ಮಹಾರಾಷ್ಟ್ರದ ಪ್ರಮುಖ ದಿನ ಪತ್ರಿಕೆಗಳಲ್ಲಿ ಮಂಗಳವಾರ ಪ್ರಕಟವಾದ ಜಾಹೀರಾತು ಒಂದು ಇದೀಗ ʻಮಹಾʼ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ.
ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಬಣ ನೀಡಿರುವ ಜಾಹೀರಾತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಚಿತ್ರಗಳು ಮಾತ್ರ ಕಾಣಿಸಿಕೊಂಡಿದ್ದು, ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರನ್ನು ನಿರ್ಲಕ್ಷಿಸಲಾಗಿದೆ. ಇದು ಹೊಸ ರಾಜಕೀಯ ವಿವಾದಕ್ಕೆ ನಾಂದಿ ಹಾಡಿದೆ.
ಜಾಹೀರಾತಿನ ಮೂಲಕ, ʻಏಕ್ನಾಥ್ ಶಿಂಧೆ ಅವರೇ ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ಆಗಬೇಕು, ಶಿಂಧೆ ಅವರೇ ಈಗಿನ ಸರ್ಕಾರದ ಅವಧಿ ಮುಗಿಯುವವರೆಗೆ ಸಿಎಂ ಆಗಿರಬೇಕು, ಮುಂದಿನ ಚುನಾವಣೆಯ ಬಳಿಕವೂ ಶಿವಸೇನೆಗೆ ಸಿಎಂ ಸ್ಥಾನ ಬಿಟ್ಟುಕೊಟ್ಟು ಬಿಜೆಪಿ ಕಿರಿಯ ಪಾಲುದಾರನಂತೆ ಇರಬೇಕುʼ ಎಂಬ ಸಂದೇಶವನ್ನು ಶಿವಸೇನೆ, ಬಿಜೆಪಿಗೆ ರವಾನಿಸಿದೆ.
ʻಬಿಜೆಪಿ ಸಾಕಷ್ಟು ತ್ಯಾಗ ಮಾಡಿದೆʼ
ಶಿವಸೇನೆ ನೀಡಿರುವ ಜಾಹೀರಾತು ರಾಜ್ಯ ಬಿಜೆಪಿಯ ಕಣ್ಣು ಕೆಂಪಾಗಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ಪ್ರವೀಣ್ ದಾರೇಕರ್, ʻಫಡ್ನವೀಸ್ ಅವರನ್ನು ಅವಮಾನಿಸುವ ರೀತಿಯಲ್ಲಿನ ಯಾವುದೇ ಪ್ರಯತ್ನವನ್ನು ನಾವು ಒಪ್ಪುವುದಿಲ್ಲ. ಇದು ಅತ್ಯಂತ ದುರದೃಷ್ಟಕರ. ಶಿಂಧೆ ಮತ್ತು ಫಡ್ನವಿಸ್ ಇಬ್ಬರೂ ಜನರೆಡೆಯಲ್ಲಿ ಜನಪ್ರಿಯರು. ಇಬ್ಬರೂ ರಾಜ್ಯ ಸರ್ಕಾರವನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸುತ್ತಿದ್ದಾರೆ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಇಬ್ಬರೂ ಒಟ್ಟಾಗಿ ಇರುವ ವೇಳೆ ಒಬ್ಬರನ್ನು ನಿರ್ಲಕ್ಷಿಸುವುದು ಸರಿಯಲ್ಲ. ಇದರಿಂದ ಮೈತ್ರಿಯಲ್ಲಿ ಮುನಿಸು ಕಾಣಿಕೊಳ್ಳಬಹುದು. 40 ಶಾಸಕರು ಇರುವ (ಶಿಂಧೆ- ನೇತೃತ್ವದ ಶಿವಸೇನೆ) ಏಕಾಂಗಿಯಾಗಿ ಸರ್ಕಾರ ರಚಿಸಲು ಸಾಧ್ಯವಿತ್ತೇ? ಬಿಜೆಪಿ ಸಾಕಷ್ಟು ತ್ಯಾಗ ಮಾಡಿದೆ. 105 ಶಾಸಕರಿದ್ದರೂ ಫಡ್ನವೀಸ್ ಉಪ ಮುಖ್ಯಮಂತ್ರಿಯಾದರು. ಅವರಿಗಿಂತಲೂ ಬಿಜೆಪಿ ಮೂರು ಪಟ್ಟು ಶಾಸಕರನ್ನು ಹೊಂದಿದೆ.ʼ ಎಂದು ಶಾಸಕ ಪ್ರವೀಣ್ ದಾರೇಕರ್ ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಆಟಿಸಂ ಖಾಯಿಲೆಯಿಂದ ಬಳಲುತ್ತಿದ್ದ ಬಾಲಕನನ್ನು ಎಳೆದೊಯ್ದ ಬೀದಿ ನಾಯಿಗಳು: ಸಾವು
ಜಾಹೀರಾತಿನಲ್ಲೇನಿದೆ?
