ಕಾಂಗ್ರೆಸ್ ತೊರೆದ ಎರಡು ದಿನಗಳ ನಂತರ, ಹರಿಯಾಣದ ಮಾಜಿ ಸಚಿವ ಕ್ಯಾಪ್ಟನ್ ಅಜಯ್ ಸಿಂಗ್ ಯಾದವ್ ಶನಿವಾರ ಯುಟರ್ನ್ ಹೊಡೆದಿದ್ದಾರೆ. “ನಾನು ಹುಟ್ಟಿದಾಗಲೇ ಕಾಂಗ್ರೆಸ್ಸಿ, ನನ್ನ ಕೊನೆಯ ಉಸಿರು ಇರುವವರೆಗೂ ಅದೇ ಆಗಿರುತ್ತೇನೆ” ಎಂದು ಹೇಳಿಕೊಂಡಿದ್ದಾರೆ.
ಹಿಂದಿನದೆಲ್ಲವನ್ನು ಮರೆತು ತಾನು ಕಾಂಗ್ರೆಸ್‌ಗಾಗಿ ಕೆಲಸ ಮಾಡಲು ತನ್ನ ಮಗ ಮತ್ತು ಮಾಜಿ ಶಾಸಕ ಚಿರಂಜೀವ್ ರಾವ್ ಅವರು ಮನವೊಲಿಸುವಲ್ಲಿ ಮೇಲುಗೈ ಸಾಧಿಸಿದ್ದಾರೆ ಎಂದು ಅಜಯ್ ಸಿಂಗ್ ಯಾದವ್ ತಿಳಿಸಿದ್ದಾರೆ.
ಸೋನಿಯಾ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ತೊರೆದ ನಂತರ ತನ್ನನ್ನು ತುಚ್ಛವಾಗಿ ಕಾಣಲಾಗುತ್ತಿದೆ ಎಂದು ಹೇಳಿ ಯಾದವ್ ಗುರುವಾರ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದರು. ಜೊತೆಗೆ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಇತರ ಹಿಂದುಳಿದ ವರ್ಗಗಳ (ಒಬಿಸಿ) ವಿಭಾಗದ ಅಧ್ಯಕ್ಷ ಸ್ಥಾನಕ್ಕೂ ರಾಜೀನಾಮೆ ನೀಡಿದ್ದರು.
ಇದನ್ನು ಓದಿದ್ದೀರಾ? ಹರಿಯಾಣ | ಒಳಮೀಸಲಾತಿ ತಕ್ಷಣದಿಂದ ಜಾರಿ, ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ವಿರೋಧ
ಅದಾದ ಬಳಿಕ ನಿನ್ನೆ ಎಕ್ಸ್‌ನಲ್ಲಿ ಸರಣಿ ಪೋಸ್ಟ್ ಮಾಡಿರುವ ಅವರು, “ನಾನು ಕಳೆದ 38 ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಸೇವೆ ಸಲ್ಲಿಸಿದ್ದೇನೆ, ಹಿಂದಿರುಗಿ ನೋಡಿಲ್ಲ. ಪಕ್ಷಕ್ಕೆ ನನ್ನ ಕೈಲಾದಷ್ಟು ಕಾರ್ಯ ಮಾಡಿದ್ದೇನೆ. ನಾನು ನನ್ನ ನಾಯಕರಾದ ದಿವಂಗತ ರಾಜೀವ್ ಗಾಂಧಿ ಜಿ ಮತ್ತು ಸೋನಿಯಾ ಗಾಂಧಿಯವರೊಂದಿಗೆ ಕೆಲಸ ಮಾಡಿದ್ದೇನೆ. ನಮ್ಮ ಕುಟುಂಬವು ನನ್ನ ತಂದೆ ದಿವಂಗತ ರಾವ್ ಅಭೇ ಸಿಂಗ್ ಅವರ ಕಾಲದಿಂದ ನೆಹರು-ಗಾಂಧಿ ಕುಟುಂಬದೊಂದಿಗೆ 1952ರಿಂದ 70 ವರ್ಷಗಳಿಗಿಂತಲೂ ಹೆಚ್ಚು ವರ್ಷಗಳ ಸುದೀರ್ಘ ಒಡನಾಟವನ್ನು ಹೊಂದಿರುವುದರಿಂದ ಅವರೊಂದಿಗೆ ನನಗಿರುವ ಪ್ರೀತಿಯನ್ನು ಮರೆಯಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
” ನಾನು ಹುಟ್ಟಿನಿಂದ ಕಾಂಗ್ರೆಸ್ಸಿಗ ಮತ್ತು ನನ್ನ ಕೊನೆಯ ಉಸಿರು ಇರುವವರೆಗೂ ಕಾಂಗ್ರೆಸ್ಸಿಗನಾಗಿಯೇ ಇರುತ್ತೇನೆ. ಒಬಿಸಿ ಇಲಾಖೆಗಾಗಿ ನಾನು ಪಟ್ಟ ಶ್ರಮವನ್ನು ಹೈಕಮಾಂಡ್ ಮೆಚ್ಚುತ್ತಿಲ್ಲ ಎಂದು ಅಸಮಾಧಾನಗೊಂಡಿದ್ದೇನೆ. ಕೆಲವು ಕಟುವಾದ ಮಾತುಗಳು ನನ್ನನ್ನು ಈ ಕಠಿಣ ಹೆಜ್ಜೆ ಇಡುವಂತೆ ಮಾಡಿದೆ. ನಾನು ಈಗ ಯೋಚಿಸಿ ಕಾಂಗ್ರೆಸ್ ಪಕ್ಷಕ್ಕೆ ವಿಶೇಷವಾಗಿ ನನ್ನ ಆಪ್ತ ಮತ್ತು ನಾಯಕಿ ಸೋನಿಯಾ ಗಾಂಧಿಗೆ ಬಲ ತುಂಬಲು ನಿರ್ಧರಿಸಿದೆ” ಎಂದು ಇನ್ನೊಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಇತ್ತೀಚೆಗೆ ಮುಗಿದ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಅಜಯ್ ಸಿಂಗ್ ಯಾದವ್ ಪುತ್ರ ಚಿರಂಜೀವ್ ರಾವ್ ಅವರು ರೇವಾರಿಯಿಂದ ಸೋತಿದ್ದರು.
