ಬಿಜೆಪಿ & ಗೋದಿ ಮೀಡಿಯಾ ʼಪಾಕಿಸ್ತಾನ್‌ ಜಿಂದಾಬಾದ್‌ ಎಂದರುʼ ಎಂಬ ಸುಳ್ಳನ್ನು ಹಬ್ಬಿಸಿದ 22 ಪ್ರಕರಣಗಳು

Date:

‘ಪಾಕಿಸ್ತಾನ್‌ ಜಿಂದಾಬಾದ್’ ಎಂದು ಕೂಗಿರುವುದಾಗಿ ಮಾಧ್ಯಮ ಮತ್ತು ಬಿಜೆಪಿ ಸುಳ್ಳು ಹಬ್ಬಿಸುವುದು ಇದೇ ಮೊದಲೇನೂ ಅಲ್ಲ

ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ನಾಸೀರ್‌ ಹುಸೇನ್‌ ಅವರು ಗೆದ್ದ ಸಂದರ್ಭದಲ್ಲಿ ವಿಧಾನಸೌಧದಲ್ಲಿ ’ಪಾಕಿಸ್ತಾನ್‌ ಜಿಂದಾಬಾದ್‌’ ಎಂದು ಕೂಗಲಾಗಿದೆ ಎಂದು ಕೂಗುಮಾರಿ ಮಾಧ್ಯಮಗಳು ಸುಳ್ಳು ಸುದ್ದಿ ಹಬ್ಬಿಸಿವೆ. ಅಸಲಿಯಾಗಿ ’ನಾಸೀರ್‌ ಸಾಬ್‌ ಜಿಂದಾಬಾದ್’ ಎಂದು ಕೂಗಿರುವುದು ಬಯಲಾಗಿದೆ.

ಆದರೂ ಮಾಧ್ಯಮಗಳು ಸುಳ್ಳನ್ನೇ ಸಾವಿರ ಸಲ ಹೇಳಿ ಸತ್ಯ ಮಾಡಲು ಹೊರಟಿವೆ. ’ಪಾಕಿಸ್ತಾನ್‌ ಜಿಂದಾಬಾದ್’ ಎಂದು ಕೂಗಿರುವುದಾಗಿ ಬಿಜೆಪಿ ಮತ್ತು ಗೋದಿ (ಮಡಿಲು) ಮಾಧ್ಯಮಗಳು ಅಪಪ್ರಚಾರ ಮಾಡುವುದು ಇದೇ ಮೊದಲೇನೂ ಅಲ್ಲ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಕರ್ನಾಟಕ ವಿಧಾನಸಭಾ ಚುನಾವಣೆಯ ಗೆಲುವಿನ ನಂತರ ಬೆಳಗಾವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿಗರು ’ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿರುವುದಾಗಿ ವಿಡಿಯೊವೊಂದನ್ನು ಹಂಚಿಕೊಳ್ಳಲಾಗಿ‌ತ್ತು. ವಾಸ್ತವದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಸಿಫ್ ಸೇಠ್ ಅವರಿಗೆ ಜೈಕಾರ ಕೂಗಿರುವುದು ಸ್ಪಷ್ಟವಾಗಿತ್ತು.

ಸುಳ್ಳು ಸುದ್ದಿಗಳ ಬೇಟೆಗಾರ, ಆಲ್ಟ್‌ನ್ಯೂಸ್‌ ಸಹಸಂಸ್ಥಾಪಕ ಮೊಹಮ್ಮದ್ ಜುಬೇರ್‌ ಅವರು ಅಂತಹ 22 ಪ್ರಕರಣಗಳನ್ನು ’ಎಕ್ಸ್’ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಓದುಗರು ಈ ಸುಳ್ಳುಗಳನ್ನು ತಿಳಿಯಬೇಕೆಂದು ಆ 22 ಪ್ರಕರಣಗಳ ಅಸಲಿಯತ್ತನ್ನು ನಿಮ್ಮ ಮುಂದಿಡುವ ಪ್ರಯತ್ನವನ್ನು ’ಈದಿನ.ಕಾಂ’ ಮಾಡುತ್ತಿದೆ.

ಪ್ರಕರಣ – 1

2021ರ ಆಗಸ್ಟ್‌ 19ರಂದು ನಡೆದ ಘಟನೆ. ಮಧ್ಯಪ್ರದೇಶದ ಉಜ್ಜಯಿನಿ ನಗರದಲ್ಲಿ ಮುಸ್ಲಿಂ ಸಮುದಾಯ ಆಯೋಜಿಸಿದ್ದ ಸಮಾರಂಭದಲ್ಲಿ ಚಿತ್ರೀಕರಿಸಿದ ವಿಡಿಯೋ ವೈರಲ್ ಆಗಿತ್ತು. ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆಗಳನ್ನು ಕೂಗಲಾಗಿದೆ ಎಂದು ಎಬಿಪಿ ನ್ಯೂಸ್ ಪತ್ರಕರ್ತ ಬ್ರಜೇಶ್ ರಜಪೂತ್ ಟ್ವೀಟ್ ಮಾಡಿದ್ದರು. ಕೆಲವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಲಾಗಿತ್ತು. ಅಂದಿನ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, “ತಾಲಿಬಾನ್ ಮನಸ್ಥಿತಿಯನ್ನು ಪ್ರವರ್ಧಮಾನಕ್ಕೆ ತರಲು ಬಿಡುವುದಿಲ್ಲ” ಎಂದಿದ್ದರು.

