ಕಾಲಘಟ್ಟಕ್ಕೆ ತಕ್ಕಂತೆ ಬದಲಾಗದ ಮಾವೋವಾದಿ ನಕ್ಸಲರು ಇನ್ನೂ ಹಿಂಸೆಯ ಮಾರ್ಗವನ್ನು ತುಳಿಯುತ್ತಿರುವುದು ಸಮರ್ಥನೀಯವಲ್ಲ. ಹಾಗಾಗಿ ಯಾವೊಬ್ಬ ಪ್ರಜ್ಞಾವಂತನೂ ಇಂದಿನ ನಕ್ಸಲ್ ಹೋರಾಟವನ್ನು ಬೆಂಬಲಿಸುವುದಿಲ್ಲ. ಆದರೆ, ಒಂದು ಹೋರಾಟಕ್ಕೆ ಏನೆಲ್ಲಾ ಇತಿಹಾಸವಿದೆ ಹಾಗೂ ಆಯಾಮಗಳಿವೆ ಎಂಬುದನ್ನು ಅರಿಯಲಾರದ ಮುಠಾಳರು ಪ್ರಗತಿಪರ ಚಿಂತಕರನ್ನು ನಗರ ನಕ್ಸಲರು ಎಂದು ಕರೆಯುವುದರ ಮೂಲಕ ತಮ್ಮ ಅವಿವೇಕತನವನ್ನು ಪ್ರದರ್ಶಿಸುತ್ತಿದ್ದಾರೆ.
ದಂಡಕಾರಣ್ಯ ಎನ್ನುವ ಛತ್ತೀಸ್‌ಘಡದ ಬಸ್ತರ್ ಅರಣ್ಯದಲ್ಲಿ ಆದಿವಾಸಿಗಳ ಶಿಕ್ಷಣ ಮತ್ತು ಆರೋಗ್ಯಕ್ಕೆ ಹಾಗೂ ಮುಂಬೈ ಕೊಳಗೇರಿಯ ಹರಿಜನ ಬಸ್ತಿಯಲ್ಲಿ ಬಡವರು ಮತ್ತು ನಾಗಪುರದ ದಲಿತರ ಉದ್ಧಾರಕ್ಕಾಗಿ ತಮ್ಮ ಬದುಕನ್ನು ತೆತ್ತು ಹೈರಾಣಾದ ಶ್ರೀಮಂತ ಹಾಗೂ ವಿದ್ಯಾವಂತ ದಂಪತಿಗಳ ನೋವಿನ ಕಥನವಿದು.
ಕೊಬಡ್ ಗಾಂಡಿ ಮುಂಬೈ ನಗರದ ಪಾರ್ಸಿ ಶ್ರೀಮಂತ ಕುಟುಂಬದಲ್ಲಿ ಜನಿಸಿ ಡೆಹರಾಡೂನ್‌ನಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ಮುಂಬೈ ಮತ್ತು ಇಂಗ್ಲೆಂಡ್‌ನ ಆಕ್ಸ್‌ಪರ್ಡ್ ವಿ.ವಿ.ಯಲ್ಲಿ ಉನ್ನತ ಶಿಕ್ಷಣ ಪಡೆದವರು. ಇಂಗ್ಲೆಂಡ್‌ನಲ್ಲಿ ಇರುವಾಗಲೇ ವಿದ್ಯಾರ್ಥಿ ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದ ಅವರು ಎಡಪಂಥೀಯ ವಿಚಾರಧಾರೆಗಳಿಂದ ಆಕರ್ಷಿತರಾಗಿದ್ದರು. ಅವರ ತಂದೆ ಆ ಕಾಲಕ್ಕೆ ಪ್ರಸಿದ್ಧ ಗ್ಲಾಸ್ಕೊ ಕಂಪನಿಯ ಮುಖ್ಯ ವ್ಯವಸ್ಥಾಪಕರಾಗಿದ್ದರು. ಜೊತೆಗೆ ಮುಂಬೈ ನಗರದಲ್ಲಿ ಸಮುದ್ರಕ್ಕೆ ಎದುರಾಗಿರುವ ಪ್ರತಿಷ್ಠಿತ ವರ್ಲಿ ಬಡಾವಣೆಯಲ್ಲಿ ನಾಲ್ಕು ಸಾವಿರ ಚದರ ಅಡಿ ವಿಸ್ತೀರ್ಣದ ಜಾಗದಲ್ಲಿ ಬೃಹತ್ ಬಂಗಲೆ ನಿರ್ಮಿಸಿಕೊಂಡು, ಮಹಾಬಲೇಶ್ವರ ಗಿರಿಧಾಮದಲ್ಲಿ ಎಸ್ಟೇಟ್ ಹಾಗೂ ನಿವಾಸವನ್ನು ಹೊಂದಿದ್ದರು.
