ವಕ್ಫ್ ಕಾಯ್ದೆಯಲ್ಲಿ ಹಿಂದೆ ಇದ್ದ ಸರ್ವೆ ಕಮೀಷನರ್, ವಕ್ಫ್ ಬೋರ್ಡ್, ವಕ್ಫ್ ಬೋರ್ಡ್‌ಗೆ ನೇಮಕವಾಗುವ ಅಧಿಕಾರಿ ಮುಸ್ಲಿಮನಾಗಿರಬೇಕೆಂಬ ಷರತ್ತನ್ನು ಮೋದಿ ಸರ್ಕಾರ ತೆಗೆದು ಹಾಕಿದೆ. ವಕ್ಫ್‌ನಲ್ಲಿ ಕಡ್ಡಾಯವಾಗಿ ಮುಸ್ಲಿಮೇತರರನ್ನು ನೇಮಿಸಬೇಕೆಂದು ಬದಲಾವಣೆ ಮಾಡಲಾಗಿದೆ. ಆದರೆ ಇದೇ ಬಗೆಯ ಷರತ್ತು ಬೇರೆ ಧರ್ಮಗಳ ಸಂಸ್ಥೆಗಳಿಗೆ ಯಾಕಿಲ್ಲ?
ರಾಜ್ಯದಲ್ಲಿ ಕಳೆದ ಒಂದು ತಿಂಗಳಿಂದಲೂ ಬಿಜೆಪಿ ನಾಯಕರು ವಕ್ಫ್ ಬೋರ್ಡ್ ವಿರುದ್ಧ ಪ್ರತಿಭಟನೆಗಳನ್ನು ನಡೆಸುತ್ತಿರುವುದು ಮತ್ತು ರೈತರನ್ನು ವಕ್ಫ್ ವಿರುದ್ಧ ಎತ್ತಿ ಕಟ್ಟುತ್ತಿರುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಆದರೆ ಇದಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳನ್ನು ಪೂರೈಸಲು ಅವರಿಗೆ ಆಗುತ್ತಿಲ್ಲ. ಇವರ ಹೋರಾಟ ಬರೀ ಸುಳ್ಳನ್ನು ಆಧರಿಸಿ ನಿಂತಂತಿದೆ. ವಕ್ಫ್ ಬಗ್ಗೆ ನಡೆಯುತ್ತಿರುವ ಪರ ವಿರೋಧಗಳ ನಡುವೆ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪೈಗಂಬರರು ನೀರಿಲ್ಲದಾಗ, ಜನರಿಗೆ ಬಾವಿ ತೋಡಿ ಸಮುದಾಯಕ್ಕೆ ಕುಡಿಯುವ ನೀರಿನ ಬಾವಿಯನ್ನು ನೀಡಿದ್ದು ವಕ್ಫ್ ಎನಿಸಿಕೊಂಡಿತು. ಅಲ್ಲಿಂದಲೇ ವಕ್ಫ್ ಆರಂಭವಾಯಿತು ಎನ್ನಬಹುದು. ಭಾರತವನ್ನು ಸುಮಾರು 700ರಿಂದ 800 ವರ್ಷಗಳವರೆಗೆ ಆಳಿದ ಮುಸಲ್ಮಾನ ಅರಸರು ದಾನ, ದತ್ತಿಗಳನ್ನು ಮಸೀದಿಗಳಿಗಷ್ಟೇ ಅಲ್ಲ, ಮಂದಿರಗಳಿಗೂ ನೀಡಿದ್ದಾರೆ. ಅದೇ ರೀತಿ ಹಿಂದೂ ಅರಸರು ಮಂದಿರಗಳಿಗೆ ಜಮೀನು ನೀಡುವಂತೆ ಮಸೀದಿಗಳಿಗೂ ನೀಡಿದ್ದಾರೆ.
