ಯಾಕೆ ಅಂಬೇಡ್ಕರ್ ಅಂದರೆ ದ್ವೇಷ?

Date:

Advertisements
'ಸಣ್ಣ ಕಂದಮ್ಮ ಗುಡಿ ಒಳಗೆ ಹೋದ್ರು ಪೈನ್ ಹಾಕ್ತಿರಲ್ಲ? ಕೆಲವು ಹಳ್ಳಿಗಳಲ್ಲಿ ಅಂತು ಮರಕ್ಕೆ ಕಟ್ಟಿ ಚಿತ್ರ ಹಿಂಸೆ ಕೊಡೊದಾ? ಪಂಚೆ ಎತ್ತಿ ಕಟ್ಟಿದ್ದರೆ ಕಾಲ್ ಕಟ್ ಮಾಡೊದಾ? ಅಂಬೇಡ್ಕರ್ ರಿಂಗ್ ಟೋನ್ ಹಾಕೊಂಡಿದ್ದಕ್ಕೆ ಮರಕ್ಕೆ ಕಟ್ಟಿ ಬೈಕ್ ಇಂದ ಗುದ್ದಿ ಗುದ್ದಿ ಸಾಯಿಸೊದ? ಇದೆಲ್ಲ ಯಾಕೆ?'

ಓ ಬಂದ್ರಾ ಅಂಬೇಡ್ಕರ್ ಜಿ… ಎಷ್ಟು ಅಂತ ಕರೀಲಿ ನಿಮ್ಮನ್ನ.? ನಿಮ್ಮ ಬಗ್ಗೆ ಹಾಡು ಹಾಡಿ ಹಾಡಿ ಸಾಕಾಯಿತು. ನೀವು ಬರಲೆ ಇಲ್ಲ? ‘ಹಾಡು ಹಾಡಿದರೆ ಬರ್ತಿನಿ ಅಂತ ನಾ ಯಾವತ್ತು ಹೇಳಿದ್ದೆ?’ ಸಾಹೇಬ್ ಜೀ… ಈ ಸಿನಿಮಾದಲ್ಲಿ ದೇವರ ಬಗ್ಗೆ ಹಾಡು ಹಾಡಿದರೆ ಸಾಕು, ದೇವರು ಪ್ರತ್ಯಕ್ಷ ಆಗ್ತಾನಲ್ಲ. ಹಂಗೆ ನಿನ್ನ ಬಗ್ಗೆನೂ ಹಾಡಿದರೆ ಪ್ರತ್ಯಕ್ಷ ಆಗ್ತಿಯಾ ಅಂತ ಹಾಡಿದೆ. ‘ಹೋ ನಾನೇನು ದೇವರೇ?’ ಹಾ ಮತ್ತೆ, ಇವತ್ತು ನಾವು ಹೀಗಿದಿವಿ ಅಂದ್ರೆ ನೀವೆ ಕಾರಣ. ನಮಗೆ‌ ದೇವರು? ‘ಅಲ್ವೊ ನನ್ನ ಬಗ್ಗೆ ಇರೊ ಪುಸ್ತಕ ಓದಿದಿಯಾ?’ ಇಲ್ಲ ಅಂಬೇಡ್ಕರ್ ಜೀ… ‘ಹೋಗಲಿ ಸಂವಿಧಾನ ಆದರೂ ಓದಿದಿಯೆನೊ?’ ಇಲ್ಲ ಸಾಹೇಜ್ ಜೀ… ‘ಹೊ‌ ನನ್ನ ಬಗ್ಗೆ ಆಗಲಿ ನನ್ನ ಸಂವೀಧಾನ ಆಗಲಿ ನೀ ಓದಿಲ್ಲ ಅಲ್ವಾ, ಅದಿಕ್ಕೆ ದೇವರು ಅಂತಿದಿಯಾ.. ಹೇಳಪಾ ಏನ್ ನಿನ್ನ ಪ್ರಶ್ನೆ.’

