಡ್ಡದಾಚೆಗೆ ಶಿವಮೊಗ್ಗೆಯ ಇತರ ಭಾಗಗಳು ಎಂದಿನಂತೆ ಶಾಂತವಾಗಿ ವ್ಯಾಪಾರ ವಹಿವಾಟನ್ನು ನಡೆಸುತ್ತಿವೆ.
ಪರಿಸ್ಥಿತಿಯ ನೈಜ ವರದಿಗೆಂದು ಈ ದಿನ.ಕಾಮ್ ಶಿವಮೊಗ್ಗಕ್ಕೆ ಭೇಟಿ ನೀಡಿ ಜನಸಾಮಾನ್ಯರನ್ನು ಕಂಡು ಮಾತನಾಡಿಸಿದಾಗ ಕಂಡ ಸತ್ಯಗಳು ಅನೇಕ. ಇಂತಹ ಯಾವುದೇ ಘಟನೆಗಳು ಜನಸಾಮಾನ್ಯರಿಗೆ ಬೇಕಿಲ್ಲ.
ಮಂಗಳವಾರ ಸಂಜೆ 7 ಗಂಟೆಯ ಸಮಯ. ಶಾಂತಿನಗರದ ರಸ್ತೆಯುದ್ಧಕ್ಕೂ ಪೊಲೀಸರು ಜಮಾಯಿಸಿದ್ದರು. ನೂರಾರು ಪೊಲೀಸರು ಪಹರೆ ಕಾಯುತ್ತಿದ್ದರು. ಶಾಂತಿನಗರಕ್ಕೆ ಭೇಟಿ ನೀಡುವ ಪ್ರತಿಯೊಬ್ಬರ ಆಧಾರ್ ಕಾರ್ಡ್ ಪರಿಶೀಲಿಸಿ ನಗರದೊಳಕ್ಕೆ ಪ್ರವೇಶಿಸಬೇಕಿತ್ತು.
ಚೀಲವೊಂದನ್ನು ಹಿಡಿದು ಬಡಾವಣೆಗೆ ಬರುತ್ತಿದ್ದ ಹಣ್ಣುಹಣ್ಣು ಮುದುಕಿಯೊಬ್ಬರಿಗೆ ಕ್ಯಾಮೆರಾವನ್ನು ಹಿಡಿದಾಗ, “ಕೆಲಸದ ಮನೆಗೆ ಅಡುಗೆ ಮಾಡಲು ಹೋಗಿದ್ದೆನಪ್ಪ” ಎಂದಳು. “ಯಾಕೆ ಹೀಗೆ ಬಂದ್ ಮಾಡಿದ್ದಾರೆ?” ಎಂದು ಕೇಳಿದರೆ, “ಏನ್ ಮಾಡೋದ್ರಪ್ಪ, ಹೊಟ್ಟೆ ತುಂಬಿದೆ ಅವರಿಗೆ ಬಂದ್ ಮಾಡಿದ್ದಾರೆ, ಏನ್ ಮಾಡೋಣ. ನಮಗೆ ಕಷ್ಟವಾಗ್ತಾ ಐತೆ. ಕೆಲಸ ಮಾಡೋರಿಗೆಲ್ಲ ಕಷ್ಟ ಆಗೈತೆ. ಬಸ್ ದೂರದಲ್ಲಿ ನಿಂತ್ಕೊಳ್ಳುತ್ತೆ. ಅಲ್ಲಿಂದ ಇಲ್ಲಿಗೆ ನಡ್ಕೊಂಡು ಬರೋದ್ರೊಳಗೆ ನಮ್ಮ ಪ್ರಾಣ ಕೆಳಗೆ ಮೇಲೆ ಆಗ್ತಾ ಐತೆ” ಎಂದಳು. “ಏನೋ ಗಲಾಟೆ ಆಗ್ತಾ ಐತೆ ಅಂತಲ್ಲ” ಎಂದಾಗ ತಲೆ ಕಚ್ಚಿಕೊಂಡ ಮುಸ್ಲಿಂ ಮುದುಕಿ, “ಏನೋ ಗೊತ್ತಿಲ್ಲಪ್ಪ. ಅಷ್ಟೆಲ್ಲ ತಲೆ ಹಚ್ಕೊಂಡೈತೆ. ನನಗೇ ನನ್ನದೇ ಆಗೈತೆ. ನನ್ನ ಮಗ ಮರ ಕಡಿಯಲು ಹೋಗಿ ಬಿದ್ದೋಗಿದ್ದಾನೆ, ಕೈಕಾಲು ಮುರ್ಕೊಂಡಿದ್ದಾನೆ” ಎನ್ನುತ್ತಾ ಮುನ್ನಡೆದಳು. ಇದು ಶಾಂತಿನಗರದ ಸಾಮಾನ್ಯ ಮುಸ್ಲಿಮರ ಕಥೆ.

