ಹೆಚ್ಚು ಮಕ್ಕಳನ್ನು ಹೆತ್ತ ಮಹಿಳೆಯರಿಗೆ ನಿಮ್ಮ ಗದ್ದುಗೆ ಬಿಟ್ಟು ಕೊಡುವಿರಾ?

Date:

Advertisements

ಇಡೀ ಜಗತ್ತು ಪುರುಷರ ಅಧಿಕಾರದಾಹ, ಸ್ವಾರ್ಥಕ್ಕೆ ಬಲಿಯಾಗಿದೆ. ಎಷ್ಟೇ ಮುಂದುವರಿದರೂ, ಕ್ರಾಂತಿಗಳಾದರೂ ಮಹಿಳೆಯರನ್ನು ತಮ್ಮ ಸಮಾನವಾಗಿ ಕಾಣುವುದಕ್ಕೆ ಪುರುಷಹಂಕಾರ ಬಿಡುತ್ತಿಲ್ಲ. ಹಿಂದೂ ಧರ್ಮವನ್ನು ಉಳಿಸುವ ಉದ್ದೇಶದಿಂದ ಹೆಚ್ಚು ಮಕ್ಕಳನ್ನು ಹೊಂದಬೇಕು ಎನ್ನುವವರು ತಮ್ಮ ಧರ್ಮದಲ್ಲಿ ಹೆಣ್ಣಿಗೆ ಯಾವ ಸ್ಥಾನ ನೀಡಿದ್ದಾರೆ? ಮೌಢ್ಯ, ಆಚರಣೆಯ ಹೆಸರಿನಲ್ಲಿ ನಡೆಯುವ ಸ್ತ್ರೀಶೋಷಣೆಯನ್ನು ತಡೆಯಲು ಸಿದ್ಧರಿದ್ದಾರಾ?

ಒಂದು ಕಡೆ ಹಿಂದೂ ಧಾರ್ಮಿಕ ಮುಖಂಡರೆಂದುಕೊಂಡವರು, ಸಂಸಾರವಿಲ್ಲದ ಸನ್ಯಾಸಿಗಳು, ಸಾಧ್ವಿಗಳು, ಮಠದ ಸ್ವಾಮಿಗಳು “ಹಿಂದೂಗಳು ಹೆಚ್ಚು ಮಕ್ಕಳನ್ನು ಮಾಡಿಕೊಳ್ಳಿ” ಎಂದು ಕರೆ ನೀಡುತ್ತಿದ್ದಾರೆ. ಹೀಗೆ ಹೇಳಲು ಶುರುಮಾಡಿ ಒಂದು ದಶಕವಾಗಿದೆ. “ಮುಸ್ಲಿಮರ ಜನಸಂಖ್ಯೆ ಹೆಚ್ಚುತ್ತಿದೆ. ಹೀಗೇ ಆದರೆ ಹಿಂದೂಗಳು ಅಲ್ಪಸಂಖ್ಯಾತರಾಗುತ್ತಾರೆ. ಭಾರತ ಇಸ್ಲಾಂ ರಾಷ್ಟ್ರವಾಗುತ್ತದೆ. ಹಿಂದೂಗಳಿಗೆ ಇರೋದು ಒಂದೇ ದೇಶ. ಅದೂ ಇಲ್ಲದಂತಾಗುತ್ತದೆ” ಎಂಬ ಭಯ ಹುಟ್ಟಿಸಲಾಗುತ್ತದೆ. ಅವರ ಈ ಉದ್ದೇಶವೇ ಸಂವಿಧಾನ ವಿರೋಧಿಯಾಗಿದೆ. ಸೆಕ್ಯುಲರ್‌ ಭಾರತವನ್ನು ಹಿಂದೂರಾಷ್ಟ್ರ ಮಾಡುವ ಷಡ್ಯಂತ್ರದ ಭಾಗವಾಗಿ ಹಿಂದೂಗಳ ಜನಸಂಖ್ಯೆ ಹೆಚ್ಚಬೇಕು ಎಂದು ಹಿಂದೂ ರಾಷ್ಟ್ರವಾದಿಗಳು ಹೇಳುತ್ತಿದ್ದಾರೆ.

ಇತ್ತೀಚೆಗೆ ಆಂದ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್‌ ಕೂಡಾ ಹೆಚ್ಚು ಮಕ್ಕಳನ್ನು ಮಾಡಿಕೊಳ್ಳಿ ಎಂದು ಹೇಳಿದ್ದಾರೆ. ಆದರೆ ಒಂದು ಧರ್ಮದ ವಿರುದ್ಧ ಅಥವಾ ಒಂದು ಧರ್ಮವನ್ನು ಗುರಿಮಾಡಿ ಅವರು ಈ ಮಾತು ಹೇಳಿಲ್ಲ. ಇದು ರಾಜಕೀಯ ಅಸ್ಥಿತ್ವದ ಹೇಳಿಕೆಯಾಗಿದೆ. ಕೇಂದ್ರ ಸರ್ಕಾರ ಅನುದಾನ ಹಂಚಿಕೆ ಮಾಡುವಾಗ ಹೆಚ್ಚು ತೆರಿಗೆ ಕಟ್ಟುತ್ತಿರುವ ದಕ್ಷಿಣದ ರಾಜ್ಯಗಳಿಗೆ ತಾರತಮ್ಯ ಮಾಡುತ್ತಿದೆ. ಜನಸಂಖ್ಯೆ ಆಧಾರದಲ್ಲಿ ತೆರಿಗೆ ಹಂಚಿಕೆ ಮಾಡುವ ಒಕ್ಕೂಟ ಸರ್ಕಾರವು ಗುಜರಾತ್‌, ಉತ್ತರಪ್ರದೇಶ, ಬಿಹಾರದಂತಹ ಹೆಚ್ಚು ಜನಸಂಖ್ಯೆ ಇರುವ ರಾಜ್ಯಗಳಿಗೆ ಹೆಚ್ಚು ಅನುದಾನ ಕೊಡುತ್ತಿದೆ. ಹೆಚ್ಚು ಜಿಎಸ್‌ಟಿ ಸಂಗ್ರಹಿಸುತ್ತಿದ್ದರೂ ಅನುದಾನ ನೀಡುವಲ್ಲಿ ಮೋಸ ಮಾಡುತ್ತಿದೆ. ಕಡಿಮೆ ಜಿಎಸ್‌ಟಿ ಸಂಗ್ರಹವಾಗುವ ಬಿಹಾರ, ಗುಜರಾತ್‌, ಉತ್ತರಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶಗಳಿಗೆ ನಮಗಿಂತ ಹೆಚ್ಚು ಅನುದಾನ ನೀಡುತ್ತಿದೆ. ದಕ್ಷಿಣದಲ್ಲಿ ಬಿಜೆಪಿಯೇತರ ಪಕ್ಷಗಳ ಸರ್ಕಾರ ಇರುವುದು ಕೂಡಾ ತಾರತಮ್ಯಕ್ಕೆ ಕಾರಣವಾಗಿದೆ ಎಂಬ ಆರೋಪವಿದೆ. ಅಷ್ಟೇ ಅಲ್ಲ ಹಿಂದಿ ಹೇರಿಕೆ, ಭಾಷಾ ನೀತಿಯ ವಿಚಾರದಲ್ಲಿ ದಕ್ಷಿಣದ ರಾಜ್ಯಗಳ ಅಭಿಪ್ರಾಯಗಳಿಗೆ ಮನ್ನಣೆ ಸಿಗುತ್ತಿಲ್ಲ.

