ಸಿಲ್ಕ್ಯಾರ ಸುರಂಗ ಕುಸಿತ- ಪರಿಸರ ಕುರಿತ ದಿವ್ಯ ನಿರ್ಲಕ್ಷ್ಯವೇ ಕಾರಣ

Date:

Advertisements
ಪ್ರಧಾನಿ ಮೋದಿಯವರ ಮಹತ್ವಾಕಾಂಕ್ಷೆಯ ಚಾರ್ ಧಾಮ್ ಯೋಜನೆಯನ್ನು ತೀವ್ರ ಧಾವಂತದಲ್ಲಿ ಜಾರಿ ಮಾಡಲಾಗುತ್ತಿದೆ. ಕಾನೂನು, ನಿಯಮಗಳನ್ನು ಉಲ್ಲಂಘಿಸಿ ಅಡ್ಡದಾರಿ ಹಿಡಿಯಲಾಗಿದೆ. ಹಿಂದೂ ಧಾರ್ಮಿಕ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸುವುದು ಮುಖ್ಯವೇ ಹೊರತು ಹಿಮಾಲಯವನ್ನು ರಕ್ಷಿಸುವುದು ಅವರ ಆದ್ಯತೆಯಾಗಿಲ್ಲ

 

ತ್ತರಾಖಂಡದ ಸಿಲ್ಕ್ಯಾರ ಸುರಂಗ ಕುಸಿತದಲ್ಲಿ ಸಿಕ್ಕಿ ಹಾಕಿಕೊಂಡಿರುವ 41 ಕಾರ್ಮಿಕರ ಪ್ರಾಣರಕ್ಷಣೆಗೆ ಬೃಹತ್ ಪ್ರಯತ್ನವೊಂದು ಜರುಗಿದೆ. ಮುಂಬರುವ ದಿನಗಳಲ್ಲಿ ಇಂತಹ ಘಟನೆಗಳನ್ನು ತಡೆಯಲು ಭಾರತ ಸರ್ಕಾರ ಕ್ರಮ ಜರುಗಿಸುತ್ತಿದೆ.

ಈ ಹಿನ್ನೆಲೆಯಲ್ಲಿ ದೇಶಾದ್ಯಂತ ನಡೆಯುತ್ತಿರುವ ಎಲ್ಲ ಸುರಂಗ ಯೋಜನೆಗಳ ಪರಿವೀಕ್ಷಣೆ ಮಾಡುವಂತೆ ಭಾರತ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರಕ್ಕೆ ಆದೇಶ ನೀಡಲಾಗಿದೆ. ನಿರ್ಮಾಣದ ಹೊತ್ತಿನಲ್ಲಿ ಅತ್ಯುನ್ನತ ಗುಣಮಟ್ಟವನ್ನು ಕಾಯ್ದುಕೊಳ್ಳಲು ಮತ್ತು ನಿರ್ಮಾಣ ಹಂತದಲ್ಲಿರುವ ದೇಶದ ಎಲ್ಲ 29 ಸುರಂಗಗಳ ಸುರಕ್ಷತೆ ಲೆಕ್ಕಶೋಧನೆಯನ್ನು (ಸೇಫ್ಟಿ ಆಡಿಟ್) ಕೈಗೊಳ್ಳುವುದಾಗಿ ಈ ಪ್ರಾಧಿಕಾರ ಹೇಳಿಕೆ ನೀಡಿದೆ.

ಹಿಮಾಚಲದ 12 ಮತ್ತು ಜಮ್ಮುಕಾಶ್ಮೀರದ ಆರು ಸುರಂಗಗಳ ಸುರಕ್ಷತೆ ಲೆಕ್ಕಶೋಧನೆಯನ್ನು ಪ್ರಾಧಿಕಾರ ನಡೆಸಲಿದೆ. ಸಿಲ್ಕ್ಯಾರ ಸುರಂಗವಿರುವ ಉತ್ತರಾಖಂಡ ಮತ್ತು ಇತರೆ ರಾಜ್ಯಗಳಲ್ಲಿನ ಸುರಂಗ ಯೋಜನೆಗಳನ್ನೂ ಪರಿಶೀಲಿಸಲಿದೆ. ಸುರಕ್ಷತೆಯ ವಿಷಯದಲ್ಲಿ ಭಾರತದ ಕಳಕಳಿ ಅಷ್ಟಕ್ಕಷ್ಟೇ. ಸುಧಾರಿಸಿಕೊಳ್ಳಬೇಕಿರುವ ಹಲವು ಸಂಗತಿಗಳಿವೆ.