ವಕ್ಫ್ ಎಂದರೇನು? : ಏನಿದು ವಕ್ಫ್ ಎಂದರೆ, ಇದು ಅರೇಬಿಕ್ ಶಬ್ದ “ವಕಾಫ್” ದಿಂದ ಬಂದಿದೆ. ವಕ್ಫ್‌ಗೆ ನೀಡಿದ ಜಮೀನು ಅಥವಾ ಸಂಪತ್ತು ನಿಶ್ವತ ಹಾಗೂ ಅಂತಿಮ ಕೊಡುಗೆ ಎಂದರ್ಥ. ರಾಜರುಗಳು ಸಾಮಂತರು ಮತ್ತು ಶ್ರೀಮಂತರು ನೀಡಿದ ದತ್ತಿ ಅಂದರೆ ವಕ್ಫ್ ನಿಯಂತ್ರಣದಲ್ಲಿರುವ ಆಸ್ತಿಗಳನ್ನು ರಾಷ್ಟ್ರೀಕರಣ ಮಾಡುವಂತೆ ಹಿಂದೂಗಳ ಅಧೀನದಲ್ಲಿರುವ ದೇವಾಲಯಗಳ ಆಸ್ತಿಯನ್ನೂ ಇವರು ರಾಷ್ಟ್ರೀಕರಣ ಮಾಡಲಿ. ಕೇವಲ ಮುಸ್ಲಿಮರ ವಕ್ಫ್ ಆಸ್ತಿ ರಾಷ್ಟ್ರೀಕರಣ ಮಾಡಿದರೆ ತಪ್ಪಾಗುತ್ತದೆ.
ಹಿಂದಿನ ಕಾಲದಲ್ಲಿ ಹಿಂದೂ- ಮುಸ್ಲಿಂ ಎಂಬ ಭೇದವಿಲ್ಲದೇ ಆ ಧರ್ಮದವರು ಈ ಧರ್ಮದವರಿಗೂ, ಈ ಧರ್ಮದವರು ಆ ಧರ್ಮದವರಿಗೂ ದಾನ ದತ್ತಿಗಳನ್ನು ನೀಡುತ್ತಿದ್ದರು. ಉದಾಹರಣೆಗೆ ಶೃಂಗೇರಿ ಮಠಕ್ಕೆ ದೇವಸ್ಥಾನಕ್ಕೆ ಟಿಪ್ಪು ಸುಲ್ತಾನರು ನೀಡಿದ ದಾನ ದತ್ತಿಗಳಿಲ್ಲವೆ? 19ನೇ ಶತಮಾನದಲ್ಲಿ ಈ ದತ್ತಿಗಳ ನಿರ್ವಹಣೆಗೆ ಸಮಿತಿಗಳನ್ನು ರಚಿಸಿಕೊಂಡರು. 19ನೇ ಶತಮಾನದ ಅಂತ್ಯಕ್ಕೆ ಬ್ರಾಹ್ಮಣರ ತಮಿಳುನಾಡಿದ ಎರಡು ದೇವಸ್ಥಾನಗಳ ಸಂಪತ್ತಿನ ಒಡೆತನದ ವಿಚಾರಕ್ಕೆ ಬಂದ ಸಮಸ್ಯೆಯನ್ನು ಪರಿಹರಿಸಲು ದೇವಸ್ಥಾನದ ಅಡಳಿತ ಮಂಡಳಿಯ ಕೋರಿಕೆಯ ಮೇಲೆ 1913ರಲ್ಲಿ ಹಿಂದುಗಳ ಧಾರ್ಮಿಕ ದತ್ತಿ ನಿಧಿ ಕಾಯ್ದೆ ಹಾಗೂ ವಕ್ಫ್ ಕಾಯ್ದೆಗಳೂ ರೂಪುಗೊಂಡವು. 1995ರಲ್ಲಿ ವಕ್ಫ್ ಟ್ರಿಬ್ಯುನಲ್ ವಕ್ಫ್ ಕಾಯ್ದೆಯಡಿ ರಚನೆಯಾಯಿತು.
