ಹೆಂಗಸರು ಬುರ್ಖಾ ಧರಿಸಿರುವುದು ನೋಡಿ ಮುಸ್ಲಿಮರು ಎಂದು ತಿಳಿದ ಬಳಿಕ ಸ್ವತಃ ಅನಂತಕುಮಾರ್ ಅವರೇ, 'ಇವರು ಮುಸ್ಲಿಮರು ಹೊಡಿಯಿರಿ' ಎಂದು ತನ್ನೊಂದಿಗೆ ಇರುವವರಿಗೆ ಸೂಚಿಸಿದರೂ, ಪೊಲೀಸರು ಅವರನ್ನು ಏಕೆ ಬಂಧಿಸಿಲ್ಲ?
ನಿರಂತರವಾಗಿ ತನ್ನ ಕೋಮುದ್ವೇಷ ಭಾಷಣ, ಉದ್ರೇಕಕಾರಿ ಹೇಳಿಕೆಗಳ ಮೂಲಕವೇ ಸುದ್ದಿಯಾಗುತ್ತಿರುವ ಬಿಜೆಪಿ ನಾಯಕ, ಮಾಜಿ ಸಂಸದ ಅನಂತಕುಮಾರ್ ಹೆಗಡೆ ಇದೀಗ ತನ್ನ ದಾಂಧಲೆಯಿಂದ ಸುದ್ದಿಗೆ ಗ್ರಾಸವಾಗಿದ್ದಾರೆ. ಅನಂತಕುಮಾರ್, ಅವರ ಪುತ್ರ, ಗನ್ ಮ್ಯಾನ್ ಸೇರಿ ಕಾರು ಓವರ್‌ಟೇಕ್ ಮಾಡಿದರು ಎಂಬ ಕಾರಣಕ್ಕೆ ನಾಲ್ವರಿಗೆ ಥಳಿಸಿದ್ದಾರೆ. ಅದೂ ಮುಸ್ಲಿಮರೆಂದು ತಿಳಿದ ಬಳಿಕ ಅಧಿಕ ಹಲ್ಲೆ ಮಾಡಿದ್ದಾರೆ ಎಂಬ ಆರೋಪಗಳೂ ಇವೆ.
ದ್ವೇಷ ಭಾಷಣಕ್ಕೆ ‘ಫೇಮಸ್’ ಎನ್ನಬಹುದಾದ ಅನಂತಕುಮಾರ್ ಮಾತ್ರ ತಾನು ದಾಳಿ ಮಾಡಿಲ್ಲ, ಕಾರಿನಲ್ಲೇ ಕುಳಿತುಕೊಂಡಿದ್ದೆ ಎಂದು ಹೇಳಿದ್ದಾರೆ. ಆದರೆ ಸಂತ್ರಸ್ತರು ಹೇಳುವಂತೆ ಅನಂತಕುಮಾರ್ ಅವರೇ ಮೊದಲು ನೇರವಾಗಿ ಹಲ್ಲೆ ನಡೆಸಿರುವುದು. ಏನೇ ಆದರೂ ರಾಜಕಾರಣಿಯಾದ ಕಾರಣ ಅವರ ಗನ್ ಮ್ಯಾನ್ ಚಾಲಕ ಸುಲಭವಾಗಿ ಜಾಮೀನು ಪಡೆದುಕೊಂಡಿದ್ದಾರೆ, ಪ್ರಕರಣವನ್ನೂ ಮುಚ್ಚಿ ಹಾಕುವ ಯತ್ನಕ್ಕೂ ಬಿಜೆಪಿ ನಾಯಕ ಇಳಿಯಬಹುದು ಎಂಬುದು ಸ್ಪಷ್ಟ. ಈ ಸಂದರ್ಭದಲ್ಲೇ ಅನಂತಕುಮಾರ್ ಅವರ ಹಳೆಯ ದಾಂಧಲೆಗಳತ್ತ ನಾವು ಒಮ್ಮೆ ಕಣ್ಣು ಹಾಯಿಸಬೇಕು.
