ಸದಾನಂದ ಸುವರ್ಣ ಅವರು ನೂರಾರು ಕನ್ನಡ, ತುಳು ನಾಟಕಗಳನ್ನು ರಚಿಸಿ ನಿರ್ದೇಶಿಸಿದ ಪ್ರಯೋಗಶೀಲ ನಿರ್ದೇಶಕ. ನಲ್ವತ್ತರ ನಲುಗು, ಉರುಳು, ಗೋಂದೊಳು, ಕೋರ್ಟ್ ಮಾರ್ಷಲ್ ಮುಂತಾದ ಯಶಸ್ವಿ ನಾಟಕಗಳ ನಿರ್ದೇಶನ ಮಾಡಿದ್ದರು. ವಾಮನ್, ಮೋಹನ್ ಮಾರ್ನಾಡರಂತಹ ಅನನ್ಯ ಪ್ರತಿಭಾವಂತ ನಟರನ್ನು ಬೆಳಕಿಗೊಡ್ಡಿದವರು
ರಂಗಭೂಮಿ ಚಲನಚಿತ್ರ ಕಿರುತೆರೆಗಳಲ್ಲಿ ಸಕ್ರಿಯವಾಗಿ 93 ವರ್ಷಗಳ ತುಂಬು ಜೀವನ ನಡೆಸಿದ ಹಿರಿಯ ರಂಗ ತಪಸ್ವಿ ನಿನ್ನೆ(ಜುಲೈ 17) ನೇಪಥ್ಯಕ್ಕೆ ಸರಿದು ಹೋದರು.
ನನಗೆ ಸುವರ್ಣ ಅವರ ಪರಿಚಯವಾದ್ದು 1995ರಲ್ಲಿ.ಆಗ ಮುಂಬಯಿಯಲ್ಲಿ ಅವರು ದಯಾ ಮರಣದ ಕುರಿತಾದ ಶಂಕರ್ ಶೇಷ್ ಅವರ ಹಿಂದಿ ನಾಟಕದ ಕನ್ನಡ ರೂಪಾಂತರವಾದ ‘ಉರುಳು’ ನಾಟಕವನ್ನು ರಂಗಕ್ಕೆ ತರಲು ಸಿದ್ಧತೆ ನಡೆಸಿದ್ದರು. ನನ್ನ ಬಗ್ಗೆ ಯಾರೋ ಅವರಿಗೆ ಹೇಳಿರಬೇಕು. ನಾಟಕದಲ್ಲಿ ಪಾತ್ರ ವಹಿಸ್ತೀರಾ ಅಂತ ಕೇಳಿದರು. ಹ್ಞೂಂ ಅಂದೆ. ಉರುಳು- ಓರ್ವ ಖೈದಿ, ಜೈಲರ್ ಮತ್ತು ವಕೀಲ ಹೀಗೆ ಮೂರೇ ಪಾತ್ರಗಳುಳ್ಳ ಮಾತೇ ಪ್ರಧಾನವಾದ ಗಂಭೀರ ನಾಟಕ.ಪ್ರದರ್ಶನ ಯಶಸ್ವಿಯಾಯಿತು.
