ಲೋಕಸಭಾ ಚುನಾವಣೆಯಲ್ಲಿ 49 ಸ್ಥಾನಗಳಿಗೆ 5ನೇ ಹಂತದ ಮತದಾನ ಸೋಮವಾರ ಮುಗಿದಿದೆ. ದೇಶದ ‘ಹೆವಿವೇಯ್ಟ್’ ಕ್ಷೇತ್ರಗಳಾಗಿರುವ ಉತ್ತರ ಪ್ರದೇಶದ ರಾಯ್‌ಬರೇಲಿ, ಅಮೇಥಿ ಮತ್ತು ಪೈಜಾಬಾದ್, ಮಹಾರಾಷ್ಟ್ರ ಮುಂಬೈನಗರ ಪ್ರದೇಶಗಳು, ಥಾಣೆ ಮತ್ತು ನಾಸಿಕ್ ಕ್ಷೇತ್ರಗಳಲ್ಲಿ ಮತದಾನ ನಡೆದಿದೆ. ಬಿಜೆಪಿ ತನ್ನ ಭದ್ರಕೋಟೆಯನ್ನಾಗಿ ಮಾಡಿಕೊಂಡಿರುವ ಉತ್ತರ ಪ್ರದೇಶದ 14 ಸ್ಥಾನಗಳು ಹಾಗೂ ಟಿಎಂಸಿಯ ಆಡಳಿತ ಕೋಟೆ ಬಂಗಾಳದ 7 ಸ್ಥಾನಗಳು ಮತದಾನ ಎದುರಿಸಿವೆ. ಪಕ್ಷಗಳೇ ಒಡೆದು, ಛಿದ್ರವಾಗಿರುವ ಮಹಾರಾಷ್ಟ್ರದಲ್ಲಿ 13 ಸ್ಥಾನಗಳಿಗೆ ಮತದಾನವಾಗಿದೆ. ಒಡಿಶಾದ ನೈರುತ್ಯ ಭಾಗದಲ್ಲಿ ಏಕಕಾಲದಲ್ಲಿ ವಿಧಾನಸಭಾ ಮತ್ತು ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆದಿದೆ.
ದೇಶಾದ್ಯಂತ ಬಿಜೆಪಿಯನ್ನು ಮಣಿಸಲು ಕಸರತ್ತು ನಡೆಸುತ್ತಿರುವ ‘ಇಂಡಿಯಾ’ ಮೈತ್ರಿಕೂಟಕ್ಕೆ ಈ ಮತದಾನವು ಬಹುಮುಖ್ಯವಾಗಿದ್ದು, ಮತದಾನದಲ್ಲಿ ಬಿಜೆಪಿ ವಿರುದ್ಧ ಆಡಳಿತ ವಿರೋಧಿ ಅಲೆಯೂ ಕಂಡುಬಂದಿದೆ.
