ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ‘ಎಐ’ ಪಾರುಪತ್ಯ; ಡೀಪ್‌ಫೇಕ್, ವಾಯ್ಸ್‌ ಕ್ಲೋನಿಂಗ್‌ಗಳದ್ದೇ ಅಬ್ಬರ!

Date:

Advertisements

ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಜನವರಿಯಲ್ಲಿ ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ದ್ರಾವಿಡ ನಾಯಕ, ಮಾಜಿ ಮುಖ್ಯಮಂತ್ರಿ ಎಂ ಕರುಣಾನಿಧಿ ಅವರು ದೊಡ್ಡ ಪರದೆಯ ಮೇಲೆ ಕಾಣಿಸಿಕೊಂಡಿದ್ದರು. ಸನ್ ಗ್ಲಾಸ್, ಬಿಳಿ ಶರ್ಟ್‌ ಮತ್ತು ಹಳದಿ ಶಾಲಿನೊಂದಿಗೆ ಅವರು ಕಂಗೊಳಿಸುತ್ತಿದ್ದರು. ತಮ್ಮ ಪುತ್ರ, ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್‌ ಅವರನ್ನು ಅವರು ಶ್ಲಾಘಿಸಿದರು. ಅಂದಹಾಗೆ, ಅವರು 2018ರಲ್ಲೇ ಸಾವನ್ನಪ್ಪಿದರು. ಅವರು ಈಗಿನ ಸ್ಟಾಲಿನ್ ಸರ್ಕಾರವನ್ನು ಹೊಗಳಲು ಸಾಧ್ಯವಾಗಿದ್ದು ಹೇಗೆ?

ಲೋಕಸಭಾ ಚುನಾವಣೆಯ ಕಣ ಬಿಸಿಯಾಗುತ್ತಿದೆ. ರಾಜಕೀಯ ಪಕ್ಷಗಳು ತಮ್ಮ ಬತ್ತಳಿಕೆಯ ಎಲ್ಲ ಅಸ್ತ್ರಗಳನ್ನು ಪ್ರಯೋಗಿಸಲು, ಹೊಸ ಅಸ್ತ್ರಗಳನ್ನು ಹುಡುಕಲು ಆರಂಭಿಸಿವೆ. ಅಂತಹ, ಅಸ್ತ್ರಗಳಲ್ಲಿ ಈಗ ಕೃತಕ ಬುದ್ದಿಮತ್ತೆ (ಎಐ) ಕೂಡ ಒಂದಾಗಿದೆ. ಎಐ ಮೂಲಕ ಸೃಷ್ಟಿಸಿದ ವಿಡಿಯೋಗಳು, ನೋಟ್‌ಗಳು, ಚಿತ್ರಗಳು ಸಾಮಾಜಿಕ ಜಾಲತಾಣಗಳಾದ ಇನ್ಸ್‌ಟಾಗ್ರಾಂ, ಫೇಸ್‌ಬುಕ್, ವಾಟ್ಸಾಪ್‌ ಮತ್ತು ಎಕ್ಸ್‌ನಲ್ಲಿ ವೈರಲ್‌ ಆಗುತ್ತಿವೆ. ಈ ಎಐ ಮೂಲಕ ಎರುದಾಳಿಗಳನ್ನು ಅಪಹಾಸ್ಯ ಮಾಡುವುದು, ಮತದಾರರಿಗೆ ಉದ್ದೇಶಿತ ವೈಯಕ್ತಿಕ ಸಂದೇಶಗಳನ್ನು ರವಾನಿಸುವುದು ಹೆಚ್ಚಾಗುತ್ತಿದೆ.

ಈ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿದ ಪ್ರಮಾಣದಲ್ಲಿ ಎಐಅನ್ನು ಬಳಸಲಾಗುತ್ತದೆ ಎಂದು ತಜ್ಞರು ಹೇಳುತ್ತಿದ್ದಾರೆ. 2014ರ ಚುನಾವಣೆಯಲ್ಲಿ ಸಾಮಾಜಿಕ ಮಾಧ್ಯಮವು ನಿರ್ಣಾಯಕ ಪ್ರಭಾವ ಬೀರಿದಂತೆ, ಈ ಬಾರಿಯ ಚುನಾವಣೆಯಲ್ಲಿ ಎಐಗಳು ಪ್ರಭಾವ ಬೀರುತ್ತವೆ ಎಂದು ಅವರು ಗ್ರಹಿಸಿದ್ದಾರೆ.

