ಸಂಶೋಧಕರೇಕೆ ಸರ್ಕಾರದ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ? ಸಂಶೋಧನಾ ಸಂಸ್ಥೆಗಳೂ ಯಾಕೆ ಮೌನವಾಗಿವೆ?

Date:

Advertisements
ಸರ್ಕಾರ ಈ ರೀತಿಯಾಗಿ ಸಂಶೋಧಕರ, ಸಂಶೋಧನಾ ಸಂಸ್ಥೆಗಳ ಮೇಲೆ ತೀವ್ರವಾಗಿ ಪ್ರಹಾರ ಮಾಡುವಾಗಲೂ ಸಂಶೋಧಕರು ʻಸಂಶೋಧನೆಗಳ ಪರವಾಗಿʼ ನಿಲ್ಲದಿರುವುದು ದುರಂತ. ಈ ರೀತಿ ಕೈಕಟ್ಟಿ ಕುಳಿತರೆ ಸಂಶೋಧಕರು ಚುನಾವಣಾ ಪ್ರಣಾಳಿಕೆಯಲ್ಲಿ ʻಅಪೇಕ್ಷಿತʼ ಅಂಕಿಅಂಶಗಳನ್ನು ಉತ್ಪಾದಿಸುವ ಕಾರ್ಯಕ್ಕೆ ನಿಯೋಜನೆಗೊಂಡರೂ ಆಶ್ಚರ್ಯವೇನಿಲ್ಲ

ಕೇಂದ್ರ ಸರ್ಕಾರ ಮೊದಲಿಗೆ ಜನಸಂಖ್ಯಾ ವಿಜ್ಞಾನದ ಅಂತಾರಾಷ್ಟ್ರೀಯ ಸಂಸ್ಥೆ (ಐಐಪಿಎಸ್‌)ನ ನಿರ್ದೇಶಕ ಕೆ ಎಸ್‌ ಜೇಮ್ಸ್‌ರ ತಲೆದಂಡ ಪಡೆದಾಯ್ತು. ಇದೀಗ ಅಶೋಕ ವಿಶ್ವವಿದ್ಯಾಲಯದ ಪ್ರೊಫೆಸರ್‌ ಸಬ್ಯಸಾಚಿ ದಾಸ್‌ರ ಸರದಿ. ಹೀಗೆ ಇನ್ನು ಒಬ್ಬರ ಹಿಂದೆ ಇನ್ನೊಬ್ಬರು ಎಷ್ಟು ಮಂದಿ ಸಂಶೋಧಕರು ಸಂಶೋಧನೆಗೇ ವಿದಾಯ ಹೇಳಬೇಕಾಗಿದೆಯೋ? ಸಂಶೋಧನಾ ಸಂಸ್ಥೆಗಳ ಮೇಲೆ ಕೇಂದ್ರ ಸರ್ಕಾರಕ್ಕೇಕೆ ಕಣ್ಣು? ಸಂಶೋಧಕರೇಕೆ ಸರ್ಕಾರದ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ? ಸಂಶೋಧನಾ ಸಂಸ್ಥೆಗಳೂ ಏಕೆ ಈ ಬಗ್ಗೆ ದಿವ್ಯ ಮೌನ ವಹಿಸಿಬಿಟ್ಟಿವೆ? ಸಂಶೋಧನೆ ಎಂದರೆ ಪರ ಅಥವಾ ವಿರೋಧ ಅಲ್ಲ, ʻವಾಸ್ತವಾಂಶದ ದಾಖಲೀಕರಣʼಎಂಬ ಸಂಶೋಧನೆಯ ಮೂಲ ಆಶಯವೇ ಎಲ್ಲೋ ಕಳೆದು ಹೋಗಿದೆ.

