ಪ್ರಧಾನಿ ನರೇಂದ್ರ ಮೋದಿ ಅವರಿಗೆ 75 ವರ್ಷ ವಯಸ್ಸಾದ ನಂತರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಮುಂದಿನ ಪ್ರಧಾನಿಯಾಗಬೇಕು ಎಂಬ ತಮ್ಮ ಬೇಡಿಕೆಯನ್ನು ವಿದರ್ಭ ಜನ ಆಂದೋಲನ ಸಮಿತಿಯ ಸ್ಥಾಪಕ, ಹಿರಿಯ ರೈತ ನಾಯಕ ಕಿಶೋರ್ ತಿವಾರಿ ಪುನರುಚ್ಚರಿಸಿದ್ದಾರೆ. ಈ ಸಂಬಂಧ ತಿವಾರಿ ಆರ್‌ಎಸ್‌ಎಸ್ ಮುಖ್ಯಸ್ಥ ಡಾ. ಮೋಹನ್ ಭಾಗವತ್ ಅವರಿಗೆ ಪತ್ರ ಬರೆದಿದ್ದಾರೆ.
ಪತ್ರದಲ್ಲಿ, “ಗಡ್ಕರಿ ಅಜಾತ ಶತ್ರು ಮತ್ತು ಎಲ್ಲರೂ ಅವರನ್ನು ಸ್ವೀಕರಿಸುತ್ತಾರೆ” ಎಂದಿದ್ದಾರೆ. ಇನ್ನು ಗಡ್ಕರಿ ಈಗಾಗಲೇ ಬಿಜೆಪಿಯ ಸೈದ್ಧಾಂತಿಕ ಸಂಘಟನೆ ಆರ್‌ಎಸ್‌ಎಸ್ ಆಪ್ತರು ಎಂದು ಪರಿಗಣಿಸಲಾಗುತ್ತದೆ. ಈ ಹಿಂದೆ ಬಿಜೆಪಿಗೆ ಆಪ್ತರು ಎನಿಸಿಕೊಂಡಿದ್ದ ತಿವಾರಿ ಬಳಿಕ ಅವಿಭಜಿತ ಶಿವಸೇನೆಗೆ ಸೇರಿಕೊಂಡರು.
ಇದನ್ನು ಓದಿದ್ದೀರಾ? ರಾಜ್ ಜೊತೆ ಮೈತ್ರಿ ಮಾಡಿಕೊಳ್ಳಬೇಡಿ: ಉದ್ಧವ್ ಠಾಕ್ರೆಗೆ ಪತ್ರ ಬರೆದ ರೈತ ನಾಯಕ ಕಿಶೋರ್ ತಿವಾರಿ
ಇದೀಗ ಗಡ್ಕರಿ ಶ್ಲಾಘನೆ ಮಾಡುತ್ತಾ ಆರ್‌ಎಸ್‌ಎಸ್ ಮುಖ್ಯಸ್ಥರಿಗೆ ಪತ್ರ ಬರೆದಿದ್ದಾರೆ. ಅಷ್ಟಕ್ಕೂ ಗಡ್ಕರಿ ಪರ ತಿವಾರಿ ಮಾತನಾಡಿರುವುದು ಇದು ಎರಡನೇ ಬಾರಿಗೆ. 2018ರಲ್ಲಿ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಬಿಜೆಪಿ ವಿಧಾನಸಭಾ ಚುನಾವಣೆಯಲ್ಲಿ ಸೋತಾಗಲೂ ಗಡ್ಕರಿ ಪ್ರಧಾನಿಯಾಗಬೇಕು ಎಂದು ಹೇಳಿದರು.
ಬಿಜೆಪಿ, ಆರ್‌ಎಸ್‌ಎಸ್‌ನಲ್ಲಿ 75 ವರ್ಷ ತುಂಬಿದ ಬಳಿಕ ರಾಜಕೀಯ ನಿವೃತ್ತಿ ಪಡೆಯಬೇಕು ಎಂಬ ಸಂಪ್ರದಾಯವನ್ನು ಮುನ್ನಡೆಸುತ್ತಾ ಬಂದಿದ್ದು ಪ್ರಧಾನಿ ನರೇಂದ್ರ ಮೋದಿ. ಅಡ್ವಾನಿ ಮೊದಲಾದ ಹಿರಿಯ ನಾಯಕರನ್ನು ಈ ವಯಸ್ಸಿನ ನೆಪಿವೊಡ್ಡಿ ಮೂಲೆಗುಂಪು ಮಾಡಿದ್ದು ಪ್ರಧಾನಿ ಮೋದಿ. ಈಗ ಮೋದಿ ಅವರಿಗೂ 75 ವರ್ಷ ವಯಸ್ಸಾಗಲಿದ್ದು, ಪ್ರಧಾನಿ ಸ್ಥಾನದಿಂದ ಕೆಳಗಿಳಿಯಬೇಕು ಎಂಬ ಕೂಗು ಕೇಳಿಬಂದಿದೆ. ಸೆಪ್ಟೆಂಬರ್ 11ರಂದು ಭಾಗವತ್ ಅವರಿಗೆ 75, ಸೆಪ್ಟೆಂಬರ್ 17ರಂದು ಮೋದಿ ಅವರಿಗೆ 75 ವರ್ಷ ಆಗಲಿದೆ.
“ದೇಶವು ಮೋದಿಗೆ 11 ವರ್ಷಗಳ ಕಾಲ ಕೆಲಸ ಮಾಡಲು ಉತ್ತಮ ಅವಕಾಶವನ್ನು ನೀಡಿದೆ ಮತ್ತು ಪ್ರಧಾನಿಯಾಗಿ ಅವರು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಸೇರಿದಂತೆ ಅನೇಕ ಪ್ರಭಾವಶಾಲಿ ಉಪಕ್ರಮಗಳನ್ನು ಕೈಗೊಂಡಿದ್ದಾರೆ. 2014ರಲ್ಲಿ ಗಡ್ಕರಿ ಅವರಿಗೆ ಪ್ರಧಾನಿಯಾಗುವ ಅವಕಾಶವಿತ್ತು ಆದರೆ ಆ ಅವಕಾಶವನ್ನು ಕಸಿದುಕೊಳ್ಳಲಾಗಿದೆ. ಈಗ ಅವರಿಗೆ ಅವಕಾಶ ನೀಡಬೇಕು” ಎಂದಿದ್ದಾರೆ.
“ಗಡ್ಕರಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಕಠಿಣ ಪರಿಶ್ರಮಿ ಮತ್ತು ಅತ್ಯಂತ ಪರಿಣಾಮಕಾರಿ ಸಚಿವರೆಂದು ಹೆಸರುವಾಸಿ. 2029ರ ಲೋಕಸಭಾ ಚುನಾವಣೆಗೆ ಮೊದಲು ಉಳಿದ 4 ವರ್ಷಗಳ ಕಾಲ ದೇಶವನ್ನು ಮುನ್ನಡೆಸಲು ಗಡ್ಕರಿ ಅವರಿಗೆ ಅವಕಾಶ ನೀಡಬೇಕು” ಎಂದು ಒತ್ತಾಯಿಸಿದ್ದಾರೆ.
