ಕುಂಭಮೇಳದಲ್ಲಿ ಕಾಲ್ತುಳಿತ: ದುರಂತ ಮತ್ತು ನಿರ್ಲಕ್ಷ್ಯಕ್ಕೆ ಯಾರು ಹೊಣೆ?

Date:

Advertisements
ತಿರುಪತಿಯಲ್ಲಿ ಕಾಲ್ತುಳಿತ ಸಂಭವಿಸಿ, 6 ಮಂದಿ ಸಾವನ್ನಪ್ಪಿದ್ದರು. ಉತ್ತರ ಪ್ರದೇಶದಲ್ಲಿಯೇ ನಡೆದಿದ್ದ 'ಸತ್ಸಂಗ' ಕಾರ್ಯಕ್ರಮದಲ್ಲೂ ಭೀಕರ ಕಾಲ್ತುಳಿತವಾಗಿ 12 ಮಂದಿ ಜೀವ ಕಳೆದುಕೊಂಡರು. ಆದರೂ, ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುವವರು, ಆಳುವವರು ಎಚ್ಚೆತ್ತುಕೊಂಡಿಲ್ಲ.

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ ನಗರದಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಬುಧವಾರ ಭಾರೀ ಕಾಲ್ತುಳಿತ ಉಂಟಾಗಿದೆ. ಕರ್ನಾಟಕದವರೂ ಸೇರಿದಂತೆ ಸುಮಾರು 30ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ನೂರಾರು ಮಂದಿ ಗಾಯಗೊಂಡಿದ್ದಾರೆ. ಹಲವರು ಬದುಕುಳಿದು ಬಂದಿದ್ದೇ ಹೆಚ್ಚೆಂದು ನಿಟ್ಟುಸಿರು ಬಿಟ್ಟಿದ್ದಾರೆ.

ಇಂತಹ ಧಾರ್ಮಿಕ ಕಾರ್ಯಕ್ರಮಗಳು, ಮೇಳ, ಮಹೋತ್ಸವ, ಜಾತ್ರೆಗಳಲ್ಲಿ ಕಾಲ್ತುಳಿತಗಳು ಸಂಭವಿಸುತ್ತಿರುವುದು ಇದೇ ಮೊದಲಲ್ಲ. ಇದೇ ಕೊನೆಯೂ ಅಲ್ಲ. ಏಕೆಂದರೆ, ಹೆಚ್ಚು ಜನರು ಸೇರುವ ಸ್ಥಳಗಳಲ್ಲಿ ಭದ್ರತೆಯೂ ಸೇರಿದಂತೆ ನಾನಾ ರೀತಿಯ ವ್ಯವಸ್ಥೆಗಳಿಗೆ ಹೆಚ್ಚಿನ ಆದ್ಯತೆ ಕೊಡಬೇಕು. ಸರ್ಕಾರ ಮತ್ತು ಆಡಳಿತ ಯಂತ್ರ ಎಲ್ಲ ರೀತಿಯಲ್ಲೂ ಸಮರ್ಪಕವಾಗಿ ನಿಭಾಯಿಸಬೇಕು. ಆದರೆ, ಆಳುವವರಿಗೆ ಬೃಹತ್ ಕಾರ್ಯಕ್ರಮಗಳಿಂದ ಸಿಗುವ ಪ್ರಚಾರ ಮತ್ತು ಲಾಭವೇ ಮುಖ್ಯವಾಗಿದೆ. ದುರುಪಯೋಗ, ನಿರ್ಲಕ್ಷ್ಯ ಧೋರಣೆಗಳು ಎಗ್ಗಿಲ್ಲದೆ ನಡೆಯುತ್ತಿವೆ.

