ಪ್ರೊ. ಭಗವಾನರ ಮಾತುಗಳಿಂದ ಒಕ್ಕಲಿಗ ಸಮುದಾಯ ಕೆರಳುವ, ನರಳುವ ಅವಶ್ಯಕತೆ ಇಲ್ಲ

Date:

Advertisements
ವಿಚಾರವಾದಿ ಪ್ರೊ. ಕೆ.ಎಸ್. ಭಗವಾನ್ ಮಹಿಷ ದಸರಾ ಕಾರ್ಯಕ್ರಮದಲ್ಲಿ ಮಾತನಾಡುತ್ತ ಒಕ್ಕಲಿಗ ಸಮುದಾಯದ ಬಗ್ಗೆ ಕುವೆಂಪು ಅವರ ವಿಚಾರಧಾರೆಗಳನ್ನು ಯಥಾವತ್ತಾಗಿ ಉಲ್ಲೇಖಿಸಿದ್ದಾರೆ. ಇದನ್ನು ಮನುವಾದಿಗಳ ನಿಯಂತ್ರಣದಲ್ಲಿರುವ ಮಾಧ್ಯಮಗಳು ಎಲ್ಲೆ ಮೀರಿ ವೈಭವೀಕರಿಸಿ ಒಕ್ಕಲಿಗ ಸಮುದಾಯ ಭಗವಾನರ ವಿರುದ್ಧ ಕೆರಳುವಂತೆ ಮಾಡಿರುವುದು ದುರದೃಷ್ಟಕರ

ಇತ್ತೀಚೆಗೆ ಮೈಸೂರಿನಲ್ಲಿ ಜರುಗಿದ ಮಹಿಷ ದಸರಾ – 2023 ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರೊ. ಕೆ.ಎಸ್. ಭಗವಾನ್ ಒಕ್ಕಲಿಗರು ಸಂಸ್ಕೃತಿ ಹೀನರು ಎಂದು ಮಾತನಾಡಿರುವುದು ರಾಜ್ಯದಾದ್ಯಂತ ತೀವ್ರ ಖಂಡನೆ ಮತ್ತು ಪ್ರತಿಭಟನೆಗಳಿಗೆ ಎಡೆಮಾಡಿಕೊಟ್ಟಿದೆ. ವಾಸ್ತವವಾಗಿ ಒಕ್ಕಲಿಗರು ಎಂದರೆ ಕೃಷಿ ಸಂಸ್ಕೃತಿಯ ವಾರಸುದಾರರು, ಅನ್ನದಾತರು, ಶ್ರಮದಾತರು ಮತ್ತು ರಾಷ್ಟ್ರ ನಿರ್ಮಾಣ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರಧಾರಿಗಳು ಎಂದು ಅರ್ಥ. ಒಕ್ಕಲಿಗರು ಜಗತ್ತಿನ ಎಲ್ಲೆಡೆ ಧರ್ಮಾತೀತವಾಗಿ ಮತ್ತು ಜಾತ್ಯತೀತವಾಗಿ ಜೀವಿಸುವ ಪ್ರಮುಖ ಜನಾಂಗಕ್ಕೆ ಸೇರಿದವರಾಗಿದ್ದಾರೆ. ಇವರನ್ನು ರಾಷ್ಟ್ರಕವಿ ಕುವೆಂಪು ಸೇರಿದಂತೆ ಅನುಭಾವಿಗಳು ನೇಗಿಲ ಯೋಗಿ ಎಂದು ಪ್ರೀತಿಪೂರ್ವಕವಾಗಿ ಸಂಬೋಧಿಸಿದ್ದಾರೆ. ಅಸಂಖ್ಯಾತ ಒಕ್ಕಲಿಗರು ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಇಂದಿಗೂ ಕೂಡ ದುರ್ಬಲರಾಗಿಯೇ ಉಳಿದಿದ್ದಾರೆ.