ಇದನ್ನು ಓದಿದ್ದೀರಾ? ಓವರ್‌ಟೇಕ್ ಮಾಡಿದ ವ್ಯಕ್ತಿಗೆ ಅನಂತ್ ಕುಮಾರ್ ಹೆಗಡೆ ಪುತ್ರನಿಂದ ಹಲ್ಲೆ; ಕಾರಿನಲ್ಲಿದ್ದ ಮಾಜಿ ಸಂಸದ
ಏನಿದು ಓವರ್‌ಟೇಕ್ ಪ್ರಕರಣ?
ತಾವು ಸಾಗುತ್ತಿದ್ದ ಕಾರನ್ನು ಓವರ್‌ಟೇಕ್ ಮಾಡಿ ಹೋದ ಕಾರಣಕ್ಕೆ ಕಾರೊಂದನ್ನು ಅಡ್ಡಗಟ್ಟಿ ಬಿಜೆಪಿ ನಾಯಕ, ಮಾಜಿ ಸಂಸದ ಅನಂತಕುಮಾರ್ ಹೆಗಡೆ, ಅವರ ಚಾಲಕ ಮಹೇಶ್, ಗನ್ ಮ್ಯಾನ್ ಶ್ರೀಧರ್, ಪುತ್ರ ಆಶುತೋಷ್ ನಾಲ್ವರಿಗೆ ಥಳಿಸಿದ್ದಾರೆ. ಕಾರಿನಲ್ಲಿದ್ದ ಸಲ್ಮಾನ್, ಸೈಪ್, ಇಲಿಯಾಜ್ ಖಾನ್, ಗುಲಷಿರ್ ಉನ್ನಿಸಾ ಎಂಬುವರ ಮೇಲೆ ಹಲ್ಲೆ ನಡೆಸಲಾಗಿದ್ದು ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಘಟನೆಗೆ ಸಂಬಂಧಿಸಿದಂತೆ ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹಾಲೇನಹಳ್ಳಿಯ ನಿವಾಸಿ, ಗಾಯಾಳು ಸೈಫ್ ಖಾನ್ ಅವರು ನೀಡಿದ ಹೇಳಿಕೆ ಆಧರಿಸಿ ಪ್ರಕರಣ ದಾಖಲಾಗಿದೆ. ಈಗಾಗಲೇ ಆರೋಪಿಗಳಾದ ಶ್ರೀಧರ್ ಮತ್ತು ಮಹೇಶ್ ಅವರ ಬಂಧನ ಮಾಡಲಾಗಿದೆ, ಷರತ್ತುಬದ್ಧ ಜಾಮೀನೂ ಲಭಿಸಿದೆ. ಆದರೆ ಪ್ರಮುಖ ಆರೋಪಿ ಅನಂತ್ ಅವರನ್ನು ಮಾತ್ರ ಬಂಧಿಸಲಾಗಿಲ್ಲ. ಸದ್ಯ ಅನಂತ್ ಬಂಧನಕ್ಕೆ ಸಂತ್ರಸ್ತರು ಆಗ್ರಹಿಸಿದ್ದಾರೆ.