Advertisements

ಈ ಮಧ್ಯೆ ಕೇಂದ್ರ ಸರ್ಕಾರ ಲೋಕಸಭಾ ಕ್ಷೇತ್ರಗಳ ಪುನರ್‌ ವಿಂಗಡನೆಗೆ ಕೈ ಹಾಕಲು ಸಿದ್ಧತೆ ನಡೆಸಿದೆ. ಜನಸಂಖ್ಯೆಯ ಆಧಾರದಲ್ಲಿ ಲೋಕಸಭಾ ಕ್ಷೇತ್ರಗಳ ಪುನರ್‌ ವಿಂಗಡನೆಯಾದರೆ ಉತ್ತರದ ರಾಜ್ಯಗಳಿಗೆ ಇನ್ನೂ ಹೆಚ್ಚು ಲೋಕಸಭಾ ಸೀಟುಗಳು ಸಿಗಲಿವೆ. ಹಿಂದಿ ಭಾಷಿಕ ರಾಜ್ಯಗಳ ಸೀಟುಗಳ ಸಂಖ್ಯೆ ಹೆಚ್ಚಿದರೆ ದಕ್ಷಿಣ ಭಾರತದ ರಾಜ್ಯಗಳು ಕೇಂದ್ರ ಸರ್ಕಾರದ ಗುಲಾಮರಾಗಿ ಇರಬೇಕಾಗುತ್ತದೆ. ಈ ಆತಂಕದಿಂದಾಗಿ ಹೆಚ್ಚು ಮಕ್ಕಳನ್ನು ಮಾಡಿಕೊಳ್ಳಿ ಎಂದು ನಾಯ್ಡು, ಸ್ಟಾಲಿನ್‌ ಹೇಳಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಎರಡೂ ಕಡೆಯ ಹೇಳಿಕೆಗಳನ್ನು ತುಲನೆ ಮಾಡಿದರೆ ಒಂದು ದ್ವೇಷ ಮತ್ತು ದುರುದ್ದೇಶಪೂರಿತ, ಸಂವಿಧಾನ ವಿರೋಧಿಯಾದರೆ; ಮತ್ತೊಂದು ಅಸಹಾಯಕತೆಯ ಹೇಳಿಕೆಯಾಗಿದೆ. ಈ ಮಧ್ಯೆ ಮಕ್ಕಳನ್ನು ಹೆರಬೇಕಾದ ಮಹಿಳೆಯರ ಅಭಿಪ್ರಾಯವೇನು? ಅವರು ಮೂರು ನಾಲ್ಕು ಮಕ್ಕಳನ್ನು ಹೆರಲು ತಯಾರಿದ್ದಾರಾ? ಅಥವಾ ಗಂಡಸರ ಒತ್ತಾಯಕ್ಕೆ ಆಕೆ ಹೆರಬೇಕೇ? ಹೆಚ್ಚು ಹೆತ್ತ ಮಕ್ಕಳನ್ನು ಸಾಕುವ ಜವಾಬ್ದಾರಿ ಯಾರು ಹೊರುತ್ತಾರೆ? ಮೂರು ಮಕ್ಕಳನ್ನು ಹೆತ್ತ ಹೆಣ್ಣು ಹೊರಗೆ ಕೆಲಸಕ್ಕೆ ಹೋಗುವುದು ಸಾಧ್ಯವೇ? ಬಡವರ ಮನೆಯ ಹೆಂಗಸರು ಹಿಂದೂ ರಾಷ್ಟ್ರಕ್ಕಾಗಿ ಹೆತ್ತರೆ ಅವರ ಹೊಟ್ಟೆ ತುಂಬಿಸುವ ಹೊಣೆ ಧಾರ್ಮಿಕ ಮುಖಂಡರು ಹೊರುವರೇ? ಅಥವಾ ಸರ್ಕಾರಗಳು ಹೊರುತ್ತವೆಯೇ?

ಗಂಡ ಹೆಂಡತಿ ಇಬ್ಬರೇ ಇರುವ ಸಣ್ಣ ಕುಟುಂಬ ವ್ಯವಸ್ಥೆಯಲ್ಲಿ ಹೆಚ್ಚು ಮಕ್ಕಳಿದ್ದರೆ ಅವುಗಳ ಪಾಲನೆ ಪೋಷಣೆಯ ಹೆಚ್ಚುವರಿ ಹೊರೆ ಮತ್ತೆ ಹೆಣ್ಣಿನ ಮೇಲೆ ಬೀಳುತ್ತದೆ. ಇದರಿಂದಾಗಿ ಕುಟುಂಬದಾಚೆಗೆ ಹೆಣ್ಣಿನ ಅಸ್ಥಿತ್ವಕ್ಕೆ ಬಹಳ ದೊಡ್ಡ ಹಿನ್ನಡೆಯಾಗಲಿದೆ. ಈ ಬಗ್ಗೆ ಧಾರ್ಮಿಕ ಮುಖಂಡರಾಗಲಿ, ರಾಜಕಾರಣಿಗಳಾಗಲಿ ಕಿಂಚಿತ್ತೂ ಯೋಚಿಸದೇ ಬಾಲಿಷ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೆ, ಇಡೀ ಮಹಿಳಾ ಸಮುದಾಯ ಈ ಹೇಳಿಕೆಗಳ ವಿರುದ್ಧ ಸಿಡಿದೇಳುತ್ತಿಲ್ಲ ಎಂಬುದು ಕೂಡ ಅಷ್ಟೇ ನಿರಾಶಾದಾಯಕ ಬೆಳವಣಿಗೆ.

ದೇಶದ ಚುಕ್ಕಾಣಿ ಬಿಜೆಪಿ ಕೈಗೆ ಬರುತ್ತಿದ್ದಂತೆ ಹಿಂದೂ ರಾಷ್ಟ್ರವಾದಿಗಳು ದೇಶದೆಲ್ಲೆಡೆ ಹುಟ್ಟಿಕೊಂಡಿದ್ದರು. ಒಂದು ಕಡೆ ಮುಸ್ಲಿಮರ ಮೇಲೆ ಗುಂಪು ದಾಳಿ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಹಕ್ಕುಗಳ ಮೇಲೆ ದಾಳಿ, ವ್ಯಾಪಾರ ನಿರ್ಬಂಧ, ಹಿಜಾಬ್‌ ನಿಷೇಧ, ಗೋರಕ್ಷಕರ ದಾಳಿಗಳು ಹೀಗೆ ಸದಾ ಮುಸ್ಲಿಮರ ವಿರುದ್ಧ ದ್ವೇಷ ಹರಡುವುದನ್ನೇ ಕಸುಬು ಮಾಡಿಕೊಂಡಿದ್ದರು. ಈ ಮಧ್ಯೆ ಮುಸ್ಲಿಮರು ಹೆಚ್ಚು ಮಕ್ಕಳನ್ನು ಮಾಡಿಕೊಂಡು ಬಹುಸಂಖ್ಯಾತರಾದರೆ ಹಿಂದೂಗಳಿಗೆ ರಕ್ಷಣೆ ಇರಲ್ಲ, ನಮಗಿರೋದು ಒಂದೇ ದೇಶ, ಅದು ಭಾರತ ಎಂಬ ನರೇಷನ್‌ ಹುಟ್ಟು ಹಾಕಿದ್ರು. ಭಾರತೀಯ ಮುಸ್ಲಿಮರಿಗೆ ಪಾಕಿಸ್ತಾನ ಕೊಟ್ಟಾಗಿದೆ. ಇಲ್ಲಿ ಯಾಕೆ ಇದ್ದಾರೆ ಎಂಬ ದ್ವೇಷದ ಪ್ರಶ್ನೆಗಳನ್ನು ಕೇಳಲು ಧಾರ್ಮಿಕ ಮುಖಂಡರು, ಬಾಡಿಗೆ ಭಾಷಣಕಾರರು ಶುರುವಿಟ್ಟುಕೊಂಡರು.

ಭಾರತವನ್ನು ಹಿಂದೂ ರಾಷ್ಟ್ರ ಮಾಡುವ ಸಂಕಲ್ಪ ಮಾಡಿಕೊಂಡ ಆರೆಸ್ಸೆಸ್‌, ಹಿಂದೂ ಮಹಾಸಭಾ, ಭಜರಂಗದಳ ಸೇರಿದಂತೆ ಹತ್ತು ಹಲವು ಸಂಘಟನೆಗಳು ಭಾರತ ಹಿಂದೂ ರಾಷ್ಟ್ರವಾಗಬೇಕಿದ್ದರೆ ಅಧಿಕಾರ ಬಿಜೆಪಿಯ ಕೈಯಲ್ಲಿರಬೇಕು. ಕಾಂಗ್ರೆಸ್‌ ದೇಶವನ್ನು ಇಸ್ಲಾಮೀಕರಣ ಮಾಡಲು ಹೊರಟಿದೆ. ಅವರೆಲ್ಲ ಮುಸ್ಲಿಮರ ಪರ. ಮುಸ್ಲಿಮರೆಲ್ಲ ಭಯೋತ್ಪಾದಕರು ಎಂಬ ಹುಸಿ ಸಿದ್ಧಾಂತ ಹುಟ್ಟು ಹಾಕುತ್ತಾ ಬಂದರು. ಈ ಮಧ್ಯೆ ಹಿಂದೂಗಳೆಲ್ಲ ಹೆಚ್ಚು ಹೆಚ್ಚು ಮಕ್ಕಳನ್ನು ಹೆತ್ತು ಹಿಂದೂ ರಾಷ್ಟ್ರ ನಿರ್ಮಾಣ ಮಾಡಲು ನೆರವಾಗಬೇಕು ಎಂಬ ಸಂದೇಶವನ್ನು ಧರ್ಮ ಸಂಸತ್ತಿನ ಮೂಲಕ ಧಾರ್ಮಿಕ ಮುಖಂಡ ವೇಷಧಾರಿಗಳು ಕೊಡಲು ಶುರು ಮಾಡಿದ್ದರು.