ಈಗ ಬಿಜೆಪಿಯವರು ಹುಟ್ಟುಹಾಕಿರುವ ಗುಮ್ಮನೆಂದರೆ, “ಒಂದು ವೇಳೆ ರೈತರು ಉಳುಮೆ ಮಾಡುತ್ತಿರುವ ಜಮೀನು ವಕ್ಫ್ ಜಮೀನು ಎಂದಾದರೆ ಅವರು ಅದನ್ನು ಕಿತ್ತುಕೊಳ್ಳುತ್ತಾರೆ” ಎಂಬ ಸುಳ್ಳು. ವಕ್ಫ್ ಜಮೀನು ಹೌದೋ ಅಲ್ಲವೋ ಎಂದು ಮೊದಲು ಅದನ್ನು ಸರ್ವೆ ಕಮಿಷನರ್ ಪರಿಶೀಲಿಸುತ್ತಾರೆ. ಅದನ್ನು ವಕ್ಫ್ ಆಸ್ತಿ ಎಂದು ಕಮಿಷನರ್ ಘೋಷಿಸಿದ ನಂತರವೂ ವಕ್ಫ್ ಟ್ರಿಬ್ಯುನಲ್ ಮುಂದೆ ತಕರಾರು ಹೂಡಬಹುದು. ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಮತ್ತು ಸುಪ್ರೀಂ ಕೋರ್ಟ್‌ವರೆಗೂ ದಾವೆ ಹೂಡಲು ಅವಕಾಶವಿದೆ. ಆದರೆ ಈಗ ಬಿಜೆಪಿಯವರು, “ವಕ್ಫ್ ಟ್ರಿಬ್ಯುನಲ್ ತೀರ್ಮಾನಕ್ಕೆ ಕೋರ್ಟಿನಲ್ಲಿ ಅಪೀಲು ಹೋಗಲು ಸಾಧ್ಯವಿಲ್ಲ” ಎಂಬ ಸುಳ್ಳು ಹೇಳುತ್ತಿದ್ದಾರೆ. ವಕ್ಫ್ ತೀರ್ಮಾನಗಳನ್ನು ಹೈಕೋರ್ಟ್, ಸುಪ್ರಿಂಕೋರ್ಟಿನಲ್ಲೂ ಪ್ರಶ್ನಿಸಬಹುದಾಗಿದೆ.
ದೇಶದ ರಕ್ಷಣಾ ವ್ಯವಸ್ಥೆಯ ಅಧೀನದಲ್ಲಿ 35 ಲಕ್ಷ ಎಕರೆ, ರೈಲ್ವೆ ಇಲಾಖೆಯಲ್ಲಿ 16 ಲಕ್ಷ ಎಕರೆ ಮತ್ತು ವಕ್ಫ್ ಬೋರ್ಡಿನಲ್ಲಿ ವಾಸ್ತವವಾಗಿ 1 ಲಕ್ಷ ಎಕರೆ ಜಮೀನು ಮಾತ್ರ ಇದೆ. ಆದರೆ, ಈಗ ಅದರ ಒಡೆತನದಲ್ಲಿರುವುದು ಕೇವಲ 20ಸಾವಿರ ಎಕರೆ ಮಾತ್ರ. ಕೇವಲ ಎರಡು ರಾಜ್ಯಗಳಲ್ಲಿ ಅಂದರೆ ತಮಿಳುನಾಡು ಮತ್ತು ಆಂಧ್ರದಲ್ಲಿರುವ ದೇವಸ್ಥಾನ, ಮಠಗಳ ಆಸ್ತಿ ಸೇರಿಸಿದರೆ 9ಲಕ್ಷ ಎಕರೆಗೂ ಹೆಚ್ಚಾಗುತ್ತದೆ. ವಕ್ಫ್ ಆಸ್ತಿ ಹೆಚ್ಚಾಗಿ ದುರ್ಬಳಕೆ ಮಾಡಿಕೊಂಡಿರುವುದು ಆ ಧರ್ಮದೊಳಗಿನ ಶ್ರೀಮಂತರು ಮತ್ತು ರಾಜಕಾರಣಿಗಳು. ವಕ್ಫ್ ಒಡೆತನ ಹಸ್ತಾಂತರಿಸಲು ಬರುವುದಿಲ್ಲ. ಬಿಜೆಪಿ ನಾಯಕರು ಕೋಮು ಬೆಂಕಿ ಹಚ್ಚುವುದರ ಬದಲು ಅದನ್ನು ನಂದಿಸಲು ಪ್ರಯತ್ನಿಸಲಿ. ಕೊನೆಯ ಪಕ್ಷ ಬೆಂಕಿ ಹಚ್ಚುವ ಮಾತುಗಳಿಗಾದರೂ ವಿರಾಮ ನೀಡಲಿ.