ಈ ಬಗ್ಗೆ ಈದಿನ ಡಾಟ್ ಕಾಮ್‌ಗೆ ಪ್ರತಿಕ್ರಿಯೆ ನೀಡಿದ ಸಂತ್ರಸ್ತರ ಕುಟುಂಬಸ್ಥ ಝಬಿನುಲ್ಲಾ ಖಾನ್, “ತುಮಕೂರಿನಲ್ಲಿ ನಮ್ಮ ಅತ್ತೆ ಮಗನ ಮದುವೆ ಇತ್ತು. ಮದುವೆ ಮುಗಿಸಿ ಬರುವಾಗ ಹಿಂದೆ ಇದ್ದ ಕಾರಿನವರು ಸೈಡ್ ಕೇಳಿದರು. ಆದರೆ ಎಡ, ಬಲದಲ್ಲಿ ದಾರಿ ಬ್ಲಾಕ್ ಆಗಿತ್ತು. ಆದ್ದರಿಂದ ಸೈಡ್ ಕೊಡಲು ಆಗಲಿಲ್ಲ. ನಮ್ಮ ಕುಟುಂಬಸ್ಥರಿಗೆ ಹಿಂದಿರುವುದು ಅನಂತಕುಮಾರ್ ಅವರ ಕಾರೆಂದು ಗೊತ್ತಿರಲಿಲ್ಲ. ಎರಡು ಕಿಲೋಮೀಟರ್ ಸಾಗಿದ ಬಳಿಕ ಪ್ರತಾಪ್ ಎಂಬವರ ಮನೆಯ ಬಳಿ ಜನ ಇಲ್ಲದ್ದನ್ನು ನೋಡಿ ನಮ್ಮ ಕುಟುಂಬಸ್ಥರು ಇದ್ದ ಕಾರನ್ನು ಓವರ್‌ಟೇಕ್ ಮಾಡಿ ಬಂದು ಏಕಾಏಕಿ ಥಳಿಸಿದ್ದಾರೆ” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಅಂತ್ಯ ಕಾಣುತ್ತಾ ಯತ್ನಾಳ ರಾಜಕೀಯ ಭವಿಷ್ಯ?
“ಒಬ್ಬರ ಕತ್ತಿಗೆ ಪೆಟ್ಟಾಗಿದೆ. ಒಬ್ಬರ ಬಾಯಿಯೊಳಗೆ ಆರು ಹೊಲಿಗೆ ಹಾಕಲಾಗಿದೆ. ನನ್ನ ತಂಗಿಯ ಗಂಡನ(ಇಲಿಯಾಜ್ ಖಾನ್) ಹಲ್ಲುಗಳು ಮುರಿದಿದೆ. ನಮ್ಮ ಅತ್ತಿಗೆ ಕಾರಲ್ಲೇ ಇದ್ದರು. ಅವರ ಮಕ್ಕಳು ಸಲ್ಮಾನ್, ಸೈಫ್ ಮೇಲೆ ಹಲ್ಲೆ ಮಾಡುವುದನ್ನು ನೋಡಿ ಯಾಕೆ ನನ್ನ ಮಕ್ಕಳನ್ನು ಹೊಡೆಯುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಅನಂತಕುಮಾರ್ ಅವರು ನನ್ನ ಅತ್ತಿಗೆ ಮೇಲೆ ಹಲ್ಲೆ ನಡೆಸಿದ್ದಾರೆ. ಅವರೇ ಅನಂತಕುಮಾರ್ ಎಂಬುದು ಅತ್ತಿಗೆಗೂ ತಿಳಿದಿರಲಿಲ್ಲ. ಸಾರ್ವಜನಿಕರು ಹೇಳಿದ ಬಳಿಕವಷ್ಟೆ ಗೊತ್ತಾಗಿದ್ದು” ಎಂದು ಹೇಳಿದ್ದಾರೆ.
“ಅನಂತಕುಮಾರ್ ಅವರು ಕಾರಿನಿಂದ ಕೆಳಗಿಳಿದು ಬಂದು ನನ್ನ ಅತ್ತಿಗೆಯ(ಗುಲಷಿರ್ ಉನ್ನಿಸಾ) ತಲೆಗೆ ಹೊಡೆದಿದ್ದು ಗನ್ ಮ್ಯಾನ್(ಶ್ರೀಧರ್) ತುಳಿದಿದ್ದಾರೆ. ಈ ಎಲ್ಲ ಘಟನೆ ನಡೆಯುವಾಗಲೇ ನಾನು ನನ್ನ ಮಗಳಿಗೆ ಕರೆ ಮಾಡಿದ್ದೆ. ಅವಳು ನಡೆಯುತ್ತಿರುವ ಹಲ್ಲೆಯ ಬಗ್ಗೆ ತಿಳಿಸಿದಳು. ನಾನು ಆಗಲೇ ಆಕೆಯ ಬಳಿ ವಿಡಿಯೋ ಮಾಡಿಕೊಳ್ಳುವಂತೆ, ಕಾರಿನ ನಂಬರ್ ನೋಡುವಂತೆ ಹೇಳಿದೆ. ಈ ವೇಳೆ ಗನ್ ಮ್ಯಾನ್ ಗನ್ ತೋರಿಸಿ ಬೆದರಿಸಿದ್ದಾನೆ. ಪೊಲೀಸಿನವರಿಗೂ ನನ್ನ ಮಗಳೇ ಕರೆ ಮಾಡಿ ದೂರು ನೀಡಿದ್ದಾಳೆ” ಎಂದರು.
