ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ವಿಪ್ ಉಲ್ಲಂಘನೆಯ ಕಾರಣ 7 ಮಂದಿ ನಗರಸಭೆ ಸದಸ್ಯರ ಸದಸ್ಯತ್ವ ರದ್ದುಗೊಳಿಸಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳ ನ್ಯಾಯಾಲಯ ಏ.28ರಂದು ಆದೇಶ ಹೊರಡಿಸಿದೆ.
ಶಿಡ್ಲಘಟ್ಟ ನಗರದ 3ನೇ ವಾರ್ಡ್ ಸದಸ್ಯೆ ಎಸ್ ಚಿತ್ರಾ ಮನೋಹರ್, 10ನೇ ವಾರ್ಡ್‌ನ ಎಸ್ ಎಂ ಮಂಜುನಾಥ್, 11ನೇ ವಾರ್ಡ್‌ನ ಅನಿಲ್ ಕುಮಾರ್, 16ನೇ ವಾರ್ಡಿನ ಎನ್ ಕೃಷ್ಣಮೂರ್ತಿ, 22ನೇ ವಾರ್ಡಿನ ಮಂಜುನಾಥ್ ಟಿ, 28ನೇ ವಾರ್ಡಿನ ಜಬೀವುಲ್ಲಾ, 7ನೇ ವಾರ್ಡಿನ ಶಿವಮ್ಮ ಮುನಿರಾಜು ಅನರ್ಹರಾಗಿರುವ ಶಿಡ್ಲಘಟ್ಟ ನಗರಸಭೆ ಸದಸ್ಯರು.

ಕಳೆದ 2024ರ ಸೆಪ್ಟೆಂಬರ್ ತಿಂಗಳಲ್ಲಿ ನಡೆದ ಶಿಡ್ಲಘಟ್ಟ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸದೆ ವಿರೋಧ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುವ ಮೂಲಕ ಕಾಂಗ್ರೆಸ್ ಪಕ್ಷದ 7 ಮಂದಿ ಸದಸ್ಯರು ವಿಪ್ ಉಲ್ಲಂಘನೆ ಮಾಡಿದ್ದರು. ಈ ಕುರಿತು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಎನ್.ಕೇಶವರೆಡ್ಡಿ ಮತ್ತು 31ನೇ ವಾರ್ಡಿನ ಸದಸ್ಯ ಎಂ ಶ್ರೀನಿವಾಸ್ ಸೆ.26ರಂದು ನಗರಸಭೆ ಪೌರಾಯುಕ್ತರಿಗೆ ಲಿಖಿತ ದೂರು ಸಲ್ಲಿಸಿದ್ದರು.
ದೂರಿನ ಮೇರೆಗೆ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಗಿದ್ದು, ನಗರಸಭೆ ಸದಸ್ಯರು ವಿಪ್ ಉಲ್ಲಂಘಿಸಿರುವುದು ದಾಖಲೆಗಳಿಂದ ಸಾಬೀತಾಗಿರುತ್ತದೆ. ಕರ್ನಾಟಕ ಸ್ಥಳೀಯ ಪ್ರಾಧಿಕಾರಗಳ ಅಧಿನಿಯಮ 1987 ಕಲಂ 4ರಡಿಯಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಜಿಲ್ಲಾ ಚುನಾವಣಾಧಿಕಾರಿಗಳ ನ್ಯಾಯಾಲಯ ಪುರಸ್ಕರಿಸಿದ್ದು, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಪಿ ಎನ್ ರವೀಂದ್ರ ಅವರು, ವಿಪ್ ಉಲ್ಲಂಘಿಸಿರುವ 7 ಮಂದಿ ಸದಸ್ಯರನ್ನು ಅನರ್ಹಗೊಳಿಸಿ ಆದೇಶಿಸಿದ್ದಾರೆ.