1974ರಲ್ಲಿ ವಿಶ್ವಜ್ಞಾನಿ, ಅನುಭಾವಿ ಮತ್ತು ದಾರ್ಶನಿಕ ಕುವೆಂಪು ಸಭೆಯೊಂದರಲ್ಲಿ “ಒಕ್ಕಲಿಗರು ಮಹಾ ಮೂಢರು, ಅವರಷ್ಟು uncultured brutes ಮತ್ತೊಬ್ಬರಿಲ್ಲ. ಎಲ್ಲೋ ನಾಲ್ಕು ಜನ ಓದಿಕೊಂಡು ಮುಂದುವರಿದಿರುವುದು ಬೇರೆ ತರಹ ಇರಬಹುದು. ನಾನು ಹೇಳೋದು ಸಾಮಾನ್ಯ ಜನರನ್ನು ಕುರಿತು. ಅವರೆಲ್ಲ ಯಾಕೆ ಹಾಗೆ ಹಿಂದುಳಿದವರು? ಅವರನ್ನು ಹಾಗೆ ಮಾಡಿದವರು ಯಾರು? ಈ ಹಾರವರು (ಬ್ರಾಹ್ಮಣರು). ಹಾರವರನ್ನು ಅನುಸರಿಸೋಕೆ ಹೋಗಿ ಇವರೆಲ್ಲ ಕೆಟ್ಟರು. ಎಜುಕೇಷನ್ ಇನ್‌ಸ್ಟಿಟ್ಯೂಟ್ ತೆರೆದು ಜ್ಞಾನ ಪ್ರಸಾರ ಮಾಡುವುದರ ಮೂಲಕ ಇವರನ್ನು ಸರಿಯಾದ ದಾರಿಗೆ ತರಬಹುದು. ಲಿಂಗಾಯತರು ಪರವಾಗಿಲ್ಲ. ಶಾಲಾ ಕಾಲೇಜು, ಅದೂ ಇದೂ ಮಾಡುತ್ತಿದ್ದಾರೆ. ಅವರೂ ವೀರಶೈವ ಧರ್ಮ ಬಿಟ್ಟು ಇನ್ನೇನೂ ಹೇಳಲ್ಲ. ಅದು ತಪ್ಪು.

ಮುಂದುವರೆಯೋಕೆ ಏನೂ ಮಾಡಿಕೊಳ್ಳದೇ ಇರೋರು ಈ ಒಕ್ಕಲಿಗರು. ಹಾರವರ ಕಡೆಗೆ ಹೋಗ್ಬೇಡಿ, ಅವರನ್ನು ಅನುಸರಿಸಬೇಡಿ ಅಂತ ಹೇಳ್ಬೇಕು. ಯಾಕೆಂದರೆ ನಾನು ದ್ವೇಷದಿಂದ ಹೇಳ್ತಾಯಿಲ್ಲ. ಹಾರವರು ಎಲ್ಲರನ್ನೂ ಸಮಾನತೆಯಿಂದ ನೋಡಲ್ಲ. ನೀವು ಶೂದ್ರರು ಅಂತ್ಲೇ ನೋಡೋದು. ಇದನ್ನೆಲ್ಲಾ ನಾನು ನಮ್ಮ ಜನಕ್ಕೆ ಬಿಡಿಸಿ ಹೇಳ್ಬೇಕು. ನಮ್ ಜನ ಅಂದ್ರೆ ಬರೀ ಒಕ್ಕಲಿಗರಿಗೆ ಮಾತ್ರ ಹೇಳ್ತಾಯಿಲ್ಲ. ಇಡೀ ಶೂದ್ರರನ್ನೇ ಕುರಿತು ಹೇಳ್ತಿದ್ದೀನಿ. ನಿಜವಾದ ಜನಜಾಗೃತಿ ಆಗ್ಬೇಕಾದ್ರೆ ಇದೆಲ್ಲಾ ಆಗ್ಬೇಕು. ಸ್ವಾತಂತ್ರ್ಯ ಬಂದ್ಮೇಲೆ ನಮ್ ದೇಶ ಜಾತ್ಯತೀತ ಅಂತ ಆಗಿದೆ. (ಕುವೆಂಪು ಸಮಗ್ರ ಗದ್ಯ, ಸಂಪುಟ 2, ಪುಟ 1028-29)”.

