- ಖಾಲಿ ಇರುವ ಸುಮಾರು ಎರಡು ಸಾವಿರ ಹುದ್ದೆ ಭರ್ತಿಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ
- ಬೀಜ ನಿಗಮದಲ್ಲಿ ವಿವಿಧ ಹುದ್ದೆಗೆ ನೇಮಕಗೊಂಡವರಿಗೆ ಆದೇಶ ಪ್ರತಿ ನೀಡಿದ ಸಚಿವರು
ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಸುಮಾರು ಎರಡು ಸಾವಿರ ಹುದ್ದೆ ಭರ್ತಿಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮೊದಲ ಹಂತಗಳಲ್ಲಿ ಕನಿಷ್ಠ 1,000 ಹುದ್ದೆ ಭರ್ತಿ ಮಾಡಲಾಗುವುದು ಎಂದು ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ತಿಳಿಸಿದರು.
ವಿಧಾನಸೌಧ ಸಮಿತಿ ಕೊಠಡಿಯಲ್ಲಿ ಕರ್ನಾಟಕ ರಾಜ್ಯ ಬೀಜ ನಿಗಮದಲ್ಲಿ ವಿವಿಧ ಹುದ್ದೆಗೆ ನೇಮಕಗೊಂಡವರಿಗೆ ನೇಮಕಾತಿ ಆದೇಶ ನೀಡಿ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
“ಹಿಂದಿನ ಸರ್ಕಾರದಲ್ಲಿ ನೇಮಕಾತಿ ನಡೆಯಲಿಲ್ಲ. ರಾಜ್ಯದಲ್ಲಿ ಹೊಸ ಸರ್ಕಾರ ಬಂದ ನಾಲ್ಕೇ ತಿಂಗಳಲ್ಲಿ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಕರ್ನಾಟಕ ರಾಜ್ಯ ಬೀಜ ನಿಗಮಕ್ಕೆ 32 ಸಿಬ್ಬಂದಿ ನೇಮಕಗೊಂಡಿದ್ದು ಎಲ್ಲರಿಗೂ ನೇಮಕಾತಿ ಆದೇಶವನ್ನು ನೀಡಲಾಗುತ್ತಿದೆ. ಬರುವ ದಿನಗಳಲ್ಲಿ ಕೃಷಿ ಇಲಾಖೆಯ ಕೃಷಿ ಅಧಿಕಾರಿ, ಸಹಾಯಕ ಕೃಷಿ ಅಧಿಕಾರಿಗಳ ಹುದ್ದೆಗಳ ನೇಮಕಾತಿ ಕ್ರಮ ವಹಿಸಲಾಗುತ್ತದೆ” ಎಂದರು.
ಇದಕ್ಕೂ ಮುನ್ನ ಸಚಿವ ಎನ್ ಚಲುವರಾಯಸ್ವಾಮಿ ಅವರು ರಾಜ್ಯ ಬೀಜ ನಿಗಮ ಹಾಗೂ
ಕರ್ನಾಟಕ ಬೀಜ ಮತ್ತು ಸಾವಯವ ಪ್ರಮಾಣದ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ನಂತರ ಇಲಾಖೆಯಲ್ಲಿ ಕೈಗೊಂಡ ಸುಧಾರಣಾ ಕ್ರಮಗಳು, ಜಾರಿಗೆ ತಂದ ಹೊಸ ಯೋಜನೆಗಳನ್ನೊಳಗೊಂಡ ಕಿರು ಹೊತ್ತಿಗೆಯನ್ನು ಬಿಡುಗಡೆ ಮಾಡಿದರು.
ಈ ಸುದ್ದಿ ಓದಿದ್ದೀರಾ? ಅಮೆರಿಕ ಕಂಪನಿಗಳಿಂದ ರಾಜ್ಯದಲ್ಲಿ ₹25,000 ಕೋಟಿ ಹೂಡಿಕೆಗೆ ಆಸಕ್ತಿ
ಬೀಜೋತ್ಪಾದಕರ ಸಂಘವಾರು ನೋಂದಾಯಿತ ಕ್ಷೇತ್ರ ಮತ್ತು ಪ್ರಮಾಣಿಕರಿಸಿದ ದಾಸ್ತಾನು ವಿವರ, ಸಂಸ್ಥೆಯ ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ, ಪ್ರಗತಿ ಬಗ್ಗೆ ಚರ್ಚಿಸಿದ ಸಚಿವರು, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು ಶೀಘ್ರವಾಗಿ ನಿರ್ಮಾಣ ಮಾಡಿ ಮುಗಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಭೆಯಲ್ಲಿ ಕೃಷಿ ಆಯುಕ್ತ ವೈ.ಎಸ್.ಪಾಟೀಲ್, ಕಾರ್ಯದರ್ಶಿ ಅನ್ಬುಕುಮಾರ್, ಕೃಷಿ ನಿರ್ದೇಶಕ ಡಾ.ಜಿ.ಟಿ ಪುತ್ರ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.