ಇತ್ತೀಚೆಗೆ, ಹಾಸನದ ಹಾಸನಾಂಬ ದೇವಾಲಯದಲ್ಲಿ ಕಾಲ್ತುಳಿತ ಸಂಭವಿಸಿತ್ತು. ತಿರುಪತಿಯಲ್ಲಿ ಕಾಲ್ತುಳಿತ ಸಂಭವಿಸಿ, 6 ಮಂದಿ ಸಾವನ್ನಪ್ಪಿದ್ದರು. ಉತ್ತರ ಪ್ರದೇಶದಲ್ಲಿಯೇ ನಡೆದಿದ್ದ ‘ಸತ್ಸಂಗ’ ಕಾರ್ಯಕ್ರಮದಲ್ಲೂ ಭೀಕರ ಕಾಲ್ತುಳಿತವಾಗಿ 12 ಮಂದಿ ಜೀವ ಕಳೆದುಕೊಂಡರು. ಆದರೂ, ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುವವರು, ಆಳುವವರು ಎಚ್ಚೆತ್ತುಕೊಂಡಿಲ್ಲ.

Advertisements

ಇದೀಗ, ಬುಧವಾರ ಮೌನಿ ಅಮಾವಾಸ್ಯೆ ಇದ್ದಕಾರಣ ಕುಂಭಮೇಳದಲ್ಲಿ ಹೆಚ್ಚಿನ ಜನರು ಭಾಗಿಯಾಗಿದ್ದರಿಂದ ಕಾಲ್ತುಳಿತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಇದಕ್ಕೂ ಮುನ್ನ, ಕುಂಭಮೇಳಕ್ಕೆ ತೆರಳುತ್ತಿದ್ದ ಯಾತ್ರಾರ್ಥಿಗಳೇ ರೈಲು ಸೀಟ್ ಬುಕ್ ಮಾಡಿದ್ದರೂ, ಸೀಟ್ ಸಿಗದೆ, ಹತ್ತಲಾಗದೆ ರೈಲಿನ ಮೇಲೆ ಕಲ್ಲುತೂರಾಟ ನಡೆಸಿದ್ದ ಘಟನೆಯೂ ಮಧ್ಯಪ್ರದೇಶದಲ್ಲಿ ನಡೆದಿತ್ತು. ಇದು, ಕುಂಭಮೇಳದಲ್ಲಿ ಸೇರಬಹುದಾದ ಭಾರೀ ಜನಸಂಖ್ಯೆಯ ಪ್ರತಿಬಿಂಬವಾಗಿತ್ತು. ಆದರೂ, ಕುಂಭಮೇಳ ಆಯೋಜಕರು, ಉಸ್ತುವಾರಿ ಹೊತ್ತವರು, ನಿರ್ವಹಣೆ ವಹಿಸಿಕೊಂಡವರು ಎಚ್ಚೆತ್ತುಕೊಳ್ಳಲಿಲ್ಲ. ಪರಿಣಾಮ, 30 ಮಂದಿ ದಾರುಣವಾಗಿ ಅಸುನೀಗಿದ್ದಾರೆ.

ಕಾಲ್ತುಳಿತ 2

ಕುಂಬಮೇಳ ಆಯೋಜನೆಯು ದೂರದ ಬೆಟ್ಟ ನುಣ್ಣಗೆ ಎಂಬಂತೆ- ಅಲ್ಲಿ ಮಿಂದೇಳುವುದರಿಂದ ಸ್ವರ್ಗಪ್ರಾಪ್ತಿಯಾಗುತ್ತದೆ, ಪಾಪ ಪರಿಹಾರವಾಗುತ್ತದೆ ಎಂಬ ಭ್ರಮೆಯಿಂದಲೂ, ಮಾಧ್ಯಮಗಳ ಅತಿರಂಜಿತ ಸುದ್ದಿಗಳಿಂದಲೂ ಆಕರ್ಷಿಸಬಹುದು. ಆದರೆ, ಸಾಕಷ್ಟು ಅವ್ಯವಸ್ಥೆಗಳಿಂದ ಕೂಡಿದೆ ಎಂಬುದನ್ನು ಅಲ್ಲಿಗೆ ತೆರಳಿದವರು ನೋಡುತ್ತಿದ್ದಾರೆ. ಅನುಭವಿಸುತ್ತಿದ್ದಾರೆ. ಹಲವಾರು ರಸ್ತೆಗಳನ್ನು ನಿರ್ಬಂಧಿಸಲಾಗಿದ್ದು, ಕಿ.ಮೀ.ಗಟ್ಟಲೆ ಜನರು ನಡೆಯಬೇಕಾದ ಅನಿವಾರ್ಯತೆ ಉಂಟಾಗಿದೆ.

