2013 ರಿಂದ 2023ರವರೆಗೆ ಕೇಳಿ ಬಂದ ಎಲ್ಲ ಭ್ರಷ್ಟಾಚಾರ ಹಗರಣಗಳ ತನಿಖೆ ನಡೆಸಲಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.
ಈ ಬಗ್ಗೆ ವಿಧಾನಸೌಧದಲ್ಲಿ ಬುಧವಾರ ಮಾತನಾಡಿದ ಅವರು ಬಿಜೆಪಿ ಸರ್ಕಾರದ ಅವಧಿಯಲ್ಲಿನ 40% ಕಮಿಷನ್ ಪ್ರಕರಣವನ್ನು ಸರ್ಕಾರ ನ್ಯಾಯಾಂಗ ತನಿಖೆ ನಡೆಸಲು ಆದೇಶಿಸಿದೆ. ಕಾಂಗ್ರೆಸ್‌ನವರು ಒಂದೂವರೆ ವರ್ಷದಿಂದ ಆರೋಪ ಮಾಡುತ್ತಿದ್ದಾರೆ. ಇಲ್ಲಿಯವರೆಗೂ ದಾಖಲೆ ಕೊಟ್ಟಿಲ್ಲ. ತನಿಖೆ ಮಾಡಿದರೆ ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ ಎಂದು ಹೇಳಿದರು.
ಸರ್ಕಾರ ನಿಜವಾಗಲೂ ಭ್ರಷ್ಟಾಚಾರದ ವಿರುದ್ಧ ಇದ್ದರೆ, 2013 ರಿಂದ 2023 ಮಾರ್ಚ್ ವರೆಗಿನ ಎಲ್ಲಾ ಪ್ರಕರಣಗಳ ಬಗ್ಗೆ ತನಿಖೆ ಮಾಡಬೇಕು. ಕೇವಲ ಸೆಲೆಕ್ಟಿವ್ ಆಗಿ ರಾಜಕೀಯ ಪ್ರೇರಿತವಾಗಿ ತನಿಖೆ ಮಾಡಿದರೆ ಹೇಗೆ ಎಂದು ಪ್ರಶ್ನಿಸಿದರು. ಯಾರು ಯಾರು ತಪ್ಪಿತಸ್ಥರು ಇದ್ದಾರೆಯೋ ಅವರಿಗೆಲ್ಲಾ ಶಿಕ್ಷೆಯಾಗಬೇಕು ಎಂದರು.
ಈಗಾಗಲೇ ಹಲವು ಪ್ರಕರಣಗಳು ಲೋಕಾಯುಕ್ತದ ಮುಂದೆ ಇವೆ. ಜತೆಗೆ ಬಿಬಿಎಂಪಿ ಇತರ ಇಲಾಖೆ ವಿರುದ್ಧದ 40% ಕಮಿಷನ್ ಕುರಿತಾದ ಪ್ರಕರಣಗಳು ಲೋಕಾಯುಕ್ತದಲ್ಲಿವೆ. ಅವುಗಳನ್ನು ತನಿಖೆ ನಡೆಸಲಿ ಎಂದು ಹೇಳಿದರು.
ಗುತ್ತಿಗೆದಾರದ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪದ ವಿರುದ್ಧ ಮುನಿರತ್ನ ಮಾನನಷ್ಟ ಮೊಕದ್ದಮೆ ಹಾಕಿದ್ದಾರೆ. ಇನ್ನೂ ಅದಕ್ಕೆ ಅವರು ದಾಖಲೆಯಾಗಲಿ, ಉತ್ತರವಾಗಲಿ ನೀಡಿಲ್ಲ ಎಂದು ಹೇಳಿದರು.