ಏಕರೂಪ ನಾಗರಿಕ ಸಂಹಿತೆ | ಅಲ್ಪಸಂಖ್ಯಾತರ ಮೇಲೆ ಹಿಂದುತ್ವದ ಹೇರಿಕೆ!

Date:

Advertisements
ಏಕರೂಪ ನಾಗರಿಕ ಸಂಹಿತೆಯ (ಯುಸಿಸಿ) ಪ್ರಸ್ತಾವ ಸಂವಿಧಾನದ 'ರಾಜ್ಯ ನಿರ್ದೇಶನಾ ತತ್ವ'ದ 44ನೇ ಕಲಂನಲ್ಲಿದ್ದರೂ, ಬಿಜೆಪಿ ಅದನ್ನು ಸಂವಿಧಾನದ ಆಶಯಗಳಿಗೆ ತದ್ವಿರುದ್ಧವಾಗಿ ವ್ಯಾಖ್ಯಾನಿಸುತ್ತಿದೆ. ಅಲ್ಪಸಂಖ್ಯಾತರ ಮೇಲೆ ಹಿಂದುತ್ವವನ್ನು, ಮಹಿಳೆಯರ ಮೇಲೆ ಮನುವಾದವನ್ನು ಹೇರುವ ಅಸ್ತ್ರವಾಗಿ ಯುಸಿಸಿಯನ್ನು ರೂಪಿಸಿದೆ.

“2022ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನಾವು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವ ಭರವಸೆಯನ್ನು ಜನತೆಗೆ ನೀಡಿದ್ದೆವು. ಅದರಂತೆ, ಜನವರಿ 27ರಿಂದ ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಲಾಗುತ್ತಿದೆ. ಇಡೀ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಿದ ಪ್ರಪ್ರಥಮ ರಾಜ್ಯ ಉತ್ತರಾಖಂಡವಾಗಲಿದೆ” ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಘೋಷಿಸಿದ್ದಾರೆ. ಈ ಕಾನೂನಿನ ಜಾರಿಯೊಂದಿಗೆ ಸಮಾಜದಲ್ಲಿ ಎಲ್ಲ ನಾಗರಿಕರಿಗೆ ಸಮಾನ ಹಕ್ಕುಗಳು ಹಾಗೂ ಹೊಣೆಗಾರಿಕೆಗಳು ಖಾತರಿಯಾಗಲಿವೆ ಎಂದು ಅವರು ಹೇಳಿಕೊಂಡಿದ್ದಾರೆ.

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ, ಕಳೆದ ಕೆಲವು ವರ್ಷಗಳಿಂದ ಏಕರೂಪ ನಾಗರಿಕ ಸಂಹಿತೆ ಜಾರಿ ಬಗ್ಗೆ ದೇಶದಾದ್ಯಂತ ರಾಜಕೀಯ ಚರ್ಚೆಗಳು ನಡೆಯುತ್ತಿದೆ. ಮದುವೆ, ವಿಚ್ಛೇದನ, ಉತ್ತರಾಧಿಕಾರ, ದತ್ತು ಇತ್ಯಾದಿ ವಿಷಯಗಳಲ್ಲಿ ಎಲ್ಲ ಧಾರ್ಮಿಕ ಸಮುದಾಯಗಳಿಗೆ ಒಂದೇ ಕಾನೂನು ಇರಬೇಕೆಂಬ ವಾದದೊಂದಿಗೆ ಬಿಜೆಪಿ ರೂಪಿಸಿರುವ, ಸಾಕಷ್ಟು ವಿರೋಧಗಳಿಗೆ ಗುರಿಯಾಗಿರುವ ಏಕರೂಪ ನಾಗರಿಕ ಸಂಹಿತೆಯನ್ನು ಉತ್ತರಾಖಂಡ ಜಾರಿಗೊಳಿದೆ.