ರೈತರು ದೆಹಲಿಯಲ್ಲಿ ಹೋರಾಟ ನಡೆಸಿದ್ದಾಗ ಅವರು ಧರಣಿ ನಡೆಸದಂತೆ ಕಂದಕ ತೋಡಿ ಮುಳ್ಳಿನ ಬೇಲಿ ಹಾಕಿ, ಹಿಂಸೆ ನೀಡಿ 750 ಜನ ರೈತರ ಸಾವಿಗೆ ಕಾರಣರಾದ ಬಿಜೆಪಿಗರು ಈಗ ರೈತರ ಹಿತೈಷಿಗಳಂತೆ ವರ್ತಿಸುತ್ತಿರುವುದು ಇವರ ಕಪಟ ನೀತಿಗೆ ಸಾಕ್ಷಿಯಾಗಿದೆ. ಈಗ ಅವರು ರೈತರ ಹೆಸರಿನಲ್ಲಿ ಬೂಟಾಟಿಕೆಯ ಹೋರಾಟ ನಡೆಸಿರುವುದು ಹಾಸ್ಯಾಸ್ಪದವಾಗಿದೆ. ಚುನಾವಣೆಗಳನ್ನು ಮುಂದಿಟ್ಟುಕೊಂಡು “ವಕ್ಫ್ ಬೋರ್ಡ್ ರೈತರ ಜಮೀನನ್ನು ಕೊಳ್ಳೆ ಹೊಡೆಯುತ್ತಿದೆ” ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಸಾಮಾನ್ಯ ಜನರ ಮುಂದೆ ಹಿಂದೂ- ಮುಸ್ಲಿಂ ಎಂದು ಕಿರುಚಿದ್ದಾಯಿತು. ಕೊರೋನ ಸಮಯದಲ್ಲಿ “ಮುಸ್ಲಿಮರು ವೈರಸ್ ಹರಡುತ್ತಿದ್ದಾರೆ” ಎಂದು ಸುಳ್ಳು ಹೇಳಿ ಜನರನ್ನು ಯಾಮಾರಿಸಿದ್ದಾಯಿತು. ಈಗ ಜನರ ನಡುವೆ “ವಕ್ಫ್” ಎಂಬ ಗುಮ್ಮನನ್ನು ಹರಿಯ ಬಿಡುತ್ತಿದ್ದಾರೆ. ಹೀಗೆ ಹರಿಯಬಿಡುವ ಮೂಲಕ ರೈತರ ಹೊಲದಲ್ಲಿ ಹುಲುಸಾಗಿ ಕೇಸರಿ ಬೆಳೆ ಬೆಳೆಯಲು ಹೊರಟಿರುವುದು ಶೋಚನೀಯ. ಸರ್ಕಾರದ ಮೇಲೆ ಮಾಡಿರುವ ಆಪಾದನೆಗಳಿಗೆ ಸರಿಯಾದ ಸಾಕ್ಷ್ಯಗಳನ್ನು ಒದಗಿಸಲಾರದೇ ಬಿಜೆಪಿಯವರು ಸೋಲುತ್ತಿದ್ದಾರೆ.