ಸೋಮವಾರ ಮತದಾನ ನಡೆದ 8 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾನ ನಡೆದಿದ್ದು, 2019ರ ಚುನಾವಣೆಗೆ ಹೋಲಿಸಿದರೆ, ಈ ವರ್ಷ 5ನೇ ಹಂತದಲ್ಲಿ 2.5% ಮತದಾನದ ಪ್ರಮಾಣ ಕುಸಿದಿದೆ. 2024 ಚುನಾವಣೆಯ ಮತದಾನದ ನಿಖರ ಅಂಕಿಅಂಶವನ್ನು ಚುನಾವಣಾ ಆಯೋಗ ಬಿಡುಗಡೆ ಮಾಡಿಲ್ಲ. ಆದರೂ, 60.09% ಮತದಾನವಾಗಿದೆ ಎಂದು ಅಂದಾಜಿಸಲಾಗಿದೆ. 2019ರಲ್ಲಿ 62.5% ಮತದಾನವಾಗಿತ್ತು
ಅದಾಗ್ಯೂ, 5ನೇ ಹಂತದ ಮತದಾನದಲ್ಲಿ ಜಮ್ಮು-ಮತ್ತು ಕಾಶ್ಮೀರದಲ್ಲಿ ಮಾತ್ರವೇ 2019ಕ್ಕಿಂತ ಹೆಚ್ಚಿನ ಪ್ರಮಾಣದ ಮತದಾನವಾಗಿದೆ. 2019ರಲ್ಲಿ ಜಮ್ಮು-ಕಾಶ್ಮೀರದ ಬರಮುಲ್ಲಾದಲ್ಲಿ 34.6% ಮತದಾನವಾಗಿತ್ತು. ಈ ಬಾರಿ, ಬರೋಬ್ಬರಿ 56.73% ಮತದಾನ ನಡೆದಿದೆ. ಜಮ್ಮು-ಕಾಶ್ಮೀರ ರಾಜ್ಯವಾಗಿದ್ದಾಗ ಅದರ ಭಾಗವೇ ಆಗಿದ್ದ ಲಡಾಖ್‌ನಲ್ಲಿಯೂ ಮತದಾನ ನಡೆದಿದ್ದು, ಅಲ್ಲಿ, ಮತದಾನ ಪ್ರಮಾಣ ಕುಸಿದಿದೆ. 2019ರಲ್ಲಿ 71.05% ಮತದಾನವಾಗಿತ್ತು. ಪ್ರಸ್ತುತ 69.6% ಮತದಾನವಾಗಿದೆ.
ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ, ಅಲ್ಲಿ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದ್ದು, ಜನರು ಕೇಂದ್ರ ಸರ್ಕಾರದ ವಿರುದ್ಧದ ಸಿಟ್ಟನ್ನು ತಮ್ಮ ಮತದಾನದ ಮೂಲಕ ವ್ಯಕ್ತಪಡಿಸುತ್ತಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ಕಳೆದ 35 ವರ್ಷಗಳಲ್ಲಿಯೇ ಮೊದಲ ಬಾರಿಗೆ ಹೆಚ್ಚಿನ ಮತದಾನ ದಾಖಲಾಗಿದೆ. ಇದು, ತಮ್ಮ ಹಕ್ಕುಗಳನ್ನು ಕಸಿದುಕೊಂಡ ಕೇಂದ್ರ ಎನ್‌ಡಿಎಯನ್ನು ಸೋಲಿಸಬೇಕೆಂದು ಅಲ್ಲಿನ ಜನರು ನಿರ್ಧರಿಸಿರುವುದರ ಸೂಚಕವಾಗಿದೆ.
ಉಳಿದಂತೆ, ಸೋಮವಾರ ಮತದಾನ ನಡೆದ ಎಲ್ಲ 6 ರಾಜ್ಯಗಳಲ್ಲಿಯೂ ಮತದಾನ ಕುಸಿದಿದೆ. ಬಿಜೆಪಿ ತನ್ನ ಅಧಿಕಾರದಾಹದಿಂದ ಸ್ಥಳೀಯ ಪಕ್ಷಗಳನ್ನೇ ಇಬ್ಭಾಗ ಮಾಡಿದ ಮಹಾರಾಷ್ಟ್ರದಲ್ಲಿ 13 ಸ್ಥಾನಗಳಿಗೆ ಮತದಾನ ನಡೆದಿದೆ. 2019ರಲ್ಲಿ 55.7% ಮತದಾನವಾಗಿತ್ತಾದರೂ, ಈ ಬಾರಿ, 54.3% ಮತದಾನವಾಗಿದೆ.