“ಈ ಘಟನೆ ನಡೆದ ಬಳಿಕ ನಾನು ಪೊಲೀಸ್ ಠಾಣೆಯಲ್ಲಿ ದಾಬಸ್‌ಪೇಟೆ ಸಬ್‌ಇನ್‌ಸ್ಪೆಕ್ಟರ್ ಅವರ ಬಳಿ ಮಾತಾಡಿದೆ. ಈ ವೇಳೆ ಸಬ್‌ಇನ್‌ಸ್ಪೆಕ್ಟರ್ ಅವರು ‘ಹಲ್ಲೆಲ್ಲ ಮುರಿದಿದೆ, ರಕ್ತ ಸುರಿಯುತ್ತಿದೆ, ಮೊದಲು ಆಸ್ಪತ್ರೆಗೆ ಕರೆದುಕೊಂಡು ಹೋಗು’ ಎಂದರು. ಅವರು ಬಳಿಕ ಬರುವುದಾಗಿ ಹೇಳಿದರು. ಅದರಂತೆ ನಾವು ಮೊದಲು ದಾಬಸ್‌ಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿದೆವು. ಬಳಿಕ ವೈದ್ಯರ ಸಲಹೆಯಂತೆ ವಿನಾಯಕ ಆಸ್ಪತ್ರೆಗೆ ದಾಖಲಿಸಲಾಗಿದೆ” ಎಂದು ಈದಿನ ಡಾಟ್ ಕಾಮ್‌ಗೆ ಮಾಹಿತಿ ನೀಡಿದ್ದಾರೆ.
FIR Registered Against Former BJP MP Anant Kumar Hegde, Three Others for Assault and Threats pic.twitter.com/78bteqJukB
— Dharmendra Singh (@dharmendra135) June 24, 2025
“ಘಟನೆ ನಡೆಯುವಾಗ ಅನಂತಕುಮಾರ್ ಅವರು ಹಳದಿ ಬಣ್ಣದ ಟೀಶರ್ಟ್ ಧರಿಸಿದ್ದರು, ಅವರ ಬಟ್ಟೆ ಮೇಲೆ ರಕ್ತವಾಗಿತ್ತು. ಆದರೆ ಠಾಣೆಗೆ ಹೋಗುವುದರ ಒಳಗಡೆ ಆ ಬಟ್ಟೆಯನ್ನು ಬದಲಾಯಿಸಿಕೊಂಡು ಶರ್ಟ್ ಧರಿಸಿದ್ದಾರೆ. ಹಲ್ಲೆ ನಡೆಸಿದವರಲ್ಲಿ ಓರ್ವ ಅನಂತ್ ಅವರ ಮಗ ಎಂಬುದು ನಮಗೆ ಬಳಿಕ ತಿಳಿಯಿತು. ಅನಂತಕುಮಾರ್ ಸೇರಿದಂತೆ ಅವರ ಜೊತೆಗಿದ್ದ ಎಲ್ಲರೂ ನಮ್ಮ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿದ್ದಾರೆ” ಎಂದಿದ್ದಾರೆ.