ಚುನಾವಣೆಗಳನ್ನು ಮುಂದಿಟ್ಟುಕೊಂಡು ಮತ ಸೆಳೆಯುವ ಹುನ್ನಾರದಲ್ಲಿ ಈ ಹುಸಿ ಹೋರಾಟಗಾರರು ಹುಮ್ಮಸ್ಸಿನಿಂದ ಮುಂದಾಗಿದ್ದಾರೆ. ಆದರೆ, ಅವರಿಗೆ ಅವರದೇ ಪ್ರಶ್ನೆಗಳು ತಿರುಗಿ ಬಿದ್ದು ಅವರ ಕೊರಳಿಗೆ ಉರುಳಾಗುತ್ತಿರುವುದಂತೂ ನಿಜ. ಅವರ ಕೊರಳಿಗೆ ಬೀಳುತ್ತಿರುವ ಉರುಳಿನಿಂದ ಉಳಿಯಲು ಈಗ ಅದನ್ನು ರೈತರ ಕೊರಳಿಗೆ ಸುತ್ತಿ ಪಕ್ಕಕ್ಕೆ ಸರಿಯಲು ಹವಣಿಸುತ್ತಿದ್ದಾರೆ. ಸುಳ್ಳು ಮಾತು, ಸುಳ್ಳು ಭರವಸೆ, ಸುಳ್ಳು ಅಪಾದನೆ, ಸುಳ್ಳು ದೂರುಗಳು ಹೀಗೆ ಸುಳ್ಳಿನ ಸಂತೆಯ ವಾರಸುದಾರರಾದ ಇವರಿಗೆ ಕಿಂಚಿತ್ತೂ ನಾಚಿಕೆಯಿಲ್ಲದಂತಾಗಿದೆ. ವಕ್ಫ್ ಪ್ರಕರಣಕ್ಕೆ ಕೋಮು ಬಣ್ಣ ಬಳಿದು, ಸಮಾಜದಲ್ಲಿ ಉದ್ವಿಘ್ನತೆ ಹುಟ್ಟುಹಾಕುತ್ತಿರುವ ಬಿಜೆಪಿಗರು ಜನರ ನಿಜವಾದ ಸಮಸ್ಯೆಗಳನ್ನು ಪರಿಹರಿಸಲು ಯಾವತ್ತೂ ಮುಂದೆ ಬರುವುದಿಲ್ಲ. ಆದರೆ, ಸೌಹಾರ್ದದ ಬದುಕಿಗೆ ಬೆಂಕಿಯಿಡಲು ಮಾತ್ರ ಯಾವತ್ತೂ ಮುಂದೆ ಇರುತ್ತಾರೆ.
ಕೊರೋನಾ ಅಕ್ರಮದಲ್ಲಿ ಸಿಲುಕಿರುವ ತೇಜಸ್ವಿ ಸೂರ್ಯ ಸುಳ್ಳು ಹೇಳುವುದರಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. “ವಕ್ಫ್ ಬೋರ್ಡ್ ಆಸ್ತಿ ಕಿರಿಕಿರಿಗೆ ಬೇಸತ್ತು ಹಾವೇರಿಯ ಹರನಗಿ ಗ್ರಾಮದ ರುದ್ರಪ್ಪ ಎಂಬ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ” ಎಂದಿದ್ದಾರೆ. ಪೊಲೀಸ್ ತನಿಖೆಯಿಂದ ತಿಳಿದು ಬಂದ ವಿಷಯವೇನೆಂದರೆ, ರುದ್ರಪ್ಪ ಲಕ್ಷಾಂತರ ಸಾಲ ಮಾಡಿ, ಬೆಳೆದ ಬೆಳೆ ಮಳೆಯಿಂದ ಹಾನಿಗೊಳಗಾದ ಕಾರಣದಿಂದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದೂ ಕೂಡ ಬಿಜೆಪಿ ಸರ್ಕಾರ ಇದ್ದಾಗ. ಮೃತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರವನ್ನೂ ಆಗಿನ ಬಿಜೆಪಿ ಸರ್ಕಾರ ಅವರಿಗೆ ನೀಡಿದೆ ಎಂಬ ವಿಷಯ ತಿಳಿಯುತ್ತಿದ್ದಂತೆಯೇ ಅವರ ಮೇಲೆ ಎಫ್.ಐ.ಆರ್ ಹಾಕಲಾಗಿದೆ. ಕಮೆಂಟ್ ಬಾಕ್ಸ್‌ನಲ್ಲಿ ಬಂದ ಮಾಹಿತಿಯ ಆಧಾರದಲ್ಲಿ ಟ್ವೀಟ್ ಮಾಡಿದ್ದೆ ಎಂದು ನುಣುಚಿಕೊಳ್ಳಲು ಈಗ ಪ್ರಯತ್ನಿಸುತ್ತಿದ್ದಾರೆ.
