ಎರಡು ದಿನಗಳ ಹಿಂದೆ ದೆಹಲಿಯಲ್ಲಿ ಬಿಜೆಪಿ ಸರ್ಕಾರ ರಚಿಸಿದ್ದು, ರೇಖಾ ಗುಪ್ತಾ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಬೆನ್ನಲ್ಲೇ ಬಿಜೆಪಿ ಸರ್ಕಾರದ ವಿರುದ್ಧ ದೆಹಲಿ ಮಾಜಿ ಮುಖ್ಯಮಂತ್ರಿ ಅತಿಶಿ ವಾಗ್ದಾಳಿ ನಡೆಸಿದ್ದಾರೆ. ಈ ಬಗ್ಗೆ ಸಿಎಂ ರೇಖಾ ಗುಪ್ತಾ ಅವರಿಗೆ ಆತಿಶಿ ಪತ್ರ ಬರೆದಿದ್ದಾರೆ. “ಮೊದಲ ಸಚಿವ ಸಂಪುಟ ಸಭೆಯಲ್ಲಿ ಮಹಿಳೆಯರಿಗೆ ಭರವಸೆ ನೀಡಿದ ಆರ್ಥಿಕ ನೆರವು ಯೋಜನೆಯನ್ನು ಅಂಗೀಕರಿಸುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ” ಎಂದು ದೂರಿದ್ದಾರೆ.
ದೆಹಲಿಯಲ್ಲಿ ಮಹಿಳೆಯರಿಗೆ ತಿಂಗಳಿಗೆ 2,500 ರೂ.ಗಳನ್ನು ಒದಗಿಸುವ ಯೋಜನೆಯನ್ನು ಮೊದಲ ಸಂಪುಟ ಸಭೆಯಲ್ಲಿಯೇ ಅಂಗೀಕರಿಸಲಾಗುವುದು ಎಂಬುದು ಬಿಜೆಪಿಯ ಚುನಾವಣಾ ಭರವಸೆಯಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಕೂಡಾ ಚುನಾವಣಾ ಪ್ರಚಾರದಲ್ಲಿ ಈ ಭರವಸೆ ನೀಡಿದ್ದರು. ಆದರೆ ಅಧಿಕಾರಕ್ಕೆ ಬಂದು ಮೊದಲ ಸಂಪುಟ ಸಭೆ ನಡೆದಿದ್ದರೂ ಬಿಜೆಪಿ ಈವರೆಗೆ ಈ ಯೋಜನೆಯನ್ನು ಜಾರಿ ಮಾಡಿಲ್ಲ. ಬಿಜೆಪಿ ಕೊಟ್ಟ ಭರವಸೆ ಈಡೇರಿಸದ ಕಾರಣದಿಂದಾಗಿ ಈಗ ವಿಪಕ್ಷಗಳ ವಾಗ್ದಾಳಿಗೆ ಗುರಿಯಾಗಿದೆ.
ಇದನ್ನು ಓದಿದ್ದೀರಾ? ದೆಹಲಿ ಸೋತರೂ ಎಎಪಿ ನಾಯಕಿ ಆತಿಶಿ ಡಾನ್ಸ್ – ಸಂಭ್ರಮಾಚರಣೆ; ವ್ಯಾಪಕ ಟೀಕೆ
ಇನ್ನು ದೆಹಲಿಯಲ್ಲಿ ಮಹಿಳೆಯರಿಗೆ ತಿಂಗಳಿಗೆ 2,500 ರೂ.ಗಳನ್ನು ಒದಗಿಸುವ ಯೋಜನೆಯ ಅನುಷ್ಠಾನದ ಕುರಿತು ಚರ್ಚಿಸಲು ಎಎಪಿ ನಿಯೋಗವು ಸಿಎಂ ರೇಖಾ ಅವರನ್ನು ಭಾನುವಾರ ಭೇಟಿ ಮಾಡಲು ಸಮಯವನ್ನೂ ಆತಿಶಿ ಪತ್ರದ ಮೂಲಕ ಕೋರಿದ್ದಾರೆ.