ಝೀ ನ್ಯೂಸ್, ನ್ಯೂಸ್18 ವೈರಲ್ಸ್, ಐಬಿಸಿ 24, ಕ್ಯಾಪಿಟಲ್ ಟಿವಿ, ಪಂಜಾಬ್ ಕೇಸರಿ ಮಧ್ಯಪ್ರದೇಶ್, ಎಬಿಎನ್ ತೆಲುಗು, ಜೀ ಎಂಪಿ, ಲೈವ್ ಹಿಂದೂಸ್ತಾನ್, ಟೈಮ್ಸ್ ನೌ ನವಭಾರತ್, ನ್ಯೂಸ್‌ರೂಮ್ ಪೋಸ್ಟ್, ಒನ್ ಇಂಡಿಯಾ ಹಿಂದಿ, ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್, ಟೈಮ್ಸ್ ನೌ, ಎನ್‌ಡಿಟಿವಿ, ಅಮರ್ ಉಜಾಲಾ, ಎಬಿಪಿ ಲೈವ್, ಫ್ರೀ ಪ್ರೆಸ್ ಜರ್ನಲ್, TV9 ಗುಜರಾತಿ, ಒನ್ ಇಂಡಿಯಾ ಗುಜರಾತಿ ಮತ್ತು ಜನಸತ್ತಾ ಮೊದಲಾದ ಮಾಧ್ಯಮಗಳು ಈ ವರದಿಯನ್ನು ಮಾಡಿದ್ದವು.

ವಾಸ್ತವ: ಈ ವಿಡಿಯೊ ಮೊಹರಂಗೆ ಒಂದು ದಿನ ಮೊದಲು ನಡೆಯುವ ತಾಜಿಯಾ ಕಾರ್ಯಕ್ಕೆ ಸಂಬಂಧಿಸಿತ್ತು. “ಯಾ ಹುಸೇನ್ ಯಾ ಹುಸೇನ್” ಎಂದು ಸಾಮಾನ್ಯವಾಗಿ ಮೊಹರಂ ಸಂದರ್ಭದಲ್ಲಿ ಪಠಿಸಲಾಗುತ್ತದೆ. ಈ ವೇಳೆ ವ್ಯಕ್ತಿಯೊಬ್ಬರು ಪ್ರವೇಶಿಸಿ, ಚಪ್ಪಾಳೆ ತಟ್ಟುತ್ತಾ ‘ಖಾಜಿ ಸಾಬ್ ಜಿಂದಾಬಾದ್’ ಎಂದು ಕೂಗುತ್ತಾರೆ. ಆದರೆ ಮಾಧ್ಯಮಗಳಲ್ಲಿ ಇದು ’ಪಾಕಿಸ್ತಾನ್ ಜಿಂದಾಬಾದ್’ ಎಂದು ವರದಿಯಾಗುತ್ತದೆ.

***

ಪ್ರಕರಣ – 2

2021ರ ಡಿಸೆಂಬರ್‌ನಲ್ಲಿನ ಪ್ರಕರಣವಿದು. ಗುಜರಾತ್‌ನ ಕಚ್ಛ್‌ನಲ್ಲಿ ಜನರ ಗುಂಪೊಂದು ಘೋಷಣೆಗಳನ್ನು ಕೂಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ಕಚ್ಛ್‌ನ ದುಧೈ ಗ್ರಾಮದಲ್ಲಿ ಸ್ಥಳೀಯರು ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಘೋಷಣೆ ಕೂಗಿದ್ದಾರೆ ಎಂದು ತಿರುಚಲಾಗಿತ್ತು.

ವಾಸ್ತವ: ಗುಜರಾತ್‌ನ ಕಚ್‌ನಲ್ಲಿ ಗ್ರಾಮ ಪಂಚಾಯತಿ ಚುನಾವಣೆಗಳಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆಯನ್ನು ಕೂಗಿರಲಿಲ್ಲ. ‘ರಾಧುಭಾಯ್ ಜಿಂದಾಬಾದ್’ ಆಗಿದೆ ಎಂದು ಕಚ್ ಎಸ್ಪಿ ಕೂಡ ಸ್ಪಷ್ಟಪಡಿಸಿದ್ದರು. ರೀನಾಬೆನ್ ರಾಧುಭಾಯಿ ಕೋಠಿವಾಡ್ ಅವರು ಚುನಾವಣೆಯಲ್ಲಿ ಗೆದ್ದಿದ್ದರು.