ಪ್ರಶ್ನೆನೂ ಹೌದು ಗೊಂದಲನೂ ಹೌದು. ಆದರೆ ಪ್ರಶ್ನೆ ಅಂತ ಕೇಳಲ್ಲ. ನನಗೇನೂ ಅನಿಸ್ತದೆ ಅದನ್ನ ಹೇಳಿಕೊಂಡು ಹೊಗ್ತಿನಿ ನಿಮ್ಮ ಹತ್ರ. ‘ಹೂಂ…. ಸರಿ… ಹೇಳು ಕೆಳೋಣ.’ ಸಾಹೇಬ್‌ ಜಿ, ನೀವು ಬದುಕ್ಕಿದ್ದಾಗಿಂದಲೂ ಇಲ್ಲಿಯವರೆಗೆ ನಿಮ್ಮನ್ನ ಟೀಕಿಸುತ್ತಲೇ ಇದ್ದಾರೆ. ನಿಮ್ಮನ್ನ ಟೀಕಿಸುವುದ ನೋಡಿ ನಗಾಡುವ ಒಂದಷ್ಟು ಜನ, ಕೋಪ ಮಾಡಿಕೊಳ್ಳುವ ಒಂದಷ್ಟು ಜನ, ಉತ್ತರ ಕೊಡುವ ಬೆರಳಣಿಕೆಯಷ್ಟು ಜನ, ಮೌನ ವಹಿಸುವ ಸಾಕಷ್ಟು ಜನ ಇದ್ದಾರೆ. ಆದರೆ ಈ ದೇಶದ ಯುವ ಸಮೂಹಕ್ಕೆ ನೀವು ಇನ್ನು ಅರ್ಥವಾಗಲಿಲ್ಲ ಯಾಕೆ? ನಿಮ್ಮನ್ನ ಶತ್ರುವಿನಂತೆ ಕಾಣುವ ದೊಡ್ಡ ಸೈನ್ಯವೇ ನಿರ್ಮಾಣ ಆಗಿದೆ. ಕ್ಷಮೆ ಇರಲಿ ಸಾಹೇಬ್ ಜಿ, ನಿಮ್ಮನ್ನ ದ್ವೇಷಿಸೊ ಹಾಗೆ ನಿರ್ಮಾಣ ಮಾಡಲಾಗಿದೆ. ನಿಮ್ಮ ಹೆಸರು ಕೇಳಿದರೆ ಸಾಕು, ಉರಿಯೊ ಕೆಂಡದಲ್ಲಿ ಬಿದ್ದಹಾಗೆ ಒದ್ದಾಡ್ತಾರೆ. ಇನ್ನು ಕೆಲವು ಜನ ನೀವು ಗೊತ್ತಿಲ್ಲದಂತೆ ನಿಮ್ಮನ್ನ ಇಗ್ನೋರ್ ಮಾಡುತ್ತಾರೆ. ಒಂದಷ್ಟು ಜನ ಅಂತು ನಿಮ್ಮ ಜಯಂತಿಯಂದು ಸಾರ್ವಜನಿಕ ಸಭೆಗಳಲ್ಲಿ ನಿಮ್ಮ ಬಗ್ಗೆ ಮಾತಾಡಿ, ನಿಮ್ಮ ಮೇಲೆ ಪ್ರೀತಿ ತೋರುತ್ತಾರೆ. ಆದರೆ ಅದು ಆ ಕ್ಷಣಕ್ಕಷ್ಟೇ, ಓಟ್‌ ಬ್ಯಾಂಕ್‌ಗಾಗಿ, ಅಂಬೇಡ್ಕರ್ ಜಿ ನಿಮ್ಮ ಮೇಲೆ ಯಾಕೆ ಕೋಪ?

ಓ ಹೋ ಮೋಸ್ಟ್ಲೀ,,, ಪ್ರತಿಯೊಬ್ಬರಿಗೂ ಸಾಮಾಜಿಕ ಸ್ವಾತಂತ್ರ್ಯ ಬಯಸಿದ್ದಕ್ಕಾ? ಅಥವಾ ಸಮಾನತೆ ಸ್ವಾತಂತ್ರ್ಯ ಬಯಸಿದ್ದಕ್ಕ? ಶಿಕ್ಷಣದ ಹಕ್ಕನ್ನ ಕೊಟ್ಟಿದ್ದಕ್ಕಾ? ಬದುಕಿನ ಹಕ್ಕನ್ನ, ಉದ್ಯೊಗದ ಹಕ್ಕನ್ನ, ಮನುಷ್ಯ ಹುಟ್ಟಿನಿಂದ ಸಾಯುವವರೆಗೂ ಸತ್ತ ಮೇಲೂ ಅವನಿಗೆ ಗೌರವದ ಬದುಕು ಕೊಟ್ಟಿದಕ್ಕಾ? ಅಥವಾ ಜಾತಿ ಇರಬಾರದು ಅಂತ ಹೋರಾಟ ಮಾಡಿದ್ದಕ್ಕಾ? ಮಹಿಳೆಯರಿಗೊಸ್ಕರ ನೀವು ಮಾಡಿದ ತ್ಯಾಗಕ್ಕಾ…..?