ಹಾಗೆ ಪರಿಚಯವಾದ ಸುವರ್ಣರೊಂದಿಗಿನ ನಂಟು ಬೆಳೆಯುತ್ತಲೇ ಹೋಯಿತು. ಶಿವರಾಮ ಕಾರಂತರ ದೊಡ್ಡ ಅಭಿಮಾನಿಯಾಗಿದ್ದ ಅವರು ಪ್ರತೀ ವರ್ಷ ಏರ್ಪಡಿಸುತ್ತಿದ್ದ ಕಾರಂತೋತ್ಸವದಲ್ಲಿ ಮಕ್ಕಳಿಗೆ ಚಿತ್ರ ಬರೆವ ಸ್ಪರ್ಧೆಯ ಜವಾಬ್ದಾರಿಯನ್ನು ನನಗೆ ವಹಿಸುತ್ತಿದ್ದರು. ಮುಂಬಯಿ ವಿ.ವಿ.ಯಲ್ಲಿ ಒಮ್ಮೆ ವಿವೇಕ ರೈಗಳ ಅಧ್ಯಕ್ಷತೆಯಲ್ಲಿ ಕಾರಂತರ ಕುರಿತು ಅವರು ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ “ಕಾರಂತರು ಮತ್ತು ಶಿಕ್ಷಣ ಹಾಗೂ ಕಲಾಪ್ರೇಮ’ದ ಕುರಿತು ಮಾತನಾಡುವ ಅವಕಾಶವನ್ನೂ ನನಗೆ ಕೊಟ್ಟಿದ್ದರು. ನಂತರ ಗೋಂದೋಳು ನಾಟಕದಲ್ಲಿ ಸಂಗೀತ ವಾದ್ಯ ನಿರ್ವಹಣೆಯ ಅವಕಾಶ ನೀಡಿದ್ದಲ್ಲದೆ ಅವರ ಸದಾನಂದ ಸುವರ್ಣ ಸಾಂಸ್ಕೃತಿಕ ಟ್ರಸ್ಟ್ ಮೂಲಕ ಪ್ರಸನ್ನ ಅವರ ‘ಮಹಿಮಾಪುರ’ ನಾಟಕ ನಿರ್ದೇಶಿಸಲೂ ಹೇಳಿದ್ದು ಮಾತ್ರವಲ್ಲ, ನಾಟಕ ವೇದಿಕೆ ಏರುವವರೆಗೂ ನನಗೆ ಬೆಳಕು ಸಂಗೀತ ರಂಗಸಜ್ಜಿಕೆ ಹೀಗೆ ಎಲ್ಲ ವಿಚಾರಗಳಲ್ಲೂ ರಂಗಭೂಮಿಯ ತಮ್ಮ ಸುದೀರ್ಘ ಅನುಭವದಿಂದ ಮಾರ್ಗದರ್ಶನವನ್ನೂ ಮಾಡಿದರು. ಇದು ನನ್ನಂತಹ ಕಿರಿಯರಿಗೂ ಬೆನ್ನು ತಟ್ಟಿ ಅವಕಾಶ ನೀಡುವ ಸದಾನಂದ ಸುವರ್ಣ ಎಂಬ ಮೇರು ಪ್ರತಿಭೆಯ ಹೃದಯ ವೈಶಾಲ್ಯತೆಯ ರೀತಿ!
ಮುಂಬಯಿಯಲ್ಲಿ ಅವರು ಕೂಡಾ ನಾನಿದ್ದ ಬೋರಿವಲಿಯಲ್ಲೇ ಸಮೀಪವೇ ವಾಸವಿದ್ದುದರಿಂದ ಆಗಾಗ ಅವರ ಮನೆಗೂ ಹೋಗುತ್ತಿದ್ದೆ. ಅವರೂ ನಮ್ಮ ಮನೆಗೆ ಬರುತ್ತಿದ್ದರು. ಹಾಗೆ ಬರುವಾಗಲೆಲ್ಲ ರಂಗಭೂಮಿ ಕುರಿತ ಪುಸ್ತಕಗಳನ್ನೂ ಉಡುಗೊರೆಯಾಗಿ ಕೊಡುತ್ತಿದ್ದರು.