ಕೊಬಡ್ ಗಾಂಡಿಗೆ ಉದ್ಯೋಗದ ಅವಶ್ಯಕತೆ ಇರಲಿಲ್ಲ. ಅವರು ಮುಂಬೈ ಕೊಳಗೇರಿ ಮಕ್ಕಳ ಶಿಕ್ಷಣಕ್ಕೆ ಆದ್ಯತೆಯನ್ನು ನೀಡಿ ಅವರಿಗಾಗಿ ಶ್ರಮಿಸುತ್ತಿದ್ದರು. ಈ ಸಂದರ್ಭದಲ್ಲಿ ಅವರಿಗೆ ಪರಿಚಯವಾಗಿ ಬಾಳ ಸಂಗಾತಿಯಾದವರು ಕನ್ನಡದ ಹೆಣ್ಣುಮಗಳು ಅನುರಾಧಾ ಶಾನಭಾಗ್. ಈಕೆಯ ತಂದೆ ಉತ್ತರ ಕನ್ನಡ ಜಿಲ್ಲೆಯ ಗಣೇಶ್ ಶಾನಭಾಗ್ ಎಂಬುವರು. 1935ರಲ್ಲಿ ಕಾನೂನು ಪದವಿ ಗಳಿಸಿ ಸುಭಾಷ್ ಚಂದ್ರಬೋಸ್ ಅವರ ಇಂಡಿಯನ್ ಆರ್ಮಿ ಸೇರಲು ಕೊಲ್ಕತ್ತಾ ನಗರಕ್ಕೆ ಹೋದವರು. ನಂತರ ಮುಂಬೈ ನಗರಕ್ಕೆ ಬಂದು ವಕೀಲಿ ವೃತ್ತಿಯಲ್ಲಿ ತೊಡಗಿಸಿಕೊಂಡು ಬಾಂಬೆ ಹೈಕೋರ್ಟ್ ನಲ್ಲಿ ವಕೀಲಿ ವೃತ್ತಿ ಮಾಡುತ್ತಿದ್ದರು.
ಎರಡು ಕುಟುಂಬಗಳ ಪರಪ್ಪರ ಒಪ್ಪಿಗೆಯ ಮೂಲಕ 1970ರ ದಶಕದಲ್ಲಿ ದಂಪತಿಗಳಾದ ಕೊಬಡ್ ಗಾಂಡಿ ಮತ್ತು ಅನುರಾಧಾ ಇಬ್ಬರೂ ಎರಡು ತಿಂಗಳಕಾಲ ಮಹಾಬಲೇಶ್ವರ ಗಿರಿಧಾಮದಲ್ಲಿ ತಂಗಿದ್ದು, ನಂತರ ದಲಿತರ ಉದ್ಧಾರಕ್ಕಾಗಿ ನಾಗಪುರಕ್ಕೆ ವಲಸೆ ಬಂದು ದಲಿತ ಕೇರಿಯಲ್ಲಿ ವಾಸಿಸತೊಡಗಿದರು. ದಲಿತರಲ್ಲಿ ಇದ್ದ ಕುಡಿತದ ಚಟ ಬಿಡಿಸುತ್ತಾ, ದಲಿತ ಕೇರಿಯ ರಸ್ತೆ, ಚರಂಡಿ, ಶೌಚಾಲಯಗಳಿಗೆ ಒತ್ತು ನೀಡುವುದರ ಜೊತೆಗೆ ದಲಿತ ಮಕ್ಕಳು ಮತ್ತು ಯುವಕರಿಗೆ ಶಿಕ್ಷಣ ನೀಡುವುದರಲ್ಲಿ ಮುಂದಾದರು. ಅನುರಾಧ ಶಾನುಭಾಗ್ ಅವರು ನಾಗಪುರ ವಿಶ್ವ ವಿದ್ಯಾನಿಲಯದಲ್ಲಿ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇದೇ ವೇಳೆಗೆ ನೆರೆಯ ಆಂಧ್ರ ಪ್ರದೇಶದಲ್ಲಿ ಕೊಂಡಪಲ್ಲಿ ಸೀತಾರಾಮಯ್ಯನವರು ದಲಿತ ಮತ್ತು ಆದಿವಾಸಿಗಳಲ್ಲಿ ಜಾಗೃತೆ ಮೂಡಿಸುವ ನಿಟ್ಟಿನಲ್ಲಿ ಜನ ನಾಟ್ಯ ಮಂಡಳಿ ತಂಡವನ್ನು ಕಟ್ಟಿ ಹಾಡುಗಳ ಮೂಲಕ ಸಮಸ್ಯೆಗಳನ್ನು ಜನರ ಮುಂದೆ ಇಡುತ್ತಿದ್ದರು. ಗದ್ದಾರ್ ಮೂಲತಃ ಇಂಜಿನಿಯರ್ ವಿದ್ಯಾರ್ಥಿಯಾಗಿದ್ದು, ಜನ ನಾಟ್ಯ ಮಂಡಳಿ ತಂಡದಲ್ಲಿ ಪ್ರಮುಖ ಗಾಯಕರಾಗಿ ಹೆಸರು ಮಾಡಿದ್ದರು. ಆ ವೇಳೆಗೆ ಕೊಂಡಪಲ್ಲಿ ಮತ್ತು ಸತ್ಯಮೂರ್ತಿ ಇವರನ್ನು ಆಂಧ್ರ ಪೊಲೀಸರು ನಕ್ಸಲ್ ಸಂಘಟನೆಯ ನಾಯಕರೆಂದು ಗುರುತಿಸಿದ್ದರು.
ಈ ನಡುವೆ ವಿಜಯವಾಡ ಸಮೀಪದ ಗುಂಟೂರಿನಲ್ಲಿ 1981ರಲ್ಲಿ ನಡೆದ ವಿದ್ಯಾರ್ಥಿ ಸಮ್ಮೇಳನಕ್ಕೆ ವಿಶೇಷ ಉಪನ್ಯಾಸಕರಾಗಿ ಭಾಗವಹಿಸಿದ್ದ ಕೊಬಡ್ ಗಾಂಡಿಯವರಿಗೆ ಕೊಂಡಪಲ್ಲಿ ಸೀತಾರಾಮಯ್ಯನವರ ಪರಿಚಯವಾಯಿತು. ಕೊಂಡಪಲ್ಲಿಯವರ ಮನವಿಯ ಮೇರೆಗೆ ಹೊಸದಾಗಿ ಆರಂಭವಾಗುತ್ತಿದ್ದ ಪೀಪಲ್ಸ್ ವಾರ್ ಗ್ರೂಪ್ ಹೆಸರಿನ ಪ್ರಜಾ ಸಮರಂ ದಳಕ್ಕೆ ಕೊಬಡ್ ಗಾಂಡಿಯವರು ಹೊಸ ಸಂವಿಧಾನ ಅಂದರೆ ಸಂಘಟನೆಯ ನೀತಿ, ನಿಯಾಮವಳಿಗಳನ್ನು ರಚಿಸಿಕೊಟ್ಟರು.
