ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿರುದ್ಧ ಸಾಮಾಜಿಕ ಕಾರ್ಯಕರ್ತ ಟಿ ಜೆ ಅಬ್ರಹಾಂ ಸಲ್ಲಿಸಿದ್ದ ಭ್ರಷ್ಟಾಚಾರ ದೂರಿನ ಬಗ್ಗೆ ಯಡಿಯೂರಪ್ಪ ಅವರ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಬೇಕು ಎಂದು ರಾಜ್ಯಪಾಲರಿಗೆ ಶಿಫಾರಸು ಮಾಡಲು ಸಚಿವ ಸಂಪುಟ ಸಭೆ ನಿರ್ಧಾರ ಮಾಡಿದೆ.
2020ರ ಪ್ರಕರಣವನ್ನು ತನಿಖೆಗೆ ಒಳಪಡಿಸಲು ಪೂರ್ವಾನುಮತಿ ನೀಡಬೇಕು ಎಂದು ರಾಜ್ಯಪಾಲರನ್ನು ಕೋರಲು ಗುರುವಾರ ನಡೆದ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಈ ಮೂಲಕ ಯಡಿಯೂರಪ್ಪ ಮತ್ತು ಅವರ ಕುಟುಂಬದ ವಿರುದ್ಧ ತನಿಖಾಸ್ತ್ರ ಬಳಸಲು ರಾಜ್ಯ ಸರ್ಕಾರ ಮುಂದಾಗಿದೆ.
ಸಚಿವ ಸಂಪುಟ ಸಭೆಯ ಬಳಿಕ ಕಾನೂನು ಸಚಿವ ಎಚ್.ಕೆ.ಪಾಟೀಲ ಅವರು ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ, ” ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಅವರು ಯಡಿಯೂರಪ್ಪ ಕುಟುಂಬದ ವಿರುದ್ಧ ಕ್ರಮ ಜರುಗಿಸುವಂತೆ 2020ರ ನವೆಂಬರ್ 10ರಂದು ರಾಜ್ಯಪಾಲರಿಗೆ ದೂರು ನೀಡಿದ್ದರು. 2021ರಲ್ಲಿ ರಾಜ್ಯಪಾಲರು ದೂರನ್ನು ತಿರಸ್ಕರಿಸಿದ್ದರು. ಆ ದೂರಿನಲ್ಲಿ 16 ಆರೋಪಗಳಿದ್ದು, ಅವು ಅತ್ಯಂತ ಗಂಭೀರ ದೂರುಗಳಾಗಿವೆ. ಈ ವಿಷಯದ ಕುರಿತು ಸಂಪುಟ ಸಭೆಯಲ್ಲಿ ಸುದೀರ್ಘವಾಗಿ ಚರ್ಚೆ ಮಾಡಲಾಯಿತು. 2021 ಏಪ್ರಿಲ್ 23ರ ತೀರ್ಮಾನವನ್ನು ವಾಪಸ್ ಪಡೆದು, ದೂರನ್ನು ಪುನರ್ ಪರಿಶೀಲಿಸಿ ತನಿಖೆಗೆ ಪೂರ್ವಾನುಮತಿ ನೀಡಬೇಕೆಂದು ರಾಜ್ಯಪಾಲರಿಗೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಯಿತು” ಎಂದು ತಿಳಿಸಿದರು.
