- ಬಿಬಿಎಂಪಿಯಿಂದ ಅನುದಾನ ಮಂಜೂರು ಮಾಡಿ ಆದೇಶ
- ಕುಡಿಯುವ ನೀರಿಗೆ ₹7.63 ಕೋಟಿ ಅನುದಾನ ಮಂಜೂರು
ರಾಜ್ಯ ರಾಜಕೀಯದಲ್ಲಿ ‘ಆಪರೇಷನ್ ಹಸ್ತ’ದ ಚರ್ಚೆಯ ಬೆನ್ನಲ್ಲೇ ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್ ಅವರ ಕ್ಷೇತ್ರಕ್ಕೆ ಸರ್ಕಾರ ₹7.63 ಕೋಟಿ ಅನುದಾನ ಮಂಜೂರು ಮಾಡಿದೆ.
ಎಸ್.ಟಿ ಸೋಮಶೇಖರ್ ಶಾಸಕರಾಗಿರುವ ಯಶವಂತಪುರ ವಿಧಾನಸಭಾ ಕ್ಷೇತ್ರಕ್ಕೆ ₹7.63 ಕೋಟಿ ರೂ. ಅನುದಾನ ನೀಡಲಾಗಿದೆ. ಆ ಮೂಲಕ ಕಾಂಗ್ರೆಸ್ ಸೇರುವ ಅನುಮಾನ ಮತ್ತಷ್ಟು ಬಲ ನೀಡಿದೆ. ಇದು ಬಿಜೆಪಿ ಪಾಳಯದಲ್ಲೂ ಚರ್ಚೆಗೆ ಎಡೆಮಾಡಿಕೊಟ್ಟಿದೆ.
ಹೇರೋಹಳ್ಳಿ ಹಾಗೂ ಕೆಂಗೇರಿ ಭಾಗಕ್ಕೆ ಕುಡಿಯುವ ನೀರಿಗಾಗಿ ಅನುದಾನ ನೀಡಲಾಗಿದೆ. ₹1.63 ಕೋಟಿ ರೂ. ನೀರು ಪೂರೈಸುವ ಟ್ಯಾಂಕರ್‌ಗಳಿಗೆ ಮೀಸಲಿಡಲಾಗಿದೆ. ಹೊಸದಾಗಿ ಬೋರ್‌ವೆಲ್ ಕೊರೆಸಲು ₹4 ಕೋಟಿ ಹಾಗೂ ನಿರ್ವಹಣೆ ಮಾಡಲು ₹2 ಕೋಟಿ ಅನುದಾನ ಮೀಸಲಿಡಲಾಗಿದೆ ಎಂದು ತಿಳಿದುಬಂದಿದೆ.
ಅನುದಾನ ಬಿಡುಗಡೆ ಮಾಡುವ ಮೂಲಕ ಎಸ್.ಟಿ ಸೋಮಶೇಖರ್ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನವನ್ನು ಡಿ.ಕೆ ಶಿವಕುಮಾರ್ ಮಾಡಿದ್ದಾರೆ ಎಂದು ವರದಿಯಾಗಿದೆ.
ನಿನ್ನೆಯಷ್ಟೆ ಸೋಮಶೇಖರ್ ಅವರ ನೂರಾರು ಬೆಂಬಲಿಗರು, ಮಾಜಿ ಕಾರ್ಪೊರೇಟರ್‌ಗಳು ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಸಮ್ಮುಖದಲ್ಲೇ ಕಾಂಗ್ರೆಸ್ ಸೇರಿದ್ದರು.