5ನೇ ಹಂತದ ಮತದಾನ | ||
ರಾಜ್ಯಗಳು | 2019 | 2024 |
ಬಿಹಾರ-5 | 57.2 | 54.9 |
ಜಾರ್ಖಂಡ್-3 | 65.6 | 63.1 |
ಜೆ&ಕೆ-1 | 34.6 | 56.7 |
ಲಡಾಖ್-1 | 71.1 | 69.6 |
ಮಹಾರಾಷ್ಟ್ರ-13 | 55.7 | 54.3 |
ಒಡಿಶಾ-5 | 72.9 | 68 |
ಉತ್ತರ ಪ್ರದೇಶ-14 | 58.6 | 57.8 |
ಪಶ್ಚಿಮ ಬಂಗಾಳ-7 | 80.1 | 74.7 |
ಒಟ್ಟು | 62.5 | 60.9 |
ಕಾಂಗ್ರೆಸ್ ನೇತೃತ್ವದ ಮಹಾವಿಕಾಸ್ ಅಗಾಢಿ ಸರ್ಕಾರವನ್ನು ಉರುಳಿಸಿದ ಬಿಜೆಪಿಯು ಕಾಂಗ್ರೆಸ್ ಜೊತೆಗಿದ್ದ ಶಿವಸೇನೆ ಮತ್ತು ಎನ್‌ಸಿಪಿ – ಎರಡೂ ಪಕ್ಷಗಳನ್ನು ಒಡೆದುಹಾಕಿದೆ. ಶರದ್ ಪವಾರ್ ಅವರ ಎನ್‌ಸಿಪಿಯನ್ನು ಅಜಿತ್ ಪವಾರ್ ಒಡೆದರೆ, ಉದ್ಧವ್ ಠಾಕ್ರೆಯ ಶಿವಸೇನೆಯನ್ನು ಏಕನಾಥ್ ಶಿಂಧೆ ಒಡೆದು ಬಿಜೆಪಿ ಜೊತೆ ಸೇರಿದ್ದಾರೆ. ಸಧ್ಯ, ಬಿಜೆಪಿ ನೇತೃತ್ವದ ಮಹಾರಾಷ್ಟ್ರ ಸರ್ಕಾರದಲ್ಲಿ ಶಿಂಧೆ ಮುಖ್ಯಮಂತ್ರಿ, ಅಜಿತ್ ಉಪಮುಖ್ಯಮಂತ್ರಿಯಾಗಿದ್ದಾರೆ. ಪಕ್ಷಗಳನ್ನೇ ಒಡೆದ ಬಿಜೆಪಿ ವಿರುದ್ಧ ರಾಜ್ಯದ ಜನರು ಆಕ್ರೋಶಗೊಂಡಿದ್ದಾರೆ. ಮುಂಬೈ ನಗರದಲ್ಲಿರುವ ಕ್ಷೇತ್ರಗಳನ್ನು ಉದ್ಧವ್ ಅವರ ಬಣ ಭದ್ರಕೋಟೆಯೆಂದು ಪರಗಣಿಸಿದೆ. ಅಲ್ಲಿ, ಮತದಾನ ಕಡಿಮೆಯಾಗಿದ್ದರೂ, ಬಿಜೆಪಿ ವಿರೋಧಿ ಮತದಾರರು ಮತಚಲಾಯಿಸಿದ್ದಾರೆ ಎಂದು ಹೇಳಲಾಗಿದೆ. ಇನ್ನು, ಥಾಣೆ ಮತ್ತು ನಾಸಿರ್‌ನಲ್ಲಿಯೂ ‘ಇಂಡಿಯಾ’ ಮೈತ್ರಿಕೂಟದ ಪರವಾಗಿಯೇ ಮತದಾರರ ಮತ ಚಲಾಯಿಸಿದ್ದಾರೆ ಎನ್ನಲಾಗಿದೆ.