ಅವರ ನಾಟಕ ಚಲನಚಿತ್ರ ನಿರ್ಮಾಣದ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದರು. ಅವರ ನಾಟಕಗಳ ಪೋಸ್ಟರ್, ಟ್ರಸ್ಟ್ ನ ಸ್ಮರಣಿಕೆ ವಿನ್ಯಾಸ ನನ್ನಿಂದಲೇ ಮಾಡಿಸುತ್ತಿದ್ದರು. ನಂತರ ನಾನು ಕುಂದಾಪುರಕ್ಕೆ ವರ್ಗಾವಣೆಗೊಂಡು ಮುಂಬಯಿ ಬಿಟ್ಟ ನಂತರ ಫೋನ್ ಮೂಲಕ ಮಾತ್ರ ಸಂಪರ್ಕವಿತ್ತು. ಮುಂದೆ ಅವರೂ ಮುಂಬಯಿ ತೊರೆದು ಮಂಗಳೂರಿಗೆ ಬಂದರು. ಅಲ್ಲೂ ಅನೇಕ ಯಶಸ್ವಿ ನಾಟಕಗಳನ್ನು ನಿರ್ದೇಶಿಸಿದರು. ನಡುವೆ ಒಮ್ಮೆ ಮೈಸೂರಿನಲ್ಲಿ ಮತ್ತೊಮ್ಮೆ ಬೆಂಗಳೂರಿನಲ್ಲೂ ಭೇಟಿಯಾಗಿದ್ದೆ. ಮದುವೆಯಾದ ಒಂದೇ ವರ್ಷದಲ್ಲಿ ವೈವಾಹಿಕ ಬಂಧನ ಮುರಿದು ಬಿದ್ದ ಮೇಲೆ ಒಂಟಿಯಾಗಿ ನಂತರದ ತನ್ನ ಇಡೀ ಬದುಕನ್ನು ಸಾಹಿತ್ಯ,ರಂಗಭೂಮಿ ಚಲನಚಿತ್ರ ಧಾರಾವಾಹಿಗಳಿಗೆ ಅರ್ಪಿಸಿಕೊಂಡುಬಿಟ್ಟರು.
ಮಂಗಳೂರಿನ ಅಬ್ಬಕ್ಕ ನಗರದ ಅವರ ಮನೆಯಲ್ಲೂ ಒಂದೆರಡು ಬಾರಿ ಭೇಟಿ ಮಾಡಿದ್ದೆ. ಅಲ್ಲಿ ಅವರನ್ನು ಮಗಳಂತೆ ಮುತುವರ್ಜಿಯಿಂದ ನೋಡಿಕೊಳ್ಳುತ್ತಿದ್ದ ಪತ್ರಕರ್ತೆ ಡಾ. ಸೀತಾಲಕ್ಷ್ಮಿ ಕರ್ಕಿಕೋಡಿ ಅಕಾಲಿಕವಾಗಿ ತೀರಿಕೊಂಡಾಗ ಸುವರ್ಣರು ತೀರಾ ಹತಾಶರಾಗಿದ್ದರು. ನಂತರ ಅವರ ಆಪ್ತರೆಲ್ಲ ಸೇರಿ ಅನಿವಾರ್ಯವಾಗಿ ಹಿರಿಯರ ಆರೈಕೆ ಕೇಂದ್ರಕ್ಕೆ ಸೇರಿಸಬೇಕಾಯಿತು. ಅಲ್ಲಿಯೂ ರಂಗಕರ್ಮಿ ನಟೇಶ್ ಉಳ್ಳಾಲ ಮತ್ತವರ ಸ್ನೇಹಿತರೆಲ್ಲ ಕೊನೆಯವರೆಗೂ ಬೆಂಗಾವಲಾಗಿ ನೋಡಿಕೊಂಡರು. ಆರೈಕೆ ಕೇಂದ್ರದ ಮುಖ್ಯಸ್ಥರು, ನರ್ಸ್ ಸಿಬ್ಬಂದಿಗಳೆಲ್ಲ ಅತ್ಯಂತ ಕಾಳಜಿ, ಪ್ರೀತಿಯಿಂದ ಆರೈಕೆ ಮಾಡಿದರು.

ಆರೈಕೆ ಕೇಂದ್ರದಲ್ಲಿ ಇದ್ದಾಗಲೂ ಹಲವು ಸಲ ಭೇಟಿಯಾಗಿ ಒಂದೆರಡು ಗಂಟೆಗಳ ಕಾಲ ಅವರೊಂದಿಗೆ ಇದ್ದು ಬರುತ್ತಿದ್ದೆ. ಏಳೆಂಟು ತಿಂಗಳ ಹಿಂದೊಮ್ಮೆ ಭೇಟಿಯಾದ ಸಂದರ್ಭದಲ್ಲಿ ಮಾತ್ರ ತುಂಬಾ ಮಾತನಾಡಿದ್ದರು.
