ಇಂದಿನ ದಿನಗಳಲ್ಲಿ ಸಾಮಾಜಿಕ ಹೋರಾಟ ಎಂಬುದು ಅಧಿಕಾರದ ಗದ್ದುಗೆಗೆ ಏರುವ ಏಣಿಯ ಮೆಟ್ಟಿಲು ಎಂಬಂತೆ ಇರುವಾಗ ನಿಜವಾದ ಹೋರಾಟ ಹೇಗಿರಬೇಕು ಎಂಬುದಕ್ಕೆ ಎಸ್.ಆರ್ ಹಿರೇಮಠರು ನಮ್ಮೆದುರು ಸಾಕ್ಷಿಯಾಗಿದ್ದಾರೆ. ಹಾಗಾಗಿ ಇಂದಿನ ಯುವ ತಲೆಮಾರು ಕಡ್ಡಾಯವಾಗಿ ಎಸ್.ಆರ್ ಹಿರೇಮಠರ ಹೋರಾಟದ ಕಥನವನ್ನು ಓದಲೇಬೇಕು
ಕರ್ನಾಟಕದ ಸಾಕ್ಷಿಪ್ರಜ್ಞೆಯಂತೆ ನಮ್ಮ ನಡುವೆ ಇರುವ ಧಾರವಾಡದ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥರಾದ ಎಸ್.ಆರ್ ಹಿರೇಮಠರ ಬದುಕು ಹಾಗೂ ಹೋರಾಟದ ಕಥನವನ್ನು ಮೈಸೂರಿನ ಮಿತ್ರ ಗಣೇಶ್ ಅವರು ತಮ್ಮ ಅಭಿರುಚಿ ಪ್ರಕಾಶನದಿಂದ ‘ಮಹಾ ಸಂಗ್ರಾಮಿ’ ಹೆಸರಿನಲ್ಲಿ ಹೊರತರುತ್ತಿದ್ದಾರೆ. ಹಿರೇಮಠರ ರೀತಿಯಲ್ಲಿ ಮಕ್ಕಳ ಸುಸ್ಥಿರ ನೆಮ್ಮದಿಯ ಬದುಕಿಗೆ ಕಳೆದ ಎರಡೂವರೆ ದಶಕದಿಂದ ದುಡಿಯುತ್ತಾ ಬಂದಿರುವ ಹಾಗೂ ಕನ್ನಡ ಕಾವ್ಯ ಜಗತ್ತಿನಲ್ಲಿ ಕವಿಯತ್ತಿಯಾಗಿ ಗುರುತಿಸಿಕೊಂಡಿರುವ ಹಾಸನದ ಸಹೋದರಿ ರೂಪಾ ಹಾಸನ ಅವರು ಈ ಕೃತಿ ರಚನೆ ಮಾಡಿರುವ ವಿಷಯ ತಿಳಿದು ಸಂತೋಷವಾಯಿತು.
ಒಂದು ಸರ್ಕಾರ ಅಥವಾ ಸಂಘಸಂಸ್ಥೆಗಳು ಮಾಡಬೇಕಾದ ಹೋರಾಟವನ್ನು ಕೈಗೆತ್ತಿಕೊಂಡು ಬಳ್ಳಾರಿಯ ಗಣಿಧಣಿಗಳ ವಿರುದ್ದ ಹೋರಾಟ ನಡೆಸಿ ಅವರ ಸೊಕ್ಕು ಮುರಿಯುವುದರ ಜೊತೆ ಹಣ ಮತ್ತು ಅಹಂಕಾರದ ಸಾಮ್ರಾಜ್ಯವನ್ನು ಧೂಳೀಪಟ ಮಾಡಿದ ಹಿರೇಮಠರ ಹೋರಾಟವು ಕರ್ನಾಟಕದ ಸಾಮಾಜಿಕ ಇತಿಹಾಸದಲ್ಲಿ ಸಾಮಾನ್ಯವಾದುದಲ್ಲ. ಅವರ ಹೋರಾಟದ ಹಿಂದೆ ಇರುವ ಅನೇಕ ಮಿತ್ರರು ಹಾಗೂ ಹಣಕಾಸು ವಿಚಾರದಿಂದ ಹಿಡಿದು ನಡೆ, ನುಡಿ ಮತ್ತು ಬದುಕಿಗೆ ಅಳವಡಿಸಿಕೊಂಡಿರುವ ಸರಳ ಬದುಕು ಇವೆಲ್ಲವೂ ಎಸ್.ಆರ್ ಹಿರೇಮಠ ಅವರ ಸ್ಪೂರ್ತಿಯ ನೆಲೆಗಳಾಗಿವೆ.
