ಆ್ಯಪಲ್ ಫೋನ್ ತಯಾರಿಸುವ ಫಾಕ್ಸ್ಕಾನ್ ಕಂಪನಿಗೆ ಬಿಡಿಭಾಗಗಳನ್ನು ತಯಾರಿಸಿ ಕೊಡುವ ಎಸ್ಎಫ್ಎಸ್ ಕಂಪನಿ ಬೆಳಗಾವಿಯಲ್ಲಿ 250 ಕೋಟಿ ರೂ. ಬಂಡವಾಳ ಹೂಡಿಕೆಗೆ ಮುಂದೆ ಬಂದಿದೆ.
ಇದಕ್ಕಾಗಿ ಎಸ್ಎಫ್ಎಸ್ ಕಂಪನಿ 30 ಎಕರೆ ಭೂಮಿಯನ್ನು ಒದಗಿಸುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ ಬಿ ಪಾಟೀಲ್ ಅವರ ಮುಂದೆ ಮನವಿ ಇಟ್ಟಿದೆ.
ಈ ಸಂಗತಿಯನ್ನು ಎಂ ಬಿ ಪಾಟೀಲ್ ಅವರು ಟ್ವೀಟ್ ಮೂಲಕ ಹಂಚಿಕೊಂಡಿದ್ದು, “ಮನವಿ ಪರಿಶೀಲಿಸಿ, ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ” ಭರವಸೆ ನೀಡಿದ್ದಾರೆ. ಎಸ್ಎಫ್ಎಸ್ ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ ಫಾರಸ್ ಶಾ ನೇತೃತ್ವದ ನಿಯೋಗ ಬೆಂಗಳೂರಿನಲ್ಲಿ ಸಚಿವರ ಬಳಿ ಚರ್ಚಿಸಿದೆ.
500 ತಂತ್ರಜ್ಞರಿಗೆ ಉದ್ಯೋಗ
“ಎಸ್ಎಫ್ಎಸ್ ಕಂಪನಿ ಈಗಾಗಲೇ ಬೆಳಗಾವಿಯಲ್ಲಿ ಏರೋಸ್ಪೇಸ್ ಉದ್ಯಮಕ್ಕೆ ಬೇಕಾಗುವ ಬಿಡಿಭಾಗಗಳನ್ನು ತಯಾರಿಸುತ್ತಿದೆ. ಈಗ ಅದು ಆ್ಯಪಲ್ ಫೋನ್ಗೆ ಬೇಕಾಗುವ ಬಿಡಿಭಾಗಗಳ ತಯಾರಿಕ ಘಟಕವನ್ನು ರಾಜ್ಯದಲ್ಲಿ ತೆರೆಯಲು ಮುಂದಾಗಿದೆ. ಇದರಿಂದ ಮುಂದಿನ ಮೂರು ವರ್ಷಗಳಲ್ಲಿ 500 ತಂತ್ರಜ್ಞರಿಗೆ ಉದ್ಯೋಗ ಸಿಗಲಿದೆ. ಇದರ ಜತೆಗೆ ಪರೋಕ್ಷವಾಗಿ ನೂರಾರು ಉದ್ಯೋಗಗಳು ಸೃಷ್ಟಿಯಾಗಲಿವೆ. ಇದರಿಂದ ರಾಜ್ಯದ ಆರ್ಥಿಕತೆಗೂ ಅನುಕೂಲವಾಗಲಿದೆ” ಎಂದು ಎಂ ಬಿ ಪಾಟೀಲ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.