BL28JAYATI CHILD

1980ರ ದಶಕದಲ್ಲಿ ಜನಸಂಖ್ಯಾ ಸ್ಪೋಟ ಎಂಬ ಪದವೇ ಕುಟುಂಬ ಯೋಜನೆಯ ಜಾಗೃತಿ ಮೂಡಿಸುವಂತಿತ್ತು. ಪಠ್ಯಗಳಲ್ಲಿ ಜನಸಂಖ್ಯೆ ಹೆಚ್ಚಳದ ಅಪಾಯಗಳನ್ನು ವಿವರಿಸಲಾಗುತ್ತಿತ್ತು. ಇಂದಿರಾಗಾಂಧಿ ಸರ್ಕಾರ ಜನಸಂಖ್ಯೆ ನಿಯಂತ್ರಣಕ್ಕಾಗಿ “ನಾವಿಬ್ಬರು ನಮಗಿಬ್ಬರು” ಎಂಬ ಅಭಿಯಾನವನ್ನೇ ಶುರು ಮಾಡಿದ್ದರು. ಸರ್ಕಾರಿ ಶಾಲೆ, ಬಸ್‌ ನಿಲ್ದಾಣ, ಆಸ್ಪತ್ರೆಯ ಗೋಡೆಗಳ ಮೇಲೆ ಸಚಿತ್ರ ಬರಹಗಳು ಕಾಣುತ್ತಿದ್ದವು. ಸಂತಾನಹರಣ ಶಸ್ತ್ರಚಿಕಿತ್ಸೆ, ಪ್ರೋತ್ಸಾಹಕ ಯೋಜನೆಗಳನ್ನು ಭಾರತ ಸರ್ಕಾರ ಜಾರಿಗೆ ತಂದಿತ್ತು. ಜನಸಂಖ್ಯಾ ನಿಯಂತ್ರಣ ಯಶಸ್ವಿಯಾಗಿತ್ತು. ಅದರ ಹೊರತಾಗಿಯೂ ಈಗಾಗಲೇ ದೇಶದ ಜನಸಂಖ್ಯೆ 145 ಕೋಟಿ ದಾಟಿದೆ. ಚೀನಾವನ್ನು ಮೀರಿ ಮೊದಲ ಹೆಚ್ಚು ಜನಸಂಖ್ಯೆ ಇರುವ ದೇಶವಾಗಿದೆ. ಬಡತನ, ನಿರುದ್ಯೋಗ ಹೆಚ್ಚಿದೆ. ಮೂಲ ಸೌಕರ್ಯಕ್ಕೆ ದೇಶದ ಆದಾಯವೆಲ್ಲ ವ್ಯಯವಾಗುತ್ತಿದೆ. ದೇಶದ ಎಲ್ಲ ಜನರಿಗೂ ಉತ್ತಮ ಶಿಕ್ಷಣ, ಆರೋಗ್ಯ, ವಸತಿ ಕಲ್ಪಿಸುವುದು ಸಾಧ್ಯವಾಗಿಲ್ಲ. ಎಷ್ಟೇ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸಿದರೂ ಜೀವನಮಟ್ಟ ಉತ್ತಮಗೊಳ್ಳುತ್ತಿಲ್ಲ. ಜನಸಂಖ್ಯೆ ಹೆಚ್ಚಿದಂತೆಲ್ಲ ವಸತಿ ಪ್ರದೇಶಗಳು ವಿಸ್ತಾರಗೊಳ್ಳುತ್ತ ಪರಿಸರ ನಾಶವಾಗುತ್ತಿದೆ. ವಾಹನ, ಕಾರ್ಖಾನೆಗಳ ಹೊಗೆಯಿಂದಾಗಿ ಗ್ಲೋಬಲ್‌ ವಾರ್ಮಿಂಗ್‌ ಅಪಾಯಕಾರಿ ಮಟ್ಟ ತಲುಪಿದೆ. ಅದರಿಂದಾಗುವ ಹವಾಮಾನ ವೈಪರೀತ್ಯದಲ್ಲಿ ಭಾರತ ಐದನೇ ಸ್ಥಾನದಲ್ಲಿದೆ. ವಿಪರೀತ ಮಳೆ ವಿಪರೀತ -ಬರ ಒಟ್ಟೊಟ್ಟಿಗೆ ಬರುತ್ತಿದೆ. ಆದರೆ, ಈ ಸಮಸ್ಯೆಗಳ ಬಗ್ಗೆ ಗಂಭೀರವಾಗಿ ಯೋಚಿಸಬೇಕಾಗಿದ್ದ ಮುಖಂಡರು ಹಿಂದೂ ರಾಷ್ಟ್ರವಾಗಲು ಹೆಚ್ಚು ಮಕ್ಕಳನ್ನು ಹೆರಬೇಕು ಎಂದು ಕರೆಕೊಡುತ್ತಿದ್ದಾರೆ. ಈ ಸ್ವಾಮಿಗಳಿಗೆ ಹೆಂಡತಿ ಮಕ್ಕಳಿಲ್ಲ. ಸಂಸಾರದ ಜವಾಬ್ದಾರಿ ಏನೆಂಬುದು ಗೊತ್ತಿಲ್ಲ. ಸಾರ್ವಜನಿಕರ ಹಣದಲ್ಲಿ ಪುಕ್ಕಟೆಯಾಗಿ ಎಲ್ಲವೂ ಸಿಗುತ್ತಿದೆ. ಯಾವುದೇ ದುಡಿಮೆ, ಶ್ರಮ ಇಲ್ಲದ ಐಷಾರಾಮದ ಬದುಕು ಅವರದ್ದು. ರಾಜಕೀಯ ಹಿತಾಸಕ್ತಿಗೆ ಸರಿಯಾದ ಹೇಳಿಕೆಗಳನ್ನು ಆಗಾಗ ಕೊಡುತ್ತಿರುತ್ತಾರೆ.

ಭಾರತದಲ್ಲಿ ಮುಸ್ಲಿಮರ ಜನಸಂಖ್ಯೆ ಎಷ್ಟು ಗೊತ್ತೇ?

ಬಡತನ, ಅಜ್ಞಾನ, ಅಸಹಾಯಕತೆಯ ಜೊತೆಗೆ ಹೆಚ್ಚು ಮಕ್ಕಳನ್ನು ಹೆರುವುದು ಹಲವು ಸಮುದಾಯಗಳು ಹಿಂದುಳಿಯಲು ಕಾರಣವಾಗಿದೆ. ಅಂಥವರನ್ನು ಮೇಲೆತ್ತುವ ಬಗ್ಗೆ ಧರ್ಮ-ರಾಜಕಾರಣ ಕೆಲಸ ಮಾಡಬೇಕಿದೆ. ಮುಸ್ಲಿಮರ ಜನಸಂಖ್ಯೆ ಹೆಚ್ಚು ಇದೆ ಎಂಬುದು ಹಿಂದುತ್ವವಾದಿಗಳ ಅಪಪ್ರಚಾರ. ಆದರೆ, 2023ರ ಸರ್ಕಾರದ ಅಂಕಿಅಂಶದ ಪ್ರಕಾರ ಅಂದಾಜು 140 ಕೋಟಿ ಜನಸಂಖ್ಯೆಯಲ್ಲಿ ಮುಸ್ಲಿಮರ ಸಂಖ್ಯೆ ಕೇವಲ 20ಕೋಟಿ. ಅಂದ್ರೆ 14.28% ಅಷ್ಟೇ. ಲಕ್ಷದ್ವೀಪ ಮತ್ತು ಜಮ್ಮು ಕಾಶ್ಮೀರದಲ್ಲಿ ಮಾತ್ರ ಅವರು ಬಹುಸಂಖ್ಯಾತರು. ಇಷ್ಟು ಮಾಹಿತಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಬಳಿ ಇದ್ದರೂ, ಪ್ರಧಾನಿ ಮೋದಿಯಾದಿಯಾಗಿ ಎಲ್ಲರೂ ಮುಸ್ಲಿಮರ ಜನಸಂಖ್ಯೆ ಹೆಚ್ಚುತ್ತಿದೆ, ಹಿಂದೂಗಳು ಅಲ್ಪಸಂಖ್ಯಾತರಾದರೆ ಅಪಾಯ ಎಂಬ ಹುಸಿ ಭಯವನ್ನು ಹುಟ್ಟು ಹಾಕುತ್ತಿದ್ದಾರೆ. ಇಂತಹ ಸುಳ್ಳುಗಳನ್ನು ನಂಬಿ ಹೆಚ್ಚು ಮಕ್ಕಳನ್ನು ಹೊಂದುವ ಮನಸ್ಸು ಮಾಡಿದರೆ ಹಿಂದೂಗಳು ತಲೆ ಮೇಲೆ ತಾವೇ ಚಪ್ಪಡಿ ಕಲ್ಲು ಎಳೆದುಕೊಂಡಂತೆಯೇ ಸರಿ.

ಈ ದೇಶಕ್ಕೆ ಸಂವಿಧಾನವೆಂಬ ಭದ್ರ ಅಡಿಪಾಯವಿದೆ. ಹಾಗಾಗಿಯೇ ಸಂಘಪರಿವಾರ, ಹಿಂದೂ ರಾಷ್ಟ್ರವಾದಿಗಳಿಗೆ ಸಂವಿಧಾನ ಎಂಬುದು ನುಂಗಲಾರದ ತುತ್ತು. ಹಾಗಾಗಿಯೇ ಆಗಾಗ ಸಂವಿಧಾನ ಬದಲಿಸುವ ಹೇಳಿಕೆಗಳು ಬರುತ್ತಿವೆ. ನಮಗೆ ಪ್ರತ್ಯೇಕ ಸಂವಿಧಾನ ಬೇಕು ಎಂದು ಉಡುಪಿಯ ಪೇಜಾವರ ಸ್ವಾಮಿ ಹೇಳಿರುವುದು, ಇತ್ತೀಚೆಗೆ ಪ್ರಯಾಗ್‌ರಾಜ್‌ನಲ್ಲಿ ನಡೆದ ಕುಂಭಮೇಳದಲ್ಲಿ ಅಖಂಡ ಹಿಂದೂರಾಷ್ಟ್ರ ಸಂವಿಧಾನ ಸಿದ್ಧಪಡಿಸಿರುವುದಾಗಿ ಸ್ವಾಮಿ ಆನಂದ ಸ್ವರೂಪ್‌ ಮಹಾರಾಜ್‌ ಹೇಳಿಕೆ ನೀಡಿದ್ದು, ಇದೆಲ್ಲ ಹಿಂದೂ ರಾಷ್ಟ್ರವೆಂಬ ಭ್ರಮೆಯನ್ನು ಜನರ ಮನಸ್ಸಿನಲ್ಲಿ ಜೀವಂತವಾಗಿಡುವ ಮೂಲಕ ಹಿಂದೂಗಳ ಪಕ್ಷ ಬಿಜೆಪಿಯೇ ಅಧಿಕಾರದಲ್ಲಿ ಶಾಶ್ವತವಾಗಿರಬೇಕು ಎಂಬ ಷಡ್ಯಂತ್ರದ ಭಾಗ.

akhand hindu constitution 2025 01 62badcb4a627ab32c4261db46d1900fa 3x2 1

ಹೆಣ್ಣುಮಕ್ಕಳನ್ನು ಎರಡನೇ ದರ್ಜೆಯ ಪ್ರಜೆಗಳಂತೆ ಕಾಣುವುದು, ಕೀಳು ಮಟ್ಟದ ಹೇಳಿಕೆಗಳನ್ನು ನೀಡುವುದರಲ್ಲಿ ರಾಜಕಾರಣಿಗಳು ಮತ್ತು ಧಾರ್ಮಿಕ ಮುಖಂಡರಿಗೆ ವ್ಯತ್ಯಾಸವೇ ಇಲ್ಲ. ಹೆಣ್ಣು ಹೊಸಿಲು ದಾಟಿ ಬರಬಾರದು, ಮನೆಗೆಲಸ, ಕುಟುಂಬದ ನಿರ್ವಹಣೆ ಮಾಡುತ್ತ ಗಂಡನ ಸೇವೆ ಮಾಡುತ್ತ ಬಿದ್ದಿರಬೇಕು ಎಂಬ ಮನಸ್ಥಿತಿ ಇಬ್ಬರಲ್ಲೂ ಇದೆ. ರಾಜಕೀಯದಲ್ಲೂ, ಪಕ್ಷದ ವ್ಯವಸ್ಥೆಯೊಳಗೂ ಅಧಿಕಾರ ಹಂಚಿಕೆಯ ವಿಚಾರದಲ್ಲೂ ಹೆಣ್ಣುಮಕ್ಕಳಿಗೆ ಸದಾ ವಂಚನೆ. ಸನಾತನ ಧರ್ಮ ಎಂಬುದು ಜಾತಿ ವ್ಯವಸ್ಥೆ, ಅಸಮಾನತೆಯನ್ನು ಪೋಷಣೆ ಮಾಡುತ್ತ ಬಂದಿರುವ ಜೀವನವಿಧಾನ. ಅದನ್ನೇ ಹಿಂದೂ ಧರ್ಮ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಹಾಗಾಗಿ ತಮ್ಮ ಸ್ವಾರ್ಥಕ್ಕಾಗಿ, ಹಿತಾಸಕ್ತಿಯ ಈಡೇರಿಕೆಗಾಗಿ ಹೆಚ್ಚುಮಕ್ಕಳನ್ನು ಮಾಡಿಕೊಳ್ಳಿ ಎಂದು ಹೇಳುವ ಮೂಲಕ ಹೆಣ್ಣಿನ ಅಸ್ಥಿತ್ವವನ್ನು ನಾಶಮಾಡಲು ಹೊರಟಿದ್ದಾರೆಯೇ ಎಂದು ಕೇಳಬೇಕಿದೆ.

ಒಟ್ಟಿನಲ್ಲಿ ರಾಜಕೀಯ ಮತ್ತು ಧಾರ್ಮಿಕ ಎರಡೂ ಕಾರಣದಿಂದಾಗಿ ಹೆಣ್ಣು ತಾನು ಎಷ್ಟು ಮಕ್ಕಳನ್ನು ಹೆರಬೇಕು ಎಂದು ನಿರ್ಧರಿಸುವ ತನ್ನ ಆಯ್ಕೆಯ ಸ್ವಾತಂತ್ಯವನ್ನೇ ಕಳೆದುಕೊಳ್ಳುವಂತಾಗಿದೆ. ಹೆಚ್ಚು ಮಕ್ಕಳ ಹೇರಿಕೆ ಆಕೆಯ ಹಕ್ಕು, ಅವಕಾಶಗಳನ್ನು ಮೊಟಕುಗೊಳಿಸುವ ಗಂಡಿನ ಅಸ್ತ್ರವಾಗಿಯೂ ಬಳಕೆಯಾದರೆ ಅಚ್ಚರಿಯಿಲ್ಲ. ಹೆಚ್ಚು ಹೆರಲು ಹೇಳುತ್ತಿರುವ ಯಾರೊಬ್ಬರೂ ಸ್ತ್ರೀಯನ್ನು ಪುರುಷನಿಗೆ ಸಮಾನಳು ಎಂಬ ದೃಷ್ಟಿಯಿಂದ ನೋಡಬೇಕು, ಸ್ತ್ರೀಶೋಷಣೆ ನಿಲ್ಲಬೇಕು, ಸಾಮೂಹಿಕ ಅತ್ಯಾಚಾರವೆಂಬ ಭೀಕರ ಕಳಂಕ ನಿವಾರಣೆಯಾಗಬೇಕು ಎಂಬ ಕಾಳಜಿ ವ್ಯಕ್ತಪಡಿಸಿದವರಲ್ಲ.

ಇಡೀ ಜಗತ್ತು ಪುರುಷರ ಅಧಿಕಾರದಾಹ, ಸ್ವಾರ್ಥಕ್ಕೆ ಬಲಿಯಾಗಿದೆ. ಎಷ್ಟೇ ಮುಂದುವರಿದರೂ, ಕ್ರಾಂತಿಗಳಾದರೂ ಮಹಿಳೆಯರನ್ನು ತಮ್ಮ ಸಮಾನವಾಗಿ ಕಾಣುವುದಕ್ಕೆ ಪುರುಷಹಂಕಾರ ಬಿಡುತ್ತಿಲ್ಲ. ಹಿಂದೂ ಧರ್ಮವನ್ನು ಉಳಿಸುವ ಉದ್ದೇಶದಿಂದ ಹೆಚ್ಚು ಮಕ್ಕಳನ್ನು ಹೊಂದಬೇಕು ಎನ್ನುವವರು ತಮ್ಮ ಧರ್ಮದಲ್ಲಿ ಹೆಣ್ಣಿಗೆ ಯಾವ ಸ್ಥಾನ ನೀಡಿದ್ದಾರೆ? ಧರ್ಮದಲ್ಲಿರುವ ಮೌಢ್ಯ, ಆಚರಣೆಯ ಹೆಸರಿನಲ್ಲಿ ನಡೆಯುವ ಸ್ತ್ರೀಶೋಷಣೆಯನ್ನು ತಡೆಯಲು ಸಿದ್ಧರಿದ್ದಾರಾ?