ಕರ್ನಾಟಕದಲ್ಲಿ ಎಪ್ಪತ್ತರ ದಶಕದಿಂದ ಹುಟ್ಟಿಕೊಂಡ ಬಹುತೇಕ ಸಾಮಾಜಿಕ ಚಳವಳಿಗಳು ನಾಯಕರ ಸ್ವಾರ್ಥ ಮತ್ತು ವೈಯಕ್ತಿಕ ಪ್ರತಿಷ್ಠೆಗಳಿಂದ ನೆಲಕಚ್ಚಿದವು. ಬಹುತೇಕ ಚಳವಳಿಗಳು ಸಾರ್ವಜನಿಕ ನಂಬಿಕೆಯನ್ನು ಕಳೆದುಕೊಂಡಿರುವಾಗ ಓರ್ವ ಹೋರಾಟಗಾರನ ಬದುಕು ಹೇಗೆ ನಿಸ್ವಾರ್ಥದಿಂದ ಕೂಡಿರಬೇಕು ಎಂಬುದಕ್ಕೆ ಹಿರೇಮಠ ಅವರು ಸಾಕ್ಷಿಯಾಗಿದ್ದಾರೆ. ಅವರು ಬಯಸಿದ್ದರೆ ಬಳ್ಳಾರಿಯ ಜನಾರ್ದನ ರೆಡ್ಡಿಯಿಂದ ನೂರಾರು ಕೋಟಿ ರೂಪಾಯಿಗಳನ್ನು ದೇಣಿಗೆ ರೂಪದಲ್ಲಿ ಪಡೆದು ಆತನ ವಿರುದ್ಧದ ಹೋರಾಟವನ್ನು ಕೈ ಬಿಡಬಹುದಿತ್ತು. ಆದರೆ ಕರ್ನಾಟಕದ ನೆಲಮೂಲ ಸಂಸ್ಕೃತಿಯಿಂದ ಎದ್ದುಬಂದ ಹಿರೇಮಠರಿಗೆ ಇಲ್ಲಿನ ರೈತರ ಬದುಕು ಮಾತ್ರವಲ್ಲದೆ ನೆಲ, ಜಲ ಅವರ ಪಾಲಿಗೆ ತಮ್ಮ ಉಸಿರಿನಷ್ಟೇ ಮುಖ್ಯವಾಯಿತು. ಹಾಗಾಗಿ ಸರ್ವೋಚ್ಚ ನ್ಯಾಯಾಲಯದವರೆಗೂ ಹೋರಾಡಿ ಕರ್ನಾಟಕದ ಅಕ್ರಮ ಗಣಿ ಚಟುವಟಿಕೆಗಳಿಗೆ ಇತಿಶ್ರೀ ಹಾಡಿದರು.