1982ರ ವೇಳೆಗೆ ಪ್ರಜಾ ಸಮರಂ ದಳವು ಆಂಧ್ರಪ್ರದೇಶದಿಂದ ಛತ್ತೀಸ್ ಘಡ, ಒಡಿಸ್ಸಾ, ಮಹಾರಾಷ್ಟ್ರದ ಗಡಿಯಂಚಿನ ಅರಣ್ಯವಾದ ದಂಡಕಾರಣ್ಯಕ್ಕೆ ಪ್ರವೇಶ ಮಾಡಿ ಅರಣ್ಯದ ಆದಿವಾಸಿಗಳ ಪರ ಹೋರಾಡುತ್ತಾ ಪೊಲೀಸರೊಂದಿಗೆ ಸಂಘರ್ಷಕ್ಕೆ ಇಳಿಯಿತು. ಈ ನಡುವೆ ಆಂಧ್ರದ ಪ್ರಸಿದ್ಧ ಗಾಯಕರಾಗಿದ್ದ ಗದ್ದಾರ್ ಮತ್ತು ತಂಡವನ್ನು ಕೊಬಡ್ ದಂಪತಿಗಳು ನಾಗಪುರಕ್ಕೆ ಆಹ್ವಾನಿಸಿ ಅವರ ತಂಡದಿಂದ ಗಾಯನ ಮತ್ತು ನೃತ್ಯ ಕಾರ್ಯಕ್ರಮ ಏರ್ಪಡಿಸಿದರು. ಮಹಾರಾಷ್ಟ್ರ ಪೊಲೀಸರ ಆಕ್ಷೇಪಣೆ ಮತ್ತು ನಿಷೇಧದ ನಡುವೆಯೂ ಈ ಕಾರ್ಯಕ್ರಮಕ್ಕೆ ಐವತ್ತು ಸಾವಿರ ಜನ ಸೇರಿದ್ದರು. ಇದನ್ನು ನೋಡಿದ ಮಹಾರಾಷ್ಟ್ರ ಮತ್ತು ಆಂಧ್ರ ಪೊಲೀಸರು ಬೆಚ್ಚಿ ಬಿದ್ದರು. ಜೊತೆಗೆ ಕೊಬಡ್ ಗಾಂಡಿ ಮತ್ತು ಅನುರಾಧಾ ಇಬ್ಬರನ್ನು ನಕ್ಸಲ್ ಸಂಘಟನೆಗಳ ಬೆಂಬಲಿಗರು ಎಂದು ತೀರ್ಮಾನಿಸಿ ಅವರ ಚಟುವಟಿಕೆಯ ಮೇಲೆ ಗಮನವಿರಿಸಿದರು.
ನಿಷೇಧಿತ ನಕ್ಸಲ್ ಸಂಘಟನೆಯ ಜೊತೆ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪದ ಮೇಲೆ ಮಹಾರಾಷ್ಟ್ರ ಪೊಲೀಸರು ಈ ದಂಪತಿಗಳನ್ನು ಬಂಧಿಸಲು ಮುಂದಾದಾಗ ನಾಗಪುರವನ್ನು ತೊರೆದು ಬಸ್ತಾರ್ ಅರಣ್ಯದಲ್ಲಿ ಆದಿವಾಸಿಗಳ ಗುಡಿಸಲಲ್ಲಿ ನಕ್ಸಲ್ ಕಾರ್ಯಕರ್ತರ ರಕ್ಷಣೆಯಲ್ಲಿ ಬದುಕತೊಡಗಿದರು. ಪೊಲೀಸರ ಕಾರ್ಯಾಚರಣೆಯಿಂದಾಗಿ ಸ್ಥಳದಿಂದ ಸ್ಥಳಕ್ಕೆ ಬದಲಾವಣೆ ಇವರಿಗೆ ಅನಿವಾರ್ಯವಾಯಿತು. ಅರಣ್ಯ ಪ್ರದೇಶದಲ್ಲಿ ನೂರಾರು ಟೆಂಟ್ ಶಾಲೆಗಳನ್ನು ಆರಂಭಿಸಿ ಮುರಿಯಾ ಮತ್ತು ಗೊಂಡ ಆದಿವಾಸಿ ಮಕ್ಕಳಿಗೆ ಶಿಕ್ಷಣ ಹೇಳಿಕೊಡುತ್ತಿದ್ದರು. ಹೆಣ್ಣು ಮಕ್ಕಳಿಗೆ ಆರೋಗ್ಯ ಮತ್ತು ಶುಚಿತ್ವದ ಮಹತ್ವವನ್ನು ಕಲಿಸಿದರು. ನೂರ ಐವತ್ತಕ್ಕೂ ಹೆಚ್ಚು ಕೆರೆಗಳನ್ನು ನಿರ್ಮಿಸಿಕೊಟ್ಟು, ಆದಿವಾಸಿಗಳಿಗೆ ಹಣ್ಣು, ತರಕಾರಿ, ಸೊಪ್ಪು ಬೆಳೆಯುವುದನ್ನು ಹೇಳಿಕೊಟ್ಟರು. ಸತತ ಹದಿನೈದು ವರ್ಷಗಳ ಕಾಲ ಸರಿಯಾದ ಊಟ, ವಸತಿ ವ್ಯವಸ್ಥೆ ಇಲ್ಲದೆ ಬದುಕಿದ ಕಾರಣ ಈ ದಂಪತಿಗಳು ಅನಾರೋಗ್ಯಕ್ಕೆ ತುತ್ತಾದರು.
