- ‘ವಿವಿ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಲಾಗುವುದು‘
- ‘ಉತ್ತಮ ಆರ್ಥಿಕ ತಜ್ಞರನ್ನು ರೂಪಿಸುವ ಜವಾಬ್ದಾರಿ ವಿವಿ ಮೇಲಿದೆ’
ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರಿನ ಸ್ಕೂಲ್ ಆಫ್ ಎಕನಾಮಿಕ್ಸ್ ವಿಶ್ವವಿದ್ಯಾಲಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆಯಬೇಕು. ಇಲ್ಲಿಯ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಿ ಎಲ್ಲ ರೀತಿಯ ಬೆಂಬಲ ನೀಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ ಸಿ ಸುಧಾಕರ್ ಹೇಳಿದ್ದಾರೆ.
ಉನ್ನತ ಶಿಕ್ಷಣ ಸಚಿವರಾದ ನಂತರ ಇದೇ ಮೊದಲ ಬಾರಿಗೆ ಗುರುವಾರ ಬೆಂಗಳೂರಿನ ಜ್ಞಾನಭಾರತಿಯಲ್ಲಿರುವ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್‌ಗೆ ಭೇಟಿ ನೀಡಿ, ಭಾರತದಲ್ಲಿ ಅತ್ಯಂತ ಸದೃಢ ಎಕನಾಮಿಕ್ಸ್ ವಿಶ್ವವಿದ್ಯಾಲಯವಾಗಬೇಕು” ಎಂದು ಆಶಯ ವ್ಯಕ್ತಪಡಿಸಿರು.
“ಅತ್ಯಂತ ಕಡಿಮೆ ಅವಧಿಯಲ್ಲಿ ನಿರೀಕ್ಷೆಗೂ ಮೀರಿ ಸ್ಕೂಲ್ ಆಫ್ ಎಕನಾಮಿಕ್ಸ್ ಬೆಳೆದಿರುವುದು ಸಂತಸದ ವಿಷಯ. ಮುಂದಿನ ವರ್ಷಗಳಲ್ಲಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಆರ್ಥಿಕ ತಜ್ಞರನ್ನು ರೂಪಿಸುವ ಜವಾಬ್ದಾರಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಮೇಲಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಖಾಲಿ ಹುದ್ದೆ ಭರ್ತಿಗೆ ಮುಂದಾದ ಗೃಹ ಇಲಾಖೆ; ಮುಂದಿನ ವಾರದಲ್ಲಿ ನೂತನ ನೇಮಕಾತಿ
“ಈಗಾಗಲೇ ಕಳೆದ ಮೂರು ನಾಲ್ಕು ವರ್ಷಗಳಿಂದ ಎಕನಾಮಿಕ್ಸ್ ಪದವಿ ಹಾಗೂ ಸ್ನಾತಕೋತ್ತರದಲ್ಲಿ ದೇಶದ ಗಮನಸೆಳೆದಿರುವ ಈ ವಿಶ್ವವಿದ್ಯಾಲಯವು ಮುಂದಿನ ದಿನಗಳಲ್ಲಿ ಅತ್ಯಂತ ಭರವಸೆಯನ್ನು ಮೂಡಿಸುವ ನಿಟ್ಟಿನಲ್ಲಿ ಸಾಗಿದೆ. ಇದೇ ರೀತಿ ಇನ್ನೂ ಹೆಚ್ಚು ಪಠ್ಯಕ್ರಮಗಳೊಂದಿಗೆ ಹೆಚ್ಚಿನ ಸಾಧನೆ ಮಾಡಬೇಕು” ಎಂದು ತಿಳಿಸಿದರು.
ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್‌ನ ಕುಲಪತಿ, ಕುಲ ಸಚಿವರು ಹಾಗೂ ಬೋಧಕ ಸಿಬ್ಬಂದಿಯೊಂದಿಗೆ ಅಭಿವೃದ್ಧಿ ಕುರಿತಂತೆ ಸುಧೀರ್ಘ ಸಮಾಲೋಚನೆ ನಡೆಸಿದರು. ಇಲ್ಲಿಯ ಶಿಕ್ಷಣ, ಬೋಧಕ ಸಿಬ್ಬಂದಿ ಮತ್ತು ರಾಜ್ಯದ ವಿದ್ಯಾರ್ಥಿಗಳಿಗೆ ಸಿಗುತ್ತಿರುವ ಅವಕಾಶ ಸೇರಿದಂತೆ ಸಂಪೂರ್ಣ ಮಾಹಿತಿ ಪಡೆದರು. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ನ ಕುಲಪತಿ ಎನ್ ಆರ್ ಭಾನುಮೂರ್ತಿ, ಕುಲಸಚಿವ ಶೋಭಾ ಬಿ ಹಾಗೂ ಆಡಳಿತ ಸಿಬ್ಬಂದಿ ಹಾಜರಿದ್ದರು.