ಬೆಂಗಳೂರಿನ ಪ್ರತಿಷ್ಠಿತ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಸಂಸ್ಥೆ (ಐಸೆಕ್‌)ನಲ್ಲಿ ಸಂಶೋಧನಾ ಸಹಾಯಕಿಯಾಗಿ (ರಿಸರ್ಚ್‌ ಅಸೋಸಿಯೇಟ್‌) ನಾನು ಕಾರ್ಯ ನಿರ್ವಹಿಸುತ್ತಿದ್ದಾಗ ರಿಸರ್ಚ್‌ ಮೆಥಡಾಲಜಿಯ ಬಗ್ಗೆ ನಮ್ಮ ವಿಭಾಗದಿಂದ ಒಂದು ಸರ್ಟಿಫಿಕೇಟ್‌ ಕೋರ್ಸ್‌ ಆಯೋಜಿಸಲಾಗಿತ್ತು. ನಾನು ಕಾರ್ಯ ನಿರ್ವಹಿಸುತ್ತಿದ್ದ ಪ್ರಾಜೆಕ್ಟ್‌ನ ಮುಖ್ಯಸ್ಥರೇ ಆ ಕೋರ್ಸ್‌ನ ಕೋಆರ್ಡಿನೇಟರ್‌ ಕೂಡ ಆಗಿದ್ದ ಕಾರಣ ಆ ಕೋರ್ಸ್‌ನ ಕೆಲವು ಜವಾಬ್ದಾರಿಗಳು ನನ್ನ ಪಾಲಿಗೂ ಬಂದಿದ್ದವು. ಜೊತೆಗೆ ನಾನು ಪಿ ಎಚ್‌ಡಿ ಮಾಡುತ್ತಿದ್ದರಿಂದ ನನಗೂ ಸಹಾಯಕವಾಗಬಲ್ಲುದು ಎಂದು ಮುಖ್ಯಸ್ಥರ ಸೂಚನೆಯ ಮೇರೆಗೆ ನಾನೂ ಆ ಕೋರ್ಸ್‌ನಲ್ಲಿ ಭಾಗವಹಿಸಿದ್ದೆ. ಕೋರ್ಸ್‌ ಮುಗಿದ ನಂತರ ಪ್ರಾಜೆಕ್ಟ್‌ ನ ಮುಖ್ಯಸ್ಥರು ʻಫ್ರಾಂಕ್‌ ಆಗಿ ಹೇಳು ನಿನಗೆ ಯಾರ ಸೆಷನ್‌ ತುಂಬಾ ಇಷ್ಟ ಆಯ್ತುʼ ಅಂದಾಗ ನಾನು ಇನ್ನೊಮ್ಮೆ ಯೋಚಿಸದೆ ತಕ್ಷಣ ಹೇಳಿದ ಹೆಸರು ಕೆ ಎಸ್‌ ಜೇಮ್ಸ್‌. ಆ ಕೋರ್ಸ್‌ನಲ್ಲಿ ಐಸೆಕ್‌ನ ಹಿರಿಯ, ಪ್ರತಿಭಾನ್ವಿತ ಎಲ್ಲ ಪ್ರೊಫೆಸರ್‌ಗಳ ಸೆಷನ್‌ಗಳಿದ್ದರೂ, ಜೇಮ್ಸ್‌ ಅವರ ಅವಧಿ ತುಂಬಾ ಮಾಹಿತಿಪೂರ್ಣವಾಗಿತ್ತು. ಅನಗತ್ಯ ಯಾವ ವಿಚಾರಗಳನ್ನು ಚರ್ಚಿಸದೆ, ತನ್ನ ಪಾಂಡಿತ್ಯ ಪ್ರದರ್ಶನ ಮಾಡದೆ ತನಗೆ ಕೊಟ್ಟ ʻಸ್ಯಾಂಪಲಿಂಗ್‌ʼ ವಿಷಯದ ಬಗ್ಗೆ ಮಾತ್ರ ಗಮನನೀಡಿ ಎಲ್ಲರಿಗೂ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಅದನ್ನು ಪ್ರಸ್ತುತಪಡಿಸಿ, ಮೆಥಡಾಲಜಿಯ ಬಗ್ಗೆ ಎಲ್ಲರಿಗೂ ಇದ್ದ ಅನುಮಾನಗಳನ್ನು ಸೂಕ್ತವಾಗಿ ಪರಿಹರಿಸಿ ಹೋಗಿದ್ದರು ಜೇಮ್ಸ್.