ಆದರೆ, ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವ ಮೊದಲು ದೇಶದಲ್ಲಿ ಸಮಾನ ವಸತಿ, ಸಮಾನ ಶಿಕ್ಷಣ, ಸಮಾನ ಧರ್ಮ, ಸಮಾನ ಆದಾಯ, ಸಾಮಾಜಿಕ ಸಮಾನತೆ, ಸಮಾನ ಆರೋಗ್ಯ ಸೌಲಭ್ಯ ಮೊದಲು ಜಾರಿಯಾಗಬೇಕಿತ್ತು. ಇದು ದೊಡ್ಡ ಬದಲಾವಣೆಗೆ, ಜನ ಕಲ್ಯಾಣಕ್ಕೆ ಕಾರಣವಾಗುತ್ತಿತ್ತು. ಆದರೆ, ದೇಶದಲ್ಲಿ ಅಸಮಾನತೆಗಳು ತುಂಬಿ ತುಳುಕುತ್ತಿರುವ ಸಮಯದಲ್ಲಿ ಉತ್ತರಖಾಂಡದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬಂದಿದೆ. ಇದರಿಂದ ಸಮಾಜದಲ್ಲಿನ ಎಲ್ಲ ಏರು-ಪೇರುಗಳು ಕಾಣೆಯಾಗಿ ಸಮಾನತೆ ಬಂದುಬಿಡುವುದೇ. ಸಾಧ್ಯವೇ ಇಲ್ಲ.

Advertisements

ಏಕರೂಪ ನಾಗರಿಕ ಸಂಹಿತೆಯು ಯಾವುದೇ ಜಾತಿ, ಧರ್ಮ, ಪ್ರಾಂತ ಭೇದ ಮಾಡದೆ ದೇಶದ ಎಲ್ಲರಿಗೂ ಒಂದೇ ಕಾನೂನು ಇರಬೇಕು ಎಂದು ಹೇಳುತ್ತದೆ. ‘ಸಂವಿಧಾನದ ಆರ್ಟಿಕಲ್ 44ರ ಆಶಯ ಕೂಡ ಅದೇ ಆಗಿದೆ. ದೇಶದ ಎಲ್ಲ ನಾಗರಿಕರಿಗೂ ಒಂದೇ ಕಾನೂನು ಇರಬೇಕು ಎಂದು ನಮ್ಮ ಸಂವಿಧಾನ ಪ್ರತಿಪಾದಿಸುತ್ತದೆ. ಅದನ್ನು ನಾವು ಸಾಧಿಸಿದ್ದೇವೆ’ ಎಂದು ಬಿಜೆಪಿ ಹೇಳುತ್ತಿದೆ. ಆದರೆ, ಸಂವಿಧಾನ ಹೇಳುವ ಏಕರೂಪ ನಾಗರಿಕ ಸಂಹಿತೆಗೂ, ಬಿಜೆಪಿ ಜಾರಿ ಮಾಡಹೊರಟಿರುವ, ಜಾರಿ ಮಾಡುತ್ತಿರುವ ಏಕರೂಪ ನಾಗರಿಕ ಸಂಹಿತೆಗೂ ಸಂಬಂಧವೇ ಇಲ್ಲ. ಎರಡೂ ಪರಸ್ಪರ ತದ್ವಿರುದ್ಧವಾಗಿವೆ. ಬಿಜೆಪಿಯ ಈ ನೀತಿಯು ಮುಸ್ಲಿಮರನ್ನು ಗುರಿಯಾಗಿಸಿಕೊಂಡಿದೆ. ಕೋಮು ದೃವೀಕರಣದ ಭಾಗವಾಗಿದೆ ಎಂಬುದು ಸ್ಪಷ್ಟ.

ಹಾಗೆ ನೋಡಿದರೆ, ದೇಶದಲ್ಲಿ ಕ್ರಿಮಿನಲ್ ಕಾನೂನು ಎಲ್ಲರಿಗೂ ಒಂದೇ ಇದೆ. ಕ್ರಿಮಿನಲ್‌ಗಳಿಗೆ ಜಾತಿ, ಧರ್ಮ ಭೇದ ಇಲ್ಲದೆ ಎಲ್ಲರನ್ನೂ ಒಂದೇ ರೀತಿಯಲ್ಲಿ ಪರಿಗಣಿಸಿ ಶಿಕ್ಷೆ ನೀಡಲಾಗುತ್ತದೆ. ಆದರೆ, ವೈಯಕ್ತಿಕ ಕಾನೂನು, ಸಿವಿಲ್ ಕಾನೂನಿನಲ್ಲಿ ಮಾತ್ರ ಬದಲಾವಣೆ ಇತ್ತು.

