ಆಧಾರ್ ಕಾರ್ಡ್ ಪೌರತ್ವದ ಪುರಾವೆಯಲ್ಲ. ಸುಪ್ರೀಂ ಕೋರ್ಟ್ ತನ್ನ ಮಧ್ಯಂತರ ಆದೇಶದಲ್ಲಿ ಆಧಾರ್ ಅನ್ನು SIRಗೆ ಮಾನ್ಯ ದಾಖಲೆಯಾಗಿ ಬಳಸಬೇಕೆಂದು ಸೂಚಿಸಿಲ್ಲ ಅಥವಾ ನಿರ್ದೇಶಿಸಿಲ್ಲ. ವಿರೋಧ ಪಕ್ಷವು ಈ ವಿಷಯದ ಬಗ್ಗೆ ಅಪಪ್ರಚಾರ ಮಾಡುತ್ತಿದೆ ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಹೇಳಿದ್ದಾರೆ.
ಬಿಹಾರದಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ(SIR)ಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ತಾವು ಬಿಹಾರದ ಮತದಾರರು ಎಂದು ಸಾಬೀತುಪಡಿಸಲು ಮತದಾರರು ಒಟ್ಟು 11 ದಾಖಲೆಗಳನ್ನು ಸಲ್ಲಿಸಬಹುದಾಗಿದೆ. ಆದರೆ ಆಧಾರ್ ಕಾರ್ಡ್ ಅನ್ನು ಪುರಾವೆಯಾಗಿ ಪರಿಗಣಿಸಿಲ್ಲ. ಆದರೆ ಮತದಾರರನ್ನು ಸೇರಿಸಲು 11 ದಾಖಲೆಗಳು ಅಥವಾ ಆಧಾರ್ ಕಾರ್ಡ್ ಅನ್ನು ಸ್ವೀಕರಿಸುವಂತೆ ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ತಿಳಿಸಿದೆ. ಆದರೆ SIRಗೆ ಮಾನ್ಯ ದಾಖಲೆಯಾಗಿ ಬಳಸಬೇಕೆಂದು ಸೂಚಿಸಿಲ್ಲ ಅಥವಾ ನಿರ್ದೇಶಿಸಿಲ್ಲ ಎಂದು ಅಮಿತ್ ಮಾಳವೀಯ ಹೇಳಿಕೊಳ್ಳುತ್ತಿದ್ದಾರೆ.
ಇದನ್ನು ಓದಿದ್ದೀರಾ? ಹಾಸನ | ನಕಲಿ ಆಧಾರ್ ಕಾರ್ಡ್ ಬಳಸಿ ಅಕ್ರಮ ವಾಸ: ಮೂವರು ಬಾಂಗ್ಲಾದೇಶಿಯರ ಬಂಧನ
“ಆಗಸ್ಟ್ 22ರಂದು ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ vs ಚುನಾವಣಾ ಆಯೋಗ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ಆದೇಶದ ವಿವಿಧ ವ್ಯಾಖ್ಯಾನಗಳನ್ನು ನೋಡುವುದು ತಮಾಷೆಯಾಗಿದೆ, ವಿಶೇಷವಾಗಿ ಆಧಾರ್‌ಗೆ ಸಂಬಂಧಿಸಿದ ವ್ಯಾಖ್ಯಾನ. ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಎಲ್ಲಿಯೂ ಆಧಾರ್ ಅನ್ನು ವಿಶೇಷ ತೀವ್ರ ಪರಿಷ್ಕರಣೆ (SIR) ಗಾಗಿ ಮಾನ್ಯ ದಾಖಲೆಯಾಗಿ ಬಳಸಬೇಕೆಂದು ಸೂಚಿಸುವುದಿಲ್ಲ, ನಿರ್ದೇಶಿಸಿಲ್ಲ” ಮಾಳವೀಯ ಹೇಳಿದ್ದಾರೆ.
ಹಾಗೆಯೇ, “ಒಬ್ಬ ವ್ಯಕ್ತಿಯ ಹೆಸರು ಸ್ಪಷ್ಟವಾಗಿಲ್ಲ ಎಂದು ಸಮರ್ಥ ನ್ಯಾಯಾಲಯವು ಘೋಷಿಸಿದರೆ ಅಥವಾ ಚುನಾವಣೆಗಳಲ್ಲಿ ಭ್ರಷ್ಟಾಚಾರ ಅಥವಾ ಅಪರಾಧಗಳಿಗೆ ಸಂಬಂಧಿಸಿದಂತೆ ಕಾನೂನಿನಡಿಯಲ್ಲಿ ಆ ವ್ಯಕ್ತಿಯನ್ನು ಅನರ್ಹಗೊಳಿಸಿದರೆ, ಆ ವ್ಯಕ್ತಿಯ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಬಹುದು” ಎಂದೂ ಮಾಳವೀಯ ಹೇಳಿಕೊಂಡಿದ್ದಾರೆ.
ಇನ್ನು ಬಿಹಾರದಲ್ಲಿ ಚುನಾವಣಾ ಆಯೋಗ ಎಸ್‌ಐಆರ್ ಪ್ರಕ್ರಿಯೆ ನಡೆಸಿ 65 ಲಕ್ಷ ಮಂದಿಯನ್ನು ಮತದಾರರ ಪಟ್ಟಿಯಿಂದ ಅಳಿಸಿ ಹಾಕಿದೆ. ಹಲವು ಬಡವರು ತಮ್ಮ ಹಕ್ಕನ್ನು ಕಳೆದುಕೊಂಡಿದ್ದಾರೆ ಎಂದು ವಿರೋಧ ಪಕ್ಷಗಳು ಆರೋಪಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಳವೀಯ, “ಚುನಾವಣಾ ಆಯೋಗವು ನಕಲಿ, ಸತ್ತ, ಬಾಂಗ್ಲಾದೇಶಿ ಮತ್ತು ರೋಹಿಂಗ್ಯಾ ಹೆಸರುಗಳನ್ನು ಅಳಿಸಿ ಹಾಕಿದೆ” ಎಂದಿದ್ದಾರೆ.
ಮಾಳವೀಯ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕೇಂದ್ರ ಸರ್ಕಾರದ ಅದೆಷ್ಟೋ ಯೋಜನೆಗಳಿಗೆ ಆಧಾರ್ ಕಾರ್ಡ್ ಕಡ್ಡಾಯ ದಾಖಲೆಯಾಗಿದೆ. ಹಾಗೆಯೇ ಭಾರತೀಯರಾಗಿದ್ದರೆ ಮಾತ್ರ ಆಧಾರ್ ಕಾರ್ಡ್ ನೀಡಲಾಗುತ್ತದೆ. ಹಾಗಿರುವಾಗ ಆಧಾರ್ ಪೌರತ್ವದ ದಾಖಲೆ ಯಾಕೆ ಆಗುವುದಿಲ್ಲ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.