Advertisements

ಈ ವರ್ಷದ ಆರಂಭದಿಂದಲೂ, ಬಿಜೆಪಿ ಮತ್ತು ಕಾಂಗ್ರೆಸ್ ಸೇರಿದಂತೆ ರಾಜಕೀಯ ಪಕ್ಷಗಳು ತಮ್ಮ ಅಧಿಕೃತ ಇನ್ಸ್‌ಟಾಗ್ರಾಂ ಹ್ಯಾಂಡಲ್‌ಗಳಲ್ಲಿ ಕನಿಷ್ಠ ನಾಲ್ಕು ಸಂದರ್ಭಗಳಲ್ಲಿ ಎಐ ಮೂಲಕ ಸೃಷ್ಟಿಸಿದ ಮತ್ತು ತಿರುಚಿದ ವಿಷಯಗಳನ್ನು ಹಂಚಿಕೊಂಡಿವೆ. ಈ ರೀತಿಯಲ್ಲಿ ಸೃಷ್ಟಿಸುವ ಅಥವಾ ತಿರುಚುವ ವಿಷಯಗಳನ್ನು ಡೀಪ್‌ಫೇಕ್‌ಗಳು ಎಂದು ಕರೆಯಲಾಗುತ್ತಿದೆ. ಪ್ರತಿಸ್ಪರ್ಧಿಗಳ ವಿರುದ್ಧ ಅಪಪ್ರಚಾರಕ್ಕೆ ಈ ಡೀಪ್‌ಫೇಕ್‌ಗಳು ಹೆಚ್ಚಾಗಿ ಬಳಕೆಯಾಗುತ್ತಿವೆ.

ಮಾರ್ಚ್ 16 ರಂದು, ಬಿಜೆಪಿಯು ರಾಹುಲ್ ಗಾಂಧಿಯ ಡೀಪ್‌ಫೇಕ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿತು. ಅದರಲ್ಲಿ, ‘ನಾನು ಏನನ್ನೂ ಮಾಡುವುದಿಲ್ಲ’ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆಂದು ಹರಿಬಿಡಲಾಗಿತ್ತು.

ಇತ್ತೀಚೆಗೆ, ಬಿಜೆಪಿ ಮತ್ತೊಂದು ಡೀಪ್‌ಫೇಕ್‌ ವಿಡಿಯೋವನ್ನು ಹಂಚಿಕೊಂಡಿತ್ತು. ಅದರಲ್ಲಿ, ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್, ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರ ಧ್ವನಿಯನ್ನು ಎಐ ಮೂಲಕ ಮರುಸೃಷ್ಟಿ ಮಾಡಲಾಗಿತ್ತು.

ಈ ಹಿಂದೆ, ಕಾಂಗ್ರೆಸ್‌ನ ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿಯೂ ಡೀಪ್‌ಫೇಕ್ ವಿಡಿಯೋವನ್ನ ಹಂಚಿಕೊಳ್ಳಲಾಗಿತ್ತು. ಚೋರ್ (ಕಳ್ಳ) ಶೀರ್ಷಿಕೆಯ ಜನಪ್ರಿಯ ಹಾಡಿನ ಗಾಯಕ ‘ಜಸ್ತ್‌’ ಅವರ ಮುಖಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮುಖವನ್ನು ಎಐ ಮೂಲಕ ಎಡಿಟ್ ಮಾಡಿ, ಮೋದಿಯವರ ಧ್ವನಿಯನ್ನೇ ಹೋಲುವಂತೆ ಹಾಡನ್ನು ಬದಲಿಸಲಾಗಿತ್ತು. ಇತ್ತೀಚೆಗಷ್ಟೇ, ಕಾಂಗ್ರೆಸ್ ಹ್ಯಾಂಡಲ್, ಕಣ್ಣೀರು ಹಾಕುತ್ತಿರುವ ಮಹಿಳಾ ಕುಸ್ತಿಪಟುವಿನ ಪೋಸ್ಟರ್‌ ಎದುರು ಪ್ರಧಾನಿ ಮೋದಿ ನಿಂತಿರುವ ಚಿತ್ರವನ್ನೂ ಹಂಚಿಕೊಳ್ಳಲಾಗಿತ್ತು.

