ತೆಲಂಗಾಣದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ 64 ಸ್ಥಾನಗಳಲ್ಲಿ ಭರ್ಜರಿ ಜಯ ಗಳಿಸುವುದರೊಂದಿಗೆ ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಯಾಗಿದ್ದು, ಇತ್ತೀಚೆಗಷ್ಟೇ ಮುಖ್ಯಮಂತ್ರಿಯಾಗಿ ರೇವಂತ್ ರೆಡ್ಡಿ ಅಧಿಕಾರ ಸ್ವೀಕರಿಸಿದ್ದರು. ರೇವಂತ್ ರೆಡ್ಡಿ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಹಿಂದಿನ ಸಿಎಂ ಚಂದ್ರಶೇಖರ್ ರಾವ್ ಅವರ ಬಿಆರ್‌ಎಸ್ ಪಕ್ಷದ ಹಗರಣಗಳು ಒಂದೊಂದಾಗಿ ಬಹಿರಂಗಗೊಳ್ಳುತ್ತಿದೆ.
ಹೊಸ ಬೆಳವಣಿಗೆಯೊಂದರಲ್ಲಿ, ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದ ಕೆಸಿಆರ್, ತಲಾ 3 ಕೋಟಿ ಬೆಲೆಬಾಳುವ ಸುಮಾರು 22 ಟೊಯೊಟಾ ಲ್ಯಾಂಡ್ ಕ್ರೂಸರ್ ಕಾರುಗಳನ್ನು ಖರೀದಿಸಿತ್ತಲ್ಲದೇ, ಅದನ್ನು ಯಾರಿಗೂ ತಿಳಿಯದಂತೆ ರಹಸ್ಯ ಸ್ಥಳದಲ್ಲಿ ಬಚ್ಚಿಟ್ಟಿದ್ದ ವಿಚಾರ ಬೆಳಕಿಗೆ ಬಂದಿದೆ.
ప్రతి పేదవాడికి సంక్షేమం అందాలి..
ప్రతి అర్హుడికి ప్రభుత్వ సేవలు చేరాలి…
రేపటి నుండి…
ప్రజా క్షేత్రంలోకి ప్రజాపాలన..
యంత్రాంగానికి దిశానిర్ధేశం. #TelanganaPrajaPrabhutwam pic.twitter.com/8RTLiXVBmr— Revanth Reddy (@revanth_anumula) December 27, 2023
“ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುತ್ತೇವೆ ಎಂಬ ಅತಿಯಾದ ಆತ್ಮವಿಶ್ವಾಸದಲ್ಲಿ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಸರ್ಕಾರವು, ಸುಮಾರು ₹66 ಕೋಟಿ ಖರ್ಚು ಮಾಡಿ 22 ಟೊಯೊಟಾ ಲ್ಯಾಂಡ್ ಕ್ರೂಸರ್ ಕಾರುಗಳನ್ನು ಖರೀದಿಸಿತ್ತು” ಎಂದು ಮುಖ್ಯಮಂತ್ರಿ ರೇವಂತ್ ರೆಡ್ಡಿ ಮಾಹಿತಿ ನೀಡಿದ್ದಾರೆ.
‘ಪ್ರಜಾ ಪಾಲನಾ’ ಸಾರ್ವಜನಿಕ ಸಂಪರ್ಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ನಡೆದ ಸಂವಾದದ ವೇಳೆ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
“ಮುಖ್ಯಮಂತ್ರಿಯಾಗಿ ನಾನು ಅಧಿಕಾರ ಸ್ವೀಕರಿಸಿದ ನಂತರ ನನಗಾಗಿ ಹೊಸ ವಾಹನಗಳನ್ನು ಖರೀದಿಸದಂತೆ ಅಧಿಕಾರಿಗಳಿಗೆ ತಿಳಿಸಿದ್ದೆ. ಹಳೆಯ ಕಾರುಗಳನ್ನೇ ರಿಪೇರಿ ಮಾಡಿ ಬಳಸುವಂತೆ ಸೂಚಿಸಿದ್ದೆ. ಈ ವೇಳೆ ಅಧಿಕಾರಿಗಳು ಹೊಸ ಕಾರುಗಳನ್ನು ಈಗಾಗಲೇ ಖರೀದಿಸಿರುವ ಬಗ್ಗೆ ನನಗೆ ಮಾಹಿತಿ ನೀಡಿದರು” ಎಂದು ಹೇಳಿದ್ದಾರೆ.
“ಹಿಂದಿನ ಕೆಸಿಆರ್ ಸರ್ಕಾರ 22 ಲ್ಯಾಂಡ್ ಕ್ರೂಸರ್ ವಾಹನಗಳನ್ನು ಖರೀದಿಸಿತ್ತು. ಅವೆಲ್ಲವೂ ವಿಜಯವಾಡದಲ್ಲಿವೆ. ಕೆಸಿಆರ್ ಮೂರನೇ ಬಾರಿಗೆ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಅವುಗಳನ್ನು ತರಲು ಆಲೋಚಿಸಿದ್ದೆವು ಎಂದು ಅಧಿಕಾರಿಗಳು ತಿಳಿಸಿದರು. ಅಧಿಕಾರಿಗಳ ಬಾಯಿಂದ ಈ ವಿಚಾರ ಕೇಳಿ ನನಗೆ ಒಮ್ಮೆಲೆ ಶಾಕ್ ಆಯಿತು” ಎಂದು ರೇವಂತ್ ರೆಡ್ಡಿ ತಿಳಿಸಿದ್ದಾರೆ.
” ಖರೀದಿಸಿದ್ದ 22 ಕಾರುಗಳೆಲ್ಲವೂ ಬುಲೆಟ್ ಪ್ರೂಫ್ ಕಾರುಗಳಾಗಿದ್ದು, ಒಂದು ಕಾರಿನ ಬೆಲೆ ಸುಮಾರು ₹3 ಕೋಟಿ ಇದೆ. ಈ ರೀತಿಯಲ್ಲಿ ಕೆಸಿಆರ್ ಸರ್ಕಾರವು, ರಾಜ್ಯದ ಸಂಪತ್ತನ್ನು ಕೊಳ್ಳೆ ಹೊಡೆಯಲು ಹೊರಟಿತ್ತು” ಎಂದು ನೂತನ ಸಿಎಂ ರೇವಂತ್ ರೆಡ್ಡಿ ಹೇಳಿದ್ದಾರೆ.