ರಾಗಿಗುಡ್ಡ ನಿಜಕ್ಕೂ ವಿಶಿಷ್ಟವಾದ ಸ್ಥಳ. ಅಲ್ಲಿ ಒಂದು ಮನೆ ಹಿಂದೂ ಕೋಮಿನದ್ದಾದರೆ, ಮತ್ತೊಂದು ಮುಸ್ಲಿಂ ಕೋಮಿನದ್ದು. ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರಿದ್ದರೂ ಅಲ್ಲಿ ಸಾಮಾನ್ಯ ಹಿಂದೂ ಮುಸ್ಲಿಮರ ನಡುವೆ ದಶಕಗಳ ಪ್ರೀತಿ ವಿಶ್ವಾಸವಿದೆ. ಯಾರೋ ಕಿಡಿಗೇಡಿ ಮತೀಯವಾದಿಗಳು ಮಾಡಿರುವ ಎಡವಟ್ಟಿಗೆ ಈ ಉಭಯ ಕೋಮಿನ ಜನರು ತತ್ತರಿಸುವಂತೆ, ಉತ್ತರಿಸುವಂತೆ ಆಗಿದೆ. ಸಮುದಾಯಗಳ ನಡುವೆ ಸಂಘರ್ಷ ತಂದೊಡ್ಡಲಾಗಿದೆ.
ಇಲ್ಲಿಗೆ ಜನರನ್ನು ಪ್ರತಿನಿತ್ಯ ಡ್ರಾಪ್ ಮಾಡುತ್ತಾ ಹೊಟ್ಟೆಹೊರೆಯುತ್ತಿರುವ ಆಟೋ ಚಾಲಕನೊಬ್ಬ ಹೇಳಿದ. “ಯಾವಾಗ ರಾಗಿಗುಡ್ಡದ ಎಂಟ್ರಿಗೆ ಅವಕಾಶ ನೀಡ್ತಾರೋ ಗೊತ್ತಿಲ್ಲ. ಎರಡು ದಿನದಿಂದ ನಮಗೆ ಲಾಸ್ ಆಗಿದೆ. ಶಿವಮೊಗ್ಗದ ಯಾವುದೇ ಭಾಗದಲ್ಲಿ ಸಮಸ್ಯೆಯಾಗಿಲ್ಲ. ಇಡೀ ಶಿವಮೊಗ್ಗವೇ ಬಂದ್ ಆಗಿರುವಂತೆ ಬಿಂಬಿಸಲಾಗಿದೆ. ಶಾಂತಿನಗರಕ್ಕೆ ಬಾಡಿಗೆ ಹೋಗಲಾಗದಂತೆ ಮಾಡಿ ನಮ್ಮ ಹೊಟ್ಟೆ ಮೇಲೆ ಹೊಡೆಯಲಾಗಿದೆ” ಎಂದು ಬೇಸರ ವ್ಯಕ್ತಪಡಿಸಿದ.
ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂದೆ ಮಾತಿಗೆ ಸಿಕ್ಕ ಹಿಂದೂ ಸಮುದಾಯದ ಬೀದಿಬದಿ ವ್ಯಾಪಾರಿ ರಾಜೇಶ್, “ನಾವು ಮಾಡಿದ ಗಣೇಶ ಹಬ್ಬದಲ್ಲಿ ಮುಸ್ಲಿಮರು ಪಾಲ್ಗೊಂಡಿದ್ದರು. ಗಣೇಶನ ಮೂರ್ತಿ ವಿಸರ್ಜನೆಯವರೆಗೂ ಜೊತೆಯಲ್ಲಿದ್ದು ಸಂಭ್ರಮಿಸಿದರು. ಆದರೆ, ರಾಗಿಗುಡ್ಡದಲ್ಲಿ ಯಾರೋ ಕಲ್ಲು ತೂರಾಟ ನಡೆಸಿ ನೆಮ್ಮದಿಯನ್ನು ಹಾಳು ಮಾಡಿದ್ದಾರೆ. ಅವರೆಲ್ಲರಿಗೂ ಶಿಕ್ಷೆಯಾಗಬೇಕು. ಹಿಂದೂ -ಮುಸ್ಲಿಮರು ನೆಮ್ಮದಿಯಾಗಿ ಇರಲು ಇವರು ಬಿಡುವುದಿಲ್ಲ” ಎಂದು ನೊಂದು ನುಡಿದರು.
