ಈ ದಿನ ಸಂಪಾದಕೀಯ | ಹುಲಿಕುಂಟೆ ಮೂರ್ತಿ ಪ್ರಕರಣ : ಟ್ರೋಲರ್‌ಗಳ ವಿರುದ್ಧ ಕ್ರಮ ಅಗತ್ಯ

Date:

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಸಂಘ ಪರಿವಾರದಲ್ಲಿ ಹತಾಶೆ ಹೆಚ್ಚಾದಂತಿದೆ. ಸಣ್ಣ ಪುಟ್ಟ ವಿಚಾರಗಳನ್ನು ಇಟ್ಟುಕೊಂಡು ಬಿಜೆಪಿ ಶಾಸಕರು, ಸಂಘ ಪರಿವಾರದ ಕಾರ್ಯಕರ್ತರು ಟ್ರೋಲ್ ಮಾಡುತ್ತಾ ಅನಗತ್ಯವಾಗಿ ವಿವಾದಗಳನ್ನು ಹುಟ್ಟುಹಾಕಲು ಪ್ರಯತ್ನಿಸುತ್ತಿರುವುದನ್ನು ನೋಡಿದರೆ, ಅವರ ಹತಾಶೆಯ ಮಟ್ಟ ತಿಳಿಯುತ್ತದೆ. ಅವರ ಮನಸ್ಥಿತಿಗೆ ಸ್ಪಷ್ಟ ನಿದರ್ಶನ ಲೇಖಕ, ಅಧ್ಯಾಪಕ ಹುಲಿಕುಂಟೆ ಮೂರ್ತಿ ಪ್ರಕರಣ.

ಚಂದ್ರಯಾನ 3 ಉಡಾವಣೆಗೂ ಮೊದಲು ಅದರಲ್ಲಿ ಭಾಗಿಯಾಗಿರುವ ವಿಜ್ಞಾನಿಗಳು ತಿರುಪತಿಗೆ ಹೋಗಿ ಪೂಜೆ ಸಲ್ಲಿಸಿದ್ದರು. ಸಂವಿಧಾನದ ಜಾತ್ಯತೀತ ನೀತಿಗಳ ಅನುಸಾರ ಕೆಲಸ ಮಾಡಬೇಕಾದ ವಿಜ್ಞಾನಿಗಳು ತಮ್ಮ ಧಾರ್ಮಿಕ ನಂಬಿಕೆಗಳನ್ನು ಸಾರ್ವಜನಿಕಗೊಳಿಸಿದ್ದು ಸಹಜವಾಗಿಯೇ ಹಲವರ ಟೀಕೆಗೆ ಒಳಗಾಗಿತ್ತು. ಈ ಬಗ್ಗೆ ಹುಲಿಕುಂಟೆ ಮೂರ್ತಿ ಫೇಸ್‌ಬುಕ್‌ನಲ್ಲಿ ಒಂದು ಪೋಸ್ಟ್ ಹಾಕಿದ್ದರು. ತಕ್ಷಣವೇ ದಾಳಿ ಶುರುವಾಯಿತು. ಅದರ ಸ್ಕ್ರೀನ್ ಶಾಟ್ ಅನ್ನು ಟ್ವಿಟರ್ ಮತ್ತಿತರ ಸಾಮಾಜಿಕ ಮಾಧ್ಯಮಗಳಲ್ಲಿ ವಿಕೃತವಾಗಿ ಎಡಿಟ್ ಮಾಡಿ ಹಂಚಿಕೊಳ್ಳತೊಡಗಿದರು. ಅವರ ಹೆಂಡತಿಯ ಫೇಸ್‌ಬುಕ್ ಅಕೌಂಟ್ ಹುಡುಕಿ ಅಲ್ಲಿನ ಪೋಸ್ಟ್‌ಗಳಿಗೆ ಕೆಟ್ಟದಾಗಿ ಕಮೆಂಟ್ ಮಾಡಿದರು. ಅವರಿಗೆ ಕರೆ ಮಾಡಿ ಜೀವ ಬೆದರಿಕೆ ಒಡ್ಡಲಾಯಿತು. ಇಷ್ಟೂ ಸಾಲದೆಂಬಂತೆ ಶಾಸಕ ಸುರೇಶ್ ಕುಮಾರ್ ಅವರು ಹುಲಿಕುಂಟೆ ಮೂರ್ತಿಯವರ ವಿರುದ್ಧ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರ ಬರೆದರು. ಹುಲಿಕುಂಟೆ ಮೂರ್ತಿ ಅವರದ್ದು ‘ಅನಾರೋಗ್ಯಕರ ನಡವಳಿಕೆ, ಸ್ವೇಚ್ಚಾಚಾರ ಮತ್ತು ಬೇಜವಾಬ್ದಾರಿ ನಡವಳಿಕೆ’ ಎಂದು ಪತ್ರದಲ್ಲಿ ಆರೋಪಿಸಿದರು.

