ಅರುಣಾಚಲ ಪ್ರದೇಶದಲ್ಲಿ ಬಂಡುಕೋರರು ಬಿಜೆಪಿ ನಾಯಕನನ್ನು ಅಪಹರಿಸಿದ ಘಟನೆ ನಡೆದಿದ್ದು, ಇದಾದ ಕೆಲವೇ ಗಂಟೆಗಳ ನಂತರ, “ಚುನಾವಣಾ ಪ್ರಕ್ರಿಯೆಯಲ್ಲಿ ಈ ರೀತಿ ಹಸ್ತಕ್ಷೇಪವನ್ನು ಸಹಿಸಲಾಗದು ಮತ್ತು ಅಂತಹ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಪವನ್ ಕುಮಾರ್ ಸೇನ್ ಹೇಳಿದ್ದಾರೆ.
ಅರುಣಾಚಲ ಪ್ರದೇಶದ ಲಾಂಗ್ಡಿಂಗ್ ಜಿಲ್ಲೆಯಲ್ಲಿ ಬಿಜೆಪಿ ನಾಯಕನನ್ನು ಬಂಡುಕೋರರು ಅಪಹರಿಸಿದ್ದು ಅದಾದ ಬಳಿಕ ಅರುಣಾಚಲ ಪೂರ್ವ ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ಅದೇ ಜಿಲ್ಲೆಯ ಮತ್ತೋರ್ವ ಚುನಾವಣಾ ಸ್ಪರ್ಧಿ ಬಂಡುಕೋರರ ಸಹಾಯ ಪಡೆದ ಆರೋಪದ ಬೆನ್ನಲ್ಲೇ ಮುಖ್ಯ ಚುನಾವಣಾ ಅಧಿಕಾರಿ ಈ ಎಚ್ಚರಿಕೆ ನೀಡಿದ್ದಾರೆ.
ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಚುಕು ಅಪಾ ಅವರು ಬಿಜೆಪಿ ನಾಯಕರನ್ನು ಬಂಡುಕೋರರು ಅಪಹರಿಸಿರುವುದನ್ನು ಒಪ್ಪಿಕೊಂಡಿದ್ದು, ಪ್ರಸ್ತುತ ಪೊಲೀಸರು ಮತ್ತು ಅರೆಸೈನಿಕ ಪಡೆಗಳು ಈ ವ್ಯಕ್ತಿಯ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನು ಓದಿದ್ದೀರಾ? ನೈಜೀರಿಯಾ | ಮನೆಗೆ ಮರಳಿದ ಅಪಹರಣಕ್ಕೊಳಗಾಗಿದ್ದ 250 ಶಾಲಾ ಮಕ್ಕಳು
ಆದರೆ ಘಟನೆಯ ವಿವರ ನೀಡಲು ಐಜಿಪಿ ನಿರಾಕರಿಸಿದ್ದಾರೆ. ಈ ವಿಚಾರದಲ್ಲಿ ಲಾಂಗ್ಡಿಂಗ್ ಡೆಪ್ಯುಟಿ ಕಮಿಷನರ್ ಬೆಕಿರ್ ನ್ಯೋರಾಕ್ ಮತ್ತು ಪೊಲೀಸ್ ಅಧೀಕ್ಷಕ ಡೆಕಿಯೊ ಗುಮ್ಜಾ ಮಾತನಾಡಲು ನಿರಾಕರಿಸಿದ್ದಾರೆ ಎನ್‌ಡಿ ಟಿವಿ ವರದಿ ಮಾಡಿದೆ.
ಎರಡು ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಈಶಾನ್ಯ ರಾಜ್ಯದಲ್ಲಿ ಏಪ್ರಿಲ್ 19 ರಂದು ಲೋಕಸಭೆ ಮತ್ತು 60 ವಿಧಾನಸಭೆ ಕ್ಷೇತ್ರಗಳ ಚುನಾವಣೆ ಏಕಕಾಲದಲ್ಲಿ ನಡೆಯಲಿದೆ. ಆದರೆ ಒಟ್ಟು 60 ರಲ್ಲಿ, ಆಡಳಿತಾರೂಢ ಬಿಜೆಪಿಯು ಈಗಾಗಲೇ ಹತ್ತು ಕ್ಷೇತ್ರದಲ್ಲಿ ಅವಿರೋಧವಾಗಿ ಗೆಲುವು ಪಡೆದಿದೆ.
ಘಟನೆಯ ಕುರಿತು ಚರ್ಚಿಸಲು ನಾವು ಇಂದು ಉನ್ನತ ಮಟ್ಟದ ಭದ್ರತಾ ಸಭೆಯನ್ನು ಕರೆದಿದ್ದೇವೆ ಮತ್ತು ಯಾವುದೇ ಭೂಗತ ಗುಂಪುಗಳಿಂದ ಚುನಾವಣಾ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪವಾಗದಂತೆ ನೋಡಿಕೊಳ್ಳಲು ಲಾಂಗ್ಡಿಂಗ್ ಮತ್ತು ತಿರಾಪ್ ಉಪ ಆಯುಕ್ತರಿಗೆ ಸೂಚಿಸಲಾಗಿದೆ. ಭದ್ರತೆಯನ್ನು ಹೆಚ್ಚಿಸಲು ಅಸ್ಸಾಂ ರೈಫಲ್ಸ್ ಮತ್ತು ಇತರ ಅರೆಸೇನಾ ಪಡೆಗಳಿಗೆ ತಿಳಿಸಲಾಗಿದೆ ಎಂದು ಮುಖ್ಯ ಚುನಾವಣಾ ಅಧಿಕಾರಿ ಪವನ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಇದನ್ನು ಓದಿದ್ದೀರಾ? ಬೆಂಗಳೂರು | ಪದೇಪದೆ ಡ್ರಗ್