ಉತ್ತರ ಪ್ರದೇಶದಲ್ಲಿ 14 ಸ್ಥಾನಗಳಿಗೆ ಮತದಾನ ನಡೆದಿದ್ದು, 57.8% ಮತದಾನವಾಗಿದೆ. ಇಲ್ಲಿ, 2019ರಲ್ಲಿ 58.6% ಮತದಾನವಾಗಿತ್ತು. ಉತ್ತರ ಪ್ರದೇಶ ಸದ್ಯಕ್ಕೆ ಬಿಜೆಪಿಯ ಭದ್ರಕೋಟೆಯೇ ಆಗಿದ್ದರು. ಅದನ್ನು ಒಡೆಯಲು ಕಾಂಗ್ರೆಸ್, ಎಸ್‌ಪಿ ಭಾರೀ ತಂತ್ರ ಎಣೆಯುತ್ತಿವೆ. ರಾಮಮಂದಿರದ ಹೆಸರಿನಲ್ಲಿ ಮತ್ತೆ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಬಿಜೆಪಿ ಮುಂದಾಗಿದ್ದರೂ, ಮಂದಿರದ ವಿಚಾರ ಬಿಜೆಪಿಯ ಕೈಹಿಡಿಯುತ್ತಿಲ್ಲ. ಮಂದಿರಕ್ಕೆ ಪತ್ರಿಯಾಗಿ ನಿತ್ಯ ಜೀವನೋಪಾಯದ ವಿಷಯವನ್ನು ಮುನ್ನೆಲೆಗೆ ತಂದಿರುವ ವಿಪಕ್ಷಗಳ ಮೂಲಭೂತ ಸೌಲಭ್ಯಗಳನ್ನು ಚುನಾವಣಾ ವಿಷಯವನ್ನಾಗಿಸಿವೆ.
ಇದು, ಬಿಜೆಪಿಗೆ ಅರಗಿಸಿಕೊಳ್ಳಲಾಗದ ತುತ್ತಾಗಿದೆ. ಸ್ವತಃ ಪ್ರಧಾನಿ ಮೋದಿ ಪ್ರತಿನಿಧಿಸುವ ವಾರಣಾಸಿಯ ಚಿತ್ರಣವು ಬಿಜೆಪಿ ಸರ್ಕಾರದ ವೈಫಲ್ಯಕ್ಕೆ ಕನ್ನಡಿ ಹಿಡಿದಿದೆ. ಬಿಜೆಪಿಯ ಬಾಯಿ ಮಾತಿನ ಅಭಿವೃದ್ಧಿ ಬಗ್ಗೆ ಜನರು ಬೇಸರಗೊಂಡಿದ್ದಾರೆ. ಅದರಲ್ಲೂ ಕಾಂಗ್ರೆಸ್‌ನ ಭದ್ರಕೋಟೆಯಾಗಿರುವ ರಾಯ್‌ಬರೇಲಿ ಮತ್ತು ಅಮೇಥಿಯಲ್ಲಿ ಸೋಮವಾರ ಮತದಾನ ನಡೆದಿದೆ. ಜೊತೆಗೆ, ಎಸ್‌ಪಿ ಕೂಡ ಪ್ರಬಲವಾಗಿ ಚುನಾವಣಾ ಕಣದಲ್ಲಿದೆ. ಇದು, ರಾಮಮಂದಿರದ ನೆಲದಲ್ಲಿಯೇ ಬಿಜೆಪಿಗೆ ನಡುಕ ಹುಟ್ಟಿಸಿದೆ.
ಬಿಹಾರದಲ್ಲಿ 5 ಸ್ಥಾನಗಳಿಗೆ 54.9% ಮತದಾನವಾಗಿದೆ. ಇಲ್ಲಿ, 2019ರಲ್ಲಿ 57.2% ಮತದಾನವಾಗಿತ್ತು. ಇತ್ತೀಚೆಗಷ್ಟೇ, ಬಿಹಾರದಲ್ಲೂ ಮೈತ್ರಿ ಸರ್ಕಾರವನ್ನು ಕಡೆವಿ, ನಿತೀಶ್ ಅವರನ್ನು ತಮ್ಮ ಬುಟ್ಟಿಗೆ ಎಳೆದುಕೊಂಡು ಬಿಜೆಪಿ ಸರ್ಕಾರ ರಚಿಸಿದೆ. ಈ ಅಪವಿತ್ರ ಮೈತ್ರಿಯು ಬಿಹಾರ ಜನರಲ್ಲಿ ಅಸಮಧಾನ ಹುಟ್ಟಿಸಿದೆ. ಜೊತೆಗೆ, ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ತೇಜಸ್ವಿ ಯಾದವ್ ಅವರು ನಿರುದ್ಯೋಗ ಮತ್ತು ವಲಸೆ ಸಮಸ್ಯೆಗಳನ್ನು ಚುನಾವಣಾ ವಿಚಾರವಾಗಿದ್ದಾರೆ. ಆರ್‌ಜೆಡಿ ಜೊತೆ ಕೈಜೋಡಿಸಿರುವ ಕಾಂಗ್ರೆಸ್ ಕೂಡ ತನ್ನ ಗ್ಯಾರಂಟಿಗಳ ಮೇಲೆ ಬಿರುಸಿನಿಂದ ಮುನ್ನುಗ್ಗುತ್ತಿದೆ. ಮೂಲಭೂತ ಸಮಸ್ಯೆಗಳ ವಿಚಾರವು ‘ಇಂಡಿಯಾ’ ಮೈತ್ರಿಕೂಟಕ್ಕೆ ಬಲ ತಂದುಕೊಟ್ಟರೆ, ಎನ್‌ಡಿಎಗೆ ಪ್ರತಿಕೂಲವಾಗಿದೆ.
