- ಸರ್ಕಾರದ ವಿವಿಧ ಇಲಾಖೆಗಳಿಗೆ ನೀಡುತ್ತಿದ್ದ ಅನುದಾನದ ಪ್ರಮಾಣ ಕಡಿತ
- ಕಾಯ್ದೆಯ ನಿಯಮಾವಳಿ ಮೀರಿಲ್ಲ, ಆಶಯಗಳಿಗೆ ಧಕ್ಕೆ ಮಾಡಿಲ್ಲ: ಸ್ಪಷ್ಟನೆ
ಪ್ರಸಕ್ತ ಸಾಲಿನಲ್ಲಿ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಕಾಯ್ದೆಯಡಿಯಲ್ಲಿ 7(ಡಿ) ಅನ್ನು ಈ ಬಾರಿಯ ಆಯವ್ಯಯದಲ್ಲಿ ರದ್ದು ಮಾಡಿದ ಮೇಲೆ ಸರ್ಕಾರದ ವಿವಿಧ ಇಲಾಖೆಗಳಿಗೆ ನೀಡುತ್ತಿದ್ದ ಅನುದಾನದ ಪ್ರಮಾಣ ಕಡಿತಗೊಳಿಸಿ, ಅದನ್ನು ಫಲಾನುಭವಿ ಆಧಾರಿತ ಕಾರ್ಯಕ್ರಮಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್ ಸಿ ಮಹದೇವಪ್ಪ ತಿಳಿಸಿದ್ದಾರೆ.
ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅನುದಾನವನ್ನು ಗ್ಯಾರಂಟಿ ಯೋಜನೆಗಳ ಜಾರಿಗೆ ಸರ್ಕಾರ ಬಳಸಿಕೊಳ್ಳುತ್ತಿರುವ ಬಗ್ಗೆ ಪತ್ರಿಕಾ ಪ್ರಕಟಣೆ ಮೂಲಕ ಸ್ಪಷ್ಟೀಕರಣ ನೀಡಿರುವ ಅವರು, “ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗೆ ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಅವರ ಬದುಕಿಗೆ ನೇರ ಪ್ರಯೋಜನ ಆಗುತ್ತಿರುವ ಹಿನ್ನಲೆಯಲ್ಲಿ ನಿಯಮಾವಳಿಗಳ ಅಡಿಯಲ್ಲೇ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಕಾಯ್ದೆಯಡಿ ಭಾಗಶಃ ಅನುದಾನವನ್ನು ನೀಡಲಾಗಿದೆ. ಇಲ್ಲಿ ಎಲ್ಲಿಯೂ ಕೂಡಾ ಕಾಯ್ದೆಯ ನಿಯಮಾವಳಿಗಳನ್ನು ಮೀರಿಲ್ಲ ಮತ್ತು ಅದರ ಆಶಯಗಳಿಗೆ ಧಕ್ಕೆ ಆಗುವಂತೆ ನಡೆದುಕೊಂಡಿಲ್ಲ” ಎಂದು ತಿಳಿಸಿದ್ದಾರೆ.