ಕರ್ನಾಟಕದ ಜನತೆಗೆ ಎಸ್.ಆರ್ ಹಿರೇಮಠ ಅವರು ಅಕ್ರಮ ಗಣಿಗಾರಿಕೆಯ ವಿರುದ್ಧದ ಹೋರಾಟದ ಮೂಲಕ ಪರಿಚಯವಾದರು. ಆದರೆ, ಅವರ ಬದುಕಿನ ಹೋರಾಟವು 1979ರಲ್ಲಿ ಅವರು ಅಮೆರಿಕಾದಿಂದ ಹಿಂತಿರುಗಿ ಬಂದು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಮೆಡ್ಲೇರಿ ಎಂಬ ಗ್ರಾಮದಲ್ಲಿ ನೆಲೆ ನಿಂತ ದಿನದಿಂದಲೇ ಆರಂಭವಾಗಿತ್ತು. ಕರ್ನಾಟಕದಲ್ಲಿ ಉತ್ತಮ ದರ್ಜೆಯ ತರಕಾರಿ ಬೀಜಗಳನ್ನು ಬೆಳೆಯುವ ನೆಲ ಎಂದು ಪ್ರಸಿದ್ಧವಾಗಿದ್ದ ಹಾಗೂ ಕೃಷ್ಣಮೃಗಗಳ ತವರು ನೆಲವಾಗಿದ್ದ ರಾಣೆಬೆನ್ನೂರು ತಾಲ್ಲೂಕಿನಲ್ಲಿ ನೀಲಗಿರಿ ಹಾಗೂ ಅಕೇಶಿಯಾ ಗಿಡಗಳು ತಲೆ ಎತ್ತುತ್ತಿರುವುದನ್ನು ಕಂಡ ಹಿರೇಮಠರು ಆತಂಕಗೊಂಡಿದ್ದರು. ಪಕ್ಕದ ಹರಿಹರದಲ್ಲಿ ತುಂಗಾಭದ್ರಾ ನದಿಯ ದಂಡೆಯ ಮೇಲೆ ತಲೆ ಎತ್ತಿರುವ ಬಿರ್ಲಾ ಸಮೂಹದ ಹರಿಹರ ಪಾಲಿಫೈಬರ್ಸ್ ಕಂಪನಿಯು ರೈತರಿಗೆ ನೀಲಗಿರಿ, ಅಕೇಶಿಯಾ ಬೆಳೆಯಲು ಪ್ರೋತ್ಸಾಹಿಸಿತ್ತು. ಜೊತೆಗೆ ತುಂಗಭದ್ರಾನದಿಗೆ ಕಾರ್ಖಾನೆಯಿಂದ ವಿಷಯುಕ್ತ ನೀರನ್ನು ಹರಿಸಲಾಗುತ್ತಿತ್ತು. ಸ್ವತಃ ಹದಿಮೂರು ಎಕರೆ ಭೂಮಿ ಖರೀದಿಸಿ ಮೆಡ್ಲೇರಿ ಗ್ರಾಮದಲ್ಲಿ ನೆಲೆ ನಿಂತು ಬೇಸಾಯ ಮಾಡಲು ಹೊರಟ ಹಿರೇಮಠರು ಅಂತಿಮವಾಗಿ ಹೋರಾಟದ ಹಾದಿಯನ್ನು ತುಳಿಯಬೇಕಾಯಿತು.
