ಬಿಜೆಪಿ ಶಾಸಕ ಮುನಿರತ್ನ ಅವರದ್ದು ಅಸಹ್ಯಕರ ಬೆಳವಣಿಗೆ. ಇಂತಹ ದುಷ್ಟ ಶಕ್ತಿಗಳನ್ನು ಸೆದೆ ಬಡಿಯಬೇಕು ಎಂದು ಮಾಜಿ ಸಂಸದ ಡಿ ಕೆ ಸುರೇಶ್ ಆಕ್ರೋಶ ವ್ತಕ್ತಪಡಿಸಿದರು.
ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಅವರು, “ಮುನಿರತ್ನ ರೇಪ್ ಕೇಸ್ ವಿಚಾರ ನನಗೆ ಮಾಧ್ಯಮದ ಮೂಲಕ ತಿಳಿದಿದೆ. ಈ ಬಗ್ಗೆ ಇನ್ನೂ ಸಂಪೂರ್ಣ ಮಾಹಿತಿ ಇಲ್ಲ. ಮಾಹಿತಿ ಕಲೆ ಹಾಕಿ ನಾನು ಮಾತನಾಡುವೆ” ಎಂದು ಹೇಳಿದರು.
“ಮುನಿರತ್ನನ ಇಂತಹ ಕೃತ್ಯಗಳನ್ನು ನೋಡಿದರೆ ಆಶ್ಚರ್ಯ ಹಾಗೂ ಆತಂಕವಾಗುತ್ತಿದೆ. ಇಂತಹ ಆಲೋಚನೆ ಸಾಮಾನ್ಯ ವ್ಯಕ್ತಿಗೆ ಬರಲ್ಲ. ಕ್ರಿಮಿನಲ್ ವ್ಯಕ್ತಿಗಳಿಗೆ ಮಾತ್ರ ಬರುತ್ತದೆ. ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು” ಎಂದು ಆಗ್ರಹಿಸಿದರು.
“ಕಾಂಗ್ರೆಸ್ ಮೇಲೆ ಗೂಬೆ ಕೂರಿಸಲು ಆರ್ ಅಶೋಕ್ ಮೇಲೆ ಯಾವ ರೀತಿ ಅವರು ಪದ ಬಳಕೆ ಮಾಡಿದ್ದಾರೆಂದು ಗೊತ್ತಿದೆ. ಇವತ್ತು ಒಕ್ಕಲಿಗ ಸಮಾಜ ಎಲ್ಲವನ್ನೂ ಗಮನಿಸುತ್ತಿದೆ. ಅವರ ಋಣದಲ್ಲಿ ಒಕ್ಕಲಿಗರು ಇಲ್ಲ, ಒಕ್ಕಲಿಗರ ಮೇಲೆ ಅವರು ನಿಂತಿದ್ದಾರೆ. ಬಿಜೆಪಿಯವರು ಮಾಡೋದೆಲ್ಲ ಮಾಡ್ತಾರೆ, ಆ ಮೇಲೆ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುತ್ತಾರೆ” ಎಂದು ಕಿಡಿಕಾರಿದರು.
“ಮುನಿರತ್ನ ಪ್ರಕರಣದ ವಿಚಾರವಾಗಿ ಒಕ್ಕಲಿಗ ಸಮಾಜದ ಪ್ರಮುಖರ ಸಭೆಯಲ್ಲಿ ನಾನು ಭಾಗವಹಿಸುತ್ತಿರುವೆ. ಈ ರೀತಿಯ ಹೇಳಿಕೆ ವಿರುದ್ಧ ಏನು ಮಾಡಬೇಕೆಂದು ಚರ್ಚೆ ಮಾಡಬೇಕಿದೆ. ಹೀಗೆ ಬಿಟ್ಟರೆ ನಾಳೆ ಇನ್ನೊಬ್ಬರು ಮಾತಾಡೋಕೆ ಶುರು ಮಾಡ್ತಾರೆ. ಅವರ ಹೆಣ್ಣು ಮಕ್ಕಳ ಬಗ್ಗೆ ಮಾತಾಡಿದ್ರೆ ಬಿಜೆಪಿ ವರು ಸಹಿಸಿಕೊಳ್ಳಬಹುದು. ನಾನು ನನ್ನ ರಾಜಕೀಯ ಜೀವನದಲ್ಲೇ ಇಂತಹ ಪದಗಳನ್ನು ಕೇಳೇ ಇಲ್ಲ” ಎಂದು ಡಿ ಕೆ ಸುರೇಶ್ ಹೇಳಿದರು.