Advertisements
WhatsApp Image 2023 06 15 at 4.03.29 PM

ದುರಂತ ಅಂದರೆ ಸಾಹೇಬ್ ಜೀ… ನೀವು ಯಾರಿಗೋಸ್ಕರವಾಗಿ ನಿಮ್ಮ ಮಂತ್ರಿ ಪದವಿಗೆ ರಾಜೀನಾಮೆ ಕೊಟ್ಟಿರೋ, ಅವರೆ ನಿಮ್ಮನ್ನ ಇಂದು ಪ್ರಶ್ನೆ ಮಾಡುತ್ತಿದ್ದಾರೆ. ಪ್ರಶ್ನೆ ಮಾಡಲಿಬಿಡಿ ಸಾಹೇಬ್ ಜಿ, ಇದು ಕೂಡ ನೀವು ಕೊಟ್ಟ ಸ್ವಾತಂತ್ರ್ಯ ತಾನೆ. ಆದ್ರೆ, ಅವರು ಪ್ರಶ್ನೆ ಮಾಡ್ತಿರೋದು, ನೀವು ತಳವರ್ಗದ ಜಾತಿಯಲ್ಲಿ ಹುಟ್ಟಿದ ಕಾರಣಕ್ಕಾ.? ಓ… ಹೋ.. ಹೋ… ಮೊಸ್ಟ್ಲಿ ನೀವು ರಿಸರ್ವೇಶನ್ ಕೊಟ್ಟಿರೋ ಕಾರಣಕ್ಕೆ ಇರಬಹುದು. ಸರಿ ಹಾಗಾದರೆ ರಾಜ್ಯದಲ್ಲಿ ಯಾವ ಯಾವ ಜಾತಿಗೆ ಎಷ್ಟು ಮೀಸಲಾತಿ ಇದೆ?

ಯಾವ್ಯಾವ ಜಾತಿಗೆ ಎಷ್ಟು ಮೀಸಲಾತಿ?
ಸದ್ಯ ಕರ್ನಾಟಕದಲ್ಲಿ ಶೇ.50ರಷ್ಟು ಮೀಸಲಾತಿಯನ್ನು ವಿವಿಧ ಜಾತಿಗಳಿಗೆ ನೀಡಲಾಗಿದೆ. ಅದರಲ್ಲಿ ಎಸ್‌ಸಿಗೆ ಶೇ.15, ಎಸ್‌ಟಿ ಶೇ.03, ಪ್ರವರ್ಗ-1ಕ್ಕೆ ಶೇ.೦4, ಪ್ರವರ್ಗ-2ಎಗೆ ಶೇ.15, ಪ್ರವರ್ಗ-2ಬಿಗೆ ಶೇ.04, ಪ್ರವರ್ಗ-3ಎಗೆ ಶೇ.04 ಹಾಗೂ ಪ್ರವರ್ಗ-2ಬಿಗೆ ಶೇ.05ರಷ್ಟು ಮೀಸಲಾತಿಯನ್ನು ನೀಡಲಾಗಿದೆ. (ಈ ಮಾಹಿತಿಯನ್ನು ಕರ್ನಾಟಕ ರಾಜ್ಯಪತ್ರದಿಂದ ತೆಗೆದುಕೊಳ್ಳಲಾಗಿದೆ)