ಉತ್ತರಾಖಂಡದಲ್ಲಿ ಜಾರಿಯಾದ ಏಕರೂಪ ನಾಗರಿಕ ಸಂಹಿತೆ ಹೇಳುವುದೇನು?

1. ಮದುವೆ ಮತ್ತು ವಿಚ್ಛೇದನ: ಎಲ್ಲ ಧರ್ಮದ ಪುರುಷ ಮತ್ತು ಮಹಿಳೆಯರಿಗೆ ಅನುಕ್ರಮವಾಗಿ 21 ಮತ್ತು 18 ವರ್ಷಗಳಲ್ಲಿ ಕಾನೂನುಬದ್ಧ ವಿವಾಹ ವಯಸ್ಸನ್ನು ಪ್ರಮಾಣೀಕರಿಸುತ್ತದೆ. ಮತ್ತು ಎಲ್ಲ ಧರ್ಮಗಳಲ್ಲಿ ವಿಚ್ಛೇದನಕ್ಕೆ ಏಕರೂಪದ ಆಧಾರಗಳು ಮತ್ತು ಕಾರ್ಯವಿಧಾನಗಳನ್ನು ಕಡ್ಡಾಯಗೊಳಿಸುತ್ತದೆ. ಗಂಡ ಮತ್ತು ಹೆಂಡತಿಯ ವಿಚ್ಛೇದನದ ಕಾರಣಗಳು ಮತ್ತು ಆಧಾರಗಳು ಒಂದೇ ಆಗಿರುತ್ತವೆ.

2. ಬಹುಪತ್ನಿತ್ವ ನಿಷೇಧ: ಯುಸಿಸಿ ಅನ್ವಯವಾಗುವ ಸಮುದಾಯಗಳಲ್ಲಿ ಬಹುಪತ್ನಿತ್ವ ಮತ್ತು ‘ಹಲಾಲಾ’ ಎರಡನ್ನೂ ನಿಷೇಧಿಸುತ್ತದೆ. ಹಲಾಲಾ ವಿವಾದಾತ್ಮಕ ಇಸ್ಲಾಮಿಕ್ ವಿವಾಹ ಪದ್ಧತಿಯಾಗಿದ್ದು, ವಿಚ್ಛೇದಿತ ಮಹಿಳೆ ಇನ್ನೊಬ್ಬ ಪುರುಷನನ್ನು ಮದುವೆಯಾಗುತ್ತಾಳೆ, ನಂತರ ತನ್ನ ಮಾಜಿ ಪತಿಯನ್ನು ಮರುಮದುವೆಯಾಗಲು ವಿಚ್ಛೇದನ ನೀಡುತ್ತಾರೆ.

3. ವಿವಾಹ ನೋಂದಣಿ: ಕಾಯ್ದೆ ಜಾರಿಯಾದ ನಂತರ ನಡೆಸುವ ವಿವಾಹಗಳನ್ನು 60 ದಿನಗಳ ಒಳಗೆ ನೋಂದಾಯಿಸಬೇಕು.

4. ಲಿವ್-ಇನ್ ಸಂಬಂಧಗಳು: ಮದುವೆಯಂತೆ ಲಿವ್-ಇನ್ ಸಂಬಂಧ ನೋಂದಣಿ ಕಡ್ಡಾಯ. ಇದು ಉತ್ತರಾಖಂಡದಲ್ಲಿ ನೆಲೆಸಿರುವ ಅಥವಾ ಅನ್ಯ ರಾಜ್ಯಗಳಲ್ಲಿ ನೆಲೆಸಿರುವ ಉತ್ತರಾಖಂಡ ಮೂಲದವರಿಗೆ ಅನ್ವಯ. ಇದರಡಿ ಇಬ್ಬರ ಹೆಸರು, ವಯಸ್ಸಿನ ಸಾಕ್ಷಿ, ದೇಶ, ಧರ್ಮ, ಹಿಂದಿನ ಸಂಬಂಧ, ಸಂಪರ್ಕ ಸಂಖ್ಯೆ ಕುರಿತ ಮಾಹಿತಿಯನ್ನು ನೀಡಬೇಕು. ಇಂತಹ ಸಂಬಂಧದಿಂದ ಮಗು ಜನಿಸಿದರೆ ಜನನ ಪ್ರಮಾಣ ಪತ್ರ ದೊರೆತ 7 ದಿನಗಳೊಳಗಾಗಿ ಕಡ್ಡಾಯವಾಗಿ ನೋಂದಣಿ ಮಾಡಿಸಬೇಕಾಗುತ್ತದೆ.

