“ನಮ್ಮ ಶಾಸಕರಿಗೆ ಬಿಜೆಪಿ ₹50 ಕೋಟಿ ಆಮಿಷ ಒಡ್ಡುತ್ತಿದೆ. ನಮ್ಮ ಶಾಸಕರು ಆಮಿಷಕ್ಕೆ ಬಲಿಯಾಗುವುದಿಲ್ಲ” ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಇಂದು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ವೇಳೆ ಕಾಂಗ್ರೆಸ್ ಆಡಳಿತವಿರುವ ಹಿಮಾಚಲ ಪ್ರದೇಶವನ್ನು ಬಿಜೆಪಿ ಗುರಿಯಾಗಿಸಿಕೊಂಡಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, “ಬಿಜೆಪಿ ಎಂದಿಗೂ ಜನರ ಆಶೀರ್ವಾದ ಪಡೆದು ಅಧಿಕಾರಕ್ಕೆ ಬಂದೇ ಇಲ್ಲ. ಆಪರೇಷನ್ ಕಮಲ ಮಾಡಿಯೇ ಬಂದಿದ್ದಾರೆ. 113ಕ್ಕಿಂತ ಹೆಚ್ಚು ಗೆದ್ದೇ ಇಲ್ಲ. 2018ರಲ್ಲಿ 100 ಗೆದ್ದಿದ್ದರು. ಕರ್ನಾಟಕದಲ್ಲಿಯೂ ಆಪರೇಷನ್ ಕಮಲ ಪ್ರಯತ್ನ ಮಾಡುತ್ತಾರೆ. ಆದರೆ ನಮ್ಮ ಶಾಸಕರು ಅವರ ಆಸೆ ಆಮಿಷಗಳಿಗೆ ಬಲಿಯಾಗುವುದಿಲ್ಲ. ಅವರು ಈಗ 50 ಕೋಟಿ ಆಮಿಷವೊಡ್ಡುತ್ತಿದ್ದಾರೆ” ಎಂದು ತಿಳಿಸಿದರು.
ರಾಮೇಶ್ವರ ಕೆಫೆಯಲ್ಲಿ ಸ್ಪೋಟ ಪ್ರಕರಣದ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, “ಸ್ಪೋಟ ಘಟನೆಯ ತನಿಖೆ ತೀವ್ರವಾಗಿ ನಡೆಯುತ್ತಿದೆ. ತಪ್ಪಿತಸ್ಥರ ವಿರುದ್ಧ ಖಚಿತವಾಗಿ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.
“ರಾಜ್ಯದಲ್ಲಿ ಇಂಥದ್ದು ನಡೆಯಬಾರದಿತ್ತು. ಮಂಗಳೂರಿನಲ್ಲಿ ಆಗಿದ್ದು ಬಿಟ್ಟರೆ ಪುನ: ಇಂಥ ಘಟನೆ ಸಂಭವಿಸಿದೆ. ಯಾರು ಇದನ್ನು ಮಾಡಿದ್ದಾರೆ ಎಂದು ಪತ್ತೆ ಹಚ್ಚಿ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದರು.
ಇದನ್ನು ಓದಿದ್ದೀರಾ? ರಾಮೇಶ್ವರಂ ಕೆಫೆ | ಎನ್‌ಐಎ, ಐಬಿಗೆ ಸ್ಪೋಟದ ಬಗ್ಗೆ ಮಾಹಿತಿ: ಅಲೋಕ್ ಮೋಹನ್
“ವಿರೋಧ ಪಕ್ಷಗಳು ಈ ವಿಷಯಗಳ ಬಗ್ಗೆ ರಾಜಕಾರಣ ಮಾಡಬಾರದು. ಎಲ್ಲರೂ ಸಹಕರಿಸಬೇಕು ಎಂದರು. ಪೋಲಿಸರೊಂದಿಗೆ ಮಾತನಾಡಿದ್ದು, ಸದ್ಯದಲ್ಲಿಯೇ ಪೂರ್ಣ ಚಿತ್ರಣ ಸಿಗಲಿದೆ. ವಿಚಾರಣೆ ತ್ವರಿತಗತಿಯಲ್ಲಿ ನಡೆದಿದೆ” ಎಂದರು.
