2023ರ ನವೆಂಬರ್‌ನಲ್ಲಿ ನಡೆದ ಮಧ್ಯಪ್ರದೇಶ ವಿಧಾನಸಭಾ ಚುನಾವಣೆ ವೇಳೆ ‘ಪಕ್ಷ ವಿರೋಧಿ’ ಚಟುವಟಿಕೆಯಲ್ಲಿ ತೊಡಗಿದ್ದ ಆರೋಪದ ಮೇಲೆ ಅಲ್ಲಿನ 150 ಸ್ಥಳೀಯ ನಾಯಕರಿಗೆ ಕಾಂಗ್ರೆಸ್ ನೋಟೋಸ್ ಜಾರಿ ಮಾಡಿದೆ. ಮಧ್ಯಪ್ರದೇಶ ಕಾಂಗ್ರೆಸ್‌ನ ಶಿಸ್ತು ಸಮಿತಿಯು ಶುಕ್ರವಾರ ಸಭೆ ನಡೆದಿದ್ದು, ಸಭೆಯ ಬಳಿಕ ಶೋಕಾಸ್ ನೋಟಿಸ್ ನೀಡಿದೆ.
ನೋಟಿಸ್‌ಗಳಿಗೆ 10 ದಿನಗಳಲ್ಲಿ ಉತ್ತರಿಸುವಂತೆ ಸೂಚನೆ ನೀಡಲಾಗಿದೆ. ತೃಪ್ತಿಕರ ಉತ್ತರ ನೀಡದಿದ್ದವರನ್ನು ಪಕ್ಷದಿಂದ ಉಚ್ಚಾಟಿಸಲಾಗುವುದು ಎಂದು ಮಧ್ಯಪ್ರದೇಶದ ನಾಯಕರೊಬ್ಬರು ತಿಳಿಸಿದ್ದಾರೆ.
ಶಿಸ್ತು ಸಮಿತಿ ಮುಖ್ಯಸ್ಥ ಮತ್ತು ಎಂಪಿಸಿಸಿ ಖಜಾಂಚಿ ಅಶೋಕ್ ಸಿಂಗ್ ಪತ್ರಿಕಾ ಪ್ರಕಟಣೆ ನೀಡಿದೆ. “ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಮತ್ತು ನಿಗದಿತ ಸಮಯದೊಳಗೆ ಉತ್ತರ ಸಲ್ಲಿಸದವರ ವಿರುದ್ಧ ಪಕ್ಷವು ಕ್ರಮ ಕೈಗೊಳ್ಳುತ್ತದೆ” ಎಂದು ಹೇಳಿದ್ದಾರೆ.
ಚುನಾವಣಾ ಫಲಿತಾಂಶ ಪ್ರಕಟವಾದ ಒಂದು ತಿಂಗಳ ಬಳಿಕ ಕಾಂಗ್ರೆಸ್ ಸಭೆ ನಡೆಸಿದ್ದು, ನೋಟಿಸ್ ಜಾರಿ ಮಾಡಿದೆ. ಲೋಕಸಭಾ ಚುನಾವಣೆಗೂ ಮುನ್ನ ಪಕ್ಷವು ತನ್ನ ನಾಯಕರು ಮತ್ತು ಕಾರ್ಯಕರ್ತರನ್ನು ಸನ್ನದ್ದಗೊಳಿಸಲು ಮುಂದಾಗಿದ್ದು, ಅಶಿಸ್ತುಗಳನ್ನು ಸಹಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸುತ್ತಿದೆ.