ಹಿಂದೆ ರೈತರು ಮಹಾ ಆಂದೋಲನವನ್ನು ದೆಹಲಿಯಲ್ಲಿ ನಡೆಸಿದಾಗ ಮೂರು ರೈತ ವಿರೋಧಿ ಕಾನೂನುಗಳನ್ನು ಬೆಂಬಲಿಸಿ ನಿಂತವರು ಇದೇ ಬಿಜೆಪಿಗರು. ಸರಿಯಾದ ಸಾಕ್ಷ್ಯಗಳನ್ನು ಸಂಗ್ರಹಿಸಲಾಗದ ಇವರ ಆರೋಪಗಳು ಇವರಿಗೇ ಮುಳುವಾಗುತ್ತಿರುವುದರಿಂದ ತಮ್ಮ ಕೊರಳಿನ ಉರುಳನ್ನು ರೈತರ ಕೊರಳಿಗೆ ಸುತ್ತಲು ಬಿಜೆಪಿ ನಾಯಕರು ಹೊರಟಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ರೈತರ ಬೆಳೆನಾಶ, ಅತಿವೃಷ್ಟಿ ಅನಾವೃಷ್ಟಿ ಆದಾಗ ಕೇಂದ್ರದಿಂದ ಪರಿಹಾರ ಕೇಳುವ ಬದಲಾಗಿ “ರೈತರಿಗೆ ಪರಿಹಾರ ನೀಡುವ ಅಗತ್ಯವೇ ಇಲ್ಲ” ಎಂದು ಹೇಳಿದ್ದರು. ಇವರು ಇಂದು ರೈತರ ಪರ ಧ್ವನಿ ಎತ್ತುತ್ತಿರುವುದು ನಿಜವೇ?
ಇತ್ತೀಚೆಗೆ ಮೋದಿ ತರುತ್ತಿರುವ ವಿನಾಶಕಾರಿ ಕಾಯ್ದೆಯ ಕಾರಣದಿಂದ ಈ ಸಮಸ್ಯೆ ಉಲ್ಬಣಿಸುತ್ತಿದೆ. ಬಿಜೆಪಿ ಸರ್ಕಾರ ಇದ್ದಾಗ ಭೂಸುಧಾರಣೆ ಕಾಯ್ದೆ 79ಎ, ಬಿ, 80 ಮತ್ತು 106ಕ್ಕೆ ತಿದ್ದುಪಡಿ ತಂದು ರೈತರ ಕೈಯಲ್ಲಿದ್ದ ಜಮೀನನ್ನು ಕಾರ್ಪೋರೇಟ್ ವಲಯದ ಕೈಯಲ್ಲಿ ಕೊಟ್ಟಿದ್ದು ಇದೇ ಬಿಜೆಪಿ ಸರ್ಕಾರ ಎಂಬುದನ್ನು ಮರೆಯುವಂತಿಲ್ಲ. ರೈತರ ವಿರುದ್ಧ ಮೂರು ಕರಾಳ ಕಾಯ್ದೆಗಳನ್ನು ತಂದಿದ್ದು ಇದೇ ಸರ್ಕಾರ ತಾನೆ? ಈಗ ಕೇಂದ್ರದಲ್ಲಿ ಮೋದಿ ತರುತ್ತಿರುವ ವಕ್ಫ್ ಕಾಯ್ದೆಯ ತಿದ್ದುಪಡಿ ಕುರಿತು ಯಾರ ಜೊತೆಗೂ ಸಮಾಲೋಚನೆ ನಡೆಸಿಲ್ಲ. ಇದರ ತಿದ್ದುಪಡಿಗಳ ಪ್ರಕಾರ ಆರು ತಿಂಗಳಲ್ಲಿ ಕಾಗದ ಪತ್ರ ತೋರಿಸಬೇಕು. ದಾಖಲೆಗಳಿಲ್ಲದ ವಕ್ಫ್ ಆಸ್ತಿಗಳನ್ನು ಸರ್ಕಾರಕ್ಕೆ ಸೇರಿಸುವ ಅಂತಿಮ ತೀರ್ಮಾನವನ್ನು ಜಿಲ್ಲಾಧಿಕಾರಿಯ ಜವಾಬ್ದಾರಿಯಾಗಿ ಮಾಡಲಾಗಿದೆ. ಸುಮಾರು ಶೇ.60 ರಿಂದ 70ರವರೆಗಿನ ವಕ್ಫ್ ಆಸ್ತಿಗಳು ಮೌಖಿಕ ಒಪ್ಪಂದಗಳಾಗಿವೆ.