Advertisements

ಕುವೆಂಪು ಅವರು ರಾಷ್ಟ್ರೀಯ ಮುಖ್ಯವಾಹಿನಿ ಮತ್ತು ಅಭಿವೃದ್ಧಿ ಅವಕಾಶಗಳಿಂದ ವಂಚಿತರಾದ ಶೂದ್ರರನ್ನು ಜಾಗೃತಿಗೊಳಿಸಿ ಪ್ರಗತಿ ಪಥದಲ್ಲಿ ಮುನ್ನಡೆಸಲು ತಮ್ಮ ಬದುಕಿನುದ್ದಕ್ಕೂ ಅವಿರತ ಬೌದ್ಧಿಕ ಅಭಿಯಾನ ನಡೆಸಿದರು. ವ್ಯವಸ್ಥೆಯನ್ನು ನಿಯಂತ್ರಿಸುತ್ತಿರುವ, ಸಮಾಜವನ್ನು ವಿಭಜಿಸುತ್ತಿರುವ ಮತ್ತು ಪುರಾಣಗಳನ್ನು ಸೃಷ್ಟಿಸಿ ಶೂದ್ರ ಸಮುದಾಯಗಳನ್ನು ಅನಭಿವೃದ್ಧಿ ಸ್ಥಿತಿಯಲ್ಲಿ ನಿರಂತರವಾಗಿ ಇಡಲು ಬ್ರಾಹ್ಮಣಶಾಹಿ ನಡೆಸಿದ ಸಂಚುಗಳ ವಿರುದ್ಧ ಕುವೆಂಪು ಸಾಮಾಜಿಕ ಕಳಕಳಿಯಿಂದ ಇಂತಹ ವಿಚಾರಗಳನ್ನು ಜನರಿಗೆ ತಲುಪಿಸಿ ಸಾಮಾಜಿಕ ಪರಿವರ್ತನೆ ಮತ್ತು ಸಬಲೀಕರಣಕ್ಕಾಗಿ ಸಾಹಿತ್ಯವನ್ನು ಪ್ರಬಲ ಅಸ್ತ್ರವನ್ನಾಗಿ ಪ್ರಜ್ಞಾಪೂರ್ವಕವಾಗಿ ಬಳಸಿದರು. ಶಿಕ್ಷಣದ ಬ್ರಾಹ್ಮಣೀಕರಣದ ವಿರುದ್ಧ ಕುವೆಂಪು ನಡೆಸಿದ ಹೋರಾಟ ಅವಿಸ್ಮರಣೀಯ.

ಈ ಘಟನೆ ನಂತರ ಕೆಲವು ಸ್ಥಾಪಿತ ಹಿತಾಸಕ್ತಿಗಳು ಕುವೆಂಪುರವರು ಕ್ಷಮಾಪಣೆ ಕೇಳಬೇಕೆಂದು ಒತ್ತಾಯಿಸಿದಾಗ “ನನ್ನ ಈ ಭಾಷಣಕ್ಕೆ ನಾನು ಕ್ಷಮಾಪಣೆ ಕೇಳಬೇಕೆಂದು ಕೆಲವು ಮಾಧ್ವರೂ, ಮಾಧ್ವ ಸಂಘಗಳೂ ಅರಚಿಕೊಳ್ಳುತ್ತಿವೆ. ದುಷ್ಟ ತತ್ವಗಳಿಂದ ಮನುಕುಲಕ್ಕೆ ಶತಮಾನಗಳಿಂದ ಅನ್ಯಾಯ, ಅವಹೇಳನ ಮತ್ತು ಅಪಪ್ರಚಾರ ಮಾಡುತ್ತಾ ಬಂದಿರುವವರು ಸಮಸ್ತ ಮಾನವರ ಕ್ಷಮಾಪಣೆ ಕೇಳಿಕೊಳ್ಳಬೇಕೇ ಹೊರತು ಅದನ್ನು ಖಂಡಿಸಿದ ನಾನಲ್ಲ” ಎಂಬ ದಿಟ್ಟ ಉತ್ತರವನ್ನು ದಿನಾಂಕ 11-07-1974ರಂದು ಕುವೆಂಪು ನೀಡಿದ್ದರು.