ಯಾವುದೇ ವಿಷಯದ ಕುರಿತಾಗಿ ಆಳವಾದ ಜ್ಞಾನವಿದ್ದವರು ಮಾತ್ರ ಆ ವಿಷಯವನ್ನು ಇತರರಿಗೆ ಸುಲಭವಾಗಿ, ಸರಳವಾಗಿ ಅರ್ಥಮಾಡಿಸಲು ಸಾಧ್ಯ. ತಾನು ಪ್ರೊಫೆಸರ್‌ ಎಂಬ ಯಾವ ಹಮ್ಮು ಬಿಮ್ಮುಗಳೂ ಇಲ್ಲದೆ ಸೀದಾ ಸರಳವಾಗಿದ್ದ ವ್ಯಕ್ತಿ. ಅವರ ಆ ಅವಧಿಯ ಪವರ್‌ ಪಾಯಿಂಟ್‌ ಪ್ರೆಸೆಂಟೇಶನ್‌ನನ್ನು ನಾನು ನನ್ನ ಇತರ ಅಧ್ಯಯನಗಳಿಗೆ ಅಗತ್ಯ ಬಿದ್ದಾಗ ಪರಾಮರ್ಶೆಗೆಂದು ಸಂಗ್ರಹಿಸಿಟ್ಟುಕೊಂಡಿದ್ದೆ. ನನ್ನ ಸ್ನೇಹಿತರಿಗೂ ಕೆಲವರಿಗೆ ಕಳುಹಿಸಿದ್ದೇನೆ ಕೂಡ. ಜೇಮ್ಸ್‌ ಐಐಪಿಎಸ್‌ ನ ನಿರ್ದೇಶಕರಾದಾಗ ತುಂಬಾ ಸೂಕ್ತ ವ್ಯಕ್ತಿ ಆ ಸ್ಥಾನವನ್ನು ಅಲಂಕರಿಸಿದ್ದಾರೆ ಅನ್ನಿಸಿ ಖುಶಿಪಟ್ಟಿದ್ದೆ.

Advertisements
sabyasachi das
ಇತ್ತೀಚೆಗೆ ರಾಜೀನಾಮೆ ನೀಡಿದ ಅಶೋಕ ಯುನಿವರ್ಸಿಟಿಯ ಸಹಾಯಕ ಪ್ರಾಧ್ಯಾಪಕ ಸಬ್ಯಸಾಚಿ ದಾಸ್‌

ಜೇಮ್ಸ್‌ ನಿರ್ದೇಶಕರಾಗಿರುವ, ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಗಳ (ಎನ್‌ಎಫ್‌ಎಚ್‌ಎಸ್‌) ವರದಿ ತಯಾರಿಸುವ ಹೊಣೆ ಹೊತ್ತಿರುವ ಈ ಸಂಸ್ಥೆ ನೀಡುತ್ತಿರುವ ವರದಿಯಲ್ಲಿನ ದತ್ತಾಂಶಗಳು ಮತ್ತು ಸರ್ಕಾರ ತನ್ನ ಸಾಧನೆ ಬಗ್ಗೆ ನೀಡುತ್ತಿರುವ/ಘೋಷಿಸುತ್ತಿರುವ ಅಂಕಿ ಅಂಶಗಳು ಒಂದಕ್ಕೊಂದು ತಾಳೆಯಾಗುತ್ತಿಲ್ಲ. ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ತನ್ನ ಘೋಷಣೆಗಳಿಗೆ ಪೂರಕವಾಗಿರುವ ಸಮೀಕ್ಷಾ ವರದಿಗಳನ್ನು ತೋರಿಸದೇ ಹೋದರೆ ಸರ್ಕಾರ ತೀವ್ರ ಮುಜುಗರಕ್ಕೀಡಾಗುತ್ತದೆ. ಹೀಗಾಗಿ ತನಗೆ ʻಅನುಕೂಲಕರ ಅಂಕಿಅಂಶಗಳುʼ ಲಭ್ಯವಾಗದಂತೆ ಮಾಡಿದ ಕಾರ್ಯ ವೈಫಲ್ಯತೆಗಾಗಿ ಸರ್ಕಾರ ಜೇಮ್ಸ್‌ರ ತಲೆದಂಡ ಪಡೆದಿದೆ.

