ಮುಂಬರುವ 2024ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ 65 ಪಕ್ಷಗಳು ಬಿಜೆಪಿ ಹಾಗೂ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟಕ್ಕೆ ಸೇರ್ಪಡೆಗೊಂಡಿವೆ. ‘ಇಂಡಿಯಾ’ ಒಕ್ಕೂಟದಲ್ಲಿ 26 ಪಕ್ಷಗಳೊಂದಿಗೆ 116 ಲೋಕಸಭಾ ಸದಸ್ಯರು ಹಾಗೂ 64 ರಾಜ್ಯಸಭೆ ಸದಸ್ಯರಿದ್ದರೆ, ಎನ್‌ಡಿಎದ 38 ಪಕ್ಷಗಳಲ್ಲಿ 332 ಲೋಕಸಭಾ ಸದಸ್ಯರು ಹಾಗೂ 110 ರಾಜ್ಯಸಭಾ ಸದಸ್ಯರಿದ್ದಾರೆ.
ಆದರೆ ಇವೆರಡು ಒಕ್ಕೂಟಕ್ಕೆ ಸೇರದ ವಿವಿಧ ರಾಜ್ಯದ ಕನಿಷ್ಠ 11 ಪ್ರಮುಖ ಪಕ್ಷಗಳಿದ್ದು, ಇವುಗಳಿಂದ ಒಟ್ಟು 91 ಲೋಕಸಭೆ ಸದಸ್ಯರಾಗಿದ್ದಾರೆ. ಸದ್ಯಕ್ಕೆ ಈ ಪಕ್ಷಗಳು ತಟಸ್ಥವಾಗಿರಲು ನಿರ್ಧರಿಸಿದ್ದಾರೆ.
ಈ ಹನ್ನೊಂದು ಪಕ್ಷಗಳಲ್ಲಿ ಆಂಧ್ರಪ್ರದೇಶದ ವೈಎಸ್‌ಆರ್ ಕಾಂಗ್ರೆಸ್ ಪಕ್ಷ, ತೆಲಂಗಾಣದ ಭಾರತ ರಾಷ್ಟ್ರೀಯ ಸಮಿತಿ ಮತ್ತು ಒಡಿಶಾದ ಬಿಜು ಜನತಾ ದಳ ಒಟ್ಟು 63 ಸದಸ್ಯರನ್ನು ಹೊಂದಿವೆ. ಈ ಮೂರು ಪಕ್ಷಗಳು ತಮ್ಮ ರಾಜ್ಯಗಳಲ್ಲಿ ಕಾಂಗ್ರೆಸ್ ಅಥವಾ ಬಿಜೆಪಿಯಂಥ ರಾಷ್ಟ್ರೀಯ ಪಕ್ಷಗಳಿಗಿಂತ ಮೇಲುಗೈ ಸಾಧಿಸಿವೆ.
ಈ ಮೂರನ್ನು ಹೊರತುಪಡಿಸಿ ಇನ್ನುಳಿದ ಪಕ್ಷಗಳೆಂದರೆ ಬಹುಜನ ಸಮಾಜ ಪಕ್ಷ, ಎಐಎಂಐಎಂ, ತೆಲುಗು ದೇಶಂ ಪಕ್ಷ ( ಟಿಡಿಪಿ), ಶಿರೋಮಣಿ ಅಕಾಲಿದಳ, ಎಐಯುಡಿಎಫ್, ಜೆಡಿಎಸ್, ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷ (ಆರ್‌ಎಲ್‌ಪಿ) ಮತ್ತು ಎಸ್ಎಡಿ(ಮಾನ್).
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹುಲಿಕುಂಟೆ ಮೂರ್ತಿ ಪ್ರಕರಣ : ಟ್ರೋಲರ್‌ಗಳ ವಿರುದ್ಧ ಕ್ರಮ ಅಗತ್ಯ
2019 ರಲ್ಲಿ ಆಂಧ್ರಪ್ರದೇಶದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ವೈಎಸ್ಆರ್ ಕಾಂಗ್ರೆಸ್ ಪಕ್ಷ ಮತ್ತು 2000 ರಿಂದ ಒಡಿಶಾದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಡಿ ಸಂಸತ್ತಿನಲ್ಲಿ ಬಿಜೆಪಿ ನೇತೃತ್ವದ ಸರ್ಕಾರದ ಪರವಾಗಿ ಹೆಚ್ಚಾಗಿ ಮತ ಚಲಾಯಿಸಿವೆ.
2014 ರಲ್ಲಿ ತೆಲಂಗಾಣವನ್ನು ಆಂಧ್ರಪ್ರದೇಶದಿಂದ ಬೇರ್ಪಡಿಸಿದಾಗಿನಿಂದ ಆಡಳಿತ ನಡೆಸುತ್ತಿರುವ ಭಾರತ್ ರಾಷ್ಟ್ರ ಸಮಿತಿ ಈ ವರ್ಷದ ಆರಂಭದಲ್ಲಿ ವಿರೋಧ ಪಕ್ಷದ ಮೈತ್ರಿಯ ಮುಂದಾಳತ್ವ ವಹಿಸಲು ಹೆಚ್ಚು ಸಕ್ರಿಯವಾಗಿತ್ತು. ಆದರೆ ಹೊಸದಾಗಿ ರಚನೆಯಾದ ಒಕ್ಕೂಟದಿಂದ ದೂರ ಉಳಿದಿದೆ.
ಇನ್ನು ಒಂದು ಸ್ಥಾನ ಹೊಂದಿರುವ ಕರ್ನಾಟಕದ ಜೆಡಿಎಸ್ ಯಾವ ಲೆಕ್ಕಾಚಾರ ಹಾಕುತ್ತಿದೆ ಎಂಬುದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಹಾಗೂ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರ ನಿರ್ಧಾರದಿಂದ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.
ಮಾಯಾವತಿ ನೇತೃತ್ವದ ಬಿಎಸ್‌ಪಿ ಲೋಕಸಭೆಯಲ್ಲಿ 9 ಸಂಸದರನ್ನು ಹೊಂದಿದೆ. ಉತ್ತರ ಪ್ರದೇಶದಲ್ಲಿ ನಾಲ್ಕು ಬಾರಿ ಆಳ್ವಿಕೆ ನಡೆಸಿದ್ದ ಬಿಎಸ್‌ಪಿ, ಮುಂಬರುವ ಲೋಕಸಭಾ ಚುನಾವಣೆ ಮಾತ್ರವಲ್ಲ,ವಿಧಾನಸಭಾ ಚುನಾವಣೆಯಲ್ಲೂ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ತಿಳಿಸಿದೆ.