ಕುವೆಂಪು ಅವರ ಶಿಷ್ಯ ಮತ್ತು ವಿಚಾರವಾದಿ ಪ್ರೊ. ಕೆ.ಎಸ್. ಭಗವಾನ್ ದಿನಾಂಕ 13-10-2023ರಂದು  ಮಹಿಷ ಬೌದ್ಧ ದಸರಾ ಸಂದರ್ಭದಲ್ಲಿ ಒಕ್ಕಲಿಗ ಸಮುದಾಯದ ಬಗ್ಗೆ ಕುವೆಂಪು ಅವರ ವಿಚಾರಧಾರೆಗಳನ್ನು ಯಥಾವತ್ತಾಗಿ ಉಲ್ಲೇಖಿಸಿದ್ದಾರೆ. ಇದನ್ನು ಮನುವಾದಿಗಳ ನಿಯಂತ್ರಣದಲ್ಲಿರುವ ಮಾಧ್ಯಮಗಳ ಪ್ರತಿನಿಧಿಗಳು ಎಲ್ಲೆ ಮೀರಿ ವೈಭವೀಕರಿಸಿ ಒಕ್ಕಲಿಗ ಸಮುದಾಯ ಭಗವಾನರ ವಿರುದ್ಧ ಕೆರಳುವಂತೆ ಮಾಡಿರುವುದು ದುರದೃಷ್ಟಕರ ಸಂಗತಿಯಾಗಿದೆ. ಕುವೆಂಪು ಅವರು “ಮನುವ್ಯಾದಿಗಳ ಈ ಕಿರುಚಾಟ, ಅರಚಾಟ ಆವಾಗಲೂ ಇತ್ತು. ಈಗಲೂ ಇದೆ ಎಂದು ಪ್ರತಿಕ್ರಿಯೆ ನೀಡಿದ್ದರು. ಮುಗ್ಧರು, ಶ್ರಮಜೀವಿಗಳು ಮತ್ತು ರಾಷ್ಟ್ರನಿರ್ಮಾಪಕರೂ ಆದ ಒಕ್ಕಲಿಗರು ಬ್ರಾಹ್ಮಣ್ಯದ ಕಪಿಮುಷ್ಟಿಯಿಂದ ಹೊರಬಂದು ಋಷಿ ಸಂಸ್ಕೃತಿಯನ್ನು ತಿರಸ್ಕರಿಸಿ ಕೃಷಿ ಸಂಸ್ಕೃತಿಯನ್ನು ಸುಸ್ಥಿರಗೊಳಿಸಿ ಸ್ವಾಭಿಮಾನಿಗಳು ಮತ್ತು ಸ್ವಾವಲಂಭಿಗಳಾಗಿ ಬದುಕಬೇಕೆಂದು ನೀಡಿರುವ ಕುವೆಂಪು ವಿಚಾರಧಾರೆಯನ್ನು ಪ್ರೊ. ಭಗವಾನ್ ಅಕ್ಷರಶಃ ಮಹಿಷ ದಸರಾ ಸಂದರ್ಭದಲ್ಲಿ ಉಲ್ಲೇಖಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಪ್ರೊ. ಭಗವಾನರ ಮಾತುಗಳಿಂದ ಒಕ್ಕಲಿಗ ಸಮುದಾಯ ಕೆರಳುವ ಮತ್ತು ನರಳುವ ಅವಶ್ಯಕತೆ ಇಲ್ಲ. ದಲಿತರು, ಆದಿವಾಸಿಗಳು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರಲ್ಲಿಯೂ ಒಕ್ಕಲುತನವನ್ನೇ ನಂಬಿ ಬದುಕುತ್ತಿರುವ ನೇಗಿಲ ಯೋಗಿಗಳು ಪ್ರೊ. ಭಗವಾನರ ಮಾತುಗಳಿಂದ ಬೇಸರಗೊಳ್ಳುವ ಅನಿವಾರ್ಯತೆ ಇಲ್ಲ. ಪ್ರೊ. ಭಗವಾನರು ಯಾವುದೇ ವೇದಿಕೆಯಲ್ಲಿಯೂ ಒಂದು ಧರ್ಮ ಅಥವಾ ಜನಾಂಗದ ಮನಸ್ಸನ್ನು ನೋಯಿಸುವ ಮಾತುಗಳನ್ನು ಆಡದಿರಲಿ ಎಂಬುದು ಅವರ ಹಿತೈಷಿಯಾಗಿ ನನ್ನ ವೈಯಕ್ತಿಕ ಮನವಿ. ಶೋಷಿತ ಸಮುದಾಯಗಳು ಬ್ರಾಹ್ಮಣ್ಯದ ವಿರುದ್ಧ ಜಾಗೃತರಾಗಿ ಒಗ್ಗೂಡಿ ಹೋರಾಟ ನಡೆಸಿ ರಾಜ್ಯಾಧಿಕಾರವನ್ನು ಗಳಿಸುವುದು ಒಕ್ಕಲಿಗರು ಮತ್ತಿತರ ಶೂದ್ರ ಸಮುದಾಯಗಳಿಗೆ ನಿಜವಾಗಿಯೂ ಇಂದಿನ ಬಹುದೊಡ್ಡ ಸವಾಲಾಗಿದೆ.