ಅನುರಾಧ ತಲೆಮರೆಸಿಕೊಂಡು ಬಂದು ಗೌಪ್ಯವಾಗಿ ಮುಂಬೈ ನಗರದಲ್ಲಿ ಚಿಕಿತ್ಸೆ ಪಡೆದರೂ ಸಹ ಬಹು ಅಂಗಾಂಗ ವೈಫಲ್ಯದ ಕಾರಣ 2007ರಲ್ಲಿ ಮೃತಪಟ್ಟರು. 2009ರಲ್ಲಿ ಕೊಬಡ್ ಗಾಂಡಿ ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿ ನಗರಕ್ಕೆ ಬಂದಾಗ 2009ರಲ್ಲಿ ಆಂಧ್ರ ಪೊಲೀಸರಿಂದ ಬಂಧಿಸಲ್ಪಟ್ಟರು. ಅದಕ್ಕೂ ಮುನ್ನ ಬಿಬಿಸಿ ಚಾನಲ್ ಕೊಬಡ್ ಗಾಂಡಿಯವರನ್ನು ಗೌಪ್ಯವಾಗಿ ಸಂಪರ್ಕಿಸಿ, ಅವರ ಸಂದರ್ಶನ ಮತ್ತು ಅರಣ್ಯದಲ್ಲಿ ಆದಿವಾಸಿಗಳ ಅಭಿವೃದ್ಧಿಗಾಗಿ ಈ ದಂಪತಿಗಳು ಮಾಡಿದ್ದ ಸಾಧನೆಯನ್ನು ಪ್ರಸಾರ ಮಾಡಿತ್ತು. ಸತತ ಹತ್ತು ವರ್ಷಗಳ ಕಾಲ ಸೆರೆಮನೆಯಲ್ಲಿದ್ದ ಕೊಬಡ್ ಗಾಂಡಿಯವರು 2019ರಲ್ಲಿ ಬಿಡುಗಡೆಯಾದರು.

ಈಗ ಮುಂಬೈ ನಗರದಲ್ಲಿ ವೃದ್ಧಾಪ್ಯದ ದಿನಗಳನ್ನು ಕಳೆಯುತ್ತಿರುವ ಅವರು Fractured Freedom(ಮುರಿದು ಬಿದ್ದ ಸ್ವಾತಂತ್ರ್ಯ) ಎಂಬ ತಮ್ಮ ಹೋರಾಟದ ಕಥನವನ್ನು ಹಾಗೂ ಸೆರೆಮನೆಯ ನೆನಪನ್ನು ದಾಖಲಿಸಿ ನಕ್ಸಲ್ ಹೋರಾಟಕ್ಕೆ ಹಿಂಸೆಯ ಅಗತ್ಯವಿಲ್ಲ ಎಂದು ಪ್ರತಿಪಾದಿಸಿದ್ದಾರೆ. ಅವರ ಚಿಂತನೆಯಲ್ಲಿ ಸತ್ಯಾಂಶವಿದೆ. ಏಕೆಂದರೆ, ಐದು ವರ್ಷಗಳ ಹಿಂದೆ ಒಡಿಸ್ಸಾದ ನಿಯಮಗಿರಿ ಪರ್ವತದಲ್ಲಿ ಎಂಟು ಸಾವಿರ ಡೊಂಗ್ರಿಯ ಕೊಂಡ ಎಂಬ ಆದಿವಾಸಿಗಳು ವಾಸಿಸುವ ಪ್ರದೇಶದಲ್ಲಿ ಬಾಕ್ಸೈಟ್ ಅದಿರು ಗಣಿಗಾರಿಕೆಗೆ ಅಲ್ಲಿನ ಸರ್ಕಾರ ವೇದಾಂತ ಕಂಪನಿಗೆ ಪರವಾನಗಿ ನೀಡಿತು. ಆದಿವಾಸಿಗಳ ಪರವಾಗಿ ಧ್ವನಿ ಎತ್ತಿದ ಲಂಡನ್ ನಗರದ ಸ್ವಯಂ ಸೇವಾ ಸಂಘಟನೆಯೊಂದು ಈ ನಿರ್ಧಾರದ ಬಗ್ಗೆ ಅಹಿಂಸಾತ್ಮಕವಾಗಿ ಪ್ರತಿಭಟನೆ ನಡೆಸಿ ಈ ಪ್ರಕರಣವನ್ನು ಸುಪ್ರಿಂ ಕೋರ್ಟ್ ಗೆ ಕೊಂಡೊಯ್ದು ಆದಿವಾಸಿಗಳ ಹಕ್ಕಿನ ಬಗ್ಗೆ ಪ್ರತಿಪಾದಿಸಿತು.