***

ಪ್ರಕರಣ- 3

2022ರ ಘಟನೆ ಇದು. ಜಾರ್ಖಂಡ್ ಮುಖಿಯಾದ ಅಭ್ಯರ್ಥಿಯು ನಾಮಿನೇಷನ್‌ ಮಾಡಲು ರ್‍ಯಾಲಿ ಮಾಡುತ್ತಿದ್ದ ವೇಳೆ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿಲಾಗಿದೆ ಎಂದು ಹಬ್ಬಿಸಲಾಗಿತ್ತು. ಮಾಧ್ಯಮಗಳ ಅಪಪ್ರಚಾರದಿಂದಾಗಿ ಶಾಕಿರ್ ಹುಸೇನ್ ಮತ್ತು ಇತರರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗಿತ್ತು.

ವಾಸ್ತವ: ನಾಮಿನೇಷನ್‌ ಮೆರವಣಿಗೆಯಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಎಂಬ ಘೋಷಣೆ ಕೂಗಿರಲಿಲ್ಲ,  ‘ಶಾಕಿರ್ ಹುಸೇನ್ ಜಿಂದಾಬಾದ್’ ಎಂದು ಕೂಗಲಾಗಿತ್ತು.

***

ಪ್ರಕರಣ – 4

2023ರ ಆಗಸ್ಟ್‌‌ನಲ್ಲಿ ಆದ ಘಟನೆ ಇದು. ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ಮುಂಬರುವ ಉಪಚುನಾವಣೆಯ ಹಿನ್ನೆಲೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಎಂಡಿ ಅಬ್ದುಲ್ ಮೊಬಿನ್ ರಿಜ್ವಿ ಪರವಾಗಿ ಜಾರ್ಖಂಡ್‌ನ ಗಿರಿದಿಹ್‌ನಲ್ಲಿರುವ ದುಮ್ರಿಯಲ್ಲಿ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ್ದರು. ಈ ವೇಳೆ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಲಾಗಿದೆ ಎಂದು ಹಬ್ಬಿಸಲಾಗಿತ್ತು. ಝೀ, ಆಜ್ ತಕ್, ಎಬಿಪಿ, ನ್ಯೂಸ್ 18 ಸುಳ್ಳನ್ನೇ ವರದಿ ಮಾಡಿದ್ದವು.

ವಾಸ್ತವ: ಎಐಎಂಐಎಂ ಕಾರ್ಯಕ್ರಮದ ವಿಡಿಯೊವನ್ನು ಪೂರ್ತಿಯಾಗಿ ನೋಡಿದಾಗ ತಿಳಿದುಬಂದ ಸಂಗತಿಯೇ ಬೇರೆ ಇತ್ತು. ಮುಜಫರ್‌ನಗರದಲ್ಲಿ ಶಿಕ್ಷಕಿಯೊಬ್ಬರು ಮುಸ್ಲಿಂ ಹುಡುಗನಿಗೆ ಕಪಾಳಮೋಕ್ಷ ಮಾಡಿದ್ದನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸುವ ಓವೈಸಿಯವರು, “ಜಾರ್ಖಂಡ್‌ನಲ್ಲಿ ಇಂತಹ ಘಟನೆ ನಡೆದಿದ್ದರೆ, ಶಕೀರ್ ಪ್ರಬಲವಾಗಿ ಪ್ರತಿಭಟಿಸುತ್ತಿದ್ದರು” ಎನ್ನುತ್ತಾರೆ. ಈ ವೇಳೆ ಪ್ರೇಕ್ಷಕರಲ್ಲಿ ಯಾರೋ ಒಬ್ಬರು ಶಾಕಿರ್ ಅವರನ್ನು ಮೆಚ್ಚಿ ‘ಶಾಕಿರ್ ಸಾಬ್ ಜಿಂದಾಬಾದ್’ (ಶಾಕಿರ್ ಸಾಬ್ ಚಿರಾಯುವಾಗಲಿ) ಎಂದು ಕೂಗುತ್ತಾರೆ.

ಪ್ರಕರಣ- 5

2022ರ ಸೆಪ್ಟೆಂಬರ್ 22ರಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮತ್ತು ಜಾರಿ ನಿರ್ದೇಶನಾಲಯ (ED) ಅನೇಕ ರಾಜ್ಯಗಳಲ್ಲಿ ದಾಳಿ ನಡೆಸಿ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಸಂಘಟನೆಯ 100ಕ್ಕೂ ಹೆಚ್ಚು ನಾಯಕರನ್ನು ಬಂಧಿಸಿದವು. ಸೆಪ್ಟೆಂಬರ್ 23 ರಂದು ಪಿಎಫ್‌ಐ ಬೆಂಬಲಿಗರಿಂದ ರಾಷ್ಟ್ರವ್ಯಾಪಿ ಪ್ರತಿಭಟನೆಗಳು ನಡೆದವು. ಪುಣೆಯಲ್ಲಿ ಪ್ರತಿಭಟಿಸಿದ ವೇಳೆ ಪಾಕಿಸ್ತಾನ ಪರ ಘೋಷಣೆ ಕೂಗಲಾಗಿದೆ ಎಂದು ಸುಳ್ಳು ಹಬ್ಬಿಸಲಾಯಿತು. ಎಎನ್‌ಐ ಸುದ್ದಿ ಸಂಸ್ಥೆಯ ಪಾತ್ರ ಇದರಲ್ಲಿ ದೊಡ್ಡದಿತ್ತು.