ಅನುದಾನ ಹೆಚ್ಚಳ
“2022-23 ನೇ ಸಾಲಿನಲ್ಲಿ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅಡಿ ವಿವಿಧ ಇಲಾಖೆಗಳಿಗೆ ಡೀಮ್ಡ್ ವೆಚ್ಚ ಸೇರಿ ಹಂಚಿಕೆ ಮಾಡಲಾಗಿದ್ದ 7,450.80 ಕೋಟಿಗಳ ಹಣವು 2023-24ನೇ ಸಾಲಿನಲ್ಲಿ ಸುಮಾರು 2,787.33 ಕೋಟಿಗಳಿಗೆ ಇಳಿಕೆಯಾಗಿರುತ್ತದೆ. ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಕಾಯ್ದೆಯಡಿಯಲ್ಲಿ 2023-24ನೇ ಸಾಲಿನಲ್ಲಿ ಒಟ್ಟಾರೆ 34,294 ಕೋಟಿ ರೂಪಾಯಿಗಳ ಅನುದಾನವನ್ನು ಒದಗಿಸಲಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ಅನುದಾನದ ಪ್ರಮಾಣವು ಶೇ.13 ಅಂದರೆ ಸುಮಾರು 4,031 ಕೋಟಿ ರೂ. ಹೆಚ್ಚಳವಾಗಿದೆ” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬಳ್ಳಾರಿ |ಎಸ್‌ಸಿ/ಎಸ್‌ಟಿ ಅನುದಾನ ದುರ್ಬಳಕೆ ಅಕ್ಷಮ್ಯ: ಭೀಮ್ ಆರ್ಮಿ
“ನಮ್ಮ ಸರ್ಕಾರವು ಪರಿಶಿಷ್ಟ ಜಾತಿ & ಪರಿಶಿಷ್ಟ ಪಂಗಡದ ಸಮಗ್ರ ಅಭಿವೃದ್ದಿಗೆ ಬದ್ದವಾಗಿದ್ದು, ಇದಕ್ಕೆ ಪೂರಕವಾಗಿ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಕಾಯ್ದೆ 2013 ರ ಸೆಕ್ಷನ್ 7(ಡಿ) ಯನ್ನು ಕೈಬಿಡಬೇಕೆಂಬ ಸಮುದಾಯಗಳ ಬೇಡಿಕೆಗೆ ಸ್ಪಂದಿಸಿ 7(ಡಿ) ಅನ್ನು ರದ್ದುಪಡಿಸುವ ಕೆಲಸವನ್ನು ಮಾಡಿದೆ. ಇಷ್ಟೇ ಅಲ್ಲದೇ ಪರಿಶಿಷ್ಟ ಜಾತಿ ಮತ್ತು ಪಂಗಡದ ಗುತ್ತಿಗೆದಾರರಿಗೆ ನೀಡುತ್ತಿದ್ದ 50 ಲಕ್ಷ ರೂಪಾಯಿಗಳ ಗುತ್ತಿಗೆ ಮೊತ್ತದ ಪ್ರಮಾಣವನ್ನು 1 ಕೋಟಿ ರೂಪಾಯಿಗಳಿಗೆ ಏರಿಸಿದೆ. ಇದರೊಂದಿಗೆ ಪಿಟಿಸಿಎಲ್ ಕಾಯ್ದೆಗೆ ಇದ್ದ ಕಾಲಮಿತಿಯನ್ನು ರದ್ದುಪಡಿಸುವ ಮೂಲಕ ಚುನಾವಣೆಗೂ ಮುನ್ನವೇ ಭರವಸೆ ನೀಡಲಾದಂತೆ ನಮ್ಮ ಸರ್ಕಾರವು ನಡೆದುಕೊಂಡಿದೆ” ಎಂದು ಹೇಳಿದ್ದಾರೆ.
ಬಿಜೆಪಿಗೆ ನೈತಿಕತೆ ಇಲ್ಲ: ಸಚಿವರ ಕಿಡಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಹಿಂದಿನ ಅವಧಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಹಂಚಿಕೆ ಮಾಡುವ ಉದ್ದೇಶದಿಂದ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಕಾಯ್ದೆ ಅನುಷ್ಠಾನಕ್ಕೆ ತಂದರು. ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಾಗಿದ್ದ ಹಣವನ್ನು ಈ ಹಿಂದಿನ ಬಿಜೆಪಿ ನೇತೃತ್ವದ ಸರ್ಕಾರವು ಕಾಯ್ದೆಯ ಆಶಯಕ್ಕೆ ವಿರುದ್ಧವಾಗಿ ಬೇರೆ ಬೇರೆ ಕಾಮಗಾರಿಗಳಿಗೆ ಬಳಸಿಕೊಂಡಿತ್ತು. ಇಂತಹ ಪಕ್ಷದ ನಾಯಕರು ಈ ದಿನ ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತಿರುವ ನಮ್ಮ ಸರ್ಕಾರದ ಬಗ್ಗೆ ಟೀಕಿಸುತ್ತಿರುವುದು ವಿಪರ್ಯಾಸ. ನೈತಿಕತೆ ಇಲ್ಲದೇ ಮಾತನಾಡುತ್ತಿರುವ ಇವರ ಮಾತುಗಳನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ” ಎಂದು ತಿಳಿಸಿದ್ದಾರೆ.