Advertisements

ಸಿಲ್ಕ್ಯಾರ ಸುರಂಗದ ಉದಾಹರಣೆಯನ್ನೇ ತೆಗೆದುಕೊಳ್ಳೋಣ. ತುರ್ತು ನಿರ್ಗಮನದ ಏರ್ಪಾಡಿನ ಕುರಿತು ಇಲ್ಲಿ ತಲೆ ಕೆಡಿಸಿಕೊಂಡೇ ಇರಲಿಲ್ಲ. ಹೀಗಾಗಿಯೇ ಸುರಕ್ಷತಾ ಕಾರ್ಯ ಕಡುಕಠಿಣವಾಗಿ ಪರಿಣಮಿಸಿದೆ. ಅಸ್ಥಿರ ಭೂಪ್ರದೇಶ ಮತ್ತು ಮುರಿದು ಮೊಂಡಾಗುವ ಯಂತ್ರೋಪಕರಣದ ಜೊತೆ ಗುದ್ದಾಡಬೇಕಾಗಿ ಬಂದಿದೆ.

ಈ ಕುಸಿತ ಪ್ರಕರಣ ಹಿಮಾಲಯ ಪ್ರದೇಶದಲ್ಲಿನ ವ್ಯಾಪಕ ಸಮಸ್ಯೆಯ ಸಂಕೇತ. ಅಭಿವೃದ್ಧಿ ಯೋಜನೆಗಳನ್ನು ಇಲ್ಲಿ ಸಮರ್ಪಕವಾಗಿ ಯೋಜಿಸಿ ಜಾರಿಗೊಳಿಸುತ್ತಿಲ್ಲ. ಪರಿಣಾಮವಾಗಿ ಇಲ್ಲಿನ ಪ್ರಕೃತಿ ವಿಕೋಪಗಳುವಿನಾಶಗಳ ಸಂಖ್ಯೆ ಮತ್ತು ಸಾಂದ್ರತೆ ಎರಡೂ ಹೆಚ್ಚತೊಡಗಿದೆ.

ಭೂಕುಸಿತಗಳು, ಭೂಕಂಪಗಳು ಹಾಗೂ ಪ್ರವಾಹಗಳು ಮತ್ತೆ ಮತ್ತೆ ಉತ್ತರಾಖಂಡವನ್ನು ಅಪ್ಪಳಿಸಿವೆ. ಭೂಗರ್ಭಶಾಸ್ತ್ರವನ್ನು ಪರಿಗಣಿಸಿ ಹೇಳುವುದಾದರೆ ಇಲ್ಲಿನ ಪರ್ವತಗಳು ಅಸ್ಥಿರ ಎಂದು ತಜ್ಞರು ಇಲ್ಲಿನ ನಿವಾಸಿಗಳನ್ನು ಎಚ್ಚರಿಸುತ್ತಲೇ ಬಂದಿದ್ದಾರೆ.

ಭೂಗರ್ಭದಲ್ಲಿ ಅಡಗಿದ್ದ ಬಂಡೆಯೊಂದರ ದುರ್ಬಲ ಭಾಗದಿಂದಾಗಿ ಸಿಲ್ಕ್ಯಾರ ಸುರಂಗ ಕುಸಿದಿರಬಹುದು ಎಂಬುದು ಅಧಿಕಾರಿಗಳ ಆಶಂಕೆ. ಭಾರತೀಯ ಮತ್ತು ಜಾಗತಿಕ ಮೀಡಿಯಾ ಬೆಳಕು ಬೀರಿರುವ ಪ್ರಕಾರ ಹಿಮಾಲಯ ಪರಿಸರ ವ್ಯವಸ್ಥೆಯ ಶಿಥಿಲತೆಯು ಹೆಚ್ಚು ಗಮನ ಸೆಳೆಯತೊಡಗಿದೆ.

