ಇಂಡಿಯಾ ಬ್ಲಾಕ್‌ನಲ್ಲಿ ಭಿನ್ನ ಸಿದ್ಧಾಂತಗಳನ್ನು ಅನುಸರಿಸುವ ಪಕ್ಷಗಳಿವೆ. ಎಡ ಪಕ್ಷಗಳನ್ನು ಹೊರತುಪಡಿಸಿ, ಇತರ ಪಕ್ಷಗಳು ಅನುಸರಿಸುವುದು ತಾವು ನಂಬಿರುವ ಸಿದ್ಧಾಂತಗಳ ತೆಳು ಮಾದರಿಗಳನ್ನು ಎಂದರೆ ತಪ್ಪಾಗುವುದಿಲ್ಲ. ಇದರಲ್ಲಿರುವ ಅನೇಕ ಪ್ರಾದೇಶಿಕ ಪಕ್ಷಗಳು ಹಿಂದೆ ಒಂದಲ್ಲ ಒಂದು ರೀತಿಯಲ್ಲಿ ಬಿಜೆಪಿಯ ಸಖ್ಯವನ್ನು ಹೊಂದಿರುವ ಚರಿತ್ರೆಯಿದೆ.
ಕಳೆದ ವರ್ಷ 18ನೇ ಲೋಕಸಭೆಗಾಗಿ ಜರುಗಿದ ಸಾರ್ವತ್ರಿಕ ಚುನಾವಣೆಯಲ್ಲಿ ನ್ಯಾಶನಲ್ ಡೆಮೊಕ್ರೆಟಿಕ್ ಅಲಯೆನ್ಸ್ ಗೆ
293 ಮತ್ತು ಇಂಡಿಯಾ ಬ್ಲಾಕ್‌ಗೆ 230 ಸೀಟುಗಳು ಲಭಿಸಿದವು. ಈ ಬಾರಿ ಬಿಜೆಪಿಗೆ 400ಕ್ಕಿಂತಲೂ ಹೆಚ್ಚು ಸೀಟುಗಳು ಬರುತ್ತವೆ ಎಂದು ದೊಡ್ಡ ರೀತಿಯಲ್ಲಿ ಆ ಪಕ್ಷದ ನಾಯಕರು ಘಂಟಾಘೋಷವಾಗಿ ಸಾರುತ್ತಿದ್ದರು. ಆದರೆ ಅದು 240 (ಹಿಂದಿನ ಲೋಕಸಭೆಯಲ್ಲಿ ಅದು 303 ಸೀಟುಗಳನ್ನು ಹೊಂದಿತ್ತು) ಸೀಟುಗಳನ್ನು ಪಡೆಯಲು ಸಾಧ್ಯವಾಯಿತು.
2024ರಲ್ಲಿ ಎಂಟು ರಾಜ್ಯಗಳ ವಿಧಾನಸಭೆಯ ಚುನಾವಣೆಗಳು ಜರುಗಿದವು. ಅವುಗಳಲ್ಲಿ ಬಿಜೆಪಿ ಒಡಿಶಾ, ಹರಿಯಾಣ ಮತ್ತು ಅರುಣಾಚಲ ಪ್ರದೇಶಗಳಲ್ಲಿ ಸ್ವಂತ ಬಲದಿಂದ ಆಧಿಕಾರದ ಗದ್ದುಗೆಯನ್ನು ಏರಿತು. ಮಿತ್ರ ಪಕ್ಷಗಳ ಜೊತೆ ಸೇರಿ ಮಹಾರಾಷ್ಟ್ರ, ಆಂಧ್ರ ಪ್ರದೇಶ ಮತ್ತು ಸಿಕ್ಕಿಂನಲ್ಲಿ ಒಕ್ಕೂಟ ಸರ್ಕಾರಗಳನ್ನು ರಚಿಸಿತು. ಜಮ್ಮು ಮತ್ತು ಕಾಶ್ಮೀರ ಮತ್ತು ಜಾರ್ಖಂಡ್‌ನಲ್ಲಿ ಅದು ಪರಾಭವವನ್ನು ಅನುಭವಿಸಿತು.