ಸರ್ಕಾರದ ಘೋಷಣೆಗಳು ಮತ್ತು ತಾಳೆಯಾಗದ ಸಮೀಕ್ಷಾ ವರದಿಗಳು
ಸರ್ಕಾರದ ಘೋಷಣೆಗಳು ಮತ್ತು ಸಂಶೋಧನಾ ಸಂಸ್ಥೆಯ ಸಮೀಕ್ಷಾ ವರದಿಗಳು ಒಂದಕ್ಕೊಂದು ತಾಳೆಯಾಗುತ್ತಿಲ್ಲ ಎಂಬುದು ಹೊಸ ಸಂಗತಿಯೇನೂ ಅಲ್ಲ. ದೇಶ ಬಯಲು ಶೌಚ ಮುಕ್ತವಾಗಿದೆ ಎಂದು ಘೋಷಿಸಿ ಸರ್ಕಾರ ಸಂಭ್ರಮಿಸುತ್ತಿದ್ದ ಸಮಯದಲ್ಲಿಯೇ ಬಂದ ಸಮೀಕ್ಷಾ ವರದಿಗಳು, ಶೌಚಾಲಯ ಇಲ್ಲದ ಮನೆಗಳ ಅಂಕಿಸಂಖ್ಯೆಗಳನ್ನು ಸರ್ಕಾರದ ಮುಂದಿಟ್ಟಿತ್ತು. 2021ರ ವೇಳೆಗೆ ನಡೆಯಬೇಕಾಗಿದ್ದ ಜನಗಣತಿಯಲ್ಲಿ ಈ ಅಂಕಿಅಂಶಗಳು ಇನ್ನೊಮ್ಮೆ ದೃಢಪಟ್ಟರೆ ತನಗೆ ತೀವ್ರ ಮುಖಭಂಗವಾಗುತ್ತದೆ ಎಂದು ಸರ್ಕಾರ ಆ ವೇಳೆಗೆ ತರಾತುರಿಯಿಂದ ಮೀಟಿಂಗ್‌ ಮೇಲೆ ಮೀಟಿಂಗ್‌ ಕರೆದು ಅತಿ ಶೀಘ್ರದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ವೇ ನಡೆಸಿ ಶೌಚಾಲಯ ಇಲ್ಲದಿರುವ ಮನೆಗಳನ್ನು ಗುರುತಿಸಿ ಆ ಮನೆಗಳಿಗೆ ಆದಷ್ಟು ಕೂಡಲೇ ಶೌಚಾಲಯ ನೀಡುವಂತೆ ನಿರ್ದೇಶಿಸಿತ್ತು. ಈ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳಿಗೆ ಈ ಬಗ್ಗೆ ಸಾಕಷ್ಟು ಒತ್ತಡವೂ ಇತ್ತು.

ಜೊತೆಗೆ ಸ್ವಚ್ಛ ಭಾರತ ಮಿಷನ್‌ ಯೋಜನೆಯ ಸಮಾಲೋಚಕರಿಗೆ ಜನಗಣತಿಯಲ್ಲಿ ನಿರ್ದಿಷ್ಟವಾಗಿ ಶೌಚಾಲಯಗಳ ಕುರಿತಾದ ಮಾಹಿತಿ ಹೇಗೆ ಕಲೆಹಾಕಬೇಕು ಎಂಬುದರ ಬಗ್ಗೆ ವಿಶೇಷ ಕಾರ್ಯಾಗಾರವನ್ನೂ ಆಯೋಜಿಸಲಾಗಿತ್ತು (ಜನಗಣತಿಗೆ ಸಂಬಂಧಿಸಿದ ಪ್ರಶ್ನಾವಳಿಯಲ್ಲಿ ಈ ಬಗ್ಗೆ ಸಾಕಷ್ಟು ಮುಂಜಾಗ್ರತೆ ತೆಗೆದುಕೊಳ್ಳಲಾಗಿತ್ತು ಎಂಬ ಅಂಶವನ್ನೂ ಇಲ್ಲಿ ಗಮನಿಸಬಹುದು). ಜೊತೆಗೆ ಈ ಸಮಾಲೋಚಕರು ಜನಗಣತಿಯಯ ಕುರಿತಾಗಿ ಶಿಕ್ಷಕರಿಗೆ ತರಬೇತಿ ನೀಡುವಾಗ ಈ ತಾವೂ ಭಾಗವಹಿಸಿ ಶಿಕ್ಷಕರಿಗೆ ನಿರ್ದಿಷ್ಟವಾಗಿ ಈ ವಿಷಯವನ್ನು ರವಾನಿಸಬೇಕು ಎಂದೂ ಸೂಚಿಸಲಾಗಿತ್ತು. ಆ ವೇಳೆಗೆ ನಾನು ಈ ವಿಷಯಕ್ಕೆ ಸಂಬಂಧಿಸಿದ ಇಲಾಖೆಯಲ್ಲಿಯೇ ಕಾರ್ಯ ನಿರ್ವಹಿಸುತ್ತಿದ್ದರಿಂದ ಈ ಎಲ್ಲಾ ವಿಷಯಗಳು ನನ್ನ ಅನುಭವಕ್ಕೂ ಬಂದಿವೆ. ಆದರೆ ಅದೇ ಸಮಯದಲ್ಲಿ ಕೋವಿಡ್‌ ಸೋಂಕು ಜಗತ್ತನ್ನೇ ಆವರಿಸಿಬಿಟ್ಟಿತ್ತು. ಹೀಗಾಗಿ ಆ ವರ್ಷ ಜನಗಣತಿ ನಡೆಸಲಾಗಲಿಲ್ಲ. ನಿಟ್ಟುಸಿರು ಬಿಟ್ಟ ಸರ್ಕಾರ ಸ್ವಚ್ಛ ಭಾರತ್‌ ಮಿಷನ್‌ ಅಡಿಯಲ್ಲಿ ತನ್ನ ಈಗಾಗಲೇ ಮುಗಿದಿದ್ದ ತನ್ನ ಹಿಂದಿನ ಸ್ಕೀಮ್‌ ಎನ್‌ಒಎಲ್‌ಬಿ (ನೋ ಒನ್‌ ಲೆಫ್ಟ್‌ ಬಿಹೈಂಡ್‌) ಪುನರಾರಂಭಿಸಿ ಶೌಚಾಲಯ ಇಲ್ಲದವರಿಗೆಲ್ಲ ಮತ್ತೊಮ್ಮೆ ಶೌಚಾಲಯ ಎಂದು ಘೋಷಿಸಿ ನುಣುಚಿಕೊಂಡು ಬಿಟ್ಟಿತು.