ವಕ್ಫ್ ಕಾಯ್ದೆಯಲ್ಲಿ ಹಿಂದೆ ಇದ್ದ ಸರ್ವೆ ಕಮಿಷನರ್, ವಕ್ಫ್ ಬೋರ್ಡ್‌ಗೆ ನೇಮಕವಾಗುವ ಅಧಿಕಾರಿ, ಮುಸ್ಲಿಮನಾಗಿರಬೇಕೆಂಬ ಷರತ್ತನ್ನು ಮೋದಿ ಸರ್ಕಾರ ತೆಗೆದು ಹಾಕಿದೆ. ವಕ್ಫ್ ನಲ್ಲಿ ಕಡ್ಡಾಯವಾಗಿ ಮುಸ್ಲಿಮೇತರರನ್ನು ನೇಮಿಸಬೇಕೆಂದು ಬದಲಾವಣೆ ಮಾಡಲಾಗಿದೆ. ಆದರೆ ಇದೇ ಬಗೆಯ ಷರತ್ತುಗಳನ್ನು ಹಿಂದೂ ಸಿಖ್, ಜೈನ್, ಬೌದ್ಧ ಮತ್ತು ಕ್ರಿಶ್ಚಿಯನ್ ಸಂಸ್ಥೆಗಳಿಗೆ ಯಾಕಿಲ್ಲ ಎಂಬುದು ಜನರ ಪ್ರಶ್ನೆ. ಇದರ ಹಿಂದಿರುವ ಮೋದಿಯವರ ದುರುದ್ಧೇಶ ಬಹಳ ಸ್ಪಷ್ಟವಾಗಿದೆ. ಆದ್ದರಿಂದ ಒಂದು ಕಡೆ ಸರ್ಕಾರಿ ಹಿಡಿತದಿಂದ ಹಿಂದೂ ಧಾರ್ಮಿಕ ಸಂಸ್ಥೆಗಳನ್ನು ಉಳಿಸಬೇಕೆಂದು ಆಗ್ರಹಿಸುವ ಸಂಘಪರಿವಾರ ಇನ್ನೊಂದು ಕಡೆ ವಕ್ಫ್ ವಿಷಯದಲ್ಲಿ ಸರ್ಕಾರದ ಹಿಡಿತ ಹೆಚ್ಚಿಸುವ ಕಾಯ್ದೆ ತರುತ್ತಿರುವುದು ಯಾವ ನ್ಯಾಯ? ಮೋದಿಯ ಈ ಉಗ್ರ ಹಿಂದುತ್ವದ ನಡೆಯನ್ನು ಎಲ್ಲ ಮಾನವೀಯ ಮತ್ತು ಸೌಹಾರ್ದ ನಡೆಗಳನ್ನು ಬಯಸುವ ನಾಗರಿಕರು ವಿರೋಧಿಸಲೇಬೇಕಾಗಿದೆ ಅಲ್ಲವೆ?
ವಕ್ಫ್ ಕುರಿತ ಎಲ್ಲಾ ಬರಹಗಳು ಈ ಲಿಂಕ್‌ನಲ್ಲಿ ಲಭ್ಯ https://eedina.com/tag/waqf-property-controversy/

ಡಾ ಕೆ ಷರೀಫಾ
ಬಂಡಾಯ ಸಾಹಿತಿ, ಕವಿ