Wrestlers Protest: Congress takes a dig at PM Modi with 'beti rulao' picture of Vinesh Phogat crying

ಫೆಬ್ರವರಿಯಲ್ಲಿ, ತಮಿಳುನಾಡಿನ ಪ್ರಮುಖ ವಿರೋಧ ಪಕ್ಷ ಎಐಎಡಿಎಂಕೆಯ ಅಧಿಕೃತ ಹ್ಯಾಂಡಲ್, ಪಕ್ಷದ ವರಿಷ್ಠೆ ಜೆ ಜಯಲಲಿತಾ ಅವರ ಧ್ವನಿ ಸಂದೇಶವನ್ನು ಹಂಚಿಕೊಂಡಿದೆ. ಅದರಲ್ಲಿ, ಪಕ್ಷದ ಹಾಲಿ ನಾಯಕ ಎಡಪ್ಪಾಡಿ ಪಳನಿಸ್ವಾಮಿ ಅವರನ್ನು ಬೆಂಬಲಿಸುವಂತೆ ಜನರನ್ನು ಜಯಲಲಿತಾ ಒತ್ತಾಯಿಸಿದ್ದಾರೆ. (ಅಂದಹಾಗೆ, ಜಯಲಲಿತಾ ಅವರು 2016ರಲ್ಲಿಯೇ ಸಾವನ್ನಪ್ಪಿದ್ದಾರೆ)

ಕಳೆದ ವರ್ಷ ತೆಲಂಗಾಣದಲ್ಲಿ ಅಸೆಂಬ್ಲಿ ಚುನಾವಣೆಯ ಸಮಯಲ್ಲಿ, ತೆಲಂಗಾಣ ಕಾಂಗ್ರೆಸ್‌ನ ಅಧಿಕೃತ ಎಕ್ಸ್ ಹ್ಯಾಂಡಲ್ ಬಿಆರ್‌ಎಸ್ ನಾಯಕ ಕೆ.ಟಿ ರಾಮರಾವ್ ಅವರು ಪಕ್ಷದ ವಿರುದ್ಧ ಮತ ಚಲಾಯಿಸುವಂತೆ ಸಾರ್ವಜನಿಕರನ್ನು ಒತ್ತಾಯಿಸುತ್ತಿದ್ದಾರೆಂದು ಡೀಪ್‌ಫೇಕ್ ಅನ್ನು ಹಂಚಿಕೊಂಡಿದೆ.

ಧ್ವನಿ ಕ್ಲೋನಿಂಗ್ ಮತ್ತು ವೈಯಕ್ತೀಕರಿಸಿದ ಸಂದೇಶ

ರಾಜಕೀಯ ಪಕ್ಷಗಳು ಮತದಾರರನ್ನು ಓಲೈಸಲು ಮತ್ತು ಪ್ರತಿಪಕ್ಷಗಳ ವಿರುದ್ಧ ಅಸಹನೆ ಸೃಷ್ಟಿಸಲು ರಾಜಕೀಯ ನಾಯಕರು, ಅಭ್ಯರ್ಥಿಗಳ ಧ್ವನಿಯ ರೀತಿಯಲ್ಲೇ ತದ್ರೂಪು ಆಡಿಯೋಗಳನ್ನು ಸೃಷ್ಟಿಸಲು ಎಐಯನ್ನು ಬಳಸುತ್ತವೆ ಎಂದು ನಿರೀಕ್ಷಿಸಲಾಗಿದೆ.