ಯಡಿಯೂರಪ್ಪ ಬಿಡಿಎ ಅಪಾರ್ಟ್‌ಮೆಂಟ್ ನಿರ್ಮಾಣ ಟೆಂಡರ್ ಒಂದರಲ್ಲಿ ರಾಮಲಿಂಗಂ ಕನ್‌ಸ್ಟ್ರಕ್ಷನ್ ನ ಕಂಪನಿಯಿಂದ 12 ಕೋಟಿ ರೂ. ಲಂಚ ಪಡೆದಿದ್ದರು ಎಂದು ಆರೋಪಿಸಿ 2020ರಲ್ಲಿ ಟಿ.ಜೆ. ಅಬ್ರಹಾಂ ದೂರು ಸಲ್ಲಿಸಿದ್ದರು. ಈ ಬಗ್ಗೆ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರ ಅನುಮತಿ ಬೇಕು ಎಂದು ನ್ಯಾಯಾಲಯ ತಿಳಿಸಿತ್ತು. ಈ ವೇಳೆ ಯಡಿಯೂರಪ್ಪ ವಿರುದ್ದ ಪ್ರಾಸಿಕ್ಯೂಷನ್‌ಗೆ ಟಿ.ಜೆ. ಅಬ್ರಹಾಂ ರಾಜ್ಯಪಾಲರಿಗೆ ಮನವಿ ಮಾಡಿದ್ದರು. ಆದರೆ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರು ಈ ಮನವಿ ತಿರಸ್ಕರಿಸಿದ್ದರು. ಇದೀಗ ಈ ಪ್ರಕರಣವನ್ನು ಕೆದಕಿರುವ ಸಚಿವ ಸಂಪುಟವು, ಪ್ರಾಸಿಕ್ಯೂಷನ್ ಮನವಿ ತಿರಸ್ಕರಿಸಿರುವ ನಿರ್ಣಯ ಹಿಂಪಡೆಯಬೇಕು. ಜತೆಗೆ ಭ್ರಷ್ಟಾಚಾರ ಪ್ರತಿಬಂಧಿಕತ ಸೆಕ್ಷನ್ 17-ಎ ಅಡಿ ತನಿಖೆಗೆ ಅನುಮತಿ ನೀಡಬೇಕು ಎಂದು ರಾಜ್ಯಪಾಲರಿಗೆ ಶಿಫಾರಸ್ಸು ಮಾಡಲು ನಿರ್ಧಾರ ಮಾಡಿದೆ. ತನ್ಮೂಲಕ ಯಡಿಯೂರಪ್ಪ ಮಾತ್ರವಲ್ಲದೆ ಪ್ರಕರಣದಲ್ಲಿ 2ನೇ ಆರೋಪಿ ಆಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರಗೂ ಆತಂಕ ಶುರುವಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಭಾರತೀಯ ಜನತಾ ಪಕ್ಷಕ್ಕೆ ನೀತಿಯೂ ಇಲ್ಲ, ರೀತಿಯೂ ಇಲ್ಲ
ಟಿ.ಜೆ. ಅಬ್ರಹಾಂ 2020ರ ನ.19 ರಂದು ಎಸಿಬಿಗೆ ದೂರು ನೀಡಿ, ಭ್ರಷ್ಟಾಚಾರ ನಿಗ್ರಹ ಕಾಯ್ದೆ, ಅಕ್ರಮ ಹಣ ವರ್ಗಾವಣೆ ಕಾಯಿದೆ 2002ರ ಅಡಿ ಯಡಿಯೂರಪ್ಪ ಹಾಗೂ ಕುಟುಂಬ ಸದಸ್ಯರ ವಿರುದ್ದ ಕ್ರಮಕ್ಕೆ ಮನವಿ ಮಾಡಿದ್ದರು. ಆದರೆ, ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯವು, ಹಾಲಿ ಮುಖ್ಯಮಂತ್ರಿಗಳಾಗಿರುವ ಯಡಿಯೂರಪ್ಪ ವಿರುದ್ಧ ವಿಚಾರಣೆಗೆ ರಾಜ್ಯಪಾಲರ ಅನುಮತಿ ಅಗತ್ಯ ಎಂದು ಹೇಳಿತ್ತು. ಈ ಹಿನ್ನೆಲೆಯಲ್ಲಿ ಟಿ.ಜೆ. ಅಬ್ರಹಾಂ ಅವರು ರಾಜ್ಯಪಾಲರಿಗೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ಮನವಿ ಸಲ್ಲಿಸಿದ್ದರು. ಆದರೆ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ತಿರಸ್ಕರಿಸಿ ದ್ದರು. ಪ್ರಸ್ತುತ ಪ್ರಕರಣ ಸುಪ್ರೀಂ ಕೋರ್ಟಿನಲ್ಲಿದೆ. ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಸಿಗದ ಕಾರಣ ಉಳಿದ ಆರೋಪಿಗಳ ಬಗ್ಗೆ ವಿಚಾರಣೆ ನಡೆಯುತ್ತಿದೆ.
ಈಗ ಯಡಿಯೂರಪ್ಪ ಶಾಸಕ ಅಲ್ಲದಿದ್ದರೂ, ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ಈ ನಿರ್ಣಯಗಳನ್ನು ಕೈಗೊಂಡಿದ್ದರಿಂದ ರಾಜ್ಯಪಾಲರ ಅನುಮತಿ ಅಗತ್ಯವಿದೆ ಎಂದು ಎಚ್.ಕೆ.ಪಾಟೀಲ ಅವರು ಇದೇ ವೇಳೆ ಹೇಳಿದರು.