ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮೊದಲು ನೀಡಿದ್ದ ಐದು ಗ್ಯಾರಂಟಿಗಳಿಗೆ ಯೋಜನೆ ರೂಪ ನೀಡಿ ಜಾರಿಗೊಳಿಸುತ್ತಿದೆ. ಈಗಾಗಲೇ ಶಕ್ತಿ ಯೋಜನೆ ಮತ್ತು ಗೃಹ ಜ್ಯೋತಿ ಯೋಜನೆಗಳು ಜಾರಿಯಾಗಿದ್ದು, ರಾಜ್ಯಾದ್ಯಂತ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈಗ ಕಾಂಗ್ರೆಸ್‌ನ ಮತ್ತೊಂದು ಮಹತ್ವಾಕಾಂಕ್ಷಿ ಅನ್ನಭಾಗ್ಯ ಯೋಜನೆ ಜಾರಿಗೆ ಸರ್ಕಾರ ಮುಂದಾಗಿದೆ.
ಬಿಪಿಎಲ್ ಕಾರ್ಡುದಾರರಿಗೆ ಮಾಸಿಕ ತಲಾ 10 ಕೆ.ಜಿ ಅಕ್ಕಿ ನೀಡುವ ಯೋಜನೆ ಇದಾಗಿದ್ದು, ಯೋಜನೆ ಜಾರಿಗೆ ಅಗತ್ಯವಿರುವಷ್ಟು ಅಕ್ಕಿ ನೀಡಲು ಕೇಂದ್ರ ಸರ್ಕಾರ ನಿರಾಕರಿಸಿದ್ದರಿಂದ ಯೋಜನೆ ಜಾರಿಗೆ ಆರಂಭದಲ್ಲಿ ತೊಡಕು ಉಂಟಾಗಿತ್ತು. ಆದರೆ, ಈಗ ಐದು ಕೆ.ಜಿ ಅಕ್ಕಿ ಬದಲಿಗೆ ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆಗೆ ಮುಂದಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅನ್ನರಾಮಯ್ಯ ಎಂಬ ಹೆಸರು ತಂದುಕೊಟ್ಟಿದ್ದ ಈ ಅನ್ನ ಭಾಗ್ಯ ಯೋಜನೆಗೆ ಸೋಮವಾರ (ಜು.10) ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ವಿಧಾನಸೌಧದ ಮೂರನೇ ಮಹಡಿಯಲ್ಲಿನ ಸಮ್ಮೇಳನ ಸಭಾಂಗಣದಲ್ಲಿ ಸಂಜೆ 5 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಬಿಪಿಎಲ್ ಪಡಿತರ ಫಲಾನುಭವಿಗಳಿಗೆ ನಗದು ನೀಡುವ ಯೋಜನೆ ಉದ್ಘಾಟನೆಗೊಳ್ಳಲಿದೆ. ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಆಹಾರ ಸಚಿವ ಕೆ ಎಚ್ ಮುನಿಯಪ್ಪ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ.
ಅನ್ನಭಾಗ್ಯ ಯೋಜನೆ ಅಡಿ ಸರ್ಕಾರ 5 ಕೆ.ಜಿ ಅಕ್ಕಿ ಬದಲು ಒಂದು ಕೆ.ಜಿ 34 ರೂಪಾಯಿಯಂತೆ ತಲಾ ಒಟ್ಟು 170 ರೂ. ಪಾವತಿಸಲಿದೆ. ಅಕ್ಕಿ ಸಿಗುವವರೆಗೂ ಅಂದರೆ, ಮುಂದಿನ ಮೂರು ತಿಂಗಳ ವರೆಗೂ ಈ ರೀತಿ ಹಣ ಪಾವತಿಸಲಾಗುವುದು ಎಂದು ಹಿಂದೆ ಆಹಾರ ಸಚಿವ ಕೆ ಎಚ್ ಮುನಿಯಪ್ಪ ತಿಳಿಸಿದ್ದಾರೆ.