ವಾಸ್ತವ: ಪಿಎಫ್‌ಐ ಬೆಂಬಲಿಗರು ‘ಪಾಪ್ಯುಲರ್ ಫ್ರಂಟ್ ಜಿಂದಾಬಾದ್’ ಎಂದು ಕೂಗಿದ್ದರು.

 

***

ಪ್ರಕರಣ- 6

2022ರ ಏಪ್ರಿಲ್‌ನಲ್ಲಿ ಆದ ಬೆಳವಣಿಗೆ ಇದು. ಜೈಪುರದ ರಾಜಸ್ಥಾನದಲ್ಲಿ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಅಧ್ಯಕ್ಷ ಅಸಾದುದ್ದೀನ್ ಓವೈಸಿ ಅವರನ್ನು ಬೆಂಬಲಿಗರು ಸ್ವಾಗತಿಸುವಾಗ ಪಾಕಿಸ್ತಾನದ ಪರ ಘೋಷಣೆಗಳನ್ನು ಕೂಗುತ್ತಿದ್ದಾರೆ ಎಂದು ಸುದ್ದಿ ಹಬ್ಬಿಸಲಾಯಿತು.

ವಾಸ್ತವ: “ಓವೈಸಿ ಸಾಬ್ ಜಿಂದಾಬಾದ್” ಎಂದು ಬೆಂಬಲಿಗರು ಕೂಗಿರುವುದು ವಿಡಿಯೊದಲ್ಲಿ ಸ್ಪಷ್ಟವಾಗಿತ್ತು.

***

ಪ್ರಕರಣ- 7

ಎಸ್‌ಪಿ-ಆರ್‌ಎಲ್‌ಡಿ ಅಭ್ಯರ್ಥಿಯ ರ್ಯಾಲಿಯಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿದ್ದಾರೆ ಎಂದು 2022ರ ಫೆಬ್ರುವರಿಯಲ್ಲಿ ಸುಳ್ಳು ಸುದ್ದಿ ಹರಡಲಾಗಿತ್ತು.

ವಾಸ್ತವ: ಬೆಂಬಲಿಗರು ‘ಅಕಿಫ್ ಭಾಯಿ ಜಿಂದಾಬಾದ್’ ಎಂದು ಘೋಷಣೆ ಕೂಗುತ್ತಿದ್ದರು.

***

ಪ್ರಕರಣ- 8

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ 2021ರ ಮಾರ್ಚ್ 27 ರಿಂದ ಏಪ್ರಿಲ್ 29 ರವರೆಗೆ ಎಂಟು ಹಂತಗಳಲ್ಲಿ ನಡೆದಿತ್ತು. ಮಮತಾ ಬ್ಯಾನರ್ಜಿ ನೇತೃತ್ವದ ಆಡಳಿತಾರೂಢ ಟಿಎಂಸಿ ರಾಜ್ಯದಲ್ಲಿ ಮತ್ತೆ ಗೆದ್ದಿತ್ತು. ಪಶ್ಚಿಮ ಬಂಗಾಳದಲ್ಲಿ ‘31 ರೋಹಿಂಗ್ಯಾಗಳು’ ಆಯ್ಕೆಯಾದ ಬಳಿಕ ‘ಪಾಕಿಸ್ತಾನ್ ಜಿಂದಾಬಾದ್’ ಕೂಗಲಾಗಿದೆ ಎಂದು ಸುಳ್ಳು ಸುದ್ದಿ ಸೃಷ್ಟಿಸಲಾಗಿತ್ತು.

ಆದರೆ ಬಹ್ರೈಚ್ ಪೊಲೀಸರು ಇದನ್ನು ಅಲ್ಲಗಳೆದಿದ್ದರು. ಚುನಾಯಿತರಾದ ಪ್ರಧಾನ್ ಬೆಂಬಲಿಗರು ಪಾಕಿಸ್ತಾನ ಜಿಂದಾಬಾದ್ ಎಂದಿರಲಿಲ್ಲ. ಬದಲಾಗಿ ‘ಹಾಜಿ ಸಾಬ್ ಜಿಂದಾಬಾದ್’ ಎಂದು ಘೋಷಣೆ ಕೂಗಿದ್ದರು.