ಅದರಲ್ಲೂ, ಜನವರಿ 27ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕುಂಭಮೇಳದಲ್ಲಿ ಸ್ನಾನ ಮಾಡಲು ತೆರಳಿದ್ದರಿಂದ, ಕುಂಭಮೇಳ ನಡೆಯುತ್ತಿದ್ದ ಪ್ರಯಾಗ್‌ರಾಜ್ ನಗರವನ್ನು ಲಾಕ್‌ಡೌನ್‌ ಮಾಡಿದಂತೆ ನಿರ್ಬಂಧಗಳನ್ನು ಹೇರಲಾಗಿತ್ತು. ಪರಿಣಾಮ, ಭಕ್ತರು ಮತ್ತು ಧಾರ್ಮಿಕ ಮುಖಂಡರು ಹೆಚ್ಚುವರಿಯಾಗಿ ಮೈಲುಗಳಷ್ಟು ನಡೆಯಬೇಕಾದ ಅನಿವಾರ್ಯತೆ ಉಂಟಾಗಿತ್ತು. ಇನ್ನು, ಪ್ರಧಾನಿ ಮೋದಿ ಅವರು ಫೆಬ್ರವರಿ 5ರಂದು ಕುಂಭಮೇಳದಲ್ಲಿ ಭಾಗಿಯಾಗಲಿದ್ದಾರೆ. ಆಗ ಇನ್ನೆಷ್ಟು ಅವಾಂತರಗಳು ಸೃಷ್ಟಿಯಾಗುತ್ತವೋ ಊಹಿಸುವುದು ಅಸಾಧ್ಯ.

ಈ ವರದಿ ಓದಿದ್ದೀರಾ?: ಕುಂಭಮೇಳ | ಗಂಗೆಯಲ್ಲಿ ಪಾಪ ತೊಳೆಯುವ ಭಕ್ತರಿಗೆ ರೋಗವೇ ಪ್ರಸಾದ!

ಈಗ ಭಕ್ತರು ಅಲಹಾಬಾದ್ ರೈಲ್ವೇ ಜಂಕ್ಷನ್‌ನಿಂದ ಕುಂಭಮೇಳದ ಮೈದಾನಕ್ಕೆ 15 ಕಿ.ಮೀ ನಡೆದುಕೊಂಡು ಹೋಗಬೇಕಾಗಿದೆ. ತಮ್ಮ ಲಗೇಜುಗಳೊಂದಿಗೆ ಪಾದಯಾತ್ರೆ ಮಾಡಬೇಕಾಗಿದೆ. ಧಾರ್ಮಿಕ ಸ್ನಾನಕ್ಕಾಗಿ ಕಷ್ಟ ಪಡಬೇಕಾಗಿದೆ.  ಮೊಬೈಲ್ ಇಂಟರ್ನೆಟ್ ಮತ್ತು ಸಂಪರ್ಕವೂ ಸರಿಯಾಗಿಲ್ಲದೆ, ಒಂದು ಕ್ಷಣದಲ್ಲಿ ತಮ್ಮ ಜೊತೆಗಿದ್ದವರು ಕಣ್ಮರೆಯಾದರೆ, ಅವರನ್ನು ಮತ್ತೆ ಸಂಪರ್ಕಿಸುವುದೇ ಅಸಾಧ್ಯವಾಗಿದೆ.