13 1518067050
ಕೇದಾರನಾಥ

ನಾಲ್ಕೂವರೆ ಕಿಲೋಮೀಟರು ಉದ್ದದ ಸಿಲ್ಕ್ಯಾರ ಸುರಂಗ ಚಾರ್ ಧಾಮ್ ತೀರ್ಥಯಾತ್ರೆಯ ಮಾರ್ಗಕ್ಕೆ ಸಂಬಂಧಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲೊಂದು. ಗಂಗೋತ್ರಿ, ಯಮುನೋತ್ರಿ, ಬದರೀನಾಥ ಹಾಗೂ ಕೇದಾರನಾಥ ಪವಿತ್ರ ಧಾಮಗಳ ನಡುವೆ ಸಂಪರ್ಕ ಕಲ್ಪಿಸುವ 890 ಕಿ.ಮೀ.ಉದ್ದದ ಜೋಡಿಪಥಗಳನ್ನು ಉಳ್ಳ ಸರ್ವಋತು ಹೆದ್ದಾರಿ ನಿರ್ಮಾಣ ಈ ಯೋಜನೆಯ ಉದ್ದೇಶ.

ಇಲ್ಲಿ ಜರುಗುತ್ತಿರುವ ಹುಚ್ಚಾಬಟ್ಟೆ ಅಭಿವೃದ್ಧಿಯು ಸ್ಥಳೀಯ ಪರಿಸರವ್ಯವಸ್ಥೆಯನ್ನು ಹವಾಮಾನ ಬದಲಾವಣೆಯ ವೈಪರೀತ್ಯಕ್ಕೆ ಹೆಚ್ಚು ಹೆಚ್ಚು ಸೂಕ್ಷ್ಮವಾಗಿಸತೊಡಗಿದೆ. ಲಂಗುಲಗಾಮಿಲ್ಲದ ಕಟ್ಟಡ ನಿರ್ಮಾಣ, ಜಲವಿದ್ಯುಚ್ಛಕ್ತಿ ಅಭಿವೃದ್ಧಿ ಹಾಗೂ ಸೂಕ್ತ ಒಳಚರಂಡಿ ವ್ಯವಸ್ಥೆಯ ಅಭಾವದ ಬಿಕ್ಕಟ್ಟನ್ನು ಬಿಗಡಾಯಿಸಿದೆ ಎಂಬುದು ತಜ್ಞರ ಅಭಿಪ್ರಾಯ.

ಈ ವರ್ಷವೊಂದರಲ್ಲೇ ಹಿಮಾಲಯ ಪ್ರದೇಶ ಹಲವಾರು ಅವಘಡಗಳನ್ನು ಅನುಭವಿಸಿದೆ. ಉತ್ತರಾಖಂಡದ ಪ್ರಮುಖ ಪಟ್ಟಣ ಜೋಶಿಮಠ ಕುಸಿತದಿಂದ ಹಿಡಿದು, ಹಿಮಾಚಲದ ಪ್ರವಾಹಗಳು ಮತ್ತು ಭೂಕುಸಿತಗಳು, ಸಿಕ್ಕಿಮ್ ನ ಲೊನಾಕ್ ಸರೋವರದ ಮೇಲೆ ಜರುಗಿದ ಹಠಾತ್ ಮೇಘಸ್ಫೋಟದ ಜೊತೆಗೆ ಸಿಲ್ಕ್ಯಾರ್ ಸುರಂಗ ಕುಸಿತ.

ಸಾಕಷ್ಟು ಭೂಗರ್ಭಶಾಸ್ತ್ರೀಯ ಸಮೀಕ್ಷೆಗಳನ್ನು ಕೈಗೊಳ್ಳದೆಯೇ ಸಿಲ್ಕ್ಯಾರ ಸುರಂಗ ನಿರ್ಮಾಣ ಕೆಲಸವನ್ನು ಆರಂಭಿಸಲಾಗಿದೆ. ರಿಶಿ ಗಂಗಾ ಮತ್ತು ಧೌಲಿ ಕಣಿವೆಯ 2021ರ ಪ್ರವಾಹಗಳು ಹಾಗೂ ತಪೋವನ ವಿಷ್ಣುಗಡ ಜಲವಿದ್ಯುತ್ ಯೋಜನೆಯ ಸುರಂಗಗಳಲ್ಲಿ ಸಿಕ್ಕಿಕೊಂಡವರೂ ಸೇರಿ 200 ಮಂದಿ ಪ್ರಾಣ ತೆತ್ತಿದ್ದಾರೆ. ಇವುಗಳಿಂದ ನಾವು ಯಾವ ಪಾಠಗಳನ್ನೂ ಕಲಿತಿಲ್ಲ. ಸಿಲ್ಕ್ಯಾರ ಸುರಂಗ ನಿರ್ಮಾಣದಲ್ಲಿ ಸುರಕ್ಷತಾ ಕ್ರಮಗಳನ್ನು ಆರಂಭದಿಂದಲೂ ಗಾಳಿಗೆ ತೂರಲಾಯಿತು ಎನ್ನುತ್ತಾರೆ ಪರಿಸರವಾದಿ ಶೇಖರ್ ಪಾಠಕ್.

