- ಮುಂದಿನ ದಿನಗಳಲ್ಲಿ ಒಳ್ಳೆಯದಾಗುವ ಭರವಸೆ ಇದೆ
- ಪಕ್ಷವನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯುಬೇಕಿದೆ
ಪಕ್ಷದ ಹಿತದೃಷ್ಟಿಯಿಂದ ನಾನು ಉಪಮುಖ್ಯಮಂತ್ರಿ ಸ್ಥಾನವನ್ನು ಒಪ್ಪಿಕೊಂಡಿರುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು.
ದೆಹಲಿಯಲ್ಲಿ ಖಾಸಗಿ ಮಾಧ್ಯಮದೊಂದಿಗೆ ಮಾತನಾಡಿದ ಅವರು “ಕರ್ನಾಟಕದ ಬಗ್ಗೆ ನಮಗೆ ಬದ್ಧತೆಯಿದೆ. ಮುಂದೆ ಸಂಸತ್ ಚುನಾವಣೆಯಿದೆ. ಹೀಗಾಗಿ ಪಕ್ಷದ ಹಿತಾಸಕ್ತಿಯಿಂದ ಹೈ ಕಮಾಂಡ್ ಸೂತ್ರಕ್ಕೆ ಒಪ್ಪಿಗೆ ಸೂಚಿಸಿದ್ದೇನೆ” ಎಂದರು.
“ಕರ್ನಾಟಕಕ್ಕೆ ಸೇವೆ ಸಲ್ಲಿಸುವ ಜವಾಬ್ದಾರಿ ನನ್ನ ಮೇಲಿದೆ. ನಾವು ಅದನ್ನು ಮಾಡಬೇಕಿದೆ, ಇದು ನಮ್ಮ ಬದ್ದತೆ” ಎಂದು ಡಿ ಕೆ ಶಿವಕುಮಾರ್ ತಿಳಿಸಿದರು.
ಮತ್ತೊಂದೆಡೆ ಇದೇ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಂಸದ ಡಿ ಕೆ ಸುರೇಶ್, ಹೈಕಮಾಂಡ್ ನಿರ್ಧಾರ ನನಗೆ ಸಂತಸ ತಂದಿಲ್ಲ. ಆದರೆ ಕರ್ನಾಟಕದ ಹಿತದೃಷ್ಟಿಯಿಂದ ನಾವು ನಮ್ಮ ಬದ್ಧತೆಯನ್ನು ಪೂರೈಸಲು ಬಯಸಿದ್ದೇವೆ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ?:ಸಿಎಂ ನಿರ್ಧಾರ ವಿಳಂಬ; ಕುಹಕವಾಡಿದ ಬಿಜೆಪಿಗೆ ಕಾಂಗ್ರೆಸ್ ತಿರುಗೇಟು!
ಭವಿಷ್ಯದಲ್ಲಿ ನಾವು ಒಳ್ಳೆಯದಾಗುವುದನ್ನು ನೋಡುತ್ತೇವೆ, ಇನ್ನೂ ಬಹಳ ದೂರ ನಾವು ಹೋಗಬೇಕಿದೆ. ನೋಡೋಣ ಏನಾಗುತ್ತದೆ ಎಂದು ಸುರೇಶ್ ಹೇಳಿದರು.
ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ, ರಾಜ್ಯದಲ್ಲಿ ಪದಗ್ರಹಣ ಕಾರ್ಯಕ್ಕೆ ಸಿದ್ದತೆ ಆರಂಭವಾಗಿದೆ. ಕೆಪಿಸಿಸಿ ಅಧ್ಯಕ್ಷರ ಸಹಿ ಇರುವ ಪತ್ರವನ್ನು ರಾಜಭವನಕ್ಕೆ ಒಯ್ದ, ಮಾಜಿ ಡಿಸಿಎಂ ಪರಮೇಶ್ವರ್, ರಾಜ್ಯಪಾಲರೆದುರು ಮೇ 20ರಂದು ಪ್ರಮಾಣವಚನ ಕಾರ್ಯಕ್ರಮಕ್ಕೆ ಅವಕಾಶ ನೀಡುವಂತೆ ಕೋರಿದ್ದಾರೆ.