  • ಪರಿಶಿಷ್ಟ ಜಾತಿಯಲ್ಲಿ ಹೊಲೆಯ, ಮಾದಿಗ, ಬೋವಿ, ಲಂಬಾಣಿ, ಸಮಗಾರ, ಕೊರಚ, ಕೊರಮ ಸೇರಿ 101 ಜಾತಿಗಳಿವೆ
  • ಪರಿಶಿಷ್ಟ ಪಂಗಡದಲ್ಲಿ ನಾಯಕ, ವಾಲ್ಮೀಕಿ ಹಾಗೂ ಆದಿವಾಸಿಗಳು ಸೇರಿ 56 ಜಾತಿಗಳಿವೆ
  • ಪ್ರವರ್ಗ 1ರಲ್ಲಿ ಉಪ್ಪಾರರು, ಗೊಲ್ಲರು, ಪಿಂಜಾರ ಸೇರಿ 95 ಜಾತಿ
  • ಪ್ರವರ್ಗ 2ಎರಲ್ಲಿ ಕುರುಬ ಈಡಿಗ, ವಿಶ್ವಕರ್ಮ, ನಾಮಧಾರಿ, ದೇವಾಡಿಗ, ಮಡಿವಾಳ, ಕುಂಬಾರ, ದೇವಾಂಗ, ತಿಗಳ, ಕ್ಷೌರಿಕ, ಬಿಲ್ಲವ, ಪೂಜಾರಿ, ದೀವರ, ಕಂಚುಗಾರ, ನಾಡವ ಸವಿತಾ ಸೇರಿ 102 ಜಾತಿಗಳಿವೆ
  • ಪ್ರವರ್ಗ 2ಬಿನಲ್ಲಿ ಮುಸ್ಲಿಂ ಮತ್ತು ಒಳಜಾತಿಗಳಿವೆ
  • ಪ್ರವರ್ಗ 3ಎನಲ್ಲಿ ಒಕ್ಕಲಿಗ, ರೆಡ್ಡಿ, ಬಂಟ, ಬಲಿಜ, ಕೊಡವ ಸೇರಿ 12 ಜಾತಿಗಳಿವೆ
  • ಪ್ರವರ್ಗ 3ಬಿನಲ್ಲಿ ವೀರಶೈವ ಲಿಂಗಾಯತ ಮತ್ತು ಈ ಸಮುದಾಯಕ್ಕೆ ಸೇರಿದ ಎಲ್ಲ ಉಪಜಾತಿಗಳು ಇವೆ.

ಸಾಹೇಬ್ ಜೀ… ನೀವು ಗ್ರೇಟ್ ಬಿಡಿ… ಇಲ್ಲಿ ಎಲ್ಲರಿಗೂ ಮಿಸಲಾತಿ ಇದೆ. ಪ್ರತಿಯೊಬ್ಬರಿಗೂ ಮಿಸಲಾತಿಯನ್ನ ಕೊಟ್ಟಿದ್ದೀರಿ.

ಆದರೂ ಸಾಹೇಬ್ ಜಿ, ಈ ಕಾಲೇಜಿನ ವಿದ್ಯಾರ್ಥಿಗಳು ‘ಹಾಸ್ಟೆಲ್ ಪೀಸ್, ಕಾಲೇಜು ಪೀಸ್ ಅವರಿಗೆ ಮಾತ್ರ ಕಮ್ಮಿ – ನಮಗೆ ಜಾಸ್ತಿ’ ಅಂತಾರೆ. ಅವರು ಕಟ್ಟೊದೆ ಇಲ್ಲ ಅಂತ ಎಸ್‌ಸಿ/ಎಸ್‌ಟಿಗಳ ಸ್ವಲ್ಪ ಮುನಿಸಿಕೊಳ್ತಾರೆ. ಆ ಮೇಲೆ ಯಾವ ಸಮುದಾಯ ಶತ-ಶತಮಾನಗಳಿಂದ ಶಿಕ್ಷಣದಿಂದ ವಂಚಿತರಾಗಿದ್ದರೋ ಅವರು ಇಂದು ಅಕ್ಷರಸ್ಥರಾಗಿ ವಿಶ್ವವಿದ್ಯಾಲಯಗಳ ಮೆಟ್ಟಿಲು ಎರುತ್ತಿದ್ದಾರೆ. ಏರಿದವರೂ ಕೆಲವರು ಉದ್ಯೋಗ ಪಡೆದುಕೊಂಡವರು ನಿಮ್ಮನ್ನ ಮರೆತು ಬಿಟ್ಟಿದ್ದಾರೆ.