ಪ್ರಸ್ತುತ ಬಿಜೆಪಿ ದೆಹಲಿಯಲ್ಲಿ 70 ಸೀಟುಗಳ ಪೈಕಿ 48 ಸೀಟುಗಳನ್ನು ಗಳಿಸಲು ಸಫಲವಾಗಿದೆ. ದೇಶಾದ್ಯಂತ ಈಗ 13 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಲ್ಲಿ (ದೆಹಲಿ ಮತ್ತು ಪುದುಚೇರಿ) ಬಿಜೆಪಿ ಆಳುವ ಪಕ್ಷವಾಗಿ ಆಡಳಿತವನ್ನು ತನ್ನ ನಿಯಂತ್ರಣದಲ್ಲಿರಿಸಿಕೊಂಡಿದೆ. ಕಳೆದ ಲೋಕಸಭೆಯ ಚುನಾವಣೆಯಲ್ಲಿ ಉತ್ತಮ ಎನ್ನಬಹುದಾದ ಫಲಿತಾಂಶಗಳನ್ನು ಇಂಡಿಯಾ ಬ್ಲಾಕ್ ಪಡೆಯಿತು. ಆದರೆ ನಂತರ ಜರುಗಿದ ಕೆಲವು ರಾಜ್ಯಗಳ ವಿಧಾನಸಭೆಯ ಚುನಾವಣೆಗಳಲ್ಲಿ ಅದು ಗಮನೀಯ ಹಿನ್ನಡೆಯನ್ನು ಅನುಭವಿಸಿದೆ.
ಇಂಡಿಯಾ ಬ್ಲಾಕ್‌ನಲ್ಲಿ ಭಿನ್ನ ಸಿದ್ಧಾಂತಗಳನ್ನು ಅನುಸರಿಸುವ ಪಕ್ಷಗಳಿವೆ. ಎಡಪಕ್ಷಗಳನ್ನು ಹೊರತುಪಡಿಸಿ, ಇತರ ಪಕ್ಷಗಳು ಅನುಸರಿಸುವುದು ತಾವು ನಂಬಿರುವ ಸಿದ್ಧಾಂತಗಳ ತೆಳು ಮಾದರಿಗಳನ್ನು ಎಂದರೆ ತಪ್ಪಾಗುವುದಿಲ್ಲ. ಇದರಲ್ಲಿರುವ ಅನೇಕ ಪ್ರಾದೇಶಿಕ ಪಕ್ಷಗಳು ಹಿಂದೆ ಒಂದಲ್ಲ ಒಂದು ರೀತಿಯಲ್ಲಿ ಬಿಜೆಪಿಯ ಸಖ್ಯವನ್ನು ಹೊಂದಿರುವ ಚರಿತ್ರೆಯಿದೆ. ಇಂತಹ ಪಕ್ಷಗಳ ಗುರಿ ಎಂದರೆ ತಮ್ಮ ತಮ್ಮ ರಾಜ್ಯಗಳಲ್ಲಿ ತಮ್ಮ ಅಧಿಕಾರವನ್ನು ಉಳಿಸಿಕೊಳ್ಳುವುದು ಮತ್ತು ಗಳಿಸುವುದರತ್ತಲೇ ಹೆಚ್ಚಾಗಿ ಕೇಂದ್ರೀಕೃತವಾಗಿರುತ್ತದೆ.
ಕೆಲವು ದಶಕಗಳ ಹಿಂದೆ ನಮ್ಮ ದೇಶದ ರಾಜಕಾರಣದಲ್ಲಿ ಕಾಂಗ್ರೆಸ್, ಬಿಜೆಪಿ ಪಕ್ಷಗಳನ್ನು ಹೊರತುಪಡಿಸಿ, ತೃತೀಯ ಶಕ್ತಿಯನ್ನು ಒಂದು ಪರ್ಯಾಯ ಹಾದಿಯನ್ನಾಗಿ ರೂಪಿಸುವ ಪ್ರಯತ್ನ ಜರುಗಿತು. ಒಂದು ಹಂತದಲ್ಲಿ ಅದು ಸ್ವಲ್ಪ ಆಶಾದಾಯಕ ಬೆಳವಣಿಗೆಯಾಗಿ ಕಂಡು ಬಂದಿತು. ಇದರ ಹಿಂದೆ ಕರ್ತೃತ್ವ ಶಕ್ತಿಯ ರೀತಿಯಲ್ಲಿ ಎಡ ಪಕ್ಷಗಳು ಕಾರ್ಯಾಚರಣೆಯನ್ನು ಮಾಡಿದವು. ಆದರೆ ಪ್ರಸ್ತುತ ಎಡ ಪಕ್ಷಗಳು ಚುನಾವಣಾ ರಾಜಕೀಯದಲ್ಲಿ ತುಂಬ ಕ್ಷೀಣಿಸಿವೆ. ಆದುದರಿಂದ ಅವು ನಿರೀಕ್ಷಿತ ಮಟ್ಟದಲ್ಲಿ ಮಧ್ಯಪ್ರವೇಶಿಸಿ, ಇಂಡಿಯಾ ಬ್ಲಾಕನ್ನು ಒಂದು ಗಟ್ಟಿ ಮೈತ್ರಿರಂಗವಾಗಿ ಮುನ್ನಡೆಸುವ ಶಕ್ತಿಯನ್ನು ಕಳೆದುಕೊಂಡಿವೆ.