ಅವತ್ತು ಸುವರ್ಣರು ಬಹಳಷ್ಟು ಮಾತಾಡುವ ಮೂಡಿನಲ್ಲಿದ್ದಂತೆ ತೋರಿತು. ಮುಂಬಯಿ ದಿನಗಳ ಅವರ ನೆನಪುಗಳನ್ನು ಮೆಲುಕು ಹಾಕಿದರು. ನೀವಿವತ್ತು ಬಂದಿದ್ದು ತುಂಬ ಖುಷಿಯಾಯಿತು ಅಂತ ನಡುನಡುವೆ ಹೇಳ್ತಾನೇ ಇದ್ರು. ಅವತ್ತಿನ ಮಾತುಕತೆ ವಿವರಿಸುವ ಮುನ್ನ, ಸುವರ್ಣರ ಬಗ್ಗೆ ಗೊತ್ತಿಲ್ಲದ ಯುವ ಪೀಳಿಗೆಯವರಿಗಾಗಿ ಅವರ ಕುರಿತು ಒಂದಿಷ್ಟು ವಿವರ:
ಸದಾನಂದ ಸುವರ್ಣ ಅವರು ಮುಂಬಯಿ ಕನ್ನಡ ರಂಗಭೂಮಿಯ ಆದ್ಯ ಪ್ರವರ್ತಕರಲ್ಲೊಬ್ಬರು. ನೂರಾರು ಕನ್ನಡ ತುಳು ನಾಟಕಗಳನ್ನು ರಚಿಸಿ ನಿರ್ದೇಶಿಸಿದ ಪ್ರಯೋಗಶೀಲ ನಿರ್ದೇಶಕ. ನಲ್ವತ್ತರ ನಲುಗು, ಉರುಳು, ಗೋಂದೊಳು ಕೋರ್ಟ್ ಮಾರ್ಷಲ್ ಮುಂತಾದ ಯಶಸ್ವಿ ನಾಟಕಗಳ ನಿರ್ದೇಶನ. ವಾಮನ್, ಮೋಹನ್ ಮಾರ್ನಾಡರಂತಹ ಅನನ್ಯ ಪ್ರತಿಭಾವಂತ ನಟರನ್ನು ಬೆಳಕಿಗೊಡ್ಡಿದವರು. ಕಿರುತೆರೆ, ಚಲನಚಿತ್ರ ರಂಗದಲ್ಲೂ ತಮ್ಮದೇ ಛಾಪು ಮೂಡಿಸಿದವರು. ‘ಗುಡ್ಡೆದ ಭೂತ’ ಅವರ ಅತ್ಯಂತ ಜನಪ್ರಿಯ ಧಾರಾವಾಹಿ. ದೂರದರ್ಶನಕ್ಕಾಗಿ ಶಿವರಾಮ ಕಾರಂತರ ಬದುಕು ದರ್ಶನಗಳ ಕುರಿತು 13 ಕಂತಿನ ಧಾರಾವಾಹಿ ನಿರ್ಮಾಣ ನಿರ್ದೇಶನ. ಕಾಸರವಳ್ಳಿಯವರಿಗೆ ಮೊದಲ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟ ಚಿತ್ರ ‘ಘಟಶ್ರಾದ್ಧ’ದ ನಿರ್ಮಾಪಕ. ತೇಜಸ್ವಿಯವರ ಕತೆ “ಕುಬಿ ಮತ್ತು ಇಯಾಲ” ಚಿತ್ರದ ನಿರ್ದೇಶಕ. ಕಾರಂತರ ಬಹುದೊಡ್ಡ ಅಭಿಮಾನಿಯಾಗಿ ಮುಂಬಯಿಯಲ್ಲಿ ಬಹಳ ವರ್ಷಗಳಿಂದ ನಡೆಸುತ್ತ ಬಂದ “ಕಾರಂತೋತ್ಸವ”ದ ರೂವಾರಿ. ಪ್ರತೀವರ್ಷ ಕಾರಂತರ ಸ್ಮರಣೆ ನಡೆಯಲು ಅನುವಾಗುವಂತೆ ಮುಂಬೈ ವಿವಿ, ಕರ್ನಾಟಕ ಸಂಘಗಳಲ್ಲಿ ಕಾರಂತರ ಹೆಸರಿನಲ್ಲಿ ದತ್ತಿ ನಿಧಿ ನೀಡಿದ್ದಾರೆ.