”ಅಭ್ಯರ್ಥಿಗಳು ತಮಗೆ ಮತ ನೀಡುವಂತೆ ಒತ್ತಾಯಿಸುವ ಪೂರ್ವ-ದಾಖಲಿತ ಸಂದೇಶವನ್ನು ಹೊಂದಿರುವ ಕರೆಗಳನ್ನು ಕಳಿಸುವುದು ನಮಗೆಲ್ಲರಿಗೂ ತಿಳಿದಿದೆ. ಆದರೆ, ಈಗ ಅಭ್ಯರ್ಥಿಗಳ ಕರೆಯ ಆರಂಭದಲ್ಲಿ ನಿಮ್ಮ ಹೆಸರನ್ನೂ ಕೂಡ ಉಲ್ಲೇಖಿಸಬಹುದು. ಅದನ್ನು ಎಐ ಸಾಧ್ಯವಾಗಿಸಿದೆ. ಅಭ್ಯರ್ಥಿಯು ತಮ್ಮ ಪ್ರಚಾರದ ಸಮಯದಲ್ಲಿ ನೀಡಬಹುದಾದ ವೈಯಕ್ತೀಕರಣದ (ಒಬ್ಬೊಬ್ಬರನ್ನೂ ಉಲ್ಲೇಖಿಸುವುದು) ಮಟ್ಟಕ್ಕೆ ಎಐ ಹೊಸ ಆಯಾಮವನ್ನು ಸೇರಿಸುತ್ತದೆ” ಎಂದು ರಾಜಕಾರಣಿಯೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಎಐ ಮೂಲಕ ಹೇಗೆ ಪ್ರಚಾರ ಮಾಡಬಹುದು ಎಂಬುದನ್ನು ಅರಿಯಲು ಪಕ್ಷಗಳು ರಾಜಕೀಯ ಸಲಹಾ ಕಂಪನಿಗಳ ಮೊರೆ ಹೋಗುತ್ತಿವೆ. ಅಂತಹ ಒಂದು ಕಂಪನಿಯನ್ನು ದಿವ್ಯೇಂದ್ರ ಸಿಂಗ್ ಜಾದೌನ್ ಎಂಬವರು ನಡೆಸುತ್ತಿದ್ದಾರೆ.

ಇಂಡಿಯನ್ ಡೀಪ್‌ಫೇಕರ್ ಎಂಬ ಇನ್ಸ್‌ಟಾಗ್ರಾಂ ಪೇಜ್‌ನ ಕರ್ತೃ, ಎಐ ಸೇವೆಗಳ ಕಂಪನಿ ‘ಪೊಲಿಮ್ಯಾಟ್ ಸಲೂಷನ್‌’ನ ಸ್ಥಾಪಕ ಅಜ್ಮೀರ್ ಮೂಲದ ಜಡೋನ್ ಎಂಬವರು, ”ಅಭ್ಯರ್ಥಿಗಳ ವೈಯಕ್ತಿಕ ಸಂಭಾಷಣೆಯನ್ನು ಎಐ ಮೂಲಕ ರಚಿಸಲು ಹಲವಾರು ರಾಜಕೀಯ ಪಕ್ಷಗಳು ಆಸಕ್ತಿ ಹೊಂದಿವೆ. ಎಐ ಮೂಲಕ ಧ್ವನಿಯನ್ನು ಮರುಸೃಷ್ಟಿಸಬಹುದು. ಈ ಅಭ್ಯರ್ಥಿಗಳು ಪ್ರತಿಯೊಬ್ಬ ಮತದಾರರ ಹೆಸರನ್ನು ಸಂಬೋಧಿಸುವ ಮೂಲಕ, ವೈಯಕ್ತಿಕವಾಗಿ ಪ್ರತಿಯೊಬ್ಬರನ್ನು ತಲುಪುವ ಹೆಚ್ಚುವರಿ ಮಟ್ಟವನ್ನು ಸಾಧಿಸಬಹುದು” ಎಂದು ಹೇಳಿದ್ದಾರೆ.

“ನಾವು ಅಂತಹ ಸಾಧ್ಯತೆಗಳನ್ನು ಅನ್ವೇಷಿಸುತ್ತಿರುವ ಅನೇಕ ಪಕ್ಷಗಳು ನಮ್ಮನ್ನು ಸಂಪರ್ಕಿಸಿವೆ. ಅಂತಹ ಆಡಿಯೋಗಳನ್ನು ಏಪ್ರಿಲ್ ಮೊದಲ ವಾರದಲ್ಲಿ ಚಾಲ್ತಿಗೆ ತರುವ ಬಗ್ಗೆ ಪಕ್ಷಗಳು ಕೇಳಿವೆ” ಎಂದು ಅವರು ಹೇಳಿರುವುದಾಗಿ ‘ಇಂಡಿಯನ್ಸ ಎಕ್ಸ್‌ಪ್ರೆಸ್‌’ ವರದಿ ಮಾಡಿದೆ.