ಒಡಿಶಾದಲ್ಲಿ 5 ಸ್ಥಾನಗಳಿಗೆ ಒಟ್ಟು 68% ಮತದಾನವಾಗಿದ್ದು, 2019ರಲ್ಲಿ 72.9% ಮತದಾನವಾಗಿತ್ತು. ಅದೇ ರೀತಿ, ಪಶ್ಚಿಮ ಬಂಗಾಳದಲ್ಲಿ 7 ಸ್ಥಾನಗಳಿಗೆ 74.7% ಮತದಾನವಾಗಿದೆ. ಈ ಹಿಂದೆ, 80.1% ಮತದಾನವಾಗಿತ್ತು. ಒಡಿಶಾದಲ್ಲಿ ಬಿಜು ಜನತಾ ದಳ (ಬಿಜೆಡಿ) ಪ್ರಬಲವಾಗಿದ್ದರೆ, ಬಂಗಾಳದಲ್ಲಿ ಟಿಎಂಸಿ ಗಟ್ಟಿಯಾಗಿದೆ. ಈ ರಾಜ್ಯಗಳಲ್ಲಿ ಎರಡೂ ಪಕ್ಷಗಳ ಭವಿಷ್ಯ ನಿರ್ಧರಿಸುವಲ್ಲಿ ಮಹಿಳಾ ಮತದಾರರು ನಿರ್ಣಾಯಕರಾಗಿದ್ದಾರೆ. ಉಭಯ ರಾಜ್ಯಗಳಲ್ಲಿ ಬಿಜೆಡಿ (ಕಿಶೋರಿ ಶಕ್ತಿ ಯೋಜನೆ) ಮತ್ತು ಟಿಎಂಸಿ (ಲಕ್ಷ್ಮೀ ಭಂಡಾರ್ ಯೋಜನೆ) ಮಹಿಳೆಯರಿಗಾಗಿ ತಂದಿರುವ ಯೋಜನೆಗಳು ಮಹಿಳೆಯರ ವಿಶ್ವಾಸ ಗಳಿಸಿವೆ. ಜೊತೆಗೆ, ಬಿಜೆಪಿಯ ಕೋಮುವಾದಿ ರಾಜಕೀಯಕ್ಕೆ ಎರಡೂ ರಾಜ್ಯಗಳಲ್ಲಿ ನೆಲೆ ಇಲ್ಲ. ಹೀಗಾಗಿ, ಒಡಿಶಾ ಮತ್ತು ಬಂಗಾಳದಲ್ಲಿ ಬಿಜೆಪಿ 2019ರಲ್ಲಿ ಗಳಿಸಿದ್ದ ಸ್ಥಾನಗಳಿಗಿಂತ ಕಡಿಮೆ ಸ್ಥಾನಗಳಿಗೆ ಕುಸಿಯುವುದು ನಿಶ್ಚಿತವೆಂಬ ಅಭಿಪ್ರಾಯಗಳಿವೆ.