ಘಟನಾವಳಿಗಳ ಸರಪಳಿ ನೋಡಿದರೆ, ಟ್ರೋಲ್ ಮಾಡುವವರ ತಂತ್ರಗಾರಿಕೆ ಬಯಲಾಗುತ್ತದೆ. ಮೊದಲು ಕೆಲವರು ಕಮೆಂಟ್ ಹಾಕುವುದು, ನಂತರ ಟ್ರೋಲಿಂಗ್ ದಾಳಿ ಆರಂಭಿಸುವುದು, ತದನಂತರ ತಮ್ಮ ಗ್ರೂಪ್‌ಗಳಲ್ಲಿ ಅದನ್ನು ತಮಗೆ ಬೇಕಾದಂತೆ ತಿರುಚಿ ಹರಡುವುದು; ಕೊನೆಗೆ ಬಿಜೆಪಿ ಶಾಸಕರೊಬ್ಬರು ಅದಕ್ಕೆ ಅಧಿಕೃತತೆ ತಂದುಕೊಡಲು ಅದರ ಬಗ್ಗೆ ಕ್ರಮಕ್ಕಾಗಿ ಆಗ್ರಹಿಸಿ ಸಂಬಂಧಪಟ್ಟವರಿಗೆ ಪತ್ರ ಬರೆಯುವುದು, ಇಲ್ಲವೇ ವಿಧಾನಸಭೆಯಲ್ಲಿ ಪ್ರಸ್ತಾಪಿಸುವುದು. ವಿಚಿತ್ರವೆಂದರೆ, ಇಲ್ಲಿ ಯಾರೂ ಹುಲಿಕುಂಟೆ ಮೂರ್ತಿಯವರ ಸ್ಪಷ್ಟನೆಯನ್ನು ಕೇಳಲಿಲ್ಲ. ಮೂರ್ತಿಯವರ ತಕರಾರು ಇದ್ದದ್ದು ಚಂದ್ರಯಾನದ ಬಗ್ಗೆಯೋ, ತಿರುಪತಿಯ ಬಗ್ಗೆಯೋ ಅಲ್ಲ. ವಿಜ್ಞಾನಿಗಳ ಮನಸ್ಥಿತಿಯ ಬಗ್ಗೆಯಷ್ಟೇ ತನ್ನ ಆಕ್ಷೇಪಣೆ ಎಂದು ಅವರೇ ಸ್ಪಷ್ಟೀಕರಣ ನೀಡಿದರು. ಆದರೆ, ಟ್ರೋಲಿಂಗ್‌ವೀರರು ಅವರು ಹೇಳಿದ್ದನ್ನು ಕೇಳಿಸಿಕೊಳ್ಳುವ ವ್ಯವಧಾನವನ್ನೂ ತೋರಲಿಲ್ಲ.