ಪ್ರಕರಣ- 9

2021ರ ಮೇನಲ್ಲಿ ಆಗಿರುವ ಘಟನೆ ಇದು. ಯುಪಿ ಪಂಚಾಯತ್ ಚುನಾವಣಾ ಫಲಿತಾಂಶದ ನಂತರ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಕೂಗಿರುವುದಾಗಿ ಮಾಧ್ಯಮಗಳು ಸುಳ್ಳು ಸುದ್ದಿ ಹಬ್ಬಿಸಿದ್ದವು.

ವಾಸ್ತವ: ‘ಹಾಜಿ ಸಾಬ್ ಜಿಂದಾಬಾದ್’ ಎಂದು ಕೂಗಲಾಗಿತ್ತು.

ಪ್ರಕರಣ: 10

2020ರ ನವೆಂಬರ್‌ನಲ್ಲಿ ಬಿಜೆಪಿ ಹಬ್ಬಿಸಿದ ಸುಳ್ಳಿದು. ಸಿಲ್ಚಾರ್ ವಿಮಾನ ನಿಲ್ದಾಣದಲ್ಲಿ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಯುಡಿಎಫ್) ಮುಖ್ಯಸ್ಥ ಮೌಲಾನಾ ಬದ್ರುದ್ದೀನ್ ಅಜ್ಮಲ್ ಅವರನ್ನು ಸ್ವಾಗತಿಸುವಾಗ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಲಾಗಿದೆ ಎಂದು ಅಸ್ಸಾಂ ಬಿಜೆಪಿ ಶಾಸಕ ಹಿಮಂತ ಬಿಸ್ವಾ ಶರ್ಮಾ ಟ್ವೀಟ್ ಮಾಡಿದ್ದರು.

ವಾಸ್ತವ: ಎಐಯುಡಿಎಫ್‌ ಬೆಂಬಲಿಗರು ‘ಅಜೀಜ್ ಖಾನ್ ಜಿಂದಾಬಾದ್’ ಎಂದು ಕೂಗಿದ್ದನ್ನು ಪಾಕಿಸ್ತಾನ್ ಜಿಂದಾಬಾದ್ ಎಂದು ಹಬ್ಬಿಸಲಾಗಿತ್ತು.

***

ಪ್ರಕರಣ- 11

2020ರ ಮೇನಲ್ಲಿ ವಿಡಿಯೊವೊಂದು ವೈರಲ್ ಆಯಿತು. ಮಹಾರಾಷ್ಟ್ರದ ಸಮಾಜವಾದಿ ಪಕ್ಷದ (ಎಸ್‌ಪಿ) ನಾಯಕ ಅಬು ಅಜ್ಮಿ ಅವರ ಬೆಂಬಲಿಗರು ಮುಂಬೈನ ವಡಾಲಾ ನಿಲ್ದಾಣದಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಘೋಷಣೆ ಕೂಗಿದ್ದಾರೆ ಎಂದು ಪ್ರತಿಪಾದಿಸಲಾಗಿತ್ತು.

ವಾಸ್ತವ:  ‘ಸಾಜಿದ್ ಭಾಯ್ ಜಿಂದಾಬಾದ್’ ಎಂದು ಕೂಗಲಾಗಿತ್ತು.

ಪ್ರಕರಣ- 12

2019ರ ಡಿಸೆಂಬರ್‌ನಲ್ಲಿ ಆದ ಘಟನೆ. ಲಕ್ನೋದಲ್ಲಿ ನಡೆದ ಸಿಎಎ ವಿರೋಧಿ ರ್‍ಯಾಲಿಯಲ್ಲಿ  ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಮಾಡಲಾಗಿದೆ ಎಂದು ಬಿಜೆಪಿ ನಾಯಕರು ಮತ್ತು ಮಾಧ್ಯಮಗಳು ಸುಳ್ಳನ್ನು ಹರಡಿದವು.

ವಾಸ್ತವ: “ಕಾಶಿಫ್ ಸಾಬ್ ಜಿಂದಾಬಾದ್” ಎಂದು ಕೂಗಲಾಗಿತ್ತು.

***

ಪ್ರಕರಣ- 13

ರ್‍ಯಾಲಿಯಲ್ಲಿ ವ್ಯಕ್ತಿಯೊಬ್ಬರು ಮಾತನಾಡಿರುವ 20 ಸೆಕೆಂಡ್ ಗಳ ವೀಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ 2019ರ ಅಕ್ಟೋಬರ್‌ನಲ್ಲಿ ವೈರಲ್ ಆಗಿತ್ತು. ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಕೂಗುವುದರೊಂದಿಗೆ ವಿಡಿಯೊ ಕ್ಲಿಪ್ ಆರಂಭವಾಗುತ್ತದೆ. ಆ ವ್ಯಕ್ತಿ ಮುಂಬೈನ ಚಂಡಿವಲಿ ಕ್ಷೇತ್ರದ ಕಾಂಗ್ರೆಸ್ ಶಾಸಕ ನಸೀಮ್ ಖಾನ್ ಎಂದು ಪ್ರತಿಪಾದಿಸಲಾಗಿತ್ತು.