ಇನ್ನು, ಜಾರ್ಖಂಡ್‌ನಲ್ಲಿ ಮತದಾನ ನಡೆದ 3 ಸ್ಥಾನಗಳಿಗೆ ಒಟ್ಟು 63.1% ಮತದಾನವಾಗಿದೆ. 2019ರಲ್ಲಿ 65.6% ಮತದಾನವಾಗಿತ್ತು. ಇಲ್ಲಿ, ಪ್ರಾದೇಶಿಕ ಪಕ್ಷಗಳದ್ದೇ ಪಾರುಪತ್ಯವಿದ್ದು, ಬಿಜೆಪಿಗೆ ನೆಲೆಯಿಲ್ಲ. ಅಲ್ಲದೆ, ಅಲ್ಲಿ, ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಅಧಿಕಾರದಲ್ಲಿದ್ದು, ಇದು ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಮೈತ್ರಿಯ ಭಾಗವಾಗಿದೆ. ಜಾರ್ಖಂಡ್‌ನಲ್ಲಿ ಸ್ಥಳೀಯ ಅಭಿವೃದ್ಧಿ, ಮೂಲ ಸೌಕರ್ಯಗಳೇ ಪ್ರಧಾನ ರಾಜಕೀಯ ಅಂಶವಾಗಿದ್ದು, ಕೋಮುವಾದಿ, ವಿಭಜಿತ ಸಿದ್ಧಾಂತಗಳಿಗೆ ನೆಲೆ ಇಲ್ಲ. ಇದು, ರಾಜ್ಯದಲ್ಲಿ ಬಿಜೆಪಿಗೆ ಹಿನ್ನಡೆ ಉಂಟು ಮಾಡುತ್ತದೆ ಎಂದು ರಾಜಕೀಯ ತಜ್ಞರು ಹೇಳುತ್ತಿದ್ದಾರೆ.
ಒಟ್ಟಿನಲ್ಲಿ, ಈಗಾಗಲೇ 5 ಹಂತಗಳ ಮತದಾನ ಮುಗಿದಿದ್ದು, 25 ರಾಜ್ಯಗಳ 428 ಸ್ಥಾನಗಳಿಗೆ ಮತದಾನ ಪೂರ್ಣಗೊಂಡಿದೆ. ಇನ್ನು, 2 ಹಂತಗಳಲ್ಲಿ 115 ಸ್ಥಾನಗಳಿಗೆ ಮತದಾನ ಬಾಕಿ ಇದೆ. ಈಗಾಗಲೇ ಮತದಾನ ಮುಗಿದಿರುವ ಸ್ಥಾನಗಳಲ್ಲಿ ಬಿಜೆಪಿಗೆ ಸ್ಥಾನಗಳು ದೊರೆಯುವುದಿಲ್ಲ ಎಂಬ ಅಭಿಪ್ರಾಯಗಳು ದೇಶಾದ್ಯಂತ ವ್ಯಕ್ತವಾಗುತ್ತಿವೆ. ಈ ನಡುವೆ, ಪ್ರಧಾನಿ ಮೋದಿ ಮತ್ತೆ ಪ್ರಧಾನಿ ಆಗುವುದಿಲ್ಲ. ಎನ್‌ಡಿಎ ಅಧಿಕಾರಕ್ಕೆ ಬರುವುದಿಲ್ಲ. ಮಿಗಿಲಾಗಿ ಎನ್‌ಡಿಎ ಈ ಬಾರಿ 195 ಸ್ಥಾನಗಳನ್ನೂ ದಾಟುವುದಿಲ್ಲ ಎಂದು ಹಲವಾರು ಸಮೀಕ್ಷೆಗಳು, ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ. ಇದು, ಬಿಜೆಪಿಯಲ್ಲಿ ಆತಂಕ ಹುಟ್ಟಿಸಿದೆ. ಮುಂದಿನ ಅಧಿಕಾರ ಯಾರದ್ದಾಗಲಿದೆ ಜೂನ್ 4ರವರೆಗೆ ಕಾದು ನೋಡಬೇಕಿದೆ.