ಈಚಿನ ಒಂದೆರಡು ದಶಕಗಳಿಂದ ತಮ್ಮ ರಂಗಭೂಮಿ ಚಟುವಟಿಕೆಗಳನ್ನು ಮಂಗಳೂರಲ್ಲಿ ಮುಂದುವರಿಸಿ ಅನೇಕ ಯಶಸ್ವಿ ನಾಟಕಗಳನ್ನು ನಿರ್ದೇಶಿಸಿದ್ದಾರೆ. ಲೇಖಕರಾಗಿ ಹಲವಾರು ಕಥೆ, ನಾಟಕಗಳನ್ನು ಬರೆದಿದ್ದಾರೆ.
ನಮ್ಮ ಅವತ್ತಿನ ಮಾತು ಕೂಡಾ ರಂಗಭೂಮಿ, ಸಾಹಿತ್ಯ, ಮುಂಬಯಿ ಕರ್ನಾಟಕ ಸಂಘ, ಮೈಸೂರು ಎಸೋಸಿಯೇಷನ್, ಕಾರಂತ ಉತ್ಸವ ಹೀಗೇ ಎಲ್ಲ ಕಡೆ ಹೊರಳಿ ಬಂತು. ವಯಸ್ಸು 92 ಆದರೂ ಸುವರ್ಣ ಸರ್ ಅವರ ನೆನಪಿನ ಶಕ್ತಿ ಏನೇನೂ ಕುಂದಿರಲಿಲ್ಲ. ಮಾತಿನ ನಡುವೆ ತಾವು ನಿರ್ದೇಶಿಸಿದ ‘ಕೋರ್ಟ್ ಮಾರ್ಷಲ್’ ನಾಟಕ ಯಶಸ್ವಿ ಪ್ರದರ್ಶನ ಕಂಡದ್ದರ ಕುರಿತು ಖುಷಿಯಾಗಿ ಹೇಳಿದರು. ಮಾತಿನ ನಡುವೆ ಮಾಲಿನಿ ಮಲ್ಯ ಅವರು ತೀರಿಕೊಂಡ ಸುದ್ದಿ ಹೇಳಿದಾಗ, ಓ ಹೌದಾ ಅಂದರು. ಕಾರಂತರ ನೆನಪಿನ ಮ್ಯೂಸಿಯಂ ನಿರ್ಮಿಸಲು ತುಂಬ ಶ್ರಮಿಸಿದ್ದಾರೆ ಎಂದು ಹೇಳುತ್ತಾ ಕಾರಂತರ ಕುರಿತು 13 ಕಂತುಗಳ ಧಾರಾವಾಹಿಗಳನ್ನು ದೂರದರ್ಶನಕ್ಕಾಗಿ ತಯಾರಿಸುತ್ತಿದ್ದಾಗ ಮಾಲಿನಿಯವರ ಜೊತೆ ನಡೆದ ಮಾತುಕತೆಯನ್ನು ನೆನಪಿಸಿಕೊಂಡರು.