ಅದಿರಲಿ, ಕಡಿಮೆ ಪರ್ಸೆಂಟ್ ತೆಗಿದ್ರು ಅವರಿಗೆ ಸೀಟ್ ಸಿಗುತ್ತೆ ಅಂತ ಪ್ರಶ್ನೆ ಕೇಳ್ತಾರೆ. ಮತ್ತೆ ಅವರಪ್ಪ ಎಂಎಲ್‌ಎ ಇರ್ತಾನೆ, ಅವರ ಮಗನಿಗೆ ಅಥವಾ ಮಗಳಿಗ್ಯಾಕೆ ಮೀಸಲಾತಿ ಅಂತಾರೆ. ಸಾಹೇಬ್ ಜೀ, ಒಟ್ಟಾರೆ ಇಡೀ ಶೋಷಿತ ಸಮುದಾಯ ಕಾಣ್ತಿಲ್ಲ ಇವರ ಕಣ್ಣಿಗೆ. ಕೇವಲ ಬೆಳೆದು ನಿಂತ ಬೆರಳಣಿಕೆಯ ಎಂಎಲ್‌ಎ, ಎಂಪಿ, ಸರ್ಕಾರಿ ಉದ್ಯೋಗಿಗಳ ಮಕ್ಕಳು ಮಾತ್ರ ಕಾಣ್ತಿದಾರೆ..

WhatsApp Image 2023 06 15 at 4.03.19 PM

ಹೀಗೆ ಮೇಲ್ವರ್ಗ ಎನಿಸಿಕೊಂಡವರ ಜೊತೆ ಮಾತಾಡ್ತಿದ್ದೆ. ಅಲ್ಲ ಕಣ್ರಪ ಮನುಷ್ಯರು ಅಂತ ಈಗ ನೊಡ್ತಿದಿರಲ್ಲ, ಸಂತೋಷ. ನಿಮ್ಮ ಬದಲಾವಣೆಯನ್ನ ನಾನು ಗೌರವಿಸ್ತಿನಿ. ಅಲ್ಲ ಕಣೊ ಒಬ್ಬ ದಲಿತ ಯಾಕೆ ಗುಡಿ ಪ್ರವೇಶ ಮಾಡಬಾರದು? ಅಚಾನಕ್ ಸಣ್ಣ ಕಂದಮ್ಮ ಗುಡಿ ಒಳಗೆ ಹೋದ್ರು ಪೈನ್ ಹಾಕ್ತಿರಲ್ಲ? ಕೆಲವು ಹಳ್ಳಿಗಳಲ್ಲಿ ಅಂತು ಮರಕ್ಕೆ ಕಟ್ಟಿ ಚಿತ್ರ ಹಿಂಸೆ ಕೊಡೊದಾ? ಪಂಚೆ ಎತ್ತಿ ಕಟ್ಟಿದ್ದರೆ ಕಾಲ್ ಕಟ್ ಮಾಡೊದಾ? ಅಂಬೇಡ್ಕರ್ ರಿಂಗ್ ಟೋನ್ ಹಾಕೊಂಡಿದ್ದಕ್ಕೆ ಮರಕ್ಕೆ ಕಟ್ಟಿ ಬೈಕ್ ಇಂದ ಗುದ್ದಿ ಗುದ್ದಿ ಸಾಯಿಸೊದ? ಅವರ ಕೇರಿಗಳಿಗೆ ಮೂಲಭೂತ ಸೌಕರ್ಯಗಳನ್ನ ಒದಗಿಸಿಕೊಂಡಿದ್ದಕ್ಕೆ 40 ಜನ ಅವರ ಕೇರಿಗೆ ನುಗ್ಗಿ ಹೊಡೆಯೊಕೆ ಬರೋದಾ? ಇಬ್ಬರೇ ನಿಂತು ಅವರನ್ನ ಎದುರಿಸಿ ನಿಂತಿದ್ದಕ್ಕೆ, ಊರ ಭಾವಿಗೆ ಬೇಲಿ ಹಾಕೊದ? ಇದೆಲ್ಲ ಯಾಕೆ? ಪ್ರಶ್ನೆ ಸುಮಾರಿದಾವೆ. ಆದರೆ ಪ್ರಶ್ನೆಗಳಿಗೆ ಪ್ರಶ್ನೆಗಳೇ ಉದ್ಭವ ಆಗ್ತವೆ ಬಿಟ್ರೆ, ಉತ್ತರಗಳು ಕೊಡುವ ನಾಲಿಗೆ ಬೆರೆ ಯಾರದ್ದೊ ಮಾತಾಡ್ತಾರೆ, ಬೇರೆ ಏನನ್ನೊ ಹೇಳ್ತಾರೆ. ಸಾಹೇಬ್ ಜೀ, ಒಟ್ಟಾರೆ ನೀವು ಈ ಕ್ಷಣ ಏನಾದರೂ ಇದ್ದಿದ್ದರೆ ನಿಮ್ಮನ್ನು ಪ್ಯಾನಲ್ ಡಿಸ್ಕಷನ್‌ನಲ್ಲಿ ಕೂರಿಸಿ, ಬಾಯಿಗೆ ಬಂದಂಗೆ ಮಾತಾಡಿ ಏನೆನೊ ಅಂತಿದ್ದರು?