ಜೊತೆಗೆ, ಬೀದಿಬದಿ ವ್ಯಾಪಾರಿಗಳಂತಹ ಸಣ್ಣ ವ್ಯಾಪಾರಿಗಳ ಮೇಲೆ ಪೊಲೀಸರು ತಮ್ಮ ದರ್ಪ ತೋರಿಸುತ್ತಿದ್ದಾರೆ. ಒಕ್ಕಲೆಬ್ಬಿಸುತ್ತಿದ್ದಾರೆ. ಇದೆಲ್ಲದರ ನಡುವೆ, ದೊಡ್ಡ ಕಾರ್ಪೊರೇಟ್‌ ವ್ಯಾಪಾರಿಗಳು ನಿರಾಯಾಸವಾಗಿ ವ್ಯಾಪಾರ ಮಾಡುತ್ತಿದ್ದಾರೆ. ಧಾರ್ಮಿಕ ಸ್ನಾನಕ್ಕೆ ಹೋಗುವ ಹಾದಿಯಂತೂ ಜಟಿಲವಾಗಿದೆ. ನೂಕು-ನುಗ್ಗಲಿನಲ್ಲಿ ಜನರು ಸಂಗಮಕ್ಕೆ ಇಳಿಯುತ್ತಿದ್ದಾರೆ. ನೀರಿನಲ್ಲಿ ಮಿಂದೆದ್ದು ಒಂದು ನಿಮಿಷವೂ ನಿಲ್ಲಲಾಗದೆ, ಜನಸಂದಣಿಯಲ್ಲಿ ಹೊರಬರುತ್ತಿದ್ದಾರೆ. ನದಿಗೆ ಹೋಗಿ-ಬರುವುದಕ್ಕೂ ಹರಸಾಹಸ ಪಡುವಂತಾಗಿದೆ. ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಮತ್ತು ಕ್ಷಿಪ್ರ ಕಾರ್ಯ ಪಡೆಗಳು (RAF) ಲಾಠಿ ಹಿಡಿದು ಭಕ್ತರನ್ನು ಬೇಗ ಹೋಗುವಂತೆ ಓಡಿಸುತ್ತಿದ್ದಾರೆ. ನೂರಾರು-ಸಾವಿರಾರು ಕಿ.ಮೀ ದೂರದಿಂದ ಕುಂಭಮೇಳಕ್ಕೆ ಹೋದ ಭಕ್ತರು, ಮೂರ್ನಾಲ್ಕು ನಿಮಿಷ ಸಂಗಮದ ಬಳಿ ಇರುವುದೇ ಕಷ್ಟಕರವಾಗಿದೆ.

ಒಂದೆಡೆ, ಸಾಮಾನ್ಯ ಜನರು ಕಿಕ್ಕಿರಿದ ಸೇತುವೆಗಳು ಮತ್ತು ಸರದಿ ಸಾಲಿನ ದಿಗ್ಬಂಧನಗಳ ನಡುವೆ ಸಹಿಸಿಕೊಂಡು ಧಾರ್ಮಿಕ ಸ್ನಾನಕ್ಕಾಗಿ ಕಾಯುತ್ತಿದ್ದರೆ, ಮತ್ತೊಂದೆಡೆ, ವಿಐಪಿಗಳಿಗೆ ಇತರ ಮಾರ್ಗಗಳಲ್ಲಿ ಯಾವುದೇ ಅಡೆತಡೆ, ಕಾಯುವಿಕೆ ಇಲ್ಲದೆ ಸಂಗಮಕ್ಕೆ ಪ್ರವೇಶ ನೀಡುವುದು ನಡೆಯುತ್ತಲೇ ಇದೆ. ಇದು ಸ್ಪಷ್ಟವಾದ ಅಸಮಾನತೆಯನ್ನು ತೋರಿಸುತ್ತಿರುವುದು ಮಾತ್ರವಲ್ಲದೆ, ಭಕ್ತರನ್ನು ಪ್ರಾಣಿಗಳಂತೆ ನಡೆಸಿಕೊಳ್ಳುವುದನ್ನೂ ಪ್ರತಿಬಿಂಬಿಸುತ್ತಿದೆ.

image 40 2

ಅಸಮಾನತೆಯಿಂದ ತುಂಬಿರುವ ಕುಂಭಮೇಳದಲ್ಲಿ ವಿಐಪಿ ಸಂಸ್ಕೃತಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಸಾಮಾನ್ಯ ಭಕ್ತರು ಅವ್ಯವಸ್ಥೆಯನ್ನು ಸಹಿಸಿಕೊಂಡೇ, ತಮ್ಮ ಭಕ್ತಿ ಪ್ರದರ್ಶಿಸಬೇಕಾಗಿದೆ. ಆಯೋಜಕರು ಸಾಮಾನ್ಯ ಜನರನ್ನು ಬದಿಗೊತ್ತಿದ್ದಾರೆ. ಸಾಮಾನ್ಯ ಭಕ್ತರ ಸುರಕ್ಷತೆ ಮತ್ತು ಘನತೆಯನ್ನು ಖಾತ್ರಿಪಡಿಸಲು ಯಾವುದೇ ವ್ಯವಸ್ಥೆ-ಕ್ರಮಗಳಿಲ್ಲ. ಎಲ್ಲವೂ ವಿಐಪಿಗಳ ಮೇಲೆ ಮಾತ್ರವೇ ಕೇಂದ್ರೀಕರಿಸಲಾಗಿದೆ.