ಹಾಗೆಯೇ ಅನಂತಕುಮಾರ್ ಅವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ. “ಸದ್ಯ ಗನ್ ಮ್ಯಾನ್ ಶ್ರೀಧರ್ ಅವರನ್ನು ಅಮಾನತು ಮಾಡಲಾಗಿದೆ. ಆರೋಪಿಗಳೆಲ್ಲರಿಗೂ ಜಾಮೀನು ಸಿಕ್ಕಿದೆ. ಇಂದಿನ ಕಾಲದಲ್ಲಿ ಬಡವರಿಗೆ ದಾರಿ ಇಲ್ಲದಂತಾಗಿದೆ. ರಾಜಕೀಯದಲ್ಲಿರುವವರಿಗೆ, ದುಡ್ಡಿರುವವರಿಗೆ ಮಾತ್ರ ದಾರಿ ಇರುವುದು” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸದಾ ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡುವ ಅನಂತಕುಮಾರ್ ಹೆಗಡೆಯವರು ಈ ಘಟನೆ ವೇಳೆ ತನ್ನ ಈ ಕೀಳುಮಟ್ಟದ ಹಗೆತನವನ್ನು ತೋರಿಸಿದ್ದಾರೆ ಎಂದು ತಿಳಿದುಬಂದಿದೆ. ಆರಂಭದಲ್ಲಿ ಕಾರು ಓವರ್‌ಟೇಕ್ ಮಾಡಿದ ನೆಪದಲ್ಲಿ ಥಳಿಸಿದರೆ ಬಳಿಕ ಮುಸ್ಲಿಮರು ಎಂದು ತಿಳಿದು ಗುರಿಯಾಗಿಸಿ ಹಲ್ಲೆ ನಡೆಸಲಾಗಿದೆ. “ಹೆಂಗಸರು ಬುರ್ಖಾ ಧರಿಸಿರುವುದು ನೋಡಿ ಮುಸ್ಲಿಮರು ಎಂದ ತಿಳಿದ ಬಳಿಕ ಸ್ವತಃ ಅನಂತಕುಮಾರ್ ಅವರೇ, ‘ಇವರು ಮುಸ್ಲಿಮರು ಹೊಡಿಯಿರಿ’ ಎಂದು ತನ್ನೊಂದಿಗೆ ಇರುವವರಿಗೆ ಸೂಚಿಸಿದ್ದಾರೆ. ಅನಂತ್ ಅವರು ಇಲಿಯಾಜ್ ಖಾನ್ ಮತ್ತು ನನ್ನ ಅತ್ತಿಗೆ ಗುಲಷಿರ್ ಉನ್ನಿಸಾ ಅವರಿಗೆ ಹೊಡೆದಿದ್ದಾರೆ” ಎಂದು ಹೇಳಿದ್ದಾರೆ.
ಈ ಹಿಂದೆ ವೈದ್ಯರ ಮೇಲೆ ಹಲ್ಲೆ ನಡೆಸಿದ ಅನಂತ್ ಹೆಗಡೆ
ಅನಂತಕುಮಾರ್ ದಾಂಧಲೆ ನಡೆಸಿರುವುದು, ಹಲ್ಲೆ ಮಾಡಿರುವುದು ಇದೇ ಮೊದಲೇನಲ್ಲ. 2017ರಲ್ಲಿ ಸಂಸದರಾಗಿದ್ದಾಗ ಇದೇ ರೀತಿ ವೈದ್ಯರ ಮೇಲೆ ಹಲ್ಲೆ ನಡೆಸಿದ್ದರು. ಅದರ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಬಳಿಕ ಕ್ಷಮೆ ಕೇಳುವ ನಾಟಕವೂ ನಡೆದಿತ್ತು.