ಕಳೆದ ವರ್ಷ ಜರುಗಿದ ಹರಿಯಾಣ ರಾಜ್ಯ ವಿಧಾನಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಒಂದು ದಶಕದ ತರುವಾಯ ಅಧಿಕಾರಕ್ಕೆ ಬರುತ್ತದೆ ಎಂದು ಆ ಪಕ್ಷ ಭಾರಿ ನಿರೀಕ್ಷೆಗಳನ್ನು ಇರಿಸಿಕೊಂಡಿತ್ತು. ಕೆಲವು ನುರಿತ ರಾಜಕೀಯ ವಿಶ್ಲೇಷಕರು ಮತ್ತು ಚುನಾವಣಾ ಸಮೀಕ್ಷೆಯ ಸಂಸ್ಥೆಗಳದ್ದು ಕೂಡ ಇದೇ ಅಭಿಪ್ರಾಯವಾಗಿತ್ತು. ಗೆಲ್ಲುತ್ತೇವೆಂಬ ಗುಂಗಿನಲ್ಲಿ ಕಾಂಗ್ರೆಸ್ ಪಕ್ಷ ಕೆಲವು ತಪ್ಪು ನಡೆಗಳಿಗೆ ನಾಂದಿಯನ್ನು ಹಾಡಿತು. ಆಮ್ ಆದ್ಮಿ ಪಕ್ಷ(ಎಎಪಿ) ಮತ್ತು ಕಾಂಗ್ರೆಸ್ ನಡುವೆ ಮೈತ್ರಿ ಸಂಬಂಧ ಉಂಟಾಗಲಿಲ್ಲ. ದೆಹಲಿಯಿಂದ ಹೊರಗೆ ಪಂಜಾಬಿನಲ್ಲಿ ಅಧಿಕಾರವನ್ನು ಗಳಿಸಿಕೊಂಡ ಎಎಪಿ ತನ್ನ ರಾಜಕೀಯ ಮುನ್ನಡೆಗಾಗಿ ತನ್ನ ಬಳಿಯಿದ್ದ ದಾಳಗಳನ್ನು ಪ್ರಯೋಗಿಸಿತು. 90 ಸದಸ್ಯರ ವಿಧಾನಸಭೆಯಲ್ಲಿ ಬಿಜೆಪಿ 48 ಮತ್ತು ಕಾಂಗ್ರೆಸ್ 37 ಸೀಟುಗಳನ್ನು ಪಡೆದವು. ಎಎಪಿಗೆ ಒಂದು ಸೀಟ್‌ನಲ್ಲೂ ಜಯವನ್ನು ಗಳಿಸಿಲಿಲ್ಲ. ಬಿಜೆಪಿ, ಕಾಂಗ್ರೆಸ್(ಸಿಪಿಎಂ ಜೊತೆ ಮೈತ್ರಿಯಿನ್ನು ಹೊಂದಿತ್ತು) ಮತ್ತು ಎಎಪಿ ಕ್ರಮವಾಗಿ ಶೇ 39.94, ಶೇ 39.34 ಮತ್ತು ಶೇ 1.8ರಷ್ಟು ಮತಗಳನ್ನು ಪಡೆದವು. ಆದರೆ ಎಎಪಿ ಸ್ವತಂತ್ರವಾಗಿ ಸ್ಪರ್ಧಿಸಿದ್ದರಿಂದ, ಅದು ಸುಮಾರು 12 ನಿರ್ಣಾಯಕ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನಿಂದ ಮತಗಳನ್ನು ಕಸಿದುಕೊಂಡಿತು. ಪರಿಣಾಮ: ಆ ಕ್ಷೇತ್ರಗಳಲ್ಲಿ ಬಿಜೆಪಿ ವಿಜಯಶಾಲಿಯಾಯಿತು!
