ಮಹಾರಾಷ್ಟ್ರದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಯೊಂದರಲ್ಲಿ ಇಂಡಿಯಾ ಮೈತ್ರಿಯ ನಾಯಕರಾಗಿದ್ದ ಶರದ್ ಪವಾರ್‌ಗೆ ದೊಡ್ಡ ಹಿನ್ನಡೆಯಾಗಿದ್ದು, ತಾವೇ ಕಟ್ಟಿ ಬೆಳೆಸಿದ್ದ ಎನ್‌ಸಿಪಿ ಪಕ್ಷದ ಚಿಹ್ನೆಯಾದ ಗಡಿಯಾರ ಹಾಗೂ ಎನ್‌ಸಿಪಿ ಹೆಸರನ್ನು ಕಳೆದುಕೊಂಡಿದ್ದಾರೆ.
‘ಅಜಿತ್ ಪವಾರ್ ಬಣವೇ ನಿಜವಾದ ಎನ್‌ಸಿಪಿ’ ಎಂದ ಚುನಾವಣಾ ಆಯೋಗ ಆದೇಶ ನೀಡಿರುವುದಾಗಿ ವರದಿಯಾಗಿದೆ. ಅಜಿತ್ ಪವಾರ್ ಅವರು ಶರದ್ ಪವಾರ್ ಅವರ ಸೋದರಳಿಯನಾಗಿದ್ದು, ಸದ್ಯ ಮಹಾರಾಷ್ಟ್ರದ ಏಕನಾಥ್ ಶಿಂಧೆ ಮೈತ್ರಿ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದಾರೆ.
“6 ತಿಂಗಳಿಗಿಂತ ಹೆಚ್ಚು ಕಾಲ 10ಕ್ಕೂ ಹೆಚ್ಚು ವಿಚಾರಣೆಗಳ ನಂತರ ಅಜಿತ್ ಪವಾರ್ ನೇತೃತ್ವದ ಬಣದ ಪರವಾಗಿ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ವಿಚಾರದ ವಿವಾದವನ್ನು ಇತ್ಯರ್ಥ ಮಾಡಲಾಗಿದೆ” ಎಂದು ಚುನಾವಣಾ ಆಯೋಗ ತಿಳಿಸಿದೆ. ಇದರೊಂದಿಗೆ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಯೇ ನಿಜವಾದ ಪಕ್ಷ ಎಂದು ಚುನಾವಣಾ ಆಯೋಗ ಪರಿಗಣಿಸಿದೆ ಎಂದು ‘ಲೈವ್ ಲಾ’ ವೆಬ್‌ಸೈಟ್ ಮಾಹಿತಿ ನೀಡಿದೆ.
#BREAKING Election Commission of India recognizes Ajit Pawar faction as the official Nationalist Congress Party, awards the “clock” symbol to Ajit Pawar faction.#NCP #ElectionCommission pic.twitter.com/Pgred3dSVL
— Live Law (@LiveLawIndia) February 6, 2024
ಎನ್‌ಸಿಪಿಯ ಹೆಸರು ಮತ್ತು ಚುನಾವಣಾ ಚಿಹ್ನೆಯನ್ನು ಬಳಸಲು ಅಜಿತ್ ಪವಾರ್ ಬಣಕ್ಕೆ ಹಕ್ಕಿದೆ ಎಂದು ಚುನಾವಣಾ ಆಯೋಗ ಹೇಳಿದೆ. ಆದರೆ, ಹೊಸ ಪಕ್ಷ ರಚನೆಗೆ ಮೂರು ಹೆಸರುಗಳನ್ನು ನೀಡುವಂತೆ ಆಯೋಗವು ಇದೇ ವೇಳೆ ಶರದ್ ಪವಾರ್ ಅವರನ್ನು ಕೇಳಿದ್ದು, ಆ ಹೆಸರುಗಳನ್ನು ಬುಧವಾರ ಮಧ್ಯಾಹ್ನ 3 ಗಂಟೆಯೊಳಗೆ ಆಯೋಗಕ್ಕೆ ತಿಳಿಸಬೇಕು ಎಂದು ಸೂಚಿಸಿರುವುದಾಗಿ ವರದಿಯಾಗಿದೆ.
2023ರ ಜುಲೈನಲ್ಲಿ ಅಜಿತ್ ಪವಾರ್ ಮತ್ತು ಪ್ರಫುಲ್ ಪಟೇಲ್ ನೇತೃತ್ವದ ಒಂದು ವಿಭಾಗವು ಆಗಿನ ಪಕ್ಷದ ವರಿಷ್ಠ ಶರದ್ ಪವಾರ್ ಜೊತೆಗಿನ ಸಂಬಂಧ ಮುರಿದು ಬಿಜೆಪಿ-ಶಿವಸೇನಾ (ಏಕನಾಥ್ ಶಿಂಧೆ) ಮೈತ್ರಿಯೊಂದಿಗೆ ಕೈಜೋಡಿಸಿದ ನಂತರ ಎನ್‌ಸಿಪಿಯಲ್ಲಿ ಬಿರುಕು ಕಾಣಿಸಿಕೊಂಡಿತ್ತು. ದಿಡೀರ್ ಬೆಳವಣಿಗೆಯಲ್ಲಿ, ಅಜಿತ್ ಪವಾರ್ ಅವರು ಮಹಾರಾಷ್ಟ್ರ ಸರ್ಕಾರದ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.
ಈ ಹಿಂದೆ ಚುನಾವಣಾ ಆಯೋಗವು ಮಹಾರಾಷ್ಟ್ರದ ಏಕನಾಥ್ ಶಿಂಧೆಯವರ ಶಿವಸೇನೆಯ ಬಣವು ನಿಜವಾದ ಶಿವಸೇನೆ ಎಂದು ಹೇಳಿತ್ತು. ಇದರಿಂದಾಗಿ ಉದ್ಧವ್ ಠಾಕ್ರೆಯವರು ಶಿವಸೇನೆ ಪಕ್ಷದ ಹೆಸರು ಹಾಗೂ ಚಿಹ್ನೆ ಕಳೆದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.