ಇದನ್ನು ಓದಿದ್ದೀರಾ?: ನನ್ನ ಹೋರಾಟಕ್ಕೆ ಮುಕ್ತಿ ತಂದುಕೊಟ್ಟವರು ಅರಸು ಎಂದ ಅರಸು ಪ್ರಶಸ್ತಿ ಪುರಸ್ಕೃತ ಕಾಗೋಡು ತಿಮ್ಮಪ್ಪ
ಇಂದಿನ ಗದಗ ಜಿಲ್ಲೆಯ ರೋಣಾ ತಾಲ್ಲೂಕಿನ ರೈತ ಕುಟುಂಬದಲ್ಲಿ ಜನಿಸಿದ ಹಿರೇಮಠರು ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡರು. ನಂತರ ತಾಯಿಯ ಜೊತೆ ವಿಜಯಪುರ ಜಿಲ್ಲೆಯ ಅಜ್ಜನ ಮನೆಗೆ ಹೋಗಿ ಅಲ್ಲಿಯೇ ಶಿಕ್ಷಣ ಮುಂದುವರಿಸಿದರು. ಹುಬ್ಬಳ್ಳಿ ನಗರದ ಭೂಮಿರೆಡ್ಡಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಮುಗಿಸಿ, ಸ್ಕಾಲರ್ ಶಿಪ್ ಯೋಜನೆಯಡಿ ಉನ್ನತ ಶಿಕ್ಷಣಕ್ಕಾಗಿ ಅಮೆರಿಕಾಕ್ಕೆ ತೆರಳಿದ ಅವರು ಅಲ್ಲಿಯೇ ಉದ್ಯೋಗ ಹಿಡಿದು ಚಿಕಾಗೋ ನಗರದಲ್ಲಿ ನೆಲೆ ನಿಂತರು. ತಾವು ಪ್ರೀತಿಸಿದ ಮೆನಿಸ್ಸಾ ಎಂಬ ಹೆಣ್ಣು ಮಗಳನ್ನು ತಾಯಿಯವರ ಒಪ್ಪಿಗೆ ಪಡೆದು ವಿವಾಹವಾದರು. ತಮಗೆ ಒಬ್ಬನೇ ಮಗನಾಗಿದ್ದ ಹಿರೇಮಠರ ಬಗ್ಗೆ ತಾಯಿಗೆ ಅನನ್ಯವಾದ ಪ್ರೀತಿ. ಹಾಗಾಗಿ ಸೊಸೆಗೆ ಶ್ಯಾಮಲಾ ಎಂಬ ಹೆಸರನ್ನು ನಾಮಕರಣ ಮಾಡಿದರು.
ಅಮೆರಿಕಾದಲ್ಲಿ ಒಳ್ಳೆಯ ಉದ್ಯೋಗದಲ್ಲಿ ಹಿರೇಮಠರಿಗೆ ತಾಯ್ನಾಡಿನ ಬಗ್ಗೆ ವಿಶೇಷವಾದ ಪ್ರೀತಿಯಿತ್ತು. ಇದು ಅವರಿಗೆ ತಂದೆಯಿಂದ ಬಂದ ಬಳುವಳಿಯಾಗಿತ್ತು. ಸಹಕಾರ ಚಳವಳಿಯಲ್ಲಿ ಇಡೀ ಭಾರತಕ್ಕೆ ಮಾದರಿಯಾದ ಗದಗ ಜಿಲ್ಲೆಯಲ್ಲಿ ಅವರ ತಂದೆ ಸಹಕಾರ ಚಳವಳಿಯ ಮುಂಚೂಣಿಯಲ್ಲಿದ್ದರು. 1975 ರಲ್ಲಿ ಇಂದಿರಾಗಾಂಧಿಯವರು ಭಾರತದಲ್ಲಿ ತುರ್ತುಪರಿಸ್ಥಿತಿ ಹೇರಿದಾಗ ಹಿರೇಮಠರು ಅಮೆರಿಕಾದಲ್ಲಿ ಗೆಳೆಯರನ್ನು ಒಗ್ಗೂಡಿಸಿ ಪ್ರತಿಭಟಿಸಿದ್ದರು. ನಂತರ ತಾಯ್ನಾಡಿಗೆ ಹೋಗಿ ಸಮಾಜ ಸೇವೆ ಮಾಡಬೇಕು ಎಂದು ನಿರ್ಧರಿಸಿ ಭಾರತಕ್ಕೆ ಹಿಂತಿರುಗಿದರು. ಅಂದು ಜೊತೆಗೂಡಿದ ಅಮೆರಿಕಾದ ಸ್ನೇಹಿತರು ಇಂದಿಗೂ ಹಿರೇಮಠರ ಹೋರಾಟಕ್ಕೆ ಕೈ ಜೋಡಿಸುತ್ತಿದ್ದಾರೆ. ಅವರ ಸಮಾಜ ಪರಿವರ್ತನಾ ಸಮುದಾಯಕ್ಕೆ ಆರ್ಥಿಕ ನೆರವು ನೀಡುತ್ತಿದ್ದಾರೆ.