ಉತ್ತರಾಧಿಕಾರ ಉಯಿಲುಗಳು: ಉಯಿಲು ಬರೆಯುವವರು ತಮ್ಮ ಹಾಗೂ ಉತ್ತರಾಧಿಕಾರಿಯ ಆಧಾರ್ ಮಾಹಿತಿ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ನೀಡಬೇಕು. 2 ಸಾಕ್ಷಿಗಳು ಉಯಿಲು ಪತ್ರವನ್ನು ಓದುವ ವಿಡಿಯೋವನ್ನೂ ಅಪ್‌ಲೋಡ್ ಮಾಡಬೇಕಾಗುತ್ತದೆ. ಯುದ್ಧದಲ್ಲಿ ಭಾಗವಹಿಸಿದ ಸೈನಿಕರು, ವಾಯುಪಡೆಯ ಸಿಬ್ಬಂದಿ ಮತ್ತು ನಾವಿಕರು ವಿಶೇಷ ನಿಬಂಧನೆಗಳ ಅಡಿಯಲ್ಲಿ ವಿಶೇಷ ಸವಲತ್ತು ಪಡೆದ ವಿಲ್‌ಗಳನ್ನು ರಚಿಸಲು ಅನುಮತಿ ಇದೆ.

ಇನ್ನು, ಈ ಕಾಯ್ದೆಯ ನಿಯಮಗಳ ಅನುಷ್ಠಾನಕ್ಕೆ ಅನುಮೋದನೆ ಹಾಗೂ ಸಂಬಂಧಿತ ಅಧಿಕಾರಿಗಳಿಗೆ ತರಬೇತಿ ಸೇರಿದಂತೆ ಎಲ್ಲ ಸಿದ್ಧತೆಗಳನ್ನೂ ಪೂರ್ಣಗೊಳಿಸಲಾಗಿದೆ ಮುಖ್ಯಮಂತ್ರಿ ಪುಷ್ಕರ್ ಧಾಮಿ ಸಿಂಗ್ ಹೇಳಿದ್ದಾರೆ.

ಸಂವಿಧಾನದ ಆಶಯಕ್ಕೆ ತದ್ವಿರುದ್ಧ

ಕಳೆದ ಹತ್ತು ವರ್ಷಗಳ ಆಡಳಿತ ವೈಫಲ್ಯಗಳನ್ನು ಮುಚ್ಚಿಕೊಂಡು, ಲೋಕಸಭಾ ಚುನಾವಣೆಯಲ್ಲಿ ಸ್ವಂತ ಬಲವನ್ನು ಸಾಧಿಸಲಾಗದ ಬಿಜೆಪಿ ಇನ್ನೂ ಪ್ರಬಲವಾಗಿ ಹಿಂದು ಮತಬ್ಯಾಂಕ್‌ಅನ್ನು ಭದ್ರಗೊಳಿಸಲು ಮುಂದಾಗಿದೆ. ಅದರ ಭಾಗವಾಗಿ ಏಕರೂಪ ನಾಗರಿಕ ಸಂಹಿಂತೆಯ ಜಾರಿಯ ಕಸರತ್ತು ನಡೆಯುತ್ತಿದೆ. ಅದರಂತೇಯೇ, ಉತ್ತರಖಾಂಡದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತಂದಿದೆ. ಈ ಹಿಂದೆ, ವಿಧಾನಸಭಾ ಚುನಾವಣೆಯ ಸಮಯದಲ್ಲಿ, ಕರ್ನಾಟಕದಲ್ಲಿಯೂ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲು ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದರು. ಆದಾಗ್ಯೂ, ಕರ್ನಾಟಕದಲ್ಲಿ ಬಿಜೆಪಿ ಗೆಲ್ಲಲಿಲ್ಲ.