ಈ ವರದಿ ಓದಿದ್ದೀರಾ?: ದಲಿತರ ಹತ್ಯಾಕಾಂಡ | 42 ವರ್ಷಗಳ ಬಳಿಕ ತೀರ್ಪಿತ್ತ ಕೋರ್ಟ್‌; ನ್ಯಾಯ ದಕ್ಕಿದ್ದು ಯಾರಿಗೆ?

ಇದು ಮುಗಿಯದ ಅಧ್ಯಾಯ ಅಂಬೇಡ್ಕರ್ ಜಿ ಮತ್ತೆ ಮಾತಾಡೋಣ ನೀವು ಸಿಕ್ಕಾಗ, ಮತ್ತೆ ಹೇಳಿಕೊಳ್ತಿನಿ ಎಲ್ಲ. ‘ಅಲ್ವೊ ನನ್ನ ಬಗ್ಗೆ ಓದಿಲ್ಲ ಅಂದೆ, ಇಷ್ಟೆಲ್ಲ ಹೇಗೆ ಗೊತ್ತು?’ ಸಾಹೇಬ್ ಜೀ, ಸಾಮಾಜಿಕ ಹೋರಾಟಗಳಲ್ಲಿ ಭಾಗವಹಿಸ್ತಿನಿ. ಅಲ್ಲಿ ನಿಮ್ಮ ಬಗ್ಗೆ ಮಾತಾಡ್ತಾರಲ್ಲ‌‌, ಅಲ್ಲಿ ತಿಳಿದುಕೊಂಡಿದ್ದು. ‘ಸರಿ ಇನ್ಮೇಲೆ ಆದರೂ ಓದು. ನೀ ಓದದೆ ಇದ್ದರೇ ನಿನ್ನ ಅಸ್ತಿತ್ವ ಕೂಡ ಇರಲ್ಲ.’ ಸರಿ ಓದುತ್ತಿನಿ. ಆಮೇಲೆ ಸಾಹೇಬ್ ಜೀ, ಈಗಂತೂ ರಾಜಕೀಯನ ನಾಯಕರು ಹೇಗಿದಾರೆ ಅಂದ್ರೆ, ಗಾಂಧಿಯನ್ನ ಗೂಡ್ಸೆ ಹೇಗೆ ನಮಸ್ಕಾರ ಮಾಡಿ ಗುಂಡಿಟ್ಟು ಕೊಂದನೋ ಹಾಗೆ ನೀವು ಬರೆದ ಸಂವಿಧಾನಕ್ಕೆ ಅಡ್ಡ ಬಿದ್ದು ನಮಸ್ಕಾರ ಮಾಡಿ ಕೊಡಲಿ ಏಟು ಹಾಕ್ತಿದಾರೆ. ಸರಿ ನಾನಿನ್ನು ಬರ್ತಿನಿ ಮತ್ತೆ ಸಿಗೋಣ ಸಾಹೇಬ್ ಜೀ. ನೆಕ್ಸ್ಟ್ ಟೈಮ್ ಬಂದಾಗ ಬೇರೆ ಏನಾರ ಹೇಳ್ಕೊತಿನಿ. ಟಾಟಾ….

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಡಿಂಗ್ರಿ ನರೇಶ್
ಡಿಂಗ್ರಿ ನರೇಶ್
ರಂಗ ನಿರ್ದೇಶಕ, ಸಿನಿಮಾ ನಟ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X