IMG Joshimath
ಜೋಶಿಮಠ

ಹಿಮಾಲಯ ಪ್ರದೇಶದಲ್ಲಿ ಏನೇ ಮಾಡುವುದಿದ್ದರೂ ಸ್ಥಳೀಯ ಸಮುದಾಯಗಳು ಮತ್ತು ವಿಜ್ಞಾನಿಗಳೊಂದಿಗೆ ಸಮಾಲೋಚನೆ ನಡೆಸಬೇಕು ಮತ್ತು ಆಳದ ಅಧ್ಯಯನ ಹಾಗೂ ವಿಶ್ಲೇಷಣೆಯ ನಂತರವೇ ಮುಂದುವರೆಯಬೇಕು. ಹಿಮಾಲಯ ಪ್ರದೇಶವನ್ನು ಭಾರೀ ವಿನಾಶದಿಂದ ಕಾಪಾಡಬೇಕಾದದ್ದು ಬಹುಮುಖ್ಯ. ಇಲ್ಲವಾದರೆ ಭವಿಷ್ಯತ್ತಿನಲ್ಲಿ ಹೆಚ್ಚು ಹೆಚ್ಚು ಪ್ರಾಣಹಾನಿ ನಿಶ್ಚಿತ ಎಂಬುದು ಅವರ ಖಚಿತ ಎಚ್ಚರಿಕೆ.

890 ಕಿಲೋಮೀಟರುಗಳ ಚಾರ್ ಧಾಮ್ ಸಂಪರ್ಕ ಯೋಜನೆ ರೂಪಿಸುವಲ್ಲಿ ಮತ್ತು ಅದರ ಜಾರಿಯಲ್ಲಿ ಗುರುತರ ತಪ್ಪುಗಳನ್ನು ಎಸಗಲಾಗಿದೆ. ನೂರು ಕಿ.ಮೀ. ಗಳಿಗೂ ಹೆಚ್ಚಿನ ಉದ್ದದ ಯೋಜನೆಗಳಿಗೆ ಪರಿಸರ ಸಾಧಕ ಬಾಧಕ ಅಂದಾಜು ವರದಿಗಳನ್ನು ಪರಿಗಣಿಸಬೇಕು ಎಂಬ ನಿಯಮವನ್ನು ಪಕ್ಕಕ್ಕೆ ಸರಿಸಿ ಹಸಿರು ನಿಶಾನೆ ತೋರಲಾಗಿದೆ ಎಂಬುದು ಹೆಚ್ಚಿನ ಸಂಖ್ಯೆಯ ತಜ್ಞರ ಹೇಳಿಕೆ.

ಅಧಿಕೃತವಾಗಿ ಈ ಯೋಜನೆಯು 53 ಸಣ್ಣ ಸಣ್ಣ ಯೋಜನೆಗಳ ಸಮೂಹವೇ ವಿನಾ ಒಂದು ಯೋಜನೆಯಲ್ಲ. ಹೀಗಾಗಿ ಪರಿಸರ ಸಾಧಕಬಾಧಕ ಅಧ್ಯಯನ ವರದಿಗಳನ್ನು ಪರಿಗಣಿಸಿಲ್ಲ.

ಅಕಾಲಿಕ ಮತ್ತು ಅತ್ಯಧಿಕ ವರ್ಷಧಾರೆಯು ಈ ವಲಯವನ್ನು ಹವಾಮಾನ ಬದಲಾವಣೆಯ ದಿಸೆಯಲ್ಲಿ ಹೆಚ್ಚು ತಳಮಳಕ್ಕೆ ನೂಕಿದೆ ಎಂಬುದು ವಿಜ್ಞಾನ ಮತ್ತು ಪರಿಸರ ಕೇಂದ್ರದ ನಿರ್ದೇಶಕಿ ಸುನೀತಾ ನಾರಾಯಣ್ ಅನಿಸಿಕೆ. ಹಿಮಾಲಯ ಪ್ರದೇಶದ ನೀರ್ಗಲ್ಲುಗಳು ತೀವ್ರಗತಿಯಲ್ಲಿ ಕರಗತೊಡಗಿವೆ. ಪ್ರವಾಹಗಳು ಮತ್ತು ಭೂಕುಸಿತಗಳ ಅಪಾಯಗಳನ್ನು ಅಧಿಕಗೊಳಿಸತೊಡಗಿವೆ ಎಂದು ಹಲವು ಅಧ್ಯಯನಗಳು ಹೇಳಿವೆ.