ನನಗೆ 1995 ರಿಂದ ಹಿರೇಮಠರ ಹೋರಾಟದ ಬಗ್ಗೆ ಪರಿಚಯವಿತ್ತು. ರಾಮಚಂದ್ರ ಗುಹಾ ಅವರು ಪರಿಸರ ತಜ್ಞ ಮಾಧವ ಗಾಡ್ಗೀಳ್ ಕುರಿತು ಒಂದು ಸುದೀರ್ಘ ಲೇಖನ ಬರೆದಾಗ, ಹಿರೇಮಠರ ಹೆಸರನ್ನು ಪ್ರಸ್ತಾಪಿಸಿ ಹರಿಹರ ಪಾಲಿಫೈಬರ್ಸ್ ವಿರುದ್ಧದ ಅವರ ಹೋರಾಟವನ್ನು ಶ್ಲಾಘಿಸಿದ್ದರು. ನಂತರದ ದಿನಗಳಲ್ಲಿ ಡೌನ್ ಟು ಅರ್ಥ್ ಎಂಬ ಪರಿಸರ ಕುರಿತಾದ ಪಾಕ್ಷಿಕ ಪತ್ರಿಕೆಯಲ್ಲಿ ಛತ್ತೀಸ್ ಗಡದ ಗಣಿಗಾರಿಕೆ, ಆದಿವಾಸಿಗಳ ಒಕ್ಕಲೆಬ್ಬಿಸುವಿಕೆ ಇವುಗಳ ಕುರಿತಾಗಿ ಹಿರೇಮಠರ ಅಭಿಪ್ರಾಯಗಳನ್ನು ಓದುತ್ತಿದ್ದೆ. ಅಂತಿಮವಾಗಿ 2002 ರಲ್ಲಿ ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿ ನಡೆಸುವ ಕುರಿತಾಗಿ ಉದಯ ಟಿ.ವಿ.ಯ ಕಚೇರಿಗೆ ತಮ್ಮ ಪತ್ನಿಯ ಸಮೇತ ಆಗಮಿಸಿದಾಗ ಅವರೊಂದಿಗೆ ಸಂಪರ್ಕ ಬೆಳೆಯಿತು. ಆನಂತರ ಅವರು ಧಾರವಾಡದ ಜರ್ಮನ್ ಆಸ್ಪತ್ರೆ ಬಳಿಯ ನಿವಾಸದಲ್ಲಿ ನೆಲೆಸತೊಡಗಿದಾಗ ಅವರ ಜೊತೆ ನಿರಂತರವಾಗಿ ಒಡನಾಡಲು ಸಾಧ್ಯವಾಯಿತು.
ಹಿರೇಮಠರ ಪ್ರಾಮಾಣಿಕ ಹೋರಾಟಕ್ಕೆ ದೇಶದೆಲ್ಲೆಡೆ ಅಪಾರ ಬೆಂಬಲಿಗರಿದ್ದಾರೆ. ದೆಹಲಿಯ ಸರ್ವೋಚ್ಚ ನ್ಯಾಯಾಲಯದ ಹಿರಿಯ ವಕೀಲರಾದ ಪ್ರಶಾಂತ್ ಭೂಷಣ್ ಯಾವುದೇ ಶುಲ್ಕ ಪಡೆಯದೆ ಹಿರೇಮಠರ ವಿಷಯಗಳ ಬಗ್ಗೆ ನ್ಯಾಯಾಲಯದಲ್ಲಿ ವಕಾಲತ್ತು ವಹಿಸುತ್ತಾರೆ. ಅದೇ ರೀತಿಯಲ್ಲಿ ಬೆಂಗಳೂರಿನಲ್ಲಿ ವಿಷ್ಣು ಕಾಮತ್ ಎಂಬ ಪ್ರಾಧ್ಯಾಪಕರಿದ್ದಾರೆ. ಒಮ್ಮೆ ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸಿಕ್ಕ ಹಿರೇಮಠರು ತಮ್ಮ ಆತ್ಮೀಯ ಗೆಳೆಯರನ್ನೆಲ್ಲಾ ನನಗೆ ಪರಿಚಯಿಸಿದ್ದರು. ನಾನು ಬಲ್ಲ ಹಾಗೆ ಗೆಳೆಯರು ನೀಡುವ ಆರ್ಥಿಕ ಸಹಾಯವನ್ನು ಹೊರತುಪಡಿಸಿದರೆ, ಬೇರೆಲ್ಲೂ ಅವರು ದೇಣಿಗೆ ಪಡೆಯುತ್ತಿಲ್ಲ. ಅತ್ಯಂತ ಸರಳವಾದ ಮಿತವ್ಯಯ ಜೀವನ ಅವರದು.
