- ‘ಅಸಂಖ್ಯ ತಾಯಂದಿರಲ್ಲಿ ನೆಮ್ಮದಿಯ ನಿಟ್ಟುಸಿರಿಗೆ ಕಾರಣವಾದ ಯೋಜನೆ’
- ‘ಬಡತಾಯಂದಿರ ಬದುಕಿನ ಬವಣೆ ಯೋಜನೆಯ ಹಿಂದಿನ ಪ್ರೇರಕ ಶಕ್ತಿ’
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಮಹಿಳೆಯರಿಗೆ ರಾಜ್ಯಾದ್ಯಂತ ಉಚಿತ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆ 100 ದಿನ ಪೂರೈಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ (ಟ್ವಿಟ್ಟರ್)ನಲ್ಲಿ ಪ್ರತಿಕ್ರಿಯಿಸಿರುವ ಅವರು, “ಶಕ್ತಿ ಯೋಜನೆ ಜಾರಿಗೊಂಡ ಈ ನೂರು ದಿನಗಳಲ್ಲಿ ಅಸಂಖ್ಯ ತಾಯಂದಿರಲ್ಲಿ ನೆಮ್ಮದಿಯ ನಿಟ್ಟುಸಿರಿಗೆ, ಲಕ್ಷಾಂತರ ವಿದ್ಯಾರ್ಥಿನಿಯರ ಮುಖದಲ್ಲಿ ಮಂದಹಾಸಕ್ಕೆ ಕಾರಣವಾಗಿದೆ ಎಂಬುದು ಯೋಜನೆ ಜಾರಿಗೆ ಕೊಟ್ಟ ನನಗೆ ಅತ್ಯಂತ ಖುಷಿಯ ಸಂಗತಿ” ಎಂದು ತಿಳಿಸಿದ್ದಾರೆ.
“ಉಜ್ವಲ ಭವಿಷ್ಯದ ಕನಸು ಕಟ್ಟಿಕೊಂಡು ಶಾಲೆಗೆ ಹೋಗುವ ಪ್ರತಿ ಹೆಣ್ಣುಮಗಳು, ಕುಟುಂಬದ ಹೊಣೆಯನ್ನು ತನ್ನ ಹೆಗಲ ಮೇಲೆ ಹೊತ್ತು ನಿತ್ಯ ದುಡಿಮೆಗೆ ತೆರಳುವ ನಾಡಿನ ಅಕ್ಕ ತಂಗಿಯರು, ವೈದ್ಯಕೀಯ ಚಿಕಿತ್ಸೆಗಾಗಿ ಪ್ರಯಾಣ ಬೆಳೆಸುವ ಬಡತಾಯಂದಿರ ಬದುಕಿನ ಬವಣೆ ನಮ್ಮ ಶಕ್ತಿ ಯೋಜನೆಯ ಹಿಂದಿರುವ ಪ್ರೇರಕ ಶಕ್ತಿ” ಎಂದು ಹೇಳಿದ್ದಾರೆ.
“ಹೆಣ್ಣುಮಕ್ಕಳು ನಾಲ್ಕು ಗೋಡೆಗಳಿಗೆ ಸೀಮಿತವಾಗದೆ ಅವಕಾಶಗಳ ಜಗತ್ತಿನಲ್ಲಿ ತಮ್ಮನ್ನು ತೊಡಗಿಸಿಕೊಂಡು, ತಾವು ಸದೃಢರಾಗುವ ಜೊತೆಗೆ ಬಲಿಷ್ಠ ಸಮಾಜದ ಆಧಾರ ಸ್ತಂಭಗಳಾಗಬೇಕು ಎಂಬ ನಮ್ಮ ಉದ್ದೇಶವನ್ನು ಈಡೇರಿಸುವ ದಿಕ್ಕಿನಲ್ಲಿ ಶಕ್ತಿ ಯೋಜನೆ ಮುಂದಡಿಯಿಡುತ್ತಿದೆ” ಎಂದಿದ್ದಾರೆ.