ವಾಸ್ತವ:

ಶ್ರೀ ರವಿಶಂಕರ್ ಅವರನ್ನು ಉಲ್ಲೇಖಿಸಿ ಆ ವ್ಯಕ್ತಿ ಮಾತನಾಡಿದ್ದರು. 2016 ರಲ್ಲಿ ದೆಹಲಿಯಲ್ಲಿ ಆಯೋಜಿಸಿದ್ದ ‘ವಿಶ್ವ ಸಂಸ್ಕೃತಿ ಉತ್ಸವ’ ಎಂಬ ಕಾರ್ಯಕ್ರಮದಲ್ಲಿ ರವಿಶಂಕರ್‌ ಮಾತನಾಡಿದ್ದರು. ‘ಪಾಕಿಸ್ತಾನ್ ಜಿಂದಾಬಾದ್’ ಜೊತೆಯಲ್ಲಿ ‘ಜೈ ಹಿಂದ್’ ಇರಬೇಕು ಎಂದು ರವಿಶಂಕರ್‌ ಹೇಳಿದ್ದರು. ಇದನ್ನು ಉಲ್ಲೇಖಿಸಿದ ವಿಡಿಯೊ ಇದಾಗಿತ್ತು.

ಪ್ರಕರಣ: 14

ಮಧ್ಯಪ್ರದೇಶದ ಮಂದಸೌರ್‌ನ ಮದ್ರಸಾ ವಿದ್ಯಾರ್ಥಿಗಳು ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿದ್ದಾರೆ ಎಂದು ಪ್ರತಿಪಾದಿಸಿ 2019ರ ಜುಲೈನಲ್ಲಿ ವಿಡಿಯೊವೊಂದನ್ನು ವೈರಲ್ ಮಾಡಲಾಗಿತ್ತು.

ವಾಸ್ತವ: ಮಂದಸೌರ್ ಎಸ್ಪಿ ಪ್ರಕಾರ, “ಮಕ್ಕಳು ತಮ್ಮ ಮೇಷ್ಟ್ರಿಗೆ ಜೈಕಾರ ಕೂಗಿದ್ದರು. ‘ಸಬೀರ್ ಸರ್ ಜಿಂದಾಬಾದ್’ ಎಂಬುದು ಇಲ್ಲಿನ ಘೋಷಣೆಯಾಗಿತ್ತು.

ಪ್ರಕರಣ: 15

“ಪಾಕಿಸ್ತಾನ್ ಜಿಂದಾಬಾದ್” ಎಂದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಕೂಗಿದ್ದಾರೆಂದು 2019ರಲ್ಲಿ ವಿಡಿಯೊವೊಂದನ್ನು ಹರಿಯಬಿಡಲಾಗಿತ್ತು.

ವಾಸ್ತವ: ಈ ಘೋಷಣೆ “ಭಾಟಿ ಸಾಬ್ ಜಿಂದಾಬಾದ್” ಎಂಬುದಾಗಿತ್ತು.

ಪ್ರಕರಣ- 16

ಸಹರಾನ್ಪುರ್ ವಿದ್ಯಾರ್ಥಿಗಳು ಪಾಕಿಸ್ತಾನದ ಪರ ಘೋಷಣೆಗಳನ್ನು ಕೂಗಿದ್ದಾರೆಂದು ಮಾಧ್ಯಮಗಳು ಮತ್ತು ಬಲಪಂಥೀಯ ಸೋಷಿಯಲ್ ಮೀಡಿಯಾ ಹ್ಯಾಂಡಲ್‌ಗಳು 2023ರ ಫೆಬ್ರುವರಿಯಲ್ಲಿ ಸುಳ್ಳು ಹಬ್ಬಿಸಿದ್ದವು.

ವಾಸ್ತವ: “ಜೈದ್ ಸರ್ ಜಿಂದಾಬಾದ್, ಜೈದ್ ಸರ್ ಜಿಂದಾಬಾದ್, ಮೋನಿಸ್ ಸರ್ ಜಿಂದಾಬಾದ್, ಮೋನಿಸ್ ಸರ್ ಅಮರ್ ರಹೇ” ಎಂದು ಕೂಗಿದ ವಿಡಿಯೊ ಇದಾಗಿತ್ತು.

ಪ್ರಕರಣ- 17

ಜಾರ್ಖಂಡ್‌ನ ಹಜಾರಿಬಾಗ್‌ನಲ್ಲಿ ಹೊಸದಾಗಿ ಚುನಾಯಿತರಾದ ಪಂಚಾಯತ್ ಸಮಿತಿಯ ಸದಸ್ಯರ ಸಂಭ್ರಮಾಚರಣೆ ವೇಳೆ  ಪಾಕಿಸ್ತಾನ ಪರ ಘೋಷಣೆ ಕೂಗಲಾಗಿದೆ ಎಂದು 2022ರ ಮೇ ನಲ್ಲಿ ಸುಳ್ಳು ಹಬ್ಬಿಸಲಾಗಿತ್ತು. ರಾಜ್ಯದ ಹಲವು ಬಿಜೆಪಿ ಸದಸ್ಯರು ಆರೋಪಿಸಿದ ಬಳಿಕ ಮುಖ್ಯವಾಹಿನಿ ಮಾಧ್ಯಮಗಳು ಅದನ್ನೇ ವರದಿ ಮಾಡಿದವು. 62 ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು.