ಇದನ್ನು ಓದಿದ್ದೀರಾ?: ನೆನಪು | ಅರಸು ಹಾಕಿದ ‘ಕರ್ನಾಟಕ’ದ ಅಡಿಗಲ್ಲಿಗೆ ಐವತ್ತರ ಸಂಭ್ರಮ
ವಯಸ್ಸಿನ ಕಾರಣದಿಂದಾಗಿ ಈಗ ಹಿರೇಮಠರು ರಾಜ್ಯಾದ್ಯಂತ ತಿರುಗಾಟ ನಡೆಸಲು ಸಾಧ್ಯವಾಗುತ್ತಿಲ್ಲ. ಆದರೆ. ಯಾವುದೇ ಅಕ್ರಮ ಚಟುವಟಿಕೆಯ ವಿರುದ್ಧದ ಅವರ ಧ್ವನಿ ಅಡಗಿಲ್ಲ. ಈ ದಿನಗಳಲ್ಲಿಯೂ ಸಹ ನ್ಯಾಯಾಲಯದ ಪ್ರಕರಣಗಳಿಗೆ ದೆಹಲಿ, ಬೆಂಗಳೂರಿಗೆ ಖುದ್ದು ಹಾಜರಾಗುತ್ತಾರೆ. ಯಾವ ಪ್ರಾಣಾಪಾಯ ಅಥವಾ ಜೀವಬೆದರಿಕೆಗೆ ಜಗ್ಗದ, ಬಗ್ಗದ ಜೀವ ಅವರದು. ಒಂದು ರೀತಿಯಲ್ಲಿ ಹಿರೇಮಠರ ಅವರನ್ನು ಕರ್ನಾಟಕದ ಆಧುನಿಕ ಗಾಂಧಿ ಎಂದು ಕರೆಯಬಹುದು. ಇಂದಿನ ದಿನಗಳಲ್ಲಿ ಸಾಮಾಜಿಕ ಹೋರಾಟ ಎಂಬುದು ಅಧಿಕಾರದ ಗದ್ದುಗೆಗೆ ಏರುವ ಏಣಿಯ ಮೆಟ್ಟಿಲು ಎಂಬಂತೆ ಇರುವಾಗ ನಿಜವಾದ ಹೋರಾಟ ಹೇಗಿರಬೇಕು ಎಂಬುದಕ್ಕೆ ಎಸ್.ಆರ್ ಹಿರೇಮಠರು ನಮ್ಮೆದುರು ಸಾಕ್ಷಿಯಾಗಿದ್ದಾರೆ. ಹಾಗಾಗಿ ಇಂದಿನ ಯುವ ತಲೆಮಾರು ಕಡ್ಡಾಯವಾಗಿ ಎಸ್.ಆರ್ ಹಿರೇಮಠರ ಹೋರಾಟದ ಕಥನವನ್ನು ಓದಲೇಬೇಕು.