ಅಂತಿಮವಾಗಿ ಸುಪ್ರೀಂ ಕೋರ್ಟ್ ಗಣಿಗಾರಿಕೆಗೆ ಸ್ಥಳಿಯ ಗ್ರಾಮಪಂಚಾಯಿತಿಗಳ ನಿರ್ಣಯ ಅಂತಿಮ ಎಂದು ತೀರ್ಪು ನೀಡಿತು. ಅದರಂತೆ ಕಾಳಹಂದಿ ಮತ್ತು ರಾಯಗಡ ಜಿಲ್ಲೆಯ ಹನ್ನೆರಡು ಗ್ರಾಮಪಂಚಾಯಿತಿಗಳು ಗಣಿಗಾರಿಕೆ ನಡೆಯುವುದರಿಂದ ಸ್ಥಳಿಯ ಆದಿವಾಸಿಗಳ ಬದುಕಿಗೆ ಧಕ್ಕೆಯಾಗಲಿದೆ ಎಂಬ ಕಾರಣ ನೀಡಿ ಗಣಿಗಾರಿಕೆಗೆ ನಿಷೇಧ ಹೇರಿದವು. ನಲವತ್ತು ಸಾವಿರ ಕೋಟಿ ರೂಪಾಯಿ ಬಂಡವಾಳದ ವೇದಾಂತ ಕಂಪನಿ ಮತ್ತು ಒಡಿಸ್ಸಾ ಸರ್ಕಾರದ ನಡುವಿನ ಒಪ್ಪಂದ ಗ್ರಾಮ ಪಂಚಾಯಿತಿಗಳ ತೀರ್ಪಿನಿಂದ ರದ್ದಾಯಿತು. ಈ ಘಟನೆಯಲ್ಲಿ ನಕ್ಸಲರ ಪ್ರವೇಶವಿಲ್ಲದೆ, ಆದಿವಾಸಿಗಳು ಜಯಶಾಲಿಯಾಗಿದ್ದರು.
ಇದನ್ನು ಓದಿದ್ದೀರಾ?: ಕಿ.ರಂ. ಎಂಬ ಗುರುವಿನ ಸಂಗೀತ ಲೋಕ; ಶೂದ್ರ ಶ್ರೀನಿವಾಸರ ಹೊಸ ಪುಸ್ತಕದ ಆಯ್ದ ಲೇಖನ
ಕಾಲಘಟ್ಟಕ್ಕೆ ತಕ್ಕಂತೆ ಬದಲಾಗದ ಮಾವೋವಾದಿ ನಕ್ಸಲರು ಇನ್ನೂ ಹಿಂಸೆಯ ಮಾರ್ಗವನ್ನು ತುಳಿಯುತ್ತಿರುವುದು ಸಮರ್ಥನೀಯವಲ್ಲ. ಹಾಗಾಗಿ ಯಾವೊಬ್ಬ ಪ್ರಜ್ಞಾವಂತನೂ ಇಂದಿನ ನಕ್ಸಲ್ ಹೋರಾಟವನ್ನು ಬೆಂಬಲಿಸುವುದಿಲ್ಲ. ಆದರೆ, ಒಂದು ಹೋರಾಟಕ್ಕೆ ಏನೆಲ್ಲಾ ಇತಿಹಾಸವಿದೆ ಹಾಗೂ ಆಯಾಮಗಳಿವೆ ಎಂಬುದನ್ನು ಅರಿಯಲಾರದ ಮುಠಾಳರು ಪ್ರಗತಿಪರ ಚಿಂತಕರನ್ನು ನಗರ ನಕ್ಸಲರು ಎಂದು ಕರೆಯುವುದರ ಮೂಲಕ ತಮ್ಮ ಅವಿವೇಕತನವನ್ನು ಪ್ರದರ್ಶಿಸುತ್ತಿದ್ದಾರೆ.