ಈಗಾಗಲೇ ಚುನಾವಣಾ ದಿನಾಂಕ ಘೋಷಣೆಯಾಗಿದೆ. ಚುನಾವಣಾ ಆಯೋಗವು ನೀತಿ ಸಂಹಿತೆಯನ್ನೂ ಜಾರಿಗೊಳಿಸಿದೆ. ಆದರೆ, ರಾಜಕೀಯ ಪಕ್ಷಗಳು ಎಐ ಮೂಲಕ ರಚಿತವಾದ ವಿಷಯಗಳನ್ನು ಪ್ರಚಾರಕ್ಕೆ ಬಳಸುವ ಬಗ್ಗೆ ಆಯೋಗ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಎಐ ಬಗ್ಗೆ ಆಯೋಗ ಗಮನ ಹರಿಸಿಲ್ಲ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ.

ತಜ್ಞರ ಎಚ್ಚರಿಕೆ

ಮತದಾರರ ಗ್ರಹಿಕೆಯನ್ನು ತಮ್ಮತ್ತ ಸೆಳೆಯಲು ಅಭ್ಯರ್ಥಿಗಳು ಎಐನಿಂದ ರಚಿತವಾದ ಕರೆಗಳ ಮೊರೆ ಹೋಗುವ ಸಾಧ್ಯತೆಗಳ ಬಗ್ಗೆ ತಜ್ಷರು ಎಚ್ಚರಿಕೆ ನೀಡುತ್ತಿದ್ದಾರೆ. ಈ ತಂತ್ರಜ್ಞಾನದ ಬಳಕೆಯನ್ನು ನಿಯಂತ್ರಿಸಲು ಚುನಾವಣಾ ಆಯೋಗವು ತನ್ನ ಪ್ರಯತ್ನಗಳನ್ನು ಹೆಚ್ಚಿಸಬೇಕೆಂದು ಅವರು ಹೇಳುತ್ತಿದ್ದಾರೆ.

“ಎಐನಿಂದ ಸೃಷ್ಟಿಯಾದ ತಿರುಚಿದ ವಿಷಯಗಳು ವೈರಲ್ ಆಗಲು ಕೆಲವು ಗಂಟೆಗಳು ಸಾಕು. ಅವುಗಳನ್ನು ಚುನಾವಣಾ ಆಯೋಗವು ಪತ್ತೆಹಚ್ಚುವ ಹೊತ್ತಿಗೆ, ದೊಡ್ಡ ಮಟ್ಟದ ಹಾನಿಯಾಗಿರುತ್ತದೆ. ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ನೈಜ-ಸಮಯದ ಮೇಲ್ವಿಚಾರಣಾ ವ್ಯವಸ್ಥೆಯನ್ನು ಹೊಂದಿಲ್ಲ. ಅದಾಗುವವರೆಗೂ ಡೀಪ್‌ಫೇಕ್ ವಿಷಯಗಳನ್ನು ನಿಯಂತ್ರಿಸುವುದು ಕಷ್ಟಕರವಾಗುತ್ತದೆ. ಚುನಾವಣಾ ಆಯೋಗವು ಎಐ ಮೇಲೆ ತೀವ್ರ ನಿಗಾ ಇಡುವ ಅಗತ್ಯವಿದೆ” ಎಂದು ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಮತ್ತು ನ್ಯಾಷನಲ್ ಎಲೆಕ್ಷನ್ ವಾಚ್‌ನ ಮುಖ್ಯಸ್ಥ ಅನಿಲ್ ವರ್ಮಾ ಹೇಳಿದ್ದಾರೆ.

ಈ ವರದಿ ಓದಿದ್ದೀರಾ?: ಮೋದಿ ವೈಫಲ್ಯ-1 | ಕೊರೋನಗೆ ದೇಶ ತತ್ತರ; 20 ಲಕ್ಷ ಕೋಟಿ ಏನಾಯ್ತು? ಪಿಎಂ-ಕೇರ್ಸ್‌ ಎಲ್ಲೋಯ್ತು?