ಅಂಬೇಡ್ಕರ್ ಬದುಕು ಬರಹ ಚಿಂತನೆಗಳಿಂದ ಪ್ರಭಾವಿತರಾದ ಮೂರ್ತಿ, ಒಬ್ಬ ಹೋರಾಟಗಾರ, ಹಿಂದುತ್ವವಾದಿ ಶಕ್ತಿಗಳ ತಾತ್ವಿಕ ವಿರೋಧಿ ಎನ್ನುವುದಷ್ಟೇ ಅವರ ಟ್ರೋಲಿಂಗ್‌ಗೆ ಮುಖ್ಯ ಕಾರಣ. ಹುಲಿಕುಂಟೆ ಮೂರ್ತಿಯವರ ಪ್ರಕರಣ ಇತ್ತೀಚಿನ ಒಂದು ನಿದರ್ಶನ ಮಾತ್ರ. ತನಗೆ ಒಲ್ಲದ ಸಿದ್ಧಾಂತ, ಪಕ್ಷ, ವ್ಯಕ್ತಿಗಳನ್ನು ಕಂಡಾಪಟ್ಟೆ ಟ್ರೋಲ್ ಮಾಡುವುದು ಸಂಘ ಪರಿವಾರದ – ಈಗ ಬಹುತೇಕ ಹಳೆಯದಾಗಿರುವ – ಒಂದು ತಂತ್ರ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇಂಥದ್ದೇ ಇನ್ನೊಂದು ಪ್ರಕರಣ, ಪ್ರಕಾಶ್ ರೈ ಅವರ ಬಗ್ಗೆ ವಿಶ್ವೇಶ್ವರ ಭಟ್ ಅವರು ಹಾಗೂ ಅವರ ಅಭಿಮಾನಿಗಳು ಟ್ವಿಟರ್‌ನಲ್ಲಿ ನಡೆಸುತ್ತಿರುವ ಅಭಿಯಾನ. ಪ್ರಕಾಶ್ ರೈ ಅವರ ಪತ್ನಿ ಯಾವುದೋ ದೇವಸ್ಥಾನದಲ್ಲಿ ಯಾವುದೋ ಪೂಜೆ ಮಾಡಿಸಿದರೆನ್ನುವುದು ಭಟ್ಟರ ಹೇಳಿಕೆ. ಅದನ್ನೇ ಆಧಾರವಾಗಿಟ್ಟುಕೊಂಡು ಪ್ರಕಾಶ್ ರೈ ಕುರಿತು ಅತ್ಯಂತ ಅಸಹ್ಯವಾದ ಕಮೆಂಟ್‌ಗಳು ಬಂದವು. ಪ್ರಕಾಶ್ ರೈ ಬಿಜೆಪಿ ವಿರೋಧಿ ಪಾಳಯದಲ್ಲಿರುವುದು ಇದಕ್ಕೆ ಕಾರಣ. ಆರ್‌ಎಸ್‌ಎಸ್‌ ವಿರುದ್ಧ ಧೈರ್ಯವಾಗಿ ಮಾತನಾಡುವ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ‘ಪ್ರಿಯಾಂಖ್ ಕರ್ರಗೆ’ ಎಂದು ಸಂಬೋಧಿಸುವುದು, ಕುಮಾರಸ್ವಾಮಿಯವರ ಬಣ್ಣದ ಬಗ್ಗೆ ಆಡಿಕೊಳ್ಳುವುದು ಮಾಡಲಾಯಿತು. ನಮಗೆ ಯಾವುದೇ ನಾಯಕನ ರಾಜಕೀಯ ನಡೆ, ಸಿದ್ಧಾಂತದ ಬಗ್ಗೆ ತಕರಾರು ಇದ್ದರೆ, ಅದನ್ನು ಅಭಿವ್ಯಕ್ತಿಸುವುದಕ್ಕೆ ಪ್ರಜಾಸತ್ತಾತ್ಮಕವಾದ ಮಾರ್ಗಗಳು, ಮಾದರಿಗಳು ಇವೆ. ಆದರೆ, ಅವರ ಬಣ್ಣ, ಚಹರೆ ಇತ್ಯಾದಿಗಳ ಆಧಾರದಲ್ಲಿ ಟ್ರೋಲ್ ಮಾಡುವುದು ಹೇಯವಾದ ಕೆಲಸ.

ಟ್ರೋಲಿಂಗ್ ಮಾಡುವುದು ಸಂಘ ಪರಿವಾರಕ್ಕೆ ತನ್ನ ಸೈದ್ಧಾಂತಿಕ ವಿರೋಧಿಗಳನ್ನು ಹಣಿಯುವ ಒಂದು ತಂತ್ರವಾಗಿದೆ. ಅದನ್ನು ಅತ್ಯಂತ ವ್ಯವಸ್ಥಿತವಾಗಿ ಮಾಡಲಾಗುತ್ತಿದೆ. ವ್ಯಕ್ತಿಯೊಬ್ಬನ ಬಣ್ಣ, ದೇಹ, ಜಾತಿ, ಲಿಂಗ ಇತ್ಯಾದಿಗಳ ಬಗ್ಗೆ ಆಡಿಕೊಳ್ಳುವುದು, ವ್ಯಂಗ್ಯ ಮಾಡುವುದು, ಕೀಳು ಅಭಿರುಚಿಯ ಟೀಕೆ, ಅಸಹ್ಯದ ಕಮೆಂಟ್‌ಗಳು ಇವೆಲ್ಲ ಟ್ರೋಲ್‌ನ ಭಾಗ. ತಮ್ಮ ವಾದದಲ್ಲಿ, ಸಿದ್ಧಾಂತದಲ್ಲಿ ಸತ್ಯ ಇಲ್ಲದೇ ಇದ್ದಾಗ ಇಂಥ ಹಾದಿ ಹಿಡಿಯಲಾಗುತ್ತದೆ. ಹಾಗೆಯೇ ತಮ್ಮ ವಿರೋಧಿಗಳು ಎಂದು ಯಾರನ್ನು ಸಂಘ ಪರಿವಾರ ಭಾವಿಸುತ್ತೋ ಅವರ ಬಗ್ಗೆ, ಅವರ ದೈಹಿಕ, ಸಾಮಾಜಿಕ ಸ್ಥಿತಿಗತಿಗಳ ಬಗ್ಗೆ, ಅವರ ಕುಟುಂಬ, ಮಕ್ಕಳು ಇತ್ಯಾದಿ ಬಗ್ಗೆ ಕಮೆಂಟ್ ಮಾಡುವುದು; ಸುಳ್ಳು, ತಿರುಚಿದ ಮಾಹಿತಿ, ತಪ್ಪು ಅಂಕಿ ಅಂಶಗಳ ಮೂಲಕ ಅವರ ಆತ್ಮಸ್ಥೈರ್ಯ ಕುಗ್ಗಿಸುವುದು, ವಿರೋಧವನ್ನು ದಮನ ಮಾಡುವುದು ಟ್ರೋಲಿಂಗ್‌ನ ಉದ್ದೇಶ. ನಾಗರಿಕ ಎನ್ನಿಸಿಕೊಂಡ ಜನವರ್ಗಗಳೇ ಟ್ರೋಲಿಂಗ್ ಮಾಡುವುದರಲ್ಲಿ ಮುಂದೆ ಇರುವುದು ವಿಪರ್ಯಾಸಕರ.

