- 45 ವರ್ಷಗಳಿಂದ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಬುಡಕಟ್ಟು ಸಮುದಾಯದ ನಾಯಕ
- ಶಾಸಕ, ಸಂಸದ, ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗದ ಅಧ್ಯಕ್ಷರಾಗಿದ್ದ ಸಾಯಿ
ಛತ್ತೀಸ್‌ಗಢ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಬಿಜೆಪಿಯ ಬುಡಕಟ್ಟು ಸಮುದಾಯಗಳ ಪ್ರಭಾವಿ ನಾಯಕ ನಂದಕುಮಾರ್ ಸಾಯಿ ಪಕ್ಷ ತೊರೆದಿದ್ದಾರೆ.
ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರನ್ನು ಸೋಮವಾರ (ಮೇ 1) ಭೇಟಿ ಮಾಡಿದ ನಂದಕುಮಾರ್, ಪಕ್ಷದ ಹಿರಿಯ ನಾಯಕರೊಂದಿಗೆ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
77 ವರ್ಷ ವಯಸ್ಸಿನ ಛತ್ತೀಸ್‌ಗಢದ ಮಾಜಿ ರಾಜ್ಯಾಧ್ಯಕ್ಷರಾದ ನಂದಕುಮಾರ್ ಸಾಯಿ, 1980ರಲ್ಲಿ ಬಿಜೆಪಿ ಪ್ರಾರಂಭವಾದಾಗಿನಿಂದಲೂ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದರು. ಹಿಂದುತ್ವದ ಕಟ್ಟಾ ಪ್ರತಿಪಾದಕ ಮತ್ತು ಪ್ರಚೋದನಾಕಾರಿ ಮಾತುಗಳ ಮೂಲಕ ಅವರು ಹೆಸರುವಾಸಿಯಾಗಿದ್ದರು.
ಬಿಜೆಪಿಯೊಂದಿಗಿನ ನಾಲ್ಕು ದಶಕಗಳ ಸುದೀರ್ಘ ಸಂಬಂಧ ಬಿಟ್ಟು 2023ರ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಾಗಲೇ ಕಾಂಗ್ರೆಸಿಗೆ ಸೇರ್ಪಡೆಯಾಗುತ್ತಿರುವುದು ಕಮಲ ನಾಯಕರಿಗೆ ನುಂಗಲಾರದ ತುತ್ತಾಗಿದೆ. ಛತ್ತೀಸ್‌ಗಢದ ಜಶ್ಪುರ್ ಬುಡಕಟ್ಟು ಸಮುದಾಯಕ್ಕೆ ಸೇರಿರುವ ಅವರು ಹಿಂದುತ್ವದ ಪ್ರಭಾವಿ ನಾಯಕ. ಅವರು ತಮ್ಮ ಆರಂಭದ ರಾಜಕೀಯ ದಿನಗಳಿಂದಲೂ ಆದಿವಾಸಿಗಳ ಮತಾಂತರದ ವಿರುದ್ಧ ಧ್ವನಿಯೆತ್ತುತ್ತ ಬಂದಿದ್ದಾರೆ.
ಛತ್ತೀಸ್‌ಗಢ ಮಾತ್ರವಲ್ಲದೆ, ಅವಿಭಜಿತ ಮಧ್ಯಪ್ರದೇಶದ ರಾಜ್ಯದಲ್ಲಿಯೂ ಪ್ರಭಾವ ಹೊಂದಿದ್ದು, ಉಭಯ ರಾಜ್ಯಗಳು ಒಗ್ಗೂಡಿದ್ದಾಗ ಶಾಸಕರಾಗಿದ್ದವರು. ಸಾಯಿ ಅವರು ಮಧ್ಯಪ್ರದೇಶದ ಬಿಜೆಪಿ ಘಟಕದ ಮುಖ್ಯಸ್ಥರು ಕೂಡ ಆಗಿದ್ದರು.