ಏಕರೂಪ ನಾಗರಿಕ ಸಂಹಿತೆಯ ಪ್ರಸ್ತಾವ ಸಂವಿಧಾನದ ‘ರಾಜ್ಯ ನಿರ್ದೇಶನಾ ತತ್ವ’ದ 44ನೇ ಕಲಂನಲ್ಲಿದ್ದರೂ, ಬಿಜೆಪಿ ಅದನ್ನು ಸಂವಿಧಾನದ ಆಶಯಗಳಿಗೆ ತದ್ವಿರುದ್ಧವಾಗಿ ವ್ಯಾಖ್ಯಾನಿಸುತ್ತಾ ಬಂದಿದೆ. ಏಕರೂಪ ನಾಗರಿಕ ಸಂಹಿತೆಯನ್ನು ತನ್ನ ಪರಮ ಕೋಮುವಾದಿ ಕಾರ್ಯಕ್ರಮಗಳಾದ ಆರ್ಟಿಕಲ್ 370 ರದ್ದತಿ, ಬಾಬರಿ ಮಸೀದಿ ಧ್ವಂಸ, ರಾಮಮಂದಿರ ನಿರ್ಮಾಣದ ಅಜೆಂಡಗಳ ಜೊತೆಗೆ ಸೇರಿಸಿ ಅದರ ಮೂಲ ಆಶಯವನ್ನೇ ಕೊಲ್ಲುತ್ತಿದೆ. ಹೀಗಾಗಿ, ಬಿಜೆಪಿ ಹೇಳುವ ಏಕರೂಪ ನಾಗರಿಕ ಸಂಹಿತೆಗೂ, ಸಂವಿಧಾನದ ಆಶಯವಾಗಿದ್ದ ನಾಗರಿಕ ಸಂಹಿತೆಗೂ ಹಲವಾರು ಮೂಲಭೂತ ವ್ಯತ್ಯಾಸಗಳಿವೆ.

ಬಿಜೆಪಿ ಹೇಳುತ್ತಿರುವ ಏಕರೂಪ ನಾಗರಿಕ ಸಂಹಿತೆ ಮನುವಾದಿ ಹಿಂದುತ್ವ ಸಂಹಿತೆಯೇ ವಿನಃ ಸಂವಿಧಾನದಲ್ಲಿ ಅಂಬೇಡ್ಕರ್ ಆಶಯದಂತೆ ಸೇರಿಸಲ್ಪಟ್ಟಿದ್ದ ನ್ಯಾಯ ಸಮ್ಮತ ಏಕರೂಪ ನಾಗರಿಕ ಸಂಹಿತೆಯಲ್ಲ. ಈ ಮನುವಾದಿ ನಾಗರಿಕ ಸಂಹಿತೆ ಜಾರಿಗೆ ಬಂದರೆ ಅದಕ್ಕೆ ಮೊದಲು ಬಲಿಯಾಗುವುದು ಹಿಂದೂ ಮಹಿಳೆಯರೇ ಆಗಿದ್ದಾರೆ. ಇನ್ನು ಬಿಜೆಪಿ ಜಾರಿಗೊಳಿಸುತ್ತಿರುವ ಏಕರೂಪ ಸಂಹಿತೆಯ ಮೂಲ ಉದ್ದೇಶ, ಅಲ್ಪಸಂಖ್ಯಾತರ ಮೇಲೆ ಹಿಂದುತ್ವದ ಹೇರಿಕೆ.

ಅಸಮಾನತೆಯ ಸಮಾಜಕ್ಕೆ ಬೇಕಿರುವುದು ಏಕರೂಪ ಆದಾಯ ಸಂಹಿತೆ

ದೇಶದಲ್ಲಿ ಅಸಮಾನತೆ ಅನ್ನೋದು ದೊಡ್ಡ ಸಮಸ್ಯೆ. ಭಾರತೀಯ ಸಮಾಜದಲ್ಲಿ ಆರ್ಥಿಕ ಅಸಮಾನತೆ ಪ್ರಮಾಣ ಏರುತ್ತಲೇ ಇದೆ. ಸಂವಿಧಾನ ಜಾರಿಯಾಗಿ 75 ವರ್ಷ ಕಳೆದರೂ ಬಹುಸಂಖ್ಯಾತರಿಗೆ ಸಾಮಾಜಿಕ ಸಮಾನತೆ ಮತ್ತು ಆರ್ಥಿಕ ನ್ಯಾಯ ಸಿಕ್ಕಿಲ್ಲ.