ಇನ್ನು ದೆಹಲಿಯ ಚುನಾವಣೆಯಲ್ಲಿ ಒಂದು ಮೂಲದ ಅನ್ವಯ ಸುಮಾರು 14 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಎಎಪಿಯ ಮತಗಳನ್ನು ಕಸಿದುಕೊಂಡಿತು. ಎಎಪಿಯ ಅಗ್ರ ನಾಯಕ ಅರವಿಂದ್ ಕೇಜ್ರಿವಾಲ್, ಬಿಜೆಪಿಯ ನಾಯಕ ಪರ್ವೇಶ್ ವರ್ಮಾ ವಿರುದ್ಧ ಸೆಣಸಿ 4089 ಮತಗಳ ಅಂತರದಿಂದ ಸೋತರು. ಮೂರು ಬಾರಿ ಮುಖ್ಯಮಂತ್ರಿಯಾಗಿದ್ದ ಶೀಲಾ ದೀಕ್ಷಿತ್ ಅವರು ಪುತ್ರ ಸಂದೀಪ್ ದೀಕ್ಷಿತ್ ಈ ಕ್ಷೇತ್ರದ ಉಮೇದುವಾರರಾಗಿದ್ದರು. ಅವರು 4568 ಮತಗಳನ್ನು ಪಡೆದರು. ಜಂಗ್‌ಪುರ ಕ್ಷೇತ್ರದಲ್ಲಿ ಎಎಪಿ ನಾಯಕ ಮನೀಷ್ ಸಿಸೋಡಿಯಾ ಬಿಜೆಪಿ ಅಭ್ಯರ್ಥಿಯ ಎದುರು 675 ಮತಗಳ ಅಂತರದಿಂದ ಪರಾಭವಗೊಂಡರು! ಕಾಂಗ್ರೆಸ್‌ನ ಅಭ್ಯರ್ಥಿಗೆ 7350 ಮತಗಳು ಲಭಿಸಿದವು.
ಮಹಾಭಾರತದಲ್ಲಿ ಎರಡು ತೆರನಾದ ಕಲಹಗಳು ಪ್ರಸ್ತಾಪಿಸಲ್ಪಟ್ಟಿವೆ. ಅವು ದಾಯಾದಿ ಮತ್ತು ಯಾದವೀ ಕಲಹಗಳು. ಮೊದಲನೆಯದರಲ್ಲಿ ಒಳಿತು ಕೆಡುಕಿನ ಮೇಲೆ ವಿಜಯವನ್ನು ಸಾಧಿಸುತ್ತದೆ ಎಂಬುದು ಸಾಮಾನ್ಯ ಜ್ಞಾನ. ಎರಡನೆಯದು, ಯಾದವ ಕುಲವನ್ನೇ ನಾಶ ಮಾಡುವ ಯಾದವಿ ಕಲಹ. ಇಂಡಿಯಾ ಬ್ಲಾಕ್ ಪಕ್ಷಗಳಲ್ಲಿ ಕಾಣುತ್ತಿರುವುದು ಮೇಲ್‌ಗೈ ಸಾಧಿಸಬೇಕೆಂಬ ಇಲಿ ಓಟ(ಖಚಿಣ ಡಿಚಿಛಿe). ಎಷ್ಟೇ ಶಕ್ತಿ ಕುಂದಿರಲಿ, ಈ ಕೂಟದಲ್ಲಿ ಕಾಂಗ್ರೆಸ್ ಪಕ್ಷಕ್ಕೇನೇ ಪ್ಯಾನ್ ಇಂಡಿಯಾ ಇರುವುದು. ಅದು ವಾಸ್ತವ, ಆದರೆ ಇತರ ಪಕ್ಷಗಳು ಕಾಂಗ್ರೆಸ್ ತುಂಬ ಕೆಳಕ್ಕೆ ಇಳಿದು ಮೈತ್ರಿಯ ಹಸ್ತ ಚಾಚಬೇಕೆಂದು ನಿರೀಕ್ಷಿಸುತ್ತಿವೆ. ಕಾಂಗ್ರೆಸ್ ಕೂಡ
ದೊಡ್ಡಣ್ಣನಂತೆ ವರ್ತಿಸದೇ ವರ್ತಮಾನದ ಕಠೋರ ಸತ್ಯಗಳನ್ನು ಅರಿಯಬೇಕು.