ಈ ಬಗ್ಗೆ ಈ ದಿನ.ಕಾಮ್‌ ಜೊತೆಗೆ ಮಾತನಾಡಿದ ಲೇಖಕಿಯರಾದ ರೂಪ ಹಾಸನ, ಸುಚಿತ್ರಾ ಎಸ್‌ ಎ, ಲತಾಮಾಲ, ಎನ್‌ ಗಾಯತ್ರಿ, ಶೈಲಜಾ ಹಿರೇಮಠ, ರೂಪ ಮತ್ತೀಕೆರೆ, ರೇಣುಕಾ ನಿಡಗುಂದಿ ತಮ್ಮ ಪ್ರತಿರೋಧವನ್ನು ಇಲ್ಲಿ ದಾಖಲಿಸಿದ್ದಾರೆ.

ಹೆರುವ ಆಯ್ಕೆ ಹೆಣ್ಣಿಗೆ ಇರಲಿ : ರೂಪ ಹಾಸನ

ಜಾತಿ, ಧರ್ಮ, ಮತ, ಈ ರಾಜಕೀಯ ವ್ಯವಸ್ಥೆ- ಯಾವುದನ್ನೂ ಸೃಷ್ಟಿಸಿದ್ದು ಹೆಣ್ಣಲ್ಲ. ಅವೆಲ್ಲವೂ ಇಂದು ಅವಧಿ ಮುಗಿದ ಔಷಧಿಗಳಂತೆ- ತೀರಾ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತಾ, ಸಮಾಜದಲ್ಲಿ ಅಶಾಂತಿ, ಅರಾಜಕತೆ, ಕ್ಷೋಭೆ, ಭೀತಿಯನ್ನು ಹೆಚ್ಚಿಸುವ ಸಾಮಾಜಿಕ ಅಧೋಗತಿಯ ಶಿಖರ ಹಂತ ತಲುಪಿವೆ. ಅಪಸವ್ಯಗಳ ಭೀಕರ ದಾಳಿಗಳ ಈ ಹೊತ್ತಿನಲ್ಲಿ, ಸಮಾಜವನ್ನು ಆರೋಗ್ಯಕರವಾಗಿ ಪುನರ್ ಸೃಷ್ಟಿಸುವ ಗುರುತರ ಜವಾಬ್ದಾರಿ ಪ್ರಜ್ಞಾವಂತ ನಾಗರಿಕರೆಲ್ಲರ ಮೇಲಿದೆ. ಈ ದುರಿತ ಸಂದರ್ಭದಲ್ಲಿ ಎಷ್ಟು ಮಕ್ಕಳನ್ನು ಹೆರಬೇಕು ಎಂಬ ನಿರ್ಧಾರವನ್ನು ಹೆಣ್ಣುಮಕ್ಕಳೇ ತೆಗೆದುಕೊಳ್ಳಬೇಕು. ಏಕೆಂದರೆ ಮಕ್ಕಳನ್ನು ಹೊರುವ, ಹೆರುವ, ಉತ್ತಮ ನಾಗರಿಕರಾಗಿ ಬೆಳೆಸುವ ಜವಾಬ್ದಾರಿಯ ಜೊತೆಗೇ ಸಮಾಜವನ್ನು ಘನತೆ, ಸಮತ್ವ ಮತ್ತು ಸಮತೋಲನದ ದಿಕ್ಕಿನೆಡೆಗೆ ನಡೆಸುವ ಹೊಣೆಗಾರಿಕೆಯು ಹೆಣ್ಣು ಸಂತತಿಯ ಮೇಲೇ ಹೆಚ್ಚಾಗಿದೆ. ಅದನ್ನವರು ನಿಭಾಯಿಸಲು ಸಮರ್ಥರಾಗಿದ್ದಾರೆ. ಹೆಣ್ಣಿಗೆ ಉಪದೇಶ, ಬುದ್ಧಿವಾದ, ಹಿತವಚನ, ಆಶೀರ್ವಚನಗಳನ್ನು ನೀಡಲು ಹಾತೊರೆಯುತ್ತಿರುವವರು ಅದನ್ನು ತಮ್ಮಲ್ಲೇ ಇಟ್ಟುಕೊಳ್ಳಿ. ಬಾಯ್ಬಿಟ್ಟು ಅಪಹಾಸ್ಯಕ್ಕೀಡಾಗಬೇಡಿ.

ಗಿಡವೆಂದು ಬಗೆದೆಯೋ ಹೆಣ್ಣುಜನ್ಮದ ಒಡಲ!: ಎನ್ ಗಾಯತ್ರಿ

ಇಂದು ಭಾರತದಲ್ಲಿ ನಡೆಯುತ್ತಿರುವ ಜನಸಂಖ್ಯಾ ಚರ್ಚೆಗಳು ನಾಗರಿಕ ಸಮಾಜಕ್ಕೆ ಮಸಿ ಬಳಿಯುವಂತಹ, ಅಮಾನವೀಯವಾದ ಸಂಗತಿಗಳಾಗಿವೆ. ಇತ್ತೀಚಿನ ದಿನಗಳಲ್ಲಿ ಹಿಂದೂ ಧರ್ಮ ಸಂಸ್ಥಾಪನೆಗಾಗಿ ಹಿಂದೂಗಳ ಜನಸಂಖ್ಯೆಯನ್ನು ಹೆಚ್ಚಿಸಬೇಕು ಎನ್ನುವ ಕಾರಣದಿಂದ ಹೆಚ್ಚುಮಕ್ಕಳನ್ನು ಹೆರಬೇಕು ಎಂದು ಕರೆ ನೀಡಲಾಗುತ್ತಿದೆ. ಉತ್ತರ ದಕ್ಷಿಣ ಭಾರತದ ಜನಸಂಖ್ಯೆಯ ಅಸಮತೋಲನವನ್ನು ಸರಿಪಡಿಸಲು ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಹೆಚ್ಚಿನ ಮಕ್ಕಳನ್ನು ಹೆರಲು ಕರೆಯಿತ್ತಿದ್ದಾರೆ. ಹೀಗೆ ಜಾತಿ, ಭಾಷೆ, ಧರ್ಮ ಆಧಾರಿತ ವಿವಿಧ ಸಮುದಾಯಗಳು ಮತ್ತು ವಿವಿಧ ಪ್ರದೇಶಗಳ ಜನರು ತಮ್ಮ ಜನಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಹೆಚ್ಚಿನ ಸಂತಾನಕ್ಕಾಗಿ ಕರೆ ಕೊಡುತ್ತಿರುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಅಂತಹ ಹಿತಾಸಕ್ತಿಗಳು ಕೋಮುವಾದದ, ಜಾತಿವಾದದ ನೆಲೆಯದ್ದಾಗಿರಲಿ ಇಲ್ಲವೇ ಅಭಿವೃದ್ದಿ ಮತ್ತು ಪ್ರತಿನಿಧೀಕರಣದ ಸಮಸ್ಯೆಯದ್ದಾಗಿರಲಿ ಇಂತಹ ಚಿಂತನೆಗಳು ಏಕಮುಖವಾದದ್ದೇ. ಹೆರುವ ಹೆಣ್ಣಿನ ಅಭಿಪ್ರಾಯವನ್ನು ಸಂಪೂರ್ಣವಾಗಿ ಕಡೆಗಣಿಸಿ ಅವಳ ಸಂತಾನ ಶ್ರಮವನ್ನು ಅಪಮೌಲ್ಯಗೊಳಿಸುವ ಈ ಚಿಂತನೆ ಖಂಡನೀಯ. ಹೆಣ್ಣಿನ ಹೆರುವ/ ಹೆರದಿರುವ ಸ್ವಾತಂತ್ರ್ಯವನ್ನು ಕಸಿಯುತ್ತಿರುವ ಪಿತೃಶಾಹಿ ವ್ಯವಸ್ಥೆಯ ವಿರುದ್ಧದ ಹೋರಾಟವನ್ನು ಮಹಿಳೆಯರೆಲ್ಲರೂ ಒಗ್ಗಟ್ಟಿನಿಂದ ವಿರೋಧಿಸುತ್ತಾ “ನಾವು ಹೆರಿಗೆ ಯಂತ್ರವಲ್ಲ – ನಮ್ಮ ದೇಹ ನಮ್ಮ ಹಕ್ಕು” ಎನ್ನುತ್ತಾ ಗಟ್ಟಿಯಾಗಿ ನಿಲ್ಲಬೇಕಿದೆ.