ಕುಂಭಮೇಳ ಆಯೋಜನೆ ಮತ್ತು ನಿರ್ವಹಣೆಯನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರನ್ನು ಬದಿಗಿಟ್ಟು ಪ್ರಮುಖ ಜವಾಬ್ದಾರಿಗಳನ್ನು ‘ಅರ್ನ್ಸ್ಟ್ & ಯಂಗ್‌’ ಕಂಪನಿಗೆ ಮೋದಿ ಸರ್ಕಾರ ಹೊರಗುತ್ತಿಗೆ ನೀಡಿದೆ. ಇದು ನಿರ್ಣಾಯಕ ತಪ್ಪು ಹೆಜ್ಜೆ ಎಂದು ಹಲವರು ಆರೋಪಿಸಿದ್ದಾರೆ. ಇದನ್ನು ‘ಕಾರ್ಪೊರೇಟ್ ಕುಂಭಮೇಳ’ ಎಂದು ಹಲವರು ಕರೆದಿದ್ದಾರೆ. ‘ಅರ್ನ್ಸ್ಟ್ & ಯಂಗ್‌’ ಖಾಸಗಿ ಕಂಪನಿಯು ತನ್ನ ಸ್ವಹಿತಾಸಕ್ತಿ ಮತ್ತು ವಿಐಪಿ ಸಂಸ್ಕೃತಿಗೆ ಹೆಚ್ಚು ಒತ್ತುಕೊಡುತ್ತಿರುವುದರಿಂದಲೇ ಬುಧವಾರ ಕಾಲ್ತುಳಿತ ಸಂಭವಿಸಿದೆ. 30 ಮಂದಿ ಜೀವ ಕಳೆದುಕೊಂಡಿದ್ದಾರೆ.

ಇದನ್ನು ಓದಿದ್ದೀರಾ?: ಮಹಾ ಕುಂಭಮೇಳವೆಂಬ ಸನಾತನ ಗರ್ವ, ಕಾಲ್ತುಳಿತದ ಪರ್ವ

ಆ ಕಾಲ್ತುಳಿತದಿಂದ ಸಾವಿರಾರು ಮಂದಿ ಆತಂಕಗೊಂಡಿದ್ದಾರೆ. ಸುರಕ್ಷತೆ ಮತ್ತು ಭದ್ರತೆ ನೀಡಬೇಕಾದ ಸರ್ಕಾರದಿಂದ ಉತ್ತರ, ಪ್ರತಿಕ್ರಿಯೆಯನ್ನು ಎದುರು ನೋಡುತ್ತಿದ್ದಾರೆ. ಹಲವರು ಸಂಗಮದಲ್ಲಿ ಧಾರ್ಮಿಕ ಸ್ನಾನ ಮಾಡಲು ಹಿಂಜರಿಯುತ್ತಿದ್ದಾರೆ. ನಿರುತ್ಸಾಹಿಗಳಾಗಿದ್ದಾರೆ. ಈಗ ಸಂಭ್ರಮಾಚರಣೆಯು ನಿಶ್ಯಬ್ದವಾಗಿದೆ. ಮೃತ ಭಕ್ತರ ಕುಟುಂಬಗಳು ತೀವ್ರ ಆಘಾತಕ್ಕೊಳಗಾಗಿವೆ. ಅವರ ಬದುಕು, ಭಾವನೆಗಳು ಬಹುಶಃ ಛಿದ್ರಗೊಂಡಿವೆ.