swacch bharat second phase

ಮೌಲ್ಯಮಾಪನ ಸಂಶೋಧನೆಗಳ ಸ್ಥಿತಿಗತಿ
ಸರ್ಕಾರದ ವಿವಿಧ ಯೋಜನೆಗಳ ಮೌಲ್ಯಮಾಪನಕ್ಕಾಗಿ ಸಂಶೋಧನೆಗಳನ್ನು ಹೊರಗುತ್ತಿಗೆ ನೀಡುವ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ (ಕೆಇಎ) ಸಂಶೋಧನೆಗಳದ್ದೂ ಇದೇ ರೀತಿಯ ಇನ್ನೊಂದು ಕಥೆ. ಈ ಸಂಶೋಧನೆಗಳ ಸಾರಾಂಶದಲ್ಲಿ ಅಧ್ಯಯನದ ಫಲಿತಾಂಶಗಳನ್ನು ಗಮನಿಸಿದರೆ ಗುಡ್ಡ ಅಗೆದು ಇಲಿ ತೆಗೆದಂತೆ ಇರುತ್ತವೆ. ಹೆಚ್ಚಿನ ಸಂಶೋಧನಾ ವರದಿಗಳಲ್ಲಿ ಸಂಶೋಧನೆಯ ಪ್ರಮುಖಾಂಶಗಳನ್ನು ಸಂಶೋಧಕರು ಸಂಶೋಧನಾ ಸಾರಾಂಶ ಅಥವಾ ಉಪಸಂಹಾರದಲ್ಲೆಲ್ಲೂ ಸುಲಭವಾಗಿ ಯಾರ ಕಣ್ಣಿಗೂ ಕಾಣಸಿಗದಂತೆ ವರದಿಯ ಮಧ್ಯದಲ್ಲೆಲ್ಲೋ (ಉದಾಹರಣೆಗೆ ಪ್ರತೀ ಅಧ್ಯಾಯದ ಕೊನೆಯಲ್ಲಿ ಬರೆಯುವ ಉಪಸಂಹಾರಗಳಲ್ಲಿ/ಅಥವಾ ಅದು ಅಧ್ಯಯನದಲ್ಲಿ ಕಂಡುಬಂದ ಫಲಿತಾಂಶವೇ ಆಗಿದ್ದರೂ, ಹೆಚ್ಚು ಆ ವಿಷಯಕ್ಕೆ ಪ್ರಾಧಾನ್ಯತೆ ನೀಡದೆ) ಅಡಗಿಸಿಡುವುದೇ ಹೆಚ್ಚು.