ಮಹೇಶ್‌ ಚಂದ್ರ ಗುರು
ಡಾ. ಮಹೇಶ್‌ ಚಂದ್ರ ಗುರು
+ posts

ನಿವೃತ್ತ ಪ್ರಾಧ್ಯಾಪಕ, ಮೈಸೂರು ವಿಶ್ವವಿದ್ಯಾಲಯ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಡಾ. ಮಹೇಶ್‌ ಚಂದ್ರ ಗುರು
ಡಾ. ಮಹೇಶ್‌ ಚಂದ್ರ ಗುರು
ನಿವೃತ್ತ ಪ್ರಾಧ್ಯಾಪಕ, ಮೈಸೂರು ವಿಶ್ವವಿದ್ಯಾಲಯ

1 COMMENT

  1. 1. 1970 ರ ದಶಕ- ಬಸವಲಿಂಗಪ್ಪ
    2. 2010 ರ ದಶಕ- ಪ್ರೊ. ಕಲಬುರಗಿ
    3. 2020 ರ ದಶಕ- ಪ್ರೊ. ಭಗವಾನ್

    ಇಲ್ಲಿ ಗಮನಿಸ ಬೇಕಾದ ಅಂಶ, ಮಾಧ್ಯಮಗಳ ಮತಿಹೀನ ವರದಿಗಾರಿಕೆಯ ಗುರಿ ದಲಿತ ಮತ್ತು ಶೂದ್ರ ನಾಯಕರು. ಇವರ ಬೇಟೆ, ಬಲಿಪಶು ವಿಚಾರವಾದಿಗಳು, ನಿಷ್ಠುರ ಮಾತುಗಾರರು.

    ವಿಚಾರವಾದಿಗಳ ಸಮುದಾಯದ ಜನರು ತಮ್ಮ ಅಂತರಂಗದ ಕಣ್ಣುಗಳನ್ನು ತೆರೆದು ವಿಮರ್ಶೆ ಮಾಡಿಕೊಳ್ಳಬೇಕಾದ ತುರ್ತು ಸಮಯವಿದು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X