ಬಿಹಾರದ ಸರನ್ ಲೋಕಸಭಾ ಕ್ಷೇತ್ರದಲ್ಲಿ ಮೇ 21ರಂದು ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಬೆಂಬಲಿಗರ ನಡುವೆ ನಡೆದ ಘರ್ಷಣೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಒಬ್ಬರು ಗಾಯಗೊಂಡಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ.
ಪ್ರದೇಶದಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಸರನ್ ಪೊಲೀಸರು 48 ಗಂಟೆಗಳ ಕಾಲ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಿದ್ದಾರೆ ಮತ್ತು ಮತದಾನದ ನಂತರದ ಹಿಂಸಾಚಾರಕ್ಕೆ ಕಾರಣವಾದ ಇಬ್ಬರನ್ನು ಬಂಧಿಸಿದ್ದಾರೆ.
ಸರನ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಾಜೀವ್ ಪ್ರತಾಪ್ ರೂಡಿ ವಿರುದ್ಧ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಪುತ್ರಿ ರೋಹಿಣಿ ಆಚಾರ್ಯ ಕಣಕ್ಕಿಳಿದಿದ್ದಾರೆ. ಮೇ 20ರಂದು ಸರನ್‌ನಲ್ಲಿ ಐದನೇ ಹಂತದಲ್ಲಿ ಮತದಾನ ನಡೆದಿದ್ದು ಅಂದೇ ಉದ್ವಿಗ್ನತೆ ಉಂಟಾಗಿದೆ.
ಇದನ್ನು ಓದಿದ್ದೀರಾ? ಲೋಕಸಭೆ ಚುನಾವಣೆ| ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ, ಇಬ್ಬರಿಗೆ ಗಾಯ
ಮತದಾನದ ವೇಳೆ, ಭಿಖಾರಿ ಠಾಕೂರ್ ಚೌಕ್‌ನಲ್ಲಿರುವ ಮತಗಟ್ಟೆ 118ಕ್ಕೆ ಭೇಟಿ ನೀಡಿದ ಆಚಾರ್ಯ ಅವರು ಕೆಲವು ಜನರೊಂದಿಗೆ ವಾಗ್ವಾದ ನಡೆಸಿದರು ಎಂದು ವರದಿಯಾಗಿದೆ. ಆಚಾರ್ಯ ಅವರು ಮತದಾರರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆ ಎಂದು ಕೆಲವರು ಆರೋಪಿಸಿದ್ದರು. ರೋಹಿಣಿ ಆಚಾರ್ಯ ಸ್ಥಳದಿಂದ ಹೋದ ಬಳಿಕ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಪರಸ್ಪರ ಕಲ್ಲು ತೂರಾಟ ನಡೆಸಿ ಹಲವರು ಗಾಯಗೊಂಡಿದ್ದಾರೆ.
ಮೇ 21 ರಂದು ಬೆಳಿಗ್ಗೆ, ಬಡಾ ಟೆಲ್ಪಾ ಪ್ರಾಥಮಿಕ ಶಾಲೆಯ ಬಳಿಯ ಭಿಖಾರಿ ಠಾಕೂರ್ ಚೌಕ್‌ನಲ್ಲಿ ಆರ್‌ಜೆಡಿ ಮತ್ತು ಬಿಜೆಪಿ ಬೆಂಬಲಿಗರ ನಡುವೆ ಮತ್ತ ಘರ್ಷಣೆ ಉಂಟಾಗಿದೆ. ಈ ಸಂದರ್ಭದಲ್ಲಿ ವ್ಯಕ್ತಿಯೋರ್ವ ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆ : ಹಿಂಸಾಚಾರಕ್ಕೆ 12 ಮಂದಿ ಬಲಿ
ಗುಂಡಿನ ದಾಳಿಯಲ್ಲಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬ ಸರನ್‌ನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಸಾವನ್ನಪ್ಪಿದ್ದಾನೆ. ಇನ್ನೋರ್ವ ವ್ಯಕ್ತಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಪಟ್ನಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಶಿಫಾರಸು ಮಾಡಲಾಗಿದೆ. ಮೃತರನ್ನು ಚಂದನ್ ಯಾದವ್ ಮತ್ತು ಗುಡ್ಡು ರೈ ಎಂದು ಗುರುತಿಸಲಾಗಿದೆ.
“ಸೋಮವಾರ ನಡೆದ ಕಲ್ಲು ತೂರಾಟದ ಪ್ರತಿಕ್ರಿಯೆಯಾಗಿ ಕೆಲವು ಸಮಾಜವಿರೋಧಿ ಶಕ್ತಿಗಳು ಮಂಗಳವಾರದ ಗುಂಡಿನ ದಾಳಿ ನಡೆಸಿದ್ದಾರೆ. ಗುಂಡಿನಿಂದ ಗಾಯಗೊಂಡ ಮೂವರಲ್ಲಿ ಇಬ್ಬರು ಸಾವನ್ನಪ್ಪಿದ್ದು, ಒಬ್ಬರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಶಾಂತಿ ಕಾಪಾಡಲು ನಾವು ಎರಡು ದಿನಗಳ ಕಾಲ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದೇವೆ” ಎಂದು ಸರನ್ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಗೌರವ್ ಮಂಗಳಾ ಹೇಳಿದ್ದಾರೆ.
VIDEO | Here’s what RJD candidate from Saran Rohini Acharya said on death of a party worker in post-poll violence.
“BJP people have got panicked. We want justice. They are BJP’s goons. There should be an FIR. I have a right as a candidate to visit booths. I went there, I asked a… pic.twitter.com/7C7A4SpCIx
— Press Trust of India (@PTI_News) May 21, 2024
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರೋಹಿಣಿ ಆಚಾರ್ಯ, “ಜನರು ಗಾಬರಿಗೊಂಡಿದ್ದಾರೆ, ನಮಗೆ ನ್ಯಾಯ ಬೇಕು, ಅವರು ಬಿಜೆಪಿಯ ಗೂಂಡಾಗಳು, ಎಫ್‌ಐಆರ್ ದಾಖಲಾಗಬೇಕು. ಬೂತ್‌ಗಳಿಗೆ ಭೇಟಿ ನೀಡುವುದು ಅಭ್ಯರ್ಥಿಯಾಗಿ ನನ್ನ ಹಕ್ಕಾಗಿದ್ದು ಅದರಿಂದಾಗಿ ನಾನು ಬೂತ್‌ಗೆ ಹೋಗಿದ್ದೆ. ಅಲ್ಲಿ ಒಬ್ಬರಲ್ಲಿ ಮತ ಹಾಕಿದ್ದೀರಾ ಎಂದು ಪ್ರಶ್ನಿಸಿದೆ. ಆದರೆ ಅವರು ನನ್ನನ್ನು ನಿಂದಿಸಲು ಪ್ರಾರಂಭಿಸಿದರು ಮತ್ತು ಇಂದು ನಮ್ಮ ಪಕ್ಷದ ಕಾರ್ಯಕರ್ತನ ಕೊಲೆ ಮಾಡಲಾಗಿದೆ” ಎಂದು ಆರೋಪಿಸಿರು.