ಆಚಾರಕ್ಲ್‌ ಆನ್‌ ಸುಖಕ್ಲ್‌ ಆನ್‌ ಅನ್ನುವ ಹಾಗೆ. ʻದುಡ್ಡು ಕೊಟ್ಟು ಯಾರು ಬೈಸಿಕೊಳ್ಳೋಕೆ ರೆಡಿ ಇರ್ತಾರೆʼ ಎಂದು ತಮ್ಮ ಕಾರ್ಯವನ್ನು ಸಮರ್ಥನೆ ಮಾಡಿಕೊಳ್ಳುತ್ತ ʻಎಲ್ಲರಿಗೂ ಹಿತಕರʼ ಫಲಿತಾಂಶಗಳನ್ನೇ ಹೆಚ್ಚಾಗಿ ಸಾರಾಂಶದಲ್ಲಿ ನೀಡಿರುತ್ತಾರೆ. ಇಲ್ಲವಾದಲ್ಲಿ ಮುಂದಿನ ಬಾರಿ ಆ ಮೌಲ್ಯಮಾಪನ ಸಂಶೋಧನೆಯ ಗುತ್ತಿಗೆ ನಿಮ್ಮ ಸಂಸ್ಥೆಗೆ ಸಿಗುವುದೇ ಇಲ್ಲ. ಇಡೀ ಸಂಶೋಧನಾ ವರದಿಯನ್ನು ಬಗೆದು ಓದಿ ಅದರಲ್ಲಿರುವ ಕಹಿ ಸತ್ಯವನ್ನು ಹೊರತೆಗೆಯುವಷ್ಟು ತಾಳ್ಮೆ ಯಾರಿಗೂ ಇಲ್ಲ ಎಂಬುದು ಅವರಿಗೆ ಖಡಾಖಂಡಿತ ಗೊತ್ತಿದೆ. ತೆಗೆಯಬಲ್ಲವರು ಇದ್ದರೂ ಅದು ಸುಲಭವಾಗಿ ಅರ್ಥವಾಗದ ʻತಿಲಕಾಷ್ಠ ಮಹಿಷ ಬಂಧನʼ ಎಂಬಂತಹ ಭಾಷೆಯಲ್ಲಿ ನಿರೂಪಿಸಲ್ಪಟ್ಟಿರುತ್ತದೆ.

ಇದನ್ನು ಓದಿ ಒಂದು ಸಂಶೋಧನಾ ಪ್ರಬಂಧಕ್ಕೆ ಹೆದರಿತೇ ಮೋದಿ ಸರ್ಕಾರ…!

ಅಷ್ಟಕ್ಕೂ ತನಗೆ ಸಲ್ಲಿಕೆಯಾದ ಸಂಶೋಧನಾ ವರದಿಗಳ ಮೌಲ್ಯಮಾಪನದಲ್ಲಿ ಹೊರಬಿದ್ದ ಫಲಿತಾಂಶಗಳೇನು, ವರದಿ ಹೇಗೆ ಬರೆಯಲಾಗಿದೆ/ನಿರೂಪಿಸಲಾಗಿದೆ ಎಂಬುದರ ಬಗ್ಗೆ ನಿಗಾ ವಹಿಸುವುದಕ್ಕಿಂತ ಹೆಚ್ಚಾಗಿ ಕೆಇಎ, ಆ ಸಂಶೋಧನೆಗಳ ಕಾಗುಣಿತ ದೋಷ, ವ್ಯಾಕರಣ ದೋಷ, ಸೂಕ್ತ ಅಲೈನ್‌ಮೆಂಟ್‌ಗಳ ಬಗೆಗೆ (ಅದೂ ಖಂಡಿತಾ ಅಗತ್ಯವೇ) ತಲೆಕೆಡಿಸಿಕೊಳ್ಳುವುದೇ ಜಾಸ್ತಿ ಎಂಬುದನ್ನು ಸಂಶೋಧನಾ ಸಂಸ್ಥೆಗಳಲ್ಲಿ ನನ್ನ ವೃತ್ತಿ ಅನುಭವದಲ್ಲಿ ಹಾಗು ವಿವಿಧ ವರದಿಗಳನ್ನು ತಯಾರಿಸಲು ಈ ಸಂಶೋಧನೆಗಳ ಅಧ್ಯಯನ ನಡೆಸಿದಾಗ ಕಂಡುಕೊಂಡಿದ್ದೇನೆ. ಈ ಮೌಲ್ಯಮಾಪನ ಸಂಶೋಧನೆಗಳ ಸ್ಥಿತಿ ಏನಾಗಿದೆ ಎಂಬುದರ ಬಗ್ಗೆ ಇನ್ನೊಂದು ಸಂಶೋಧನೆಯನ್ನೇ ಕೈಗೊಳ್ಳಬೇಕಾಗಬಹುದು.