ಇದನ್ನೂ ಓದಿ ಈ ದಿನ ಸಂಪಾದಕೀಯ | ಚುನಾವಣಾ ಪಾರದರ್ಶಕತೆ ನಗೆಪಾಟಲಿಗೀಡಾಯಿತೇ?
ಚುನಾವಣೆಯ ಕೇವಲ ಎರಡು ಅಥವಾ ಮೂರು ತಿಂಗಳ ಮುನ್ನ ಆತುರಾತುರವಾಗಿ ಮೈತ್ರಿ ಪಕ್ಷಗಳು ಸಕ್ರಿಯವಾಗುವುದು ಸರಿಯಾದ ನಡೆಯಾಗುತ್ತದೆಯೇ? ದೂರದೃಷ್ಟಿಯಿಂದ, ಸಶಕ್ತ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಐಕ್ಯತೆಯಿಂದ ಮುನ್ನಡೆಯುವುದು ವರ್ತಮಾನದ ತುರ್ತು. ಬಹುಸಂಖ್ಯಾತವಾದ, ಫ್ಯಾಸಿಸ್ಟ್ ಧೋರಣೆಗಳು, ಮತೀಯ ಆಧಾರದ ಮೇಲೆ ಹೊಸ ರಾಷ್ಟ್ರವನ್ನು ನಿರ್ಮಿಸಬೇಕೆಂಬ ಆಶಯ ಪ್ರಬಲ ಬಿಜೆಪಿಗಿದೆ. ಇಂಡಿಯಾ ಒಕ್ಕೂಟದ ಪಕ್ಷಗಳು ಇದನ್ನು ಅರಿತು ಜವಾಬ್ದಾರಿಯುತವಾಗಿ ಸಾಗಬೇಕು. ಹೀಗಾಗದಿದ್ದರೆ, ಇತಿಹಾಸ ಈ ಒಕ್ಕೂಟವನ್ನು ಕ್ಷಮಿಸುವುದಿಲ್ಲ.

ಮ ಶ್ರೀ ಮುರಳಿ ಕೃಷ್ಣ
ಬರಹಗಾರ, ಸಾಮಾಜಿಕ ಕಾರ್ಯಕರ್ತ
ತಮ್ಮ ವಿಚಾರ ಮತ್ತು ಸಲಹೆ ಒಳ್ಳೆಯದಾಗಿದೆ ದೇಶದಲ್ಲಿ ಕೋಮುವಾದಿ ಆಡಳಿತವನ್ನು ತಡೆಯಬೇಕಾದರೆ ದೊಡ್ಡಣ್ಣ ಕಾಂಗ್ರೇಸ್ ಹಲವು ತ್ಯಾಗ ಮಾಡಬೇಕು ಅದರಂತೆ ವಿಚಾರವಾದಿ ಸ್ಥಳೀಯ ಪಕ್ಸಗಳು ತಮ್ಮ ಅಧಿಕಾರದ ಹಠ ಬಿಟ್ಟು ಕಾಂಗ್ರೇಸ್ ಜೊತೆ ಕೈ ಜೋಡಿಸಿದಲ್ಲಿ ಜಾತಿಯ ಪಕ್ಸ ಬಿಜೆಪಿಯನ್ನು ಅಧಿಕಾರದಿಂದ ಕೆಳಗೆ ಇಳಿಸಬಹುದಾಗಿದೆ ಇಲ್ಲದಿದ್ದಲ್ಲಿ ಭವಿಷ್ಯದಲ್ಲಿ ದೇಶದ ಪ್ರಜೆಗಳು ಗಂಡಾಂತರಕ್ಕೆ ಸಿಲುಕುವ ಸಾಧ್ಯತತೆ ಇದೆ