“3 ಎಪಿಸೋಡುಗಳು ಸಿದ್ಧವಾದ ನಂತರ ಒಮ್ಮೆ ಮಾಲಿನಿಯವರನ್ನು ಭೇಟಿಯಾದಾಗ, ಪ್ರತಿಯೊಂದು ಎಪಿಸೋಡು ಸಿದ್ಧವಾದಾಗಲೂ ತನಗೆ ತೋರಿಸಲೇಬೇಕೆಂದು ಮಾಲಿನಿಯವರು ಶರತ್ತು ವಿಧಿಸಿದರು. ಆದರೆ ನನಗ್ಯಾಕೋ ಈ ಶರತ್ತು ಇಷ್ಟವಾಗಲಿಲ್ಲ. ಆಗಲ್ಲ, ನಾನಿದನ್ನು ದುಡ್ಡಿಗಾಗಿಯಲ್ಲ, ಕಾರಂತರ ಮೇಲಿನ ಪ್ರೀತಿಯಿಂದ ಮಾಡ್ತಿದೇನೆ ಅಂದೆ. ನೀವು ಒತ್ತಾಯ ಮಾಡಿದರೆ ಇದುವರೆಗೆ ಮಾಡಿದ ಮೂರೂ ಎಪಿಸೋಡನ್ನೂ ಸುಟ್ಟು ಹಾಕ್ತೇನೆ ಅಂದು ಬಿಟ್ಟೆ. ಇದನ್ನು ನಿರೀಕ್ಷಿಸಿಯೇ ಇರದಿದ್ದ ಅವರು ತಕ್ಷಣ ಇಲ್ಲ ಇಲ್ಲ ಹಾಗಲ್ಲ. ಅದೇನೂ ಕಡ್ಡಾಯವಲ್ಲ ಅಂದರು.ಹಾಗಾಗಿ ಮತ್ತೆ ಮುಂದುವರಿಸಿ ಹದಿಮೂರು ಎಪಿಸೋಡುಗಳನ್ನು ನಿರ್ಮಿಸಿ ಅದರ ಕಾಪಿರೈಟನ್ನೂ ದೂರದರ್ಶನಕ್ಕೆ ಕೊಟ್ಟುಬಿಟ್ಟೆ” ಅಂದರು. ಇದು ಯಾರ ಮುಲಾಜಿಗೂ ಬೀಳಲಿಚ್ಛಿಸದ ಸುವರ್ಣರ ವ್ಯಕ್ತಿತ್ವದ ರೀತಿ.
ಆದರೆ ಈಗ ಕಾರಂತರನ್ನು ನೆನೆಯುವವರೂ ಕಡಿಮೆಯಾಗಿದ್ದಾರೆ ಎಂದು ವಿಷಾದಿಸಿದರು.ಮಾತು, ಮುಂಬಯಿ ಕರ್ನಾಟಕ ಸಂಘದ ಕಟ್ಟಡ ನಿರ್ಮಾಣ ಕಾರ್ಯ ನಿಂತು ಹೋಗಿರುವತ್ತ ಹೊರಳಿತು. ಯಾವುದೇ ಸಂಘ ಸಂಸ್ಥೆಗಳು ಕೇವಲ 2-3 ಮಂದಿ ಪಟ್ಟಭದ್ರರ ಹಿಡಿತದೊಳಗಿದ್ದರೆ ಕಟ್ಟಡ ನಿರ್ಮಾಣ ಹೇಗೆ ಸಾಧ್ಯ ಅಲ್ವ ಅಂದರು. ಮುಂಬಯಿಯಲ್ಲಿ ಕನ್ನಡ ರಂಗ ಚಟುವಟಿಕೆಗಳೂ ನಿಂತೇ ಹೋಗಿರಬೇಕೇನೋ ಅಂತ ಬೇಸರ ಪಟ್ಟುಕೊಂಡರು.