ಸರ್ಕಾರ ಈ ರೀತಿಯಾಗಿ ಸಂಶೋಧಕರ, ಸಂಶೋಧನಾ ಸಂಸ್ಥೆಗಳ ಮೇಲೆ ತೀವ್ರವಾಗಿ ಪ್ರಹಾರ ಮಾಡುವಾಗಲೂ ಸಂಶೋಧಕರು ʻಸಂಶೋಧನೆಗಳ ಪರವಾಗಿʼ ನಿಲ್ಲದಿರುವುದು ದುರಂತ. ಈ ರೀತಿ ಕೈಕಟ್ಟಿ ಕುಳಿತರೆ ಸಂಶೋಧಕರು ಚುನಾವಣಾ ಪ್ರಣಾಳಿಕೆಯಲ್ಲಿ ʻಅಪೇಕ್ಷಿತʼ ಅಂಕಿಅಂಶಗಳನ್ನು ಉತ್ಪಾದಿಸುವ ಕಾರ್ಯಕ್ಕೆ ನಿಯೋಜನೆಗೊಂಡರೂ ಆಶ್ಚರ್ಯವೇನಿಲ್ಲ.

Shrinidhi adiga
ಡಾ. ಶ್ರೀನಿಧಿ ಅಡಿಗ
+ posts

ಸಾಮಾಜಿಕ ಮಾಧ್ಯಮ ಸಲಹೆಗಾರರು. ಬೆಂಗಳೂರಿನ ಐಸೆಕ್‌, ಐಐಎಚ್‌ಆರ್‌ ಹೆಸರಘಟ್ಟ, ಗ್ರಾಮ್‌ ಸಂಸ್ಥೆ ಮೈಸೂರು ಇಲ್ಲಿ ಸಂಶೋಧನಾ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ಸ್ವಚ್ಛ ಭಾರತ್‌ ಮಿಷನ್‌ (ಗ್ರಾಮೀಣ) ನಲ್ಲಿ ಐಇಸಿ ಸಮಾಲೋಚಕಿಯಾಗಿದ್ದರು. ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ನಲ್ಲಿ ವರದಿಗಾರ್ತಿಯಾಗಿಯೂ ಕೆಲಸ ಮಾಡಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಡಾ. ಶ್ರೀನಿಧಿ ಅಡಿಗ
ಡಾ. ಶ್ರೀನಿಧಿ ಅಡಿಗ
ಸಾಮಾಜಿಕ ಮಾಧ್ಯಮ ಸಲಹೆಗಾರರು. ಬೆಂಗಳೂರಿನ ಐಸೆಕ್‌, ಐಐಎಚ್‌ಆರ್‌ ಹೆಸರಘಟ್ಟ, ಗ್ರಾಮ್‌ ಸಂಸ್ಥೆ ಮೈಸೂರು ಇಲ್ಲಿ ಸಂಶೋಧನಾ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ಸ್ವಚ್ಛ ಭಾರತ್‌ ಮಿಷನ್‌ (ಗ್ರಾಮೀಣ) ನಲ್ಲಿ ಐಇಸಿ ಸಮಾಲೋಚಕಿಯಾಗಿದ್ದರು. ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ನಲ್ಲಿ ವರದಿಗಾರ್ತಿಯಾಗಿಯೂ ಕೆಲಸ ಮಾಡಿದ್ದಾರೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಹಕಾರ ಖಾತೆ | ಡಿಕೆ ಶಿವಕುಮಾರ್ ಗುಂಪಿಗೋ, ಜಾರಕಿಹೊಳಿ ಗುಂಪಿಗೋ?

ಕೆ.ಎನ್. ರಾಜಣ್ಣ ಅವರ ಸಹಕಾರ ಖಾತೆ ತೆರವಾಗಿದೆ. ಯಾರಿಗೆ ಎನ್ನುವುದು ಪ್ರಶ್ನೆಯಾಗಿದೆ....

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

Download Eedina App Android / iOS

X