ಶೇ.99 ರಷ್ಟು ಕಾರ್ಡುಗಳು ಆಧಾರ್ ಜೋಡಣೆ ಹೊಂದಿವೆ
ರಾಜ್ಯದಲ್ಲಿ 1.28 ಕೋಟಿ ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಕುಟುಂಬಗಳ ಪಡಿತರ ಚೀಟಿದಾರರು ಇದ್ದಾರೆ. ಇದರಲ್ಲಿ ಶೇ.99 ರಷ್ಟು ಕಾರ್ಡುಗಳು ಆಧಾರ್ ಜೋಡಣೆ ಹೊಂದಿವೆ. ಶೇ.82 ರಷ್ಟು ಪಡಿತರ ಚೀಟಿಗಳು ಅಂದರೆ 1.06 ಕೋಟಿ ಪಡಿತರ ಚೀಟಿಗಳು. ಸಕ್ರಿಯ ಬ್ಯಾಂಕ್ ಖಾತೆಗಳೊಂದಿಗೆ ಜೋಡಣೆಯಾಗಿವೆ. ಈ ಕಾರ್ಡುದಾರರ ಖಾತೆಗಳಿಗೆ ನಗದು ವರ್ಗಾವಣೆ ಮಾಡಲಾಗುವುದು. ಉಳಿದ ಕಾರ್ಡುದಾರರಿಗೆ ಖಾತೆ ತೆರೆಯಲು ಮಾಹಿತಿ ನೀಡಲಾಗುವುದು. 1.27 ಕೋಟಿ ಕಾರ್ಡುಗಳಲ್ಲಿ ಒಬ್ಬ ಸದಸ್ಯರನ್ನು ಕುಟುಂಬದ ಮುಖ್ಯಸ್ಥರೆಂದು ಗುರುತಿಸಲಾಗಿದ್ದು, ಅವರ ಖಾತೆಗೆ ನಗದು ವರ್ಗಾಯಿಸಲಾಗುವುದು. ಶೇ.94 ರಷ್ಟು ಕುಟುಂಬಗಳ ಮುಖ್ಯಸ್ಥರು ಮಹಿಳೆಯರು ಹಾಗೂ ಶೇ.5 ರಷ್ಟು ಕುಟುಂಬಗಳಿಗೆ ಪುರುಷ ಮುಖ್ಯಸ್ಥರಿದ್ದಾರೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.
ಈ ಸುದ್ದಿ ಓದಿದ್ದೀರಾ? ಜೈನಮುನಿ ಹತ್ಯೆ ಪ್ರಕರಣದ ಬಗ್ಗೆ ಅಧಿವೇಶನದಲ್ಲಿ ಚರ್ಚೆ : ಲಕ್ಷ್ಮಣ ಸವದಿ
ಅನ್ನಭಾಗ್ಯ ಯೋಜನೆಗೆ ದಶಕದ ಸಂಭ್ರಮ
2013ರ ಮೇ 13 ರಂದು ಕರ್ನಾಟಕದ 22ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅಧಿಕಾರ ಸ್ವೀಕರಿಸಿದ್ದರು. ಮೇ 13ರಂದು ಸಿದ್ದರಾಮಯ್ಯರಿಂದ ಐತಿಹಾಸಿಕ ನಿರ್ಧಾರ – ಅನ್ನಭಾಗ್ಯ ಯೋಜನೆ ಘೋಷಣೆ ಮಾಡಿದ್ದರು. 2013ರ ಜುಲೈ ತಿಂಗಳಿನಲ್ಲಿ ಸಿದ್ದರಾಮಯ್ಯ ಅನ್ನಭಾಗ್ಯ ಯೋಜನೆ ಜಾರಿಗೊಳಿಸಿದ್ದರು. ಅನ್ನಭಾಗ್ಯ ಆರಂಭವಾದಾಗ 1.08 ಕೋಟಿ ಕುಟುಂಬಗಳು ಯೋಜನೆಯ ಲಾಭ ಪಡೆದಿದ್ದವು. 2013ರಲ್ಲಿ ಪ್ರತಿ ತಿಂಗಳು 2.93 ಲಕ್ಷ ಟನ್ ಆಹಾರ ಧಾನ್ಯ ಬಿಡುಗಡೆಯಾಗುತ್ತಿತ್ತು. 2013ರಲ್ಲಿ ಅನ್ನಭಾಗ್ಯ ಯೋಜನೆಗಾಗಿ 4,300 ಕೋಟಿ ರೂಪಾಯಿಗಳನ್ನು ಮೀಸಲಿರಿಸಲಾಗಿತ್ತು. 2013-14ರ ಸಾಲಿನಲ್ಲಿ ಅನ್ನಭಾಗ್ಯಕ್ಕಾಗಿ 3,050 ಕೋಟಿ ರೂ. ವೆಚ್ಚ ಮಾಡಲಾಗಿತ್ತು.