ಬಾಬಾಸಾಹೇಬ ಅಂಬೇಡ್ಕರ್ ಕಂಡ ಕನಸಿನಂತೆ ದೇಶದ ವ್ಯವಸ್ಥೆ ಸುಧಾರಿಸಿಲ್ಲ. ಸಂವಿಧಾನವನ್ನು ಸಂಪೂರ್ಣವಾಗಿ ಜಾರಿಗೊಳಿಸಿದರೆ, ಕೇವಲ 20 ವಷರ್ದಲ್ಲಿ ಭಾರತ ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯನ್ನು ಸಾಧಿಸಬಹುದು. ಒಂದು ವೇಳೆ ಅದನ್ನು ಸಾಧಿಸಲು ಆಗದಿದ್ದರೇ ಪ್ರಜಾಪ್ರಭುತ್ವಕ್ಕೆ ಅರ್ಥವೇ ಇರುವುದಿಲ್ಲ ಎಂಬುದು ಅಂಬೇಡ್ಕರ್ ಅಭಿಪ್ರಾಯವಾಗಿತ್ತು. ಅಂಬೇಡ್ಕರ್ ವ್ಯಕ್ತಪಡಿಸಿದ್ದ ಆತಂಕದಂತೆಯೇ ಇಂದಿಗೂ ಭಾರತವು ಸಮಾನತೆ ಸಾಧಿಸಲು ಸಾಧ್ಯವಾಗಿಲ್ಲ. ಇಂದಿಗೂ ಶೇ.98 ಆಸ್ತಿ, ಅಧಿಕಾರ, ಸಂಪತ್ತು, ಭೂಮಿ ಮತ್ತು ಕೈಗಾರಿಕೆ ಉದ್ಯಮಗಳು ಕೇವಲ ಶೇ.2 ವರ್ಗದ ಜನರಲ್ಲಿದೆ. ದಲಿತರಿಗೆ ಕೇವಲ ಸರ್ಕಾರಿ ವಲಯದಲ್ಲಿ ಮಾತ್ರ ಮೀಸಲಾತಿ ದೊರೆತಿದೆ. ಆದರೆ, ಕೃಷಿ ವಲಯದಲ್ಲಿ ಭೂಮಿ, ಖಾಸಗಿ ಸೇವಾ ವಲಯದಲ್ಲಿನ ವ್ಯಾಪಾರ, ಕೈಗಾರಿಕೆ, ಸಂಪತ್ತಿನ ಹಕ್ಕುಗಳು ದೊರೆಯದೆ ಬಹು ಜನರು ಇಂದಿಗೂ ಬಡವರಾಗಿಯೇ ಉಳಿದಿದ್ದಾರೆ.

ಈ ವರದಿ ಓದಿದ್ದೀರಾ?; ಟ್ರಂಪ್‌ ಬಿಲ್ಡ್‌ಅಪ್‌ | ಇಸ್ರೇಲ್-ಹಮಾಸ್ ಕದನ ವಿರಾಮದಿಂದ ನಿಜಕ್ಕೂ ಶಾಂತಿ ನೆಲೆಸುತ್ತದೆಯೇ?