ಚುನಾವಣಾ ಸಮೀಕ್ಷೆಗಳ ಪ್ರಕಾರ ಶೇಕಡಾ 30.2ರಷ್ಟು ಮಹಾರಾಷ್ಟ್ರದ ಜನತೆ ಬಿಜೆಪಿಯನ್ನೂ ಶೇಕಡಾ 16.2ರಷ್ಟು ಮಹಾರಾಷ್ಟ್ರದ ಜನತೆ ಏಕ್ನಾಥ್ ಶಿಂಧೆ ನೇತೃತ್ವದ ಶಿವಸೇನೆಯನ್ನು ಬಯಸುತ್ತಿದ್ದಾರೆ.
ಈ ಅಂಕಿಗಳ ಪ್ರಕಾರ ಮಹಾರಾಷ್ಟ್ರದಲ್ಲಿ ಒಟ್ಟು ಶೇಕಡಾ 46.4ರಷ್ಟು ಮಂದಿ ರಾಜ್ಯದ ಅಭಿವೃದ್ಧಿಗಾಗಿ ಬಿಜೆಪಿ ಮತ್ತು ಏಕ್ನಾಥ್ ಶಿಂಧೆ ನೇತೃತ್ವದ ಶಿವಸೇನೆ ಮೈತ್ರಿಕೂಟದ ಮೇಲೆ ವಿಶ್ವಾಸವಿಟ್ಟಿದ್ದಾರೆ.
ಅದಕ್ಕಿಂತಲೂ ಹೆಚ್ಚಾಗಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಮಾಡಲಾದ ಸಮೀಕ್ಷೆಯಲ್ಲಿ ಶೇಕಡಾ 26.1ರಷ್ಟು ಮಹಾರಾಷ್ಟ್ರದ ಜನತೆ ಏಕ್ನಾಥ್ ಶಿಂಧೆ ಅವರನ್ನೂ ಮತ್ತು ಶೇಕಡಾ 23.2ರಷ್ಟು ಮಂದಿ ದೇವೇಂದ್ರ ಫಡ್ನವೀಸ್ ಅವರನ್ನು ಮುಂದಿನ ಮುಖ್ಯಮಂತ್ರಿಯಾಗಿ ಕಾಣಲು ಬಯಸಿದ್ದಾರೆ ಸಮೀಕ್ಷೆ ಹೇಳಿದೆ.
ಈ ಮೂಲಕ ಶೇಕಡಾ 49.3ರಷ್ಟು ಮಹಾರಾಷ್ಟ್ರದ ಜನತೆ ರಾಜ್ಯದಲ್ಲಿ ನಾಯಕತ್ವಕ್ಕಾಗಿ ಬಿಜೆಪಿ ಮತ್ತು ಶಿವಸೇನೆ ಮೈತ್ರಿಕೂಟವನ್ನು ಬಯಸಿದ್ದಾರೆ.