ಎಸ್ಪಿ ಕಚೇರಿ ಎದುರಿನ ರಸ್ತೆ ಬದಿಯಲ್ಲಿ ಟೀ ಅಂಗಡಿ ಇಟ್ಟುಕೊಂಡಿರುವ ನಟರಾಜ್, “ಯಾವುದೇ ಸರ್ಕಾರ ಬರಲಿ, ಯಾರೋ ತಪ್ಪು ಮಾಡಿದರೂ ಕಾನೂನಿನ ರೀತಿಯಲ್ಲಿ ಕ್ರಮ ಜರುಗಿಸಬೇಕು. ಕಟ್ಟುನಿಟ್ಟಿನಲ್ಲಿ ದಂಡನೆಗೆ ಒಳಪಡಿಸಬೇಕು. ದೇಶದ ಯಾವುದೇ ಪ್ರಜೆ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಇಲ್ಲಿ ನಮಗೆ ಬದುಕಲು ಅವಕಾಶವಿದೆ. ಕಲ್ಲು ತೂರಲು ಅವಕಾಶವಿಲ್ಲ. ಬಡವರ ಮಕ್ಕಳೇ ಇದರಲ್ಲಿ ಬಲಿಯಾಗುತ್ತಿದ್ದಾರೆ. ಈ ಬಡವರು ಯಾಕೆ ಇಂತಹ ಗಲಭೆಗಳಿಗೆ ಹೋಗಬೇಕು? ತನ್ನ ಮನೆಯನ್ನು ತಾನು ಉದ್ದಾರ ಮಾಡಿಕೊಳ್ಳಬೇಕು. ಬೇರೆಯವರ ಮನೆಯನ್ನು ಉದ್ಧಾರ ಮಾಡೋದಲ್ಲ. ಯಾರೋ ರಾಜಕೀಯದವರು ಕರೆಯುತ್ತಾರೆಂದು ನೀವೇಕೆ ಅಲ್ಲಿಗೆ ಹೋಗಿದ್ರಿ?” ಎಂದು ಕೇಳುತ್ತಾರೆ ಅವರು.
“ಯಾವುದೇ ಆಚರಣೆ ಜನರಿಗೆ ನೆಮ್ಮದಿಯನ್ನು ನೀಡಬೇಕು. ಗಲಭೆಗಳನ್ನು ನಡೆಸುವ ರಾಜಕೀಯ ವ್ಯಕ್ತಿಗಳಿಂದ ದೂರ ಇರೋಣ. ಇದರಿಂದ ಹೊಡೆತ ಬೀಳೋದು ಶ್ರೀಮಂತರ ಮಕ್ಕಳಿಗೆ ಬೀಳಲ್ಲ. ಮಧ್ಯಮ ವರ್ಗದವರು, ಬಡವರೇ ಇದರ ಬಲಿಪಶುಗಳು. ಯಾವುದೇ ರಾಜಕಾರಣಿಗಳ ಮಕ್ಕಳು ಇಂಥವುಗಳಿಗೆ ಬರುವುದಿಲ್ಲ. ಬಡವರು ಇವುಗಳಿಂದ ದೂರ ಇರ್ರಪ್ಪ. ಯಾವುದೇ ಸಮಾಜದವರಾದರೂ ಇಂಥವುಗಳಿಂದ ದೂರ ಇರಬೇಕು. ನನ್ನ ಸೇಫ್ಟಿಯನ್ನು ನಾನು ನೋಡಿಕೊಳ್ಳಬೇಕಾದರೆ ಇಂಥವುಗಳಿಂದ ದೂರ ಇರಬೇಕು. ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆ ಹೂ ಏಕೆ? ಊರು ಉಸಾಬರಿ ನಿನಗೇಕೆ?” ಎಂದು ಪ್ರಶ್ನಿಸಿದರು.
ಇದು ಶಿವಮೊಗ್ಗದ ಸಾಮಾನ್ಯ ಜನರ ಅಭಿಪ್ರಾಯ. ಸಮಾಜವನ್ನು ಒಡೆಯುವ ಘಾತುಕ ಶಕ್ತಿಗಳು ಬದುಕಿನ ಮೇಲೆ ನೀಡುವ ಹೊಡೆತಗಳ ಬಗ್ಗೆ ಇಲ್ಲಿನ ಜನರಿಗೆ ಎಚ್ಚರಿಕೆ ಇದೆ. ಆದರೆ ಶಿವಮೊಗ್ಗ ನಿಗಿನಿಗಿ, ಕೊತಕೊತ, ಧಗಧಗ ಎನ್ನುವ ಮಾಧ್ಯಮಗಳ ವರದಿಗಳು ಸತ್ಯಕ್ಕೆ ದೂರವಾಗಿವೆ.
ಇದನ್ನೂ ಓದಿ
1 ಔರಂಗಜೇಬ ನೆಪ ಮಾತ್ರ ; ಈದ್ ಮಿಲಾದ್‌ಗೆ ಟಾರ್ಗೆಟ್‌ಗೆಂದೇ ಈ ದ್ವಾರ ಹಾಕಲಾಗಿತ್ತಾ? ಇಲ್ಲಿದೆ ವಿವರ
2 ಕೇಸರಿ-ಹಸಿರು ಗುಂಪುಗಳು; ಜಾತ್ಯತೀತ ಪರಂಪರೆಯ ನಡುವೆ ಸೀಳು ಮೂಡಿಸುವ ಸಮಾನಾಂತರ ಹಳಿಗಳು
3 ಕೋಮುಗಲಭೆಗೆ ಶಿವಮೊಗ್ಗದ ರಾಗಿಗುಡ್ಡವನ್ನೇ ಯಾಕೆ ಆಯ್ಕೆ ಮಾಡಲಾಯಿತು ?
4 ಮುಸ್ಲಿಮರು ಕ್ರಿಯೆಗೆ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ; ʼಸಹಿಸಿಕೊಂಡವನೇ ಗೆಲ್ಲುತ್ತಾನೆʼ ಎನ್ನುವ ಸತ್ಯವನ್ನು ಅರಿಯಬೇಕು

ಯತಿರಾಜ್ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.