ಆಂಧ್ರಪ್ರದೇಶದ ಎಂಟು ಹಾಲಿ ಶಾಸಕರನ್ನು ವಿಧಾನಸಭಾ ಸ್ಪೀಕರ್ ತಮ್ಮಿನೇನಿ ಸೀತಾರಾಮ್ ಅವರು ಅನರ್ಹಗೊಳಿಸಿದ್ದಾರೆ. ಆಡಳಿತಾರೂಢ ವೈಎಸ್‌ಆರ್ ಕಾಂಗ್ರೆಸ್ ಮತ್ತು ಪ್ರತಿಪಕ್ಷ ತೆಲುಗು ದೇಶಂ ಪಕ್ಷದ (ಟಿಡಿಪಿ) ತಲಾ ನಾಲ್ವರನ್ನು ಆಯಾ ಪಕ್ಷಗಳು ನೀಡಿರುವ ಪಕ್ಷಾಂತರದ ದೂರುಗಳ ಆಧಾರದ ಮೇಲೆ ಅಮಾನತು ಮಾಡಲಾಗಿದೆ.
ಟಿಡಿಪಿಯ ಮದ್ದಾಳು ಗಿರಿಧರ್ ರಾವ್, ಕರಣಂ ಬಲರಾಮ್, ವಲ್ಲಭನೇನಿ ವಂಶಿ ಮತ್ತು ವಾಸುಪಲ್ಲಿ ಗಣೇಶ್ ಹಾಗೂ ವೈಎಸ್‌ಆರ್ ಕಾಂಗ್ರೆಸ್‌ನ ಆನಂ ರಾಮನಾರಾಯಣ ರೆಡ್ಡಿ, ಮೇಕಪತಿ ಚಂದ್ರಶೇಖರ್ ರೆಡ್ಡಿ, ಕೆ ಶ್ರೀಧರ್ ರೆಡ್ಡಿ ಮತ್ತು ಉಂಡವಳ್ಳಿ ಶ್ರೀದೇವಿ ಅನರ್ಹಗೊಂಡಿದ್ದಾರೆ ಎಂದು ಸ್ಪೀಕರ್ ಕಚೇರಿಯ ಸುತ್ತೋಲೆ ತಿಳಿಸಿದೆ.
2024ರ ಫೆಬ್ರವರಿ 26ರಂದು ಶಾಸಕರನ್ನು ಅನರ್ಹಗೊಳಿಸಲಾಗಿದೆ. ಅವರೆಲ್ಲರನ್ನೂ ಭಾರತದ ಸಂವಿಧಾನದ X ಶೆಡ್ಯೂಲ್ ಅಡಿಯಲ್ಲಿ ಮತ್ತು ಆಂಧ್ರ ಪ್ರದೇಶ ಅಸೆಂಬ್ಲಿಯ ಸದಸ್ಯರ ಪಕ್ಷಾಂತರ ನಿಯಮಗಳು-1986ರ ಆಧಾರದ ಮೇಲೆ ಅನರ್ಹಗೊಳಿಸಲಾಗಿದೆ ಎಂದು ಸ್ಪೀಕರ್ ಕಚೇರಿ ಹೇಳಿದೆ.
ರಾಜಕೀಯ ವಿಶ್ಲೇಷಕರ ಪ್ರಕಾರ, ಶಾಸಕರ ಅನರ್ಹತೆಗೆ ಉಪಚುನಾವಣೆ ಅಗತ್ಯವಿಲ್ಲ. ಏಕೆಂದರೆ, ಕೆಲವೇ ವಾರಗಳಲ್ಲಿ ಆಂಧ್ರಪ್ರದೇಶ ವಿಧಾನಸಭೆಗೆ ಚುನಾವಣೆ ನಡೆಯುವ ನಿರೀಕ್ಷೆಯಿದೆ.
ಸ್ಪೀಕರ್ ಅವರು ಅನರ್ಹಗೊಳಿಸುವ ಮೊದಲು ಎಲ್ಲಾ ಎಂಟು ಸದಸ್ಯರಿಗೆ ತಮ್ಮ ಅಭಿಪ್ರಾಯವನ್ನು ತಿಳಿಸುವಂತೆ ಈ ಹಿಂದೆ ನೋಟಿಸ್ ನೀಡಿದ್ದರು.