ಇದನ್ನೂ ಓದಿ ಚಿತ್ರರಂಗದ ಸಹ ಕಲಾವಿದರು, ತಾಂತ್ರಿಕ ವರ್ಗದವರಿಗೆ ಪಿಂಚಣಿ ಭಾಗ್ಯಕ್ಕೆ ಚಿಂತನೆ: ಡಿ ಕೆ ಶಿವಕುಮಾರ್

ಚಾರ್ ಧಾಮ್ ಯೋಜನೆಯ ಪರಿಸರ ಮತ್ತು ಸಾಮಾಜಿಕ ಹಾನಿಯನ್ನು ಅಂದಾಜು ಮಾಡಲು ಮತ್ತು ಈ ಹಾನಿಯನ್ನು ಮುಂದಾಗಿಯೇ ನಿವಾರಿಸಲು ಕೈಗೊಳ್ಳಬೇಕಾದ ಕ್ರಮಗಳನ್ನು ಸೂಚಿಸಲು ಸುಪ್ರೀಮ್ ಕೋರ್ಟು 2019ರಲ್ಲಿ ಉನ್ನತ ಸಮಿತಿಯೊಂದನ್ನು ರಚಿಸಿತು.

ತಾವು ಮಾಡಿದ ಶಿಫಾರಸುಗಳನ್ನು ಜಾರಿಗೆ ತರಲಿಲ್ಲವೆಂದು ದೂರಿ ಈ ಸಮಿತಿಯ ಅಧ್ಯಕ್ಷ ಮತ್ತು ಗಣ್ಯ ಪರಿಸರವಾದಿ ರವಿ ಛೋಪ್ರಾ 2022ರಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇಡೀ ಚಾರ್ ಧಾಮ್ ಯೋಜನೆಯನ್ನು ತೀವ್ರ ಧಾವಂತದಲ್ಲಿ ಜಾರಿ ಮಾಡಲಾಗುತ್ತಿದೆ. ಕಾನೂನುಗಳು ನಿಯಮಗಳನ್ನು ಉಲ್ಲಂಘಿಸಿ ಅಡ್ಡದಾರಿ ಹಿಡಿಯಲಾಗಿದೆ. ಪರಿಸರ ಸಾಧಕಬಾಧಕ ವರದಿಯನ್ನು ಪರಿಗಣಿಸದೆ ಇದ್ದದ್ದು ಪ್ರತಿಕೂಲವಾಗಿ ಪರಿಣಮಿಸಿದೆ ಎಂಬುದು ಅವರ ನಿಚ್ಚಳ ಅನಿಸಿಕೆ.

ಪರಿಸರ ಸಂಬಂಧಿ ಸಂಗತಿಗಳನ್ನು ಪಕ್ಕಕ್ಕೆ ಸರಿಸುವುದರಿಂದ ಸುರಂಗ ಕುಸಿತದಂತಹ ಘಟನೆಗಳು ಹೆಚ್ಚಲಿವೆ. ಹಿಮಾಲಯ ಪ್ರದೇಶದಲ್ಲಿ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರಬೇಕಿದ್ದರೆ ಪರಿಸರ ಸಂಬಂಧದ ಕಳಕಳಿಗೆ ಮೊದಲು ಕಿವಿಗೊಡಬೇಕು ಎಂಬುದು ಅವರ ನಿಷ್ಠುರ ಸಲಹೆ.

ಕೃಪೆ: www.dw.com
ಅನುವಾದ: ಡಿ ಉಮಾಪತಿ

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಹಕಾರ ಖಾತೆ | ಡಿಕೆ ಶಿವಕುಮಾರ್ ಗುಂಪಿಗೋ, ಜಾರಕಿಹೊಳಿ ಗುಂಪಿಗೋ?

ಕೆ.ಎನ್. ರಾಜಣ್ಣ ಅವರ ಸಹಕಾರ ಖಾತೆ ತೆರವಾಗಿದೆ. ಯಾರಿಗೆ ಎನ್ನುವುದು ಪ್ರಶ್ನೆಯಾಗಿದೆ....

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

Download Eedina App Android / iOS

X