ಈ ಸುದ್ದಿ ಓದಿದ್ದೀರಾ? ಜಂತರ್ ಮಂತರ್‌ಗೆ ಹೋಗಿ, ಮಹಿಳಾ ಕುಸ್ತಿಪಟುಗಳ ‘ಮನ್ ಕಿ ಬಾತ್’ ಆಲಿಸಿ; ಮೋದಿಗೆ ಕಪಿಲ್ ಸಿಬಲ್
ಕಾಂಗ್ರೆಸ್‌ಗೆ ಸೇರ್ಪಡೆಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಾಯಿ, “ಅಟಲ್ ಬಿಹಾರಿ ವಾಜಪೇಯಿ,ಸುಷ್ಮಾ ಸ್ವರಾಜ್ ಸೇರಿದಂತೆ ದೊಡ್ಡ ನಾಯಕರೊಂದಿಗೆ ಕೆಲಸ ಮಾಡಿದ್ದೇನೆ. ನಾನು ಪಕ್ಷ ಬಿಟ್ಟು ಹೋಗುತ್ತಿರುವುದು ತುಂಬಾ ನೋವಾಗುತ್ತಿದೆ. ಬಿಜೆಪಿ ಈಗ ಮೊದಲಿನ ರೀತಿ ಇಲ್ಲ. ಅಟಲ್‌ಜಿ, ಅಥವಾ ಪ್ರಮೋದ್ ಮಹಾಜನ್ ಅವರ ಕಾಲದಲ್ಲಿ ಇದ್ದಂತಹ ವಾತಾವರಣ ಪಕ್ಷದಲ್ಲಿಲ್ಲ. ಕಳೆದ ಕೆಲವು ವರ್ಷಗಳಿಂದ “ಅಧಃಪತನ”ದಲ್ಲಿರುವ ಬಿಜೆಪಿಯನ್ನು ಬಲಪಡಿಸಲು ಪ್ರಯತ್ನಿಸಿದ್ದೆ. 2018ರಲ್ಲಿ ಪಕ್ಷದ ಸೋಲಿನ ಮುನ್ಸೂಚನೆ ಬಗ್ಗೆ ನಾಯಕರಿಗೆ ಎಚ್ಚರಿಸಿದ್ದೆ. ಆದರೆ ನನ್ನ ಮಾತುಗಳನ್ನು ಯಾರು ಕೇಳಲಿಲ್ಲ. ನನಗೆ ಯಾವುದೇ ಸ್ಥಾನಮಾನ ನೀಡಲಿಲ್ಲ” ಎಂದು ಅಸಮಾಧಾನ ಹೊರ ಹಾಕಿದರು.
“ನಾನು ಕಳೆದ ಒಂದು ವರ್ಷದಿಂದ ದೆಹಲಿಯಲ್ಲಿ ಬಿಜೆಪಿಯ ಹಿರಿಯ ನಾಯಕರನ್ನು ಸಂಪರ್ಕಿಸಲು ಪ್ರಯತ್ನಿಸಿದೆ. ಆದರೆ ಯಾವುದೇ ನಿರೀಕ್ಷಿತ ಪ್ರತಿಕ್ರಿಯೆ ಸಿಗಲಿಲ್ಲ. ಅವರು ನನ್ನ ಬಗ್ಗೆ ಹೆಚ್ಚು ಕಾಳಜಿ, ಆಸಕ್ತಿಯಾಗಲಿ ತೋರಲಿಲ್ಲ. ಇದೆಲ್ಲವನ್ನು ಮನಗಂಡು ಪಕ್ಷ ತ್ಯಜಿಸುತ್ತಿದ್ದೇನೆ” ಎಂದು ತಿಳಿಸಿದರು.
ತಮ್ಮನ್ನು ಲಘುವಾಗಿ ಪರಿಗಣಿಸಬೇಡಿ ಎಂದು ಬಿಜೆಪಿಗೆ ಎಚ್ಚರಿಸಿರುವ ಸಾಯಿ, “2003ರಲ್ಲಿ ಅಜಿತ್ ಜೋಗಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಉರುಳಿಸಲು ನಾನು ಸಹಾಯ ಮಾಡಿದ್ದೇನೆ. ಮುಖ್ಯಮಂತ್ರಿಯಾಗುವ ಅರ್ಹತೆ ಇದ್ದರೂ, ನನ್ನನ್ನು ಮೂಲೆಗುಂಪು ಮಾಡಿದ್ದರು. ನನ್ನ ವಿರುದ್ಧ ಸಂಚು ರೂಪಿಸಿದವರನ್ನು ಹೆಸರಿಸಲು ನಾನು ಬಯಸುವುದಿಲ್ಲ. ಸದ್ಯ ನನಗೆ ನನ್ನ ಸ್ಥಾನಮಾನಕ್ಕಿಂತ ಆದಿವಾಸಿಗಳ ಅಭಿವೃದ್ಧಿ, ಅವರಿಗೆ ಗುಣಮಟ್ಟದ ಶಿಕ್ಷಣ ದೊರೆಯುವುದು ಮುಖ್ಯವಾಗಿದೆ. ಕಾಂಗ್ರೆಸಿನ ವರಿಷ್ಠರಿಗೂ ಇದನ್ನೇ ತಿಳಿಸಿದ್ದೇನೆ” ಎಂದು ಹೇಳಿದರು.
ಎಂಎ ಪದವೀಧರರಾಗಿರುವ ನಂದಕುಮಾರ್ ಸಾಯಿ ಸಂಸ್ಕೃತ ಬಲ್ಲವರು. ಎರಡು ಬಾರಿ ಲೋಕಸಭಾ ಸಂಸದರಾಗಿ ಮತ್ತು ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅವರು 2017ರಲ್ಲಿ ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗದ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. 45ಕ್ಕೂ ಹೆಚ್ಚಿನ ವರ್ಷ ಬಿಜೆಪಿ ಜೊತೆಗಿದ್ದ ನಿಷ್ಠಾವಂತ ನಾಯಕನನ್ನು ಕಮಲ ನಾಯಕರು ಕಡೆಗಣಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಇದೇ ಸಂದರ್ಭದಲ್ಲಿ ಟೀಕಿಸಿದ್ದಾರೆ.
2023 ನವೆಂಬರ್‌ನಲ್ಲಿ ಛತ್ತೀಸ್‌ಗಢ ವಿಧಾನಸಭೆ ಚುನಾವಣೆ ನಡೆಯಲಿದೆ.