“ಎಐ-ರಚಿಸಿದ ವೀಡಿಯೊಗಳನ್ನು ಲೇಬಲ್ ಮಾಡುವುದು ಮತ್ತು ವಾಟರ್‌ಮಾರ್ಕ್ ಮಾಡುವಂತಹ ತಂತ್ರಜ್ಞಾನಗಳನ್ನು ಪರಿಚಯಿಸುವ ಬಗ್ಗೆ ಕಂಪನಿಗಳು ಮಾತನಾಡಿವೆ. ಅವುಗಳ ಮೂಲಕ, ಡೀಪ್‌ಫೇಕ್ ವಿಷಯಗಳನ್ನು ನಿಯಂತ್ರಿಸಬಹುದು ಎನ್ನಲಾಗುತ್ತಿದೆ. ಆದರೆ, ಇಂತಹ ವಿಷಯಗಳನ್ನು ಹರಡಲು ರಾಜಕೀಯ ಪಕ್ಷಗಳು ವಾಟ್ಸಾಪ್‌ಅನ್ನು ಬಳಸಿದರೆ, ಅಲ್ಲಿ ಯಾವುದೇ ನಿಯಂತ್ರಣ ಸಾಧ್ಯವಿಲ್ಲ” ಎಂದು ಅವರು ಹೇಳಿದ್ದಾರೆ.

”ಎಐ ಮೂಲಕ ವಿಷಯಗಳನ್ನು ಸೃಷ್ಟಿಸಿ, ಪ್ರಸಾರ ಮಾಡುವಾಗ, ಜಾಹೀರಾತುದಾರರು, ರಾಜಕೀಯ ಪಕ್ಷಗಳು ತಾವು ಯಾವ ಉದ್ದೇಶಕ್ಕೆ ಎಐ ಬಳಸುತ್ತಿದ್ದೇವೆ ಎಂಬುದುನ್ನು ಬಹಿರಂಗಪಡಿಸುವ ಅಗತ್ಯವಿದೆ” ಎಂದು ಮೆಟಾ ಹೇಳಿದೆ. ಅಲ್ಲದೆ, ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಥ್ರೆಡ್‌ಗಳಿಗೆ ಬಳಕೆದಾರರು ಪೋಸ್ಟ್ ಮಾಡುವ ಎಐ-ರಚಿಸಿದ ವಿಷಯಗಳನ್ನು ಲೇಬಲ್ ಮಾಡಲು ಉಪಕ್ರಮಗಳನ್ನು ಕಂಡುಕೊಳ್ಳಲಾಗುತ್ತಿದೆ ಎಂದು ಮೆಟಾ ತಿಳಿಸಿದೆ.

ಮಾಹಿತಿ ಮೂಲ: ದಿ ಇಂಡಿಯನ್ ಎಕ್ಸ್‌ಪ್ರೆಸ್‌

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿವಾದಾತ್ಮಕ ಯೂಟ್ಯೂಬರ್ ಎಲ್ವಿಶ್ ಮನೆ ಮೇಲೆ ಗುಂಡಿನ ದಾಳಿ: ಎನ್‌ಕೌಂಟರ್ ಮಾಡಿ ಆರೋಪಿ ಬಂಧನ

ಬಲಪಂಥೀಯ, ವಿವಾದಾತ್ಮಕ ಯೂಟ್ಯೂಬರ್ ಮತ್ತು ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್‌...

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

ಉತ್ತರಾಖಂಡ | ಕಪಾಳ ಮೋಕ್ಷ ಮಾಡಿದ ಶಿಕ್ಷಕನಿಗೆ ಗುಂಡು ಹಾರಿಸಿದ ವಿದ್ಯಾರ್ಥಿ

ತರಗತಿಯಲ್ಲಿ ಕಪಾಳ ಮೋಕ್ಷ ಮಾಡಿದ ಕಾರಣಕ್ಕೆ ಕುಪಿತಗೊಂಡ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕನ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

Download Eedina App Android / iOS

X