ಇಂಥವೆಲ್ಲ ಯಶಸ್ಸು ತಂದುಕೊಡುವ ಹಾಗಿದ್ದಿದ್ದರೆ ಈ ಬಾರಿ ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರಚಂಡ ಗೆಲುವು ಸಾಧಿಸಬೇಕಿತ್ತು. ಆದರೆ, ಜನ ಈಗ ಟ್ರೋಲರ್‌ಗಳ ಹಿಕಮತ್ತನ್ನು ಅರಿಯಬಲ್ಲಷ್ಟು ಪ್ರಬುದ್ಧರಾಗಿದ್ದಾರೆ. ಯಾವ ರೀತಿಯ ಪ್ರಚಾರ, ಇದರ ಹಿಂದಿನ ಉದ್ದೇಶ ಏನಿರಬಹುದು ಎಂಬುದನ್ನು ಅಂದಾಜಿಸಬಲ್ಲಷ್ಟು ಜಾಣರಾಗಿದ್ದಾರೆ. ರಾಹುಲ್ ಗಾಂಧಿಯನ್ನು ಪಪ್ಪು ಎಂದು ಟ್ರೋಲ್ ಮಾಡುತ್ತಿದ್ದ ಮಂದಿಯೇ ಇವತ್ತು ಅಚ್ಚರಿ ಪಡುವಂತೆ ಅವರು ಪ್ರಬುದ್ಧ ನಾಯಕನಾಗಿ ಬೆಳೆಯುವ ಲಕ್ಷಣಗಳನ್ನು ಕಂಡು ಕಂಗಾಲಾಗಿದ್ದಾರೆ. ಇವೆಲ್ಲ ಕೆಲವು ನಿದರ್ಶನಗಳಷ್ಟೇ. ಸದ್ಯ ಹುಲಿಕುಂಟೆ ಮೂರ್ತಿ ಈ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, 30 ಮಂದಿಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಸರ್ಕಾರ ಇಂಥ ಟ್ರೋಲರ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು, ಈ ಪ್ರವೃತ್ತಿಗೆ ಅಂತ್ಯ ಹಾಡಬೇಕಿದೆ.

ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಮೂರು ಪ್ರಕರಣಗಳು ಮತ್ತು ‘ಮಾನವಂತ’ ಮಾಧ್ಯಮಗಳು

ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ, ನಟ...

ಈ ದಿನ ಸಂಪಾದಕೀಯ | ಕೊಡುವ ಸ್ಥಾನದಲ್ಲಿರುವವರು ಒಳ್ಳೆಯದನ್ನೇ ಕೊಡಬೇಕು ಎಂದು ರಾಜ್ ಹೇಳಿದ್ದು ಯಾರಿಗೆ?

ಇಲ್ಲಿ ಯಾರು ಏನು ಬೇಕಾದರೂ ಮಾಡಬಹುದು, ಮಾತಾಡಬಹುದು. ಇಂತಹ ಪರಿಸ್ಥಿತಿ ನಿರ್ಮಾಣವಾಗಲು...