ಕುಂಭಮೇಳದಲ್ಲಿ ಕಾಲ್ತುಳಿತವಾದ ಬಳಿಕ ಹಲವಾರು ಪ್ರಶ್ನೆಗಳು ಮುನ್ನೆಲೆಗೆ ಬಂದಿವೆ, ಎಷ್ಟು ಸಾವುನೋವುಗಳು ಸಂಭವಿಸಿವೆ ಎಂಬ ಮಾಹಿತಿ ನೀಡಲು ಸರ್ಕಾರವು ಬರೋಬ್ಬರಿ 12 ಗಂಟೆ ಸಮಯ ತೆಗೆದುಕೊಂಡಿದ್ದು ಯಾಕೆ? ಗಾಯಗೊಂಡವರ ಸಂಖ್ಯೆ ಎಷ್ಟು. ಅವರ ಪರಿಸ್ಥಿತಿ ಹೇಗಿದೆ. ಅವರಿಗೆ ಒದಗಿಸಲಾದ ವೈದ್ಯಕೀಯ ನೆರವಿನ ವಿವರಗಳ ಬಗ್ಗೆಯೂ ಹೆಚ್ಚಿನ ಮಾಹಿತಿ ನೀಡಲಾಗಿಲ್ಲ. ಈ ಬಗ್ಗೆ ಮಾಹಿತಿಯನ್ನು ನೀಡದೇ ಇರುವುದಕ್ಕೆ ಕಾರಣವೇನು?

ಕಾಲ್ತುಳಿತ ಉಂಟಾದ ಸಮಯದಲ್ಲಿ ಪೊಲೀಸ್ ಪಡೆಗಳು ಏನು ಮಾಡುತ್ತಿದ್ದವು. ಜನಸಂದಣಿಯನ್ನು ಯಾಕೆ ಸರಿಯಾಗಿ ನಿರ್ವಹಿಸಿಲ್ಲ ಎಂಬ ಪ್ರಶ್ನೆ ಮುಖ್ಯವಾದದ್ದು. ಗಮನಾರ್ಹವಾಗಿ, ಕಾಲ್ತುಳಿತದ ಬಗ್ಗೆ ಇನ್ನೂ ಯಾವುದೇ ಅಧಿಕೃತ ತನಿಖೆಗೆ ಸರ್ಕಾರ ಆದೇಶಿಸಿಲ್ಲ. ತನಿಖೆಗೆ ಆದೇಶಿಸದೇ ಇರುವುದು, ಕಾಲ್ತುಳಿತಕ್ಕೆ ಮೇಳದ ನಿರ್ವಾಹಕರೇ ಕಾರಣ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಪ್ರಯಾಗ್‌ರಾಜ್ ನಗರದ ವಿವಿಧ ಪ್ರವೇಶ ಮತ್ತು ನಿರ್ಗಮನ ಸ್ಥಳಗಳನ್ನು ನಿರ್ಬಂಧಿಸಲಾಗಿದೆ. ಕೋಟ್ಯಂತರ ಜನರ ಜನದಟ್ಟಣೆಯಲ್ಲಿ ಒಂದು ಪ್ರದೇಶದಲ್ಲಿ ನಿರ್ವಹಿಸಲು ಸಾಧ್ಯವಿಲ್ಲ ಎಂದಾದ ಮೇಲೆ ಸರ್ಕಾರ ಯಾಕೆ ಪ್ರವೇಶ-ನಿರ್ಗಮನಗಳನ್ನು ಮುಚ್ಚಿದೆ ಎಂಬುದು ಬಹುದೊಡ್ಡ ಪ್ರಶ್ನೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಹಕಾರ ಖಾತೆ | ಡಿಕೆ ಶಿವಕುಮಾರ್ ಗುಂಪಿಗೋ, ಜಾರಕಿಹೊಳಿ ಗುಂಪಿಗೋ?

ಕೆ.ಎನ್. ರಾಜಣ್ಣ ಅವರ ಸಹಕಾರ ಖಾತೆ ತೆರವಾಗಿದೆ. ಯಾರಿಗೆ ಎನ್ನುವುದು ಪ್ರಶ್ನೆಯಾಗಿದೆ....

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

Download Eedina App Android / iOS

X