ವಾಸ್ತವ: “ಛೋಟಿ ಚಾ ಜಿಂದಾಬಾದ್” ಎಂದು ಕೂಗಲಾಗಿತ್ತು. ಛೋಟಿ ರಾಮ್ ಅಕಾ ಅವರನ್ನು “ಛೋಟಿ ಚಾ” ಎಂದು ಸಂಬೋಧಿಸಲಾಗಿತ್ತು.

ಪ್ರಕರಣ- 18

ಈದ್ ಸಮಯದಲ್ಲಿ ರಾಜಸ್ಥಾನದ ಝಲಾವರ್‌ನಲ್ಲಿ ಪಾಕಿಸ್ತಾನದ ಪರ ಘೋಷಣೆಗಳನ್ನು ಕೂಗಲಾಗಿದೆ ಎಂದು 2022ರ ಮೇನಲ್ಲಿ ಸುಳ್ಳು ಸುದ್ದಿ ಹಬ್ಬಿಸಲಾಗಿತ್ತು.

ವಾಸ್ತವ: “ಯಾವುದೇ ದೇಶವಿರೋಧಿ ಘೋಷಣೆಗಳನ್ನು ಕೇಳಿರುವುದಿಲ್ಲ. ಪರಿಸ್ಥಿತಿ ಉದ್ವಿಗ್ನಗೊಂಡಿದ್ದರಿಂದ, ನಾವು ಸೆಕ್ಷನ್ 151 ರ ಅಡಿಯಲ್ಲಿ ಇಬ್ಬರು ಮುಸ್ಲಿಂ ಯುವಕರನ್ನು ಬಂಧಿಸಿದ್ದೇವೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ’ಆಲ್ಟ್‌ನ್ಯೂಸ್‌ಗೆ ತಿಳಿಸಿದ್ದರು.

ಪ್ರಕರಣ- 19

ಯುಪಿ ಚುನಾವಣೆಗೆ ಮುನ್ನ ಎಸ್‌ಪಿ ರ್ಯಾಲಿಯಲ್ಲಿ ‘ಪಾಕಿಸ್ತಾನ ಪರ’ ಘೋಷಣೆಗಳನ್ನು ಕೂಗಲಾಗಿದೆ ಎಂದು ಪ್ರತಿಪಾದಿಸಿ 2022ರ ಫೆಬ್ರುವರಿಯಲ್ಲಿ ಮಾಧ್ಯಮಗಳು ಮತ್ತು ಬಿಜೆಪಿ ನಾಯಕರು ಸುಳ್ಳು ಸುದ್ದಿ ಹರಡಿದ್ದರು.

ವಾಸ್ತವ: “ಪಾಕಿಸ್ತಾನ್ ಬನಾನಾ ಹೈ” ಎಂದು ಕೂಗಲಾಗಿರಲಿಲ್ಲ, “ಮಾತಿ ಚೋರ್ ಭಗನಾ ಹೈ” ಎಂದು ಘೋಷಣೆ ಹಾಕಲಾಗಿತ್ತು.

ಪ್ರಕರಣ- 20

2017ರ ನವೆಂಬರ್‌ನಲ್ಲಿ ದೈನಿಕ್ ಜಾಗರಣ್, ದೈನಿಕ್ ಭಾಸ್ಕರ್, ಅಮರ್ ಉಜಾಲಾ ಮತ್ತು ಜನಸತ್ತಾ ಮಾಧ್ಯಮಗಳು ’ಪಾಕಿಸ್ತಾನ್ ಜಿಂದಾಬಾದ್‌’ ಕೂಗಿರುವುದಾಗಿ ವರದಿ ಮಾಡಿದವು. ಯುಪಿಯ ಘಾಜಿಯಾಬಾದ್‌ನಲ್ಲಿ ನಡೆದ ಎಐಎಂಐಎಂ ರ್ಯಾಲಿಯಲ್ಲಿ ಈ ರೀತಿಯ ಘಟನೆಯಾಗಿದೆ ಎಂದು ಪ್ರತಿಪಾದಿಸಿದವು.

ವಾಸ್ತವ: “ಹಾಜಿ ಶಾಹಿದ್ ಜಿಂದಾಬಾದ್” ಎಂದು ಕಾರ್ಯಕರ್ತರು ಕೂಗಿದ್ದರು. ಎಸ್‌ಎಚ್‌ಒ ಕೂಡ ಇದನ್ನೇ ದೃಢಪಡಿಸಿದ್ದರು.