ಉತ್ತರ ಕನ್ನಡದ ಕಾರವಾರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಸರಿಯಾದ ರೀತಿಯಲ್ಲಿ ತನ್ನ ತಾಯಿಯ ಆರೈಕೆ ಮಾಡಿಲ್ಲ ಎಂದು ಆರೋಪಿಸಿ ಅನಂತಕುಮಾರ್ ಅವರು ಡಾ. ಮದುಕೇಶ್ವರ ಜೀವಿ, ಡಾ. ಬಾಲಚಂದ್ರ ಮತ್ತು ಡಾ. ರಾಹುಲ್ ಮರ್ಷಾಕರ್ ಎಂಬವರ ಮೇಲೆ ಹಲ್ಲೆ ನಡೆಸಿದ್ದರು. ನರ್ಸ್‌ಗಳು ತಡೆದರೂ ವೈದ್ಯರ ಕುತ್ತಿಗೆ ಹಿಡಿದು ಮುಖಕ್ಕೆ ಥಳಿಸುವ ವಿಡಿಯೋ ಹರಿದಾಡಿತ್ತು. ಆದರೆ ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ. ಅಲ್ಲಿಯೇ ಪ್ರಕರಣ ಮುಚ್ಚಿಹೋಗಿದೆ.
ತನ್ನ ನಾಯಕನ ದುಷ್ಕೃತ್ಯದ ಹೊಣೆಯನ್ನು ಹೊತ್ತುಕೊಳ್ಳಲು ಬಿಜೆಪಿಯೂ ನಿರಾಕರಿಸಿತ್ತು. “ಇದು ಅವರ ವೈಯಕ್ತಿಕ ವಿಚಾರ. ಪಕ್ಷ ಇದಕ್ಕೆ ಹೊಣೆಯಾಗದು. ಸಂಸದರು ಈ ರೀತಿ ಮಾಡಿರುವುದು ತಪ್ಪು. ಈ ಬಗ್ಗೆ ಹೆಗಡೆ ಅವರ ವಿವರಣೆ ಕೇಳಲಾಗುವುದು. ಬಳಿಕ ಕ್ರಮಕೈಗೊಳ್ಳುವ ಬಗ್ಗೆ ನಿರ್ಧರಿಸಲಾಗುವುದು” ಎಂದು ಅಂದಿನ ಬಿಜೆಪಿ ವಕ್ತಾರ ಗೋ ಮಧುಸೂದನ್ ಹೇಳಿದ್ದರು.
ಈ ಎಲ್ಲಾ ಘಟನೆಗಳ ಹಿಂದೆ ತಾನು ರಾಜಕಾರಣಿ, ತಾನೇನು ಮಾಡಿದರೂ ನಡೆಯುತ್ತದೆ ಎಂಬ ದರ್ಪವಂತು ಸ್ಪಷ್ಟವಾಗಿ ಎದ್ದು ಕಾಣುತ್ತದೆ. ಅದರಲ್ಲೂ ಮುಸ್ಲಿಮರು ಎಂಬುದು ತಿಳಿದ ಬಳಿಕ ಅಧಿಕ ಹಲ್ಲೆ ಮಾಡಿರುವುದು ಅತಿ ಅಪಾಯಕಾರಿ ಬೆಳವಣಿಗೆ. ಸಮಾಜವನ್ನು ಈ ರಾಜಕಾರಣಿಗಳು ಎತ್ತ ಕೊಂಡೊಯ್ಯುತ್ತಿದ್ದಾರೆ ಎಂಬ ಪ್ರಶ್ನೆ ಹುಟ್ಟುತ್ತದೆ. ದಾಳಿ ನಡೆಸಿದ ಗನ್ ಮ್ಯಾನ್ ಮತ್ತು ಕಾರು ಚಾಲಕನ ಬಂಧನ, ಜಾಮೀನು ನಡೆದಿದೆ. ಆದರೆ ಎ1 ಆರೋಪಿಯಾದ ಅನಂತಕುಮಾರ್ ಅವರನ್ನು ಮಾತ್ರ ಯಾಕೆ ಬಂಧಿಸಿಲ್ಲ. ಅವರನ್ನೂ ಬಂಧಿಸಿ ಕ್ರಮಕೈಗೊಳ್ಳಬೇಕು ಎಂಬುದು ಸಂತ್ರಸ್ತರ ಆಗ್ರಹ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.