“ಮೊದಲನೆಯದಾಗಿ, ದೆಹಲಿಯ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಿಮಗೆ ಹೃತ್ಪೂರ್ವಕ ಅಭಿನಂದನೆಗಳು. ಬಿಜೆಪಿ ನಾಯಕ, ಪ್ರಧಾನಿ ನರೇಂದ್ರ ಮೋದಿ ಅವರು 2025ರ ಜನವರಿ 31ರಂದು ನಡೆದ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ‘ಬಿಜೆಪಿ ಸರ್ಕಾರ ರಚನೆಯಾದ ನಂತರ ಮೊದಲ ಸಂಪುಟ ಸಭೆಯಲ್ಲಿಯೇ ದೆಹಲಿಯ ತಾಯಂದಿರು ಮತ್ತು ಸಹೋದರಿಯರಿಗೆ ತಿಂಗಳಿಗೆ 2,500 ರೂಪಾಯಿ ನೀಡುವ ಯೋಜನೆಯನ್ನು ಅಂಗೀಕರಿಸಲಾಗುವುದು ಎಂದು ಭರವಸೆ ನೀಡಿದ್ದರು. ಇದು ಮೋದಿ ಭರವಸೆ ಎಂದಿದ್ದರು” ಎಂದು ಆತಿಶಿ ಪತ್ರದಲ್ಲಿ ಬರೆದಿದ್ದಾರೆ.
“ಬಿಜೆಪಿ ನೇತೃತ್ವದ ದೆಹಲಿ ಸರ್ಕಾರ ಫೆಬ್ರವರಿ 20ರಂದು ತನ್ನ ಮೊದಲ ಸಂಪುಟ ಸಭೆಯನ್ನು ನಡೆಸಿದೆ. ಆದರೆ ಈ ಯೋಜನೆಯನ್ನು ಅಂಗೀಕರಿಸಿಲ್ಲ. ದೆಹಲಿಯ ತಾಯಂದಿರು ಮತ್ತು ಸಹೋದರಿಯರು ಮೋದಿ ಅವರ ಭರವಸೆಯನ್ನು ನಂಬಿದ್ದರು. ಆದರೆ ಈಗ ಮೋಸ ಹೋಗಿದ್ದಾರೆಂದು ಭಾವಿಸುತ್ತಿದ್ದಾರೆ” ಎಂದು ಆತಿಶಿ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ದೆಹಲಿ ಚುನಾವಣೆಯಲ್ಲಿ ಎಎಪಿ, ಕಾಂಗ್ರೆಸ್ ಜೊತೆಯಾಗಿ ಸ್ಪರ್ಧಿಸಬೇಕಿತ್ತು: ಅಮರ್ತ್ಯ ಸೇನ್
ಸಿಎಂಗೆ ಪತ್ರ ಬರೆದಿರುವುದು ಮಾತ್ರವಲ್ಲದೆ ಆತಿಶಿ ನಿನ್ನೆ ಪತ್ರಿಕಾಗೋಷ್ಠಿಯನ್ನು ನಡೆಸಿ ಯೋಜನೆಯನ್ನು ಹೇಳಿದ ಸಮಯಕ್ಕೆ ಅಂಗೀಕರಿಸದ, ಜಾರಿ ಮಾಡದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ಇದು ಮತ್ತೊಂದು ಚುನಾವಣಾ ಗಿಮಿಕ್ ಆಗಿದೆಯೇ” ಎಂದು ಪಿಎಂ ಮೋದಿ ಮತ್ತು ಸಿಎಂ ರೇಖಾ ಅವರನ್ನು ಪ್ರಶ್ನಿಸಿದರು.
ದೆಹಲಿ ಚುನಾವಣೆಯಲ್ಲಿ ಕಲ್ಕಾಜಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಬಿಜೆಪಿಯ ರಮೇಶ್ ಬಿಧುರಿ ಅವರನ್ನು ಆತಿಶಿ ಸೋಲಿಸಿದ್ದಾರೆ. ಫೆಬ್ರವರಿ 5ರಂದು ನಡೆದ ಚುನಾವಣೆಯಲ್ಲಿ ಬಿಜೆಪಿ 70 ವಿಧಾನಸಭಾ ಸ್ಥಾನಗಳಲ್ಲಿ 48 ಸ್ಥಾನಗಳನ್ನು ಗೆದ್ದು ಸರ್ಕಾರ ರಚಿಸಿದೆ. ಎಎಪಿ 22 ಸ್ಥಾನಗಳನ್ನು ಪಡೆದರೆ ಕಾಂಗ್ರೆಸ್ ಒಂದು ಕ್ಷೇತ್ರದಲ್ಲೂ ಗೆಲುವು ಸಾಧಿಸಿಲ್ಲ.