ಪ್ರಕರಣ- 21

2022ರ ಜುಲೈನಲ್ಲಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿತ್ತು. ಮಧ್ಯಪ್ರದೇಶದ ಕಟ್ನಿಯಲ್ಲಿ ನಡೆದ ಸರಪಂಚ್ ಚುನಾವಣೆಯಲ್ಲಿ ಮುಸ್ಲಿಂ ನಾಯಕರೊಬ್ಬರು ಗೆದ್ದಿದ್ದು, ಪಾಕಿಸ್ತಾನದ ಪರ ಘೋಷಣೆಗಳನ್ನು ಕೂಗಲಾಗಿದೆ ಎಂದು ಸುದ್ದಿ ಹಬ್ಬಿಸಲಾಗಿತ್ತು.

ವಾಸ್ತವ: ‘ವಾಜಿದ್ ಭಾಯ್ ಜಿಂದಾಬಾದ್’ ಎಂದು ಅಲ್ಲಿ ಕೂಗಲಾಗಿತ್ತು.

ಪ್ರಕರಣ- 22

ಮಹಾರಾಷ್ಟ್ರದ ಅಹ್ಮದ್‌ನಗರ ಜಿಲ್ಲೆಯ ನೆವಾಸಾದಲ್ಲಿ ರಾಮನವಮಿ ಮೆರವಣಿಗೆ ವೇಳೆ ಮುಸ್ಲಿಂ ಯುವಕರು ಕಲ್ಲು ತೂರಾಟ ನಡೆಸಿ ಪಾಕಿಸ್ತಾನ್ ಜಿಂದಾಬಾದ್ ಎಂದಿದ್ದಾರೆಂದು 2022ರ ಏಪ್ರಿಲ್‌ನಲ್ಲಿ ವಿಡಿಯೊವೊಂದನ್ನು ಹಂಚಿಕೊಳ್ಳಲಾಗಿತ್ತು.

ವಾಸ್ತವ: ರಾಮನವಮಿ ಆಚರಣೆಯ ಸಂದರ್ಭದಲ್ಲಿ ಮುಸ್ಲಿಮರು ಪಾಕ್ ಪರ ಘೋಷಣೆಗಳನ್ನು ಕೂಗಿರುವುದನ್ನು ಅಹಮದ್‌ನಗರ ಪೊಲೀಸರು ನಿರಾಕರಿಸಿದ್ದರು.

ಕೊನೆಯ ಮಾತು: ’ಪಾಕಿಸ್ತಾನ್ ಜಿಂದಾಬಾದ್’ ಎಂದು ತಿರುಚಿ ಮಾಧ್ಯಮಗಳು ಮತ್ತು ಬಿಜೆಪಿ ಮಾಡಿರುವ ಯಡವಟ್ಟುಗಳ ಪಟ್ಟಿಯನ್ನು ಮತ್ತಷ್ಟು ಬೆಳೆಸಬಹುದು. ಸಂಘಪರಿವಾರ ನಿಂತಿರುವುದೇ ಸುಳ್ಳಿನ ಮೇಲೆ ಎಂದು ಸ್ಪಷ್ಟಪಡಿಸಿಕೊಳ್ಳಲು ಇಷ್ಟು ಸಾಕು ಎನಿಸುತ್ತದೆ.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಪ್ರಧಾನಿ ಮೋದಿಗೆ ಗುಜರಾತ್‌ನಲ್ಲಿ ಮುಸ್ಲಿಂ ಒಬಿಸಿ ಮೀಸಲಾತಿ ಓಕೆ, ಇತರೆಡೆ ಮಾತ್ರ ಬೇಡ’

ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಮುಸ್ಲಿಂ ಒಬಿಸಿ ಮೀಸಲಾತಿ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ....

ಬಿಜೆಪಿ ನಾಯಕರು ಖಿನ್ನತೆಗೆ ಒಳಗಾಗಿದ್ದಾರೆ ಎಂದ ತೇಜಸ್ವಿ ಯಾದವ್!

ಬಿಹಾರದ ಎರಡನೇ ಹಂತದ ಲೋಕಸಭಾ ಚುನಾವಣೆಯ ನಂತರ ಬಿಜೆಪಿ ನಾಯಕರು ಖಿನ್ನತೆಗೆ...

ಹಾಸನ ಪೆನ್‌ಡ್ರೈವ್ ಪ್ರಕರಣ: ಜರ್ಮನಿಗೆ ತೆರಳಿರುವ ಸಂಸದ ಪ್ರಜ್ವಲ್ ರೇವಣ್ಣ?

ಹಾಸನದ ಅಶ್ಲೀಲ ವೀಡಿಯೊ ತುಣುಕು ಪ್ರಕರಣ ತನಿಖೆಗಾಗಿ ರಾಜ್ಯ ಸರ್ಕಾರ ಶನಿವಾರ...