ಭಾರತೀಯ ಜನಸಂಖ್ಯೆಯ ಅಗ್ರ ಶೇ.10ರಷ್ಟು ಜನರು ಒಟ್ಟು ರಾಷ್ಟ್ರೀಯ ಸಂಪತ್ತಿನ ಶೇ.77ರಷ್ಟನ್ನು ಹೊಂದಿದ್ದಾರೆ. 2017ರಲ್ಲಿನ ಒಟ್ಟು ಸಂಪತ್ತಿನ ಶೇ.73ರಷ್ಟು ಪಾಲು ಅತ್ಯಂತ ಶ್ರೀಮಂತ ಶೇ. 1ರಷ್ಟು ಮಂದಿಯ ಕೈಯಲ್ಲಿತ್ತು. ಆದರೆ ಜನಸಂಖ್ಯೆಯ ಅರ್ಧದಷ್ಟು ಬಡವರನ್ನು ಒಳಗೊಂಡಿರುವ 67 ಕೋಟಿ ಭಾರತೀಯರ ಸಂಪತ್ತಿನಲ್ಲಿ ಕಂಡುಬಂದಿದ್ದ ಹೆಚ್ಚಳ ಶೇ. 1ರಷ್ಟು ಮಾತ್ರವಾಗಿತ್ತು. ದೇಶ ಆರ್ಥಿಕ ಅಸಮಾನತೆಯಿಂದ ಬಳಲುತ್ತಿದೆ. ಶ್ರೀಮಂತರು ಕ್ರೋನಿ ಕ್ಯಾಪಿಟಲಿಸಂ ಮತ್ತು ಆನುವಂಶಿಕತೆಯ ಮೂಲಕ ಸೃಷ್ಟಿಯಾದ ಸಂಪತ್ತಿನ ದೊಡ್ಡ ಪಾಲನ್ನು ಅನುಭವಿಸುತ್ತಿದ್ದಾರೆ.

ಭಾರತದ ಬಹುಸಂಖ್ಯಾತ ಜನರು ಆರ್ಥಿಕವಾಗಿ ಹಿಂದುಳಿದಿದ್ದಾರೆ. ಕನಿಷ್ಠ ವೇತನವನ್ನು ಗಳಿಸಲು ಮತ್ತು ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ಸೇವೆಗಳನ್ನು ಪಡೆಯಲು ಹೆಣಗಾಡುತ್ತಿದ್ದಾರೆ. ಭಾರತದ ಬಡ ರಾಜ್ಯಗಳು ಆಫ್ರಿಕಾಕ್ಕಿಂತ ಹೆಚ್ಚು ಶಿಶು ಮರಣ ಪ್ರಮಾಣವನ್ನು ಹೊಂದಿವೆ. ಜಾಗತಿಕ ತಾಯಂದಿರ ಸಾವುಗಳಲ್ಲಿ ಭಾರತದಲ್ಲಿನ ಪ್ರಮಾಣ ಶೇ.17 ಮತ್ತು ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಸಾವುಗಳಲ್ಲಿ ಶೇ.21ರಷ್ಟಿದೆ.

‘ವಿಶ್ವದ ಅತೀ ಹೆಚ್ಚು ಅಸಮಾನತೆ ಹೊಂದಿರುವ ರಾಷ್ಟ್ರಗಳು-2022’ರ ವರದಿಯ ಪ್ರಕಾರ ಭಾರತವು ವಿಶ್ವದ ಅತೀ ಹೆಚ್ಚು ಅಸಮಾನತೆ ಹೊಂದಿರುವ ರಾಷ್ಟ್ರಗಳ ಪೈಕಿ ಭಾರತವು ಒಂದಾಗಿದೆ. ಇಷ್ಟೆಲ್ಲಾ ಘೋರ ಅಸಮಾನತೆಗಳು ಈ ದೇಶದ ಜನರನ್ನು ಕಾಡುತ್ತಿರುವಾಗ, ಆರ್ಥಿಕ, ಸಾಮಾಜಿಕ ಸಮಾನತೆಯನ್ನು ತರಲು ಸರ್ಕಾರಗಳು ಏಕರೂಪ ಅದಾಯ ಸಂಹಿತೆಯನ್ನು ಜಾರಿಗೊಳಿಸಬೇಕೇ ಹೊರತು, ಕೋಮುವಾದಿ ಏಕರೂಪ ನಾಗರಿಕ ಸಂಹಿತೆಯನ್ನಲ್ಲ!

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಹಕಾರ ಖಾತೆ | ಡಿಕೆ ಶಿವಕುಮಾರ್ ಗುಂಪಿಗೋ, ಜಾರಕಿಹೊಳಿ ಗುಂಪಿಗೋ?

ಕೆ.ಎನ್. ರಾಜಣ್ಣ ಅವರ ಸಹಕಾರ ಖಾತೆ ತೆರವಾಗಿದೆ. ಯಾರಿಗೆ ಎನ್ನುವುದು ಪ್ರಶ್ನೆಯಾಗಿದೆ....

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

Download Eedina App Android / iOS

X