ಅಷ್ಟರಲ್ಲಿ ಅವರ ಊಟದ ಹೊತ್ತಾಗಿತ್ತು. ಅಷ್ಟು ಹೊತ್ತೂ ಖುಷಿಯಿಂದ ಮಾತನಾಡುತ್ತಿದ್ದವರು ಒಮ್ಮೆಗೇ”ಗೊತ್ತಲ್ವಾ, ನನ್ನ ಮನೆ ಮಾತ್ರ ಖಾಲಿಯೇ ಇದೆ” ಎನ್ನುತ್ತಾ ತಲೆ ಬಗ್ಗಿಸಿ ಒಂದು ಕ್ಷಣ ಮೌನಕ್ಕೆ ಜಾರಿದರು. ತನ್ನ ಬದುಕಿನುದ್ದಕ್ಕೂ ಕಷ್ಟ ಕಾರ್ಪಣ್ಯಗಳಿಂದ ತೊಂದರೆಗೀಡಾಗಿ ಬಳಿ ಬಂದವರಿಗೆ ಎಲ್ಲ ಬಗೆಯ ನೆರವಿತ್ತು ಸಾಂತ್ವನ ಹೇಳುತ್ತಿದ್ದ ಸರಳ ಸಜ್ಜನಿಕೆಯ ಸುವರ್ಣರು ಬದುಕಿನ ಇಳಿಸಂಜೆಯಲ್ಲಿ ಇನ್ನೊಬ್ಬರ ಆಸರೆಯಲ್ಲಿ ಇರಬೇಕಾಗಿ ಬಂದುದಕ್ಕೆ ವಿಷಾದ ಸೂಚಿಸುವಂತಿತ್ತು ಆ ಮೌನ. ಸ್ವಂತ ಮನೆಯಿದ್ದರೂ ನೋಡಿಕೊಳ್ಳುವವರಿಲ್ಲದೆ, 92ರ ಈ ಪ್ರಾಯದಲ್ಲಿ ‘ಹಿರಿಯರ ಆರೈಕೆ ಕೇಂದ್ರ’ದಲ್ಲಿ ದಾಖಲಾಗಲೇಬೇಕಾದ, ಸ್ವಾಭಿಮಾನಿ ಸುವರ್ಣ ಅವರ ಏಕಾಂಗಿ ಬದುಕಿನ ಅನಿವಾರ್ಯತೆ ನೆನೆದು ನನ್ನ ಕಣ್ಣೂ ತೇವಗೊಂಡಿತು..!!
ಕೊನೆಯ ಬಾರಿಗೆ ಅವರ ಜೊತೆಯಲ್ಲಿದ್ದದ್ದು ಕಳೆದ ಜನವರಿಯಲ್ಲಿ ಅವರಿಗೆ ಕರ್ನಾಟಕ ಸರ್ಕಾರದ ಪ್ರತಿಷ್ಠಿತ ಬಿ.ವಿ.ಕಾರಂತ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ. ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಆ ಸಮಾರಂಭದಲ್ಲಿ ಅನಾರೋಗ್ಯದ ದೆಸೆಯಿಂದ ಅವರಿಗೆ ಭಾಗವಹಿಸಲು ಕಷ್ಟವಾಗಬಹುದೇನೋ ಅಂದುಕೊಂಡಿದ್ದೆ. ಆದರೆ ದೈಹಿಕ ಅಶಕ್ತತೆಯನ್ನೆಲ್ಲ ಪಕ್ಕಕ್ಕಿಟ್ಟು, ಆತ್ಮೀಯರ ನೆರವಿನಿಂದ ಬೆಂಗಳೂರಿಗೆ ಅತ್ಯುತ್ಸಾಹದಿಂದ ಬಂದು ಗಾಲಿ ಕುರ್ಚಿಯಲ್ಲೇ ಕೂತು ಪ್ರಶಸ್ತಿಯನ್ನೂ ಸ್ವೀಕರಿಸಿದರು. ಹಾಗೆ ಸ್ವೀಕರಿಸುವ ಮೂಲಕ, ರಂಗಭೂಮಿಯ ಅವರ ಅನನ್ಯ ಸಾಧನೆಯನ್ನು ಸರ್ಕಾರವೂ ದೊಡ್ಡ ರೀತಿಯಲ್ಲಿ ಗುರುತಿಸಿದ್ದಕ್ಕೆ ಅತ್ಯಂತ ವಿನೀತ ಭಾವದಿಂದ ಕೃತಜ್ಞತೆ ಸಲ್ಲಿಸಿದರೇನೋ ಅನ್ನಿಸಿತು.

ಗಿರಿಧರ ಕಾರ್ಕಳ
ನಿವೃತ್ತ ಬ್ಯಾಂಕ್ ಉದ್ಯೋಗಿ, ಲೇಖಕ