ಸುಮಾರು 121 ಮಂದಿಯ ಜೀವವನ್ನು ಬಲಿ ಪಡೆದುಕೊಂಡ ಹಾಥರಸ್ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಸ್ವಯಂಘೋಷಿತ ದೇವಮಾನವ ಸೂರಜ್‌ಪಾಲ್ ಅಲಿಯಾಸ್ ನಾರಾಯಣ್ ಸಕರ್ ಹರಿ ಅಲಿಯಾಸ್ ಭೋಲೆ ಬಾಬಾ, “ಸಾವು ಅನಿವಾರ್ಯ, ವಿಧಿಯಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
ತನ್ನದೇ ಸತ್ಸಂಗದ ಬಳಿಕ ನೂರಾರು ಜನರ ಸಾವಿಗೆ ಕಾರಣವಾದ ಕಾಲ್ತುಳಿತದ ಬಗ್ಗೆ ವಿಷಾದ ವ್ಯಕ್ತಪಡಿಸಿದ ಭೋಲೆ ಬಾಬಾ, ಈ ಘಟನೆ ಬಳಿಕ ತಾನು ಆಳವಾದ ಖಿನ್ನತೆಗೆ ಒಳಗಾಗಿರುವುದಾಗಿ ತಿಳಿಸಿದ್ದಾರೆ.
“ಏನು ನಡೆಯಬೇಕೋ ಅದನ್ನು ತಪ್ಪಿಸಲು ಯಾರಿಂದಲೂ ಕೂಡಾ ಸಾಧ್ಯವಿಲ್ಲ. ಎಲ್ಲರೂ ಇಂದು ಅಥವಾ ನಾಳೆ ಸಾಯಲೇಬೇಕು. ಪ್ರತಿಯೊಬ್ಬರೂ ಒಂದು ದಿನ ಸಾಯಬೇಕು. ಸಮಯ ಮಾತ್ರ ನಿಶ್ಚಿತ. ನಾನು ಈ ಘಟನೆಯಿಂದ ಖಿನ್ನತೆಗೆ ಒಳಗಾಗಿದ್ದೇನೆ. ಆದರೆ ಅದೃಷ್ಟವನ್ನು ತಪ್ಪಿಸುವವರು ಯಾರು? ಇಂದಲ್ಲ ನಾಳೆ ಸಾಯಲೇಬೇಕು” ಎಂದರು.
Self-styled #godman Surajpal alias #Bhole Baba, who held a satsang in #Hathras recently where 121 devotees were killed after a stampede says, “Honi ko kaun taal sakta hai, Jo aaya hai, use ek din Jana hi hai…” pic.twitter.com/mJ14P5n2Fz
— भारत भूषण बरवाला (@NEXTPM_Kejriwal) July 18, 2024
ವಿಷ ಅನಿಲ ಸಿಂಪಡಿಸಿದ ಬಳಿಕ ಜನರು ಗಾಬರಿಗೊಂಡು ಈ ಕಾಲ್ತುಳಿತ ನಡೆದಿದೆ ಎಂಬ ಪ್ರತ್ಯಕ್ಷದರ್ಶಿ ಹೇಳಿಕೆಗಳನ್ನು ಒಪ್ಪಿಕೊಂಡ ಭೋಲೆ ಬಾಬಾ, “ಕಾಲ್ತುಳಿತದ ಹಿಂದೆ ಪಿತೂರಿಯಿದೆ. ಕೆಲವು ವ್ಯಕ್ತಿಗಳು ನಮ್ಮ ಸಂಸ್ಥೆ ನಡೆಸುತ್ತಿರುವ ಆಧ್ಯಾತ್ಮಿಕ ಆಚರಣೆಗಳನ್ನು ದೂಷಿಸಲು ಪ್ರಯತ್ನಿಸುತ್ತಿದ್ದಾರೆ” ಎಂದು ಆರೋಪಿಸಿದರು.
ಇದನ್ನು ಓದಿದ್ದೀರಾ? ಹಾಥರಸ್ ಕಾಲ್ತುಳಿತ ದುರಂತ : ಪ್ರಕರಣದಲ್ಲಿ ಮಧ್ಯ ಪ್ರವೇಶಿಸಲು ಸುಪ್ರೀಂ ನಿರಾಕರಣೆ
ವಿಶೇಷ ತನಿಖಾ ತಂಡ (ಎಸ್‌ಐಟಿ), ನ್ಯಾಯಾಂಗ ಆಯೋಗ ಮತ್ತು ಮಾನವ ಕಲ್ಯಾಣ ಸೌಹಾರ್ದ ಸಂಘದ ಅನುಯಾಯಿಗಳು ಸತ್ಯವನ್ನು ಬಹಿರಂಗಪಡಿಸಲು ಮತ್ತು ದುರಂತ ಘಟನೆಯ ಹಿಂದಿನ ಸಂಚುಕೋರರನ್ನು ಪತ್ತೆಹಚ್ಚುತ್ತಾರೆ ಎಂಬ ಬಗ್ಗೆ ನನಗೆ ಸಂಪೂರ್ಣ ನಂಬಿಕೆಯಿದೆ ಎಂದೂ ಕೂಡಾ ಹೇಳಿದರು.
ಜುಲೈ 2ರಂದು ಹತ್ರಾಸ್‌ನ ಸಿಕಂದರಾರು ಪ್ರದೇಶದಲ್ಲಿ ನಡೆದ ಭೋಲೆ ಬಾಬಾರವರ ‘ಸತ್ಸಂಗ’ದಲ್ಲಿ ಕಾಲ್ತುಳಿತ ಸಂಭವಿಸಿದ್ದು, 121 ಜನರು ಸಾವನ್ನಪ್ಪಿದ್ದಾರೆ. ಘಟನೆಯ ತನಿಖೆಗಾಗಿ ಉತ್ತರ ಪ್ರದೇಶ ಸರ್ಕಾರ ವಿಶೇಷ ತನಿಖಾ ತಂಡ (ಎಸ್‌ಐಟಿ) ಮತ್ತು ನ್ಯಾಯಾಂಗ ಆಯೋಗ ಎರಡನ್ನೂ ರಚಿಸಿದೆ.
ಸಿಕಂದರಾವ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಭೋಲೆ ಬಾಬಾ ಹೆಸರು ಮಾತ್ರ ಆರೋಪಿ ಎಂದು ಪಟ್ಟಿ ಮಾಡಿಲ್ಲ. ಆದರೆ ಜುಲೈ 9ರಂದು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ ಎಸ್‌ಐಟಿ ವರದಿಯಲ್ಲಿ ಜನದಟ್ಟಣೆಯೇ ಕಾಲ್ತುಳಿತದ ಹಿಂದಿನ ಪ್ರಮುಖ ಕಾರಣ ಎಂದು ಹೇಳಲಾಗಿದ್ದು, ಘಟನೆಯಲ್ಲಿ ‘ಪಿತೂರಿ’ಯನ್ನು ತಳ್ಳಿಹಾಕಲಾಗಿದೆ.