images 17

ಪ್ರಜಾಪ್ರಭುತ್ವದಿಂದ ಧರ್ಮಪ್ರಭುತ್ವದೆಡೆಗೆ ಕೊಂಡೊಯ್ಯುವ ಹುನ್ನಾರ: ಶೈಲಜಾ ಹಿರೇಮಠ

ಧಾರ್ಮಿಕ ಮುಖಂಡರ ಹೇಳಿಕೆ ಮೂಲಭೂತವಾದದೊಂದಿಗೆ, ಮತ್ತೆ ದೇಶವನ್ನು ಧರ್ಮಪ್ರಭುತ್ವದ ಕಡೆಗೆ ತೆಗೆದುಕೊಂಡುವ ಹುನ್ನಾರದ ಪ್ರಮುಖ ಅಸ್ತ್ರವಾಗಿದೆ.‌ ಹಿಂದೂಗಳ ಜನಸಂಖ್ಯೆ ಕಡಿಮೆಯಾಗಿ, ಮುಸ್ಲಿಂ ಜನಸಂಖ್ಯೆ ಏರಿಕೆಯಿಂದ ಈ ದೇಶ ಮುಸ್ಲಿಂ ದೇಶವಾಗವಾಗುವುದೆಂಬ ವಿಷಬೀಜಕ್ಕೆ ಈ ಹೇಳಿಕೆ ನೀರು ಮತ್ತು ಗೊಬ್ಬರ ಒದಗಿಸಿದಂತೆ.

ಆದರೆ, ಲೋಕಸಭಾ ಕ್ಷೇತ್ರ ವಿಂಗಡನೆಯಿಂದ ದಕ್ಷಿಣಭಾರತದ ಎಂಪಿ ಸ್ಥಾನಗಳಿಗೆ ಜನಸಂಖ್ಯೆ ಹೆಚ್ಚಳ ಮಾಡುವುದೇ ಅಂತಿಮ ಮಾರ್ಗ ಅನ್ನುವುದು ಬಲಹೀನತೆಯ ಜೊತೆಗೆ ದೇಶದ ಅಭಿವೃದ್ಧಿಗೆ ಮಾರಕ. ಇದುವೇ ನಿಜವಾದಲ್ಲಿ, ಈಗ ದೇಶದಲ್ಲಿ ಅಲ್ಪಸಂಖ್ಯಾತರ ಮೇಲಾಗುತ್ತಿರುವ ದೌರ್ಜನ್ಯದ ಮಿತಿಮೀರಿ, ಮನುವಾದಿಗಳ ಆಶಯಕ್ಕೆ ರೆಡ್ ಕಾರ್ಪೆಟ್ ಹಾಸಿ ಮೆರೆಸಿದಂತಾಗುತ್ತದೆ. ಅಲ್ಲದೇ ದೇಶದ ಅಭಿವೃದ್ಧಿಗೂ ಮಾರಕ. ಪರ್ಯಾಯವಾಗಿ ದಕ್ಷಿಣ ರಾಜ್ಯಗಳು ಪಕ್ಷಾತೀತವಾಗಿ ಕಾನೂನಾತ್ಮಕ ಹಾಗೂ ಜನಾಂದೋಲನ ಸೃಷ್ಟಿಸಿ ಕೇಂದ್ರ ಸರ್ಕಾರವನ್ನು ಮಣಿಸಬೇಕು.‌ ಜನಾಂದೋಲನದಿಂದ ಅಸಾಧ್ಯವಾಗದ್ದು ಯಾವುದೂ ಇಲ್ಲ. ಇಬ್ಬರ ಹೇಳಿಕೆಯಲ್ಲಿ ಮಹಿಳೆಯರನ್ನು ಮಕ್ಕಳು ಹೆರುವ ಯಂತ್ರಗಳು‌ ಎಂದು ಭಾವಿಸುವ ಪುರುಷಾಹಂಕಾರದ ಮನಸ್ಥಿತಿಯನ್ನು ಎತ್ತಿಹಿಡಿಯುತ್ತವೆ.‌

ಒಟ್ಟು ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರಿಗೆ ಸಮಾನ ಅವಕಾಶ ಮೊದಲು ನೀಡಿ: ರೂಪ ಮತ್ತೀಕೆರೆ

ಪ್ರತಿಯೊಬ್ಬ ಪುರುಷ ರಾಜಕಾರಣಿಗೂ, ಪುರುಷ ಪ್ರಧಾನ ಮನಸ್ಥಿತಿಯಿರುವ ಎಲ್ಲರೂ ತಮ್ಮಿಚ್ಚೆ ಬಂದಂತೆ ಮಕ್ಕಳನ್ನು ಹೆರಬೇಕು ಎಂದು ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಇದೊಂದು ರೀತಿಯ ಮಹಿಳಾ ದೌರ್ಜನ್ಯ. ಇದರ ವಿರುದ್ಧ ಪ್ರತಿ ಮಹಿಳೆಯೂ ತಮ್ಮ ಪ್ರತಿರೋಧ ದಾಖಲಿಸಬೇಕು. ಹೆರುವುದನ್ನು, ಎಷ್ಟು ಹೆರಬೇಕು ಎಂಬುದನ್ನು ಮಹಿಳೆ ತಾನು ನಿರ್ಧರಿಸಬೇಕೇ ವಿನಃ ಅದನ್ನು ಯಾರೋ ತಮಗಿಷ್ಟ ಬಂದಂತೆ ನಿರ್ಧರಿಸುವುದಲ್ಲ.

ದೇಶದ ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರಿಗೆ ಮೊದಲು ಉನ್ನತ ಶಿಕ್ಷಣಕ್ಕೆ, ಉದ್ಯೋಗಕ್ಕೆ ಆರೋಗ್ಯ ಸೌಕರ್ಯಗಳು, ಸಮಾನ ರಾಜಕೀಯ ಪ್ರಾತಿನಿಧ್ಯ, ಸಮಾನ ಅವಕಾಶ, ಸಮಾನ ವೇತನ, ಮಹಿಳಾ ಹಕ್ಕುಗಳಿಗೆ ಆದ್ಯತೆ ನೀಡಿ. ಇವುಗಳನ್ನು ನೀಡಿದ ಮೇಲೂ ಯಾವ ರಾಜಕಾರಣಿ, ಯಾವುದೇ ಧರ್ಮ, ಸಮುದಾಯದ ಸ್ವಾಮೀಜಿ ಮತ್ತು ಮತ್ಯಾರಿಗೋ ಹೆಣ್ಣು ಎಷ್ಟು ಹೆರಬೇಕೆಂದು ಹೇಳುವಂತಿಲ್ಲ.

ಮಹಿಳೆಯರನ್ನು ರಾಜಕೀಯ ಟೂಲ್‌ ಆಗಿ ಬಳಸಲಾಗುತ್ತಿದೆ: ಸುಚಿತ್ರಾ ಎಸ್‌ಎ

ಮಹಿಳೆಯರು ತಮ್ಮ ಜೀವನ, ಕುಟುಂಬ ಮತ್ತು ಭವಿಷ್ಯದ ಕುರಿತು ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಕ್ಕನ್ನು ಹೊಂದಿದ್ದಾರೆ. “ಹಿಂದೂ ಜನಸಂಖ್ಯೆ ಹೆಚ್ಚಬೇಕಾಗಿದೆ” ಎಂಬುದು ಅಥವಾ “ಲೋಕಸಭಾ ಕ್ಷೇತ್ರ ಪುನರ್ವಿಂಗಡಣೆ ಆಗಲಿದ್ದು, ನಮ್ಮ ರಾಜ್ಯದ ಹಿತಾಸಕ್ತಿಯನ್ನು ಕಾಯ್ದುಕೊಳ್ಳಲು ಮಹಿಳೆಯರು ಹೆಚ್ಚು ಮಕ್ಕಳನ್ನು ಹೆರಬೇಕು” ಎಂಬಂತಹ ಹೇಳಿಕೆಗಳು ಮಹಿಳೆಯರ ಸ್ವಾತಂತ್ರ್ಯ ಮತ್ತು ಅವರ ಶೋಷಣೆಗೆ ದಾರಿ ಮಾಡಿಕೊಡುತ್ತವೆ. ಬರೇ ಮಹಿಳೆ ಮಾತ್ರವಲ್ಲ, ಪ್ರತಿಯೊಬ್ಬ ಪ್ರಜೆಯ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಇದು ಧಕ್ಕೆ ಉಂಟು ಮಾಡುತ್ತದೆ. ಮಕ್ಕಳನ್ನು ಹೆತ್ತರೆ ಜವಾಬ್ದಾರಿ ಮುಗಿಯಲ್ಲ, ಬದಲಿಗೆ ಅವರಿಗೆ ಉತ್ತಮ ಶಿಕ್ಷಣ, ಆರೈಕೆ, ಬೆಳವಣಿಗೆ, ಸವಲತ್ತುಗಳನ್ನು ನೀಡುವದರ ಕಡೆಗೆ ಕೂಡ ಗಮನಕೊಡಬೇಕು.

ಹಿಂದೂ ಧರ್ಮಕ್ಕಾಗಿ ಅಥವಾ ರಾಜಕೀಯ ನೀತಿಗಾಗಿ ಮಹಿಳೆಯರನ್ನು ರಾಜಕೀಯ ಉಪಕರಣ (political tool) ಆಗಿ ಬಳಸುವುದು ಮಹಿಳೆಯರ ಸ್ವಾವಲಂಬನೆ, ಶಿಕ್ಷಣ, ಆರೋಗ್ಯ ಮತ್ತು ಜೀವನದ ಗುಣಮಟ್ಟವನ್ನು ಹಿಂದುಳಿಸುತ್ತದೆ. ಯಾವ ಧರ್ಮ, ಸಮಾಜ ಅಥವಾ ರಾಷ್ಟ್ರವೂ ಸುಬಲವಾಗುವುದು ಜನಸಂಖ್ಯಾ ಹೆಚ್ಚಳದಿಂದಲ್ಲ, ಬದಲಿಗೆ ಆ ಜನಸಂಖ್ಯೆಗೆ ಗುಣಮಟ್ಟದ ಶಿಕ್ಷಣ, ಆರೋಗ್ಯ, ಉದ್ಯೋಗ ಮತ್ತು ಮೂಲಸೌಕರ್ಯ ಒದಗಿಸುವ ಸಾಮರ್ಥ್ಯದಿಂದ.

ಸ್ಟಾಲಿನ್ ಅವರು ಇಂತಹ ಹೇಳಿಕೆಯನ್ನು ರಾಜಕೀಯ ದೃಷ್ಟಿಯಿಂದ ಅಥವಾ ಲೋಕಸಭಾ ಕ್ಷೇತ್ರ ಪುನರ್ವಿಂಗಡಣೆಯ ಆತಂಕದ ನೆಲೆಯಲ್ಲಿ ನೀಡಿರಬಹುದು. ಆದರೆ, ಮಹಿಳೆಯರ ಸ್ವತಂತ್ರ ಇಚ್ಛೆಗೆ ವಿರುದ್ಧವಾಗಿ, ಜನಸಂಖ್ಯಾ ಏರಿಕೆಯನ್ನು ಪರಿಹಾರವಾಗಿ ಸೂಚಿಸುವುದು ಲೋಕತಂತ್ರ ವ್ಯವಸ್ಥೆಗೆ ಸೂಕ್ತವಾದ ಮಾರ್ಗವಲ್ಲ. ಇಂದು ದಕ್ಷಿಣದ ಹಲವಾರು ರಾಜ್ಯಗಳು ಜನಸಂಖ್ಯಾ ನಿಯಂತ್ರಣ ನೀತಿಗಳನ್ನು ಸಮರ್ಪಕವಾಗಿ ಜಾರಿಗೆ ತಂದು ಅಭಿವೃದ್ಧಿ ಸಾಧಿಸಿದ್ದರೆ, ಅದು ಉತ್ತಮ ಶಿಕ್ಷಣ ವ್ಯವಸ್ಥೆಯಿಂದ ಎಂಬುದು ಸ್ಪಷ್ಟ. ಲೋಕಸಭಾ ಕ್ಷೇತ್ರ ಪುನರ್ವಿಂಗಡಣೆಯಿಂದ ಈ ರಾಜ್ಯಗಳು ತಮ್ಮ ಕ್ಷೇತ್ರಗಳನ್ನು ಕಳೆದುಕೊಳ್ಳುವ ಆತಂಕವನ್ನು ನಿವಾರಿಸಲು, ಮಹಿಳೆಯರನ್ನು ರಾಜಕೀಯ ಉಪಕರಣಗಳಾಗಿ ಬಳಸುವುದು ಅನುಚಿತ. ಇದರ ಬದಲು, ಜನಸಂಖ್ಯಾ ನಿಯಂತ್ರಣವಿಲ್ಲದ ರಾಜ್ಯಗಳು ಶೈಕ್ಷಣಿಕ ಮತ್ತು ಆರ್ಥಿಕ ಬೆಳವಣಿಗೆಯತ್ತ ಗಮನಹರಿಸುವಂತೆ ಒತ್ತಡ ತರಬೇಕು.

ಇದೇ ಸಂದರ್ಭದಲ್ಲಿಯೇ, ಲೋಕಸಭಾ ಕ್ಷೇತ್ರ ಪುನರ್ವಿಂಗಡನೆ ಯೋಜನೆಯನ್ನು ಒಕ್ಕೂಟ ಸರ್ಕಾರ ಸಂಪೂರ್ಣವಾಗಿ ಕೈಬಿಡಬೇಕು. ಇದು ದೇಶದ ಫೆಡರಲ್ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವುದರ ಜೊತೆಗೆ, ಎಲ್ಲಾ ರಾಜ್ಯಗಳಿಗೆ ನ್ಯಾಯೋಚಿತ ಹಕ್ಕು ಮತ್ತು ಪ್ರತಿನಿಧಿತ್ವವನ್ನು ಸುಸ್ಥಿರಗೊಳಿಸುವತ್ತ ದಾರಿ ಮಾಡಿಕೊಡುತ್ತದೆ.

ಸಮಾಜದ, ಧರ್ಮದ ಅಥವಾ ದೇಶದ ಭವಿಷ್ಯವನ್ನು ಮಹಿಳೆಯರ ಮೇಲೆ ಹೆರುವ ಒತ್ತಡವನ್ನು ಹಾಕುವ ಮೂಲಕ ನಿರ್ಧರಿಸಲಾಗದು. ಮಹಿಳೆಯರು ಈ ರೀತಿಯ ಹೇಳಿಕೆಗಳನ್ನು ತೀರಾ ಜಾಗೃತಿಯಿಂದ, ತಮ್ಮ ಹಕ್ಕುಗಳ ಮತ್ತು ಸ್ವಾಯತ್ತತ್ವದ ದೃಷ್ಟಿಕೋನದಿಂದ ಪರಿಗಣಿಸಬೇಕು. ದೀರ್ಘಕಾಲಿಕವಾಗಿ, ಮಹಿಳೆಯರ ಶಿಕ್ಷಣ, ಆರೋಗ್ಯ ಮತ್ತು ಆರ್ಥಿಕ ಸ್ವಾವಲಂಬನೆಗೆ ಒತ್ತು ನೀಡುವುದು ದೇಶದ ನಿಜವಾದ ಬೆಳವಣಿಗೆಗೆ ದಾರಿ ಮಾಡಿಕೊಡುತ್ತದೆ.

ಅರಿವುಗೇಡಿ ಹೇಳಿಕೆ : ಲತಾಮಾಲ

ರಾಜಕೀಯ ನಾಯಕರಿಗೆ ತಮ್ಮ ಅಧಿಕಾರ ಮುಂದುವರಿಕೆಗೆ ಏನನ್ನು ಬೇಕಾದರೂ ಹೇಳಲು ಹಿಂಜರಿಯುವುದಿಲ್ಲ. ಮಕ್ಕಳನ್ನು ಹೆತ್ತು, ಹೊತ್ತು ಬೆಳೆಸುವ ಮಹಿಳೆಯರ ಕಷ್ಟಗಳು ಅವರಿಗೆ ಅರ್ಥವಾಗುವುದಿಲ್ಲ. ಅದಕ್ಕೆ ಅವರು ಇಂತಹ ದೂರದೃಷ್ಟಿ ಇಲ್ಲದ ಹೇಳಿಕೆ ನೀಡುತ್ತಾರೆ ಮತ್ತು ಜನಸಂಖ್ಯೆ ಹೆಚ್ಚಳದ ಪರಿಣಾಮಗಳ ಅರಿವಿಲ್ಲದ ಕಾರಣ ಇಂತಹ ಕ್ಷುಲ್ಲಕ ಹೇಳಿಕೆ ನೀಡುತ್ತಾರೆ.

ಇವರಿಗೆ  ಸೀಟುಗಳದ್ದೇ ಚಿಂತೆ : ರೇಣುಕಾ ನಿಡಗುಂದಿ

ಈಗಾಗಲೇ ಭಾರತದ ಜನಸಂಖ್ಯೆ ಚೀನಾವನ್ನು ಹಿಂದಿಕ್ಕಿ 144 ಕೋಟಿಗೆ ತಲುಪಿದೆ. ಇದು 2054ರ ಹೊತ್ತಿಗೆ 169 ಕೋಟಿಗೆ ಏರುವ ಸಾಧ್ಯತೆ ಇದೆಯೆಂದು ವಿಶ್ವಸಂಸ್ಥೆಯ ವರದಿಯೊಂದು ಹೇಳುತ್ತಿದೆ. ಹೀಗಿರುವಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ, ತಮಿಳುನಾಡಿನ ಮುಖ್ಯಮಂತ್ರಿಗಳು ಹೆಚ್ಚು ಮಕ್ಕಳನ್ನು ಮಾಡಿಕೊಳ್ಳಿ ಎಂದು ಜನರಲ್ಲಿ ಮೊರೆಯಿಡುತ್ತಿದ್ದಾರೆ. ಇವರ ರಾಜಕಾರಣಕ್ಕಾಗಿ ಜನ ಮಕ್ಕಳನ್ನು ಮಾಡಿಕೊಳ್ಳಬೇಕು. ಮೋದಿ ಆಡಳಿತದ ಕೇಂದ್ರ ಜನಸಂಖ್ಯೆ ಆಧಾರದ ಮೇಲೆ ಲೋಕಸಭಾ ಸೀಟುಗಳ ಹಂಚಿಕೆ ಮಾಡುವುದಾಗಿ ಹೇಳಿದ್ದರಿಂದ ಇವರಿಗೆಲ್ಲ ಆತಂಕ ಕಾಡುತ್ತಿದೆ. ಹೆಚ್ಚು‌ಮಕ್ಕಳನ್ನು ಮಾಡಿಕೊಳ್ಳುವವರಿಗೆ ಚಂದ್ರಬಾಬು ನಾಯ್ಡು ಸರ್ಕಾರ ಸಹಾಯ ಧನ ಹಾಗೂ ಪ್ರೋತ್ಸಾಹ ಧನವನ್ನೂ ಕೊಡುತ್ತದಂತೆ!.

ಈಗ ಇರುವ ಮಕ್ಕಳಿಗೆ ಸರಿಯಾದ ಶಿಕ್ಷಣ ಸಿಗುತ್ತಿದೆಯೇ? ರಾಜ್ಯದಲ್ಲಿ ನೂರಾರು ಗ್ಯಾರಂಟಿ ಯೋಜನೆಗಳು ಜಾರಿಯಾಗುತ್ತಿರುತ್ತವೆ. ಮಕ್ಕಳಿಗೆ ಮಾಧ್ಯಮಿಕ ಹಂತದವರೆಗೂ ಉಚಿತ ಮತ್ತು ಕಡ್ಡಾಯ  ಶಿಕ್ಷಣ ಮಾಡ್ತೀರಾದ್ರೆ ಮಕ್ಕಳನ್ನು ಹೆರುತ್ತೇವೆ ಎನ್ನುವವರು ಇದ್ದಾರೆಯೇ? ಅದೆಷ್ಟು ಗರ್ಭಿಣಿಯರು ಕುಪೋಷಣೆಯಿಂದ ಬಳಲುತ್ತಿದ್ದಾರೆ? ಅವರ ಬಗ್ಗೆ ಏನು ಮಾಡ್ತೀರಾ? ಜನ ಹೆಚ್ಚು ಮಕ್ಕಳನ್ನು ಮಾಡಿಕೊಂಡ್ರೆ ನಿಮಗೇನು ಲಾಭ ಅಂತ ಗೊತ್ತಿದೆ. ಆದರೆ, ನಿಮ್ಮ‌ ಮಾತು ಕೇಳಿಕೊಂಡು ಮಕ್ಕಳನ್ನು ಹುಟ್ಟಿಸಿದವರಿಗೆ ನೀವೇನು ಸೌಭಾಗ್ಯಗಳನ್ನು ನೀಡಲಿದ್ದೀರಿ? ಈ ದಕ್ಷಿಣ ರಾಜ್ಯಗಳ ನಿರುದ್ಯೋಗಿ ಯುವಕರಿಗೆ ಎಷ್ಟು ಉದ್ಯೋಗಗಳನ್ನು ಸೃಷ್ಟಿಸಿದ್ದೀರಿ? ಈಗ ಈ ನಿಮ್ಮ ಅಭಿಮಾನಿ ತರುಣರೆಲ್ಲ ತಡಮಾಡದೇ ಮದುವೆಯಾಗಿ ತಡಮಾಡದೇ ಮಕ್ಕಳನ್ನು ಹೆರುವುದರ ಬಗ್ಗೆ ಕಾರ್ಯತತ್ಪರರಾಗುತ್ತಾರೆಂಬುದರಲ್ಲಿ ಕಿಂಚಿತ್ತೂ ಸಂಶಯವಿಲ್ಲ. ಯಾಕೆಂದರೆ ಇತ್ತೀಚೆಗೆ ಆರೆಸ್ಸೆಸ್‌ ಮುಖ್ಯಸ್ಥ ಮೋಹನ ಭಾಗವತರೂ, “ಹಿಂದೂ ದಂಪತಿ ಕನಿಷ್ಠ ಮೂರು ಮಕ್ಕಳನ್ನಾದರೂ ಹೊಂದಬೇಕು. ಎರಡು ಅಥವಾ ಅದಕ್ಕಿಂತ ಕಡಿಮೆ ಮಕ್ಕಳನ್ನು ಹೊಂದುವುದರಿಂದ ಭವಿಷ್ಯದಲ್ಲಿ ಸಮಾಜವು ತಾನಾಗಿಯೇ ನಾಶವಾಗುತ್ತದೆ” ಎಂದು ಎಚ್ಚರಿಕೆ ನೀಡಿದ್ದಾರೆ. ಇಂತಹ ಎಚ್ಚರಿಕೆ ಆಗಾಗ ನೀಡುತ್ತಲೇ ಇರುತ್ತಾರೆ. ಅವರ ಮಾತನ್ನು‌ ಮೀರಲುಂಟೇ ಭಕ್ತರು! ಕೇಂದ್ರ ಸರ್ಕಾರವೂ ಲೋಕಸಭಾ ಕ್ಷೇತ್ರ ಪುನರ್‌ ವಿಂಗಡನೆಗೆ ಜನಸಂಖ್ಯೆಯನ್ನು ಮಾನದಂಡವನ್ನಾಗಿಸಿದೆ. ಮಹಿಳೆಯೆಲ್ಲ ಸೇರಿ ನಾವು ಹೆರುವ ಯಂತ್ರಗಳಲ್ಲ ನಾವೂ ಮನುಷ್ಯರು. ನಿಮಗೆ ಬೇಕಾದರೆ ನೀವೇ ಹೆತ್ತುಕೊಳ್ಳಿ ಅಂದ್ರೆ ಏನು ಮಾಡ್ತೀರಿ? ಇದಕ್ಕೊಂದು ದೊಡ್ಡ ಆಂದೋಲನವೇ ಆಗಬೇಕು.

07e0d3e8 3f8a 4b81 8fd5 641335b91d85
ಹೇಮಾ ವೆಂಕಟ್‌
+ posts

ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು.
ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ.
ಮೂರು ಪುಸ್ತಕಗಳು ಪ್ರಕಟಗೊಂಡಿವೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಹೇಮಾ ವೆಂಕಟ್‌
ಹೇಮಾ ವೆಂಕಟ್‌
ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು. ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ. ಮೂರು ಪುಸ್ತಕಗಳು ಪ್ರಕಟಗೊಂಡಿವೆ.

1 COMMENT

  1. ಹೊರುವ, ಹೆರುವ ನೋವಿನ ಹೊರಗಿರುವ ಮಂದಿ ಹೇಳುವ ಮಾತುಗಳಿಗೆ ಅರ್ಥವೇ ಇಲ್ಲ. ಹೆರದವರೆತ್ತ ಬಲ್ಲರು ಹೆರುವ ನೋವ. ಇಂಥವರನ್ನು ಹೆರಿಗೆ ಆಸ್ಪತ್ರೆಯ ಕೆಲಸಕ್ಕೆ ನೇಮಿಸಬೇಕು. ತಂದೆ ತನವನ್ನು ಉಳಿಸಿಕೊಂಡು ಮಕ್ಕಳನ್ನು ಬೆಳೆಸುವ ಜವಾಬ್ದಾರಿ ಹೊರಲು ಸಿದ್ಧರಿದ್ದೀರಾ ಎಂದು ಕೇಳಬೇಕು. ತಮ್ಮ ಮಕ್ಕಳನ್ನು ಬೆಳೆಸಿದವರು ಯಾರೂ ಹೀಗೆ ಹೇಳಲಾರರು. ಇನ್ನು ಕುಟುಂಬ ಜೀವನ ಇಲ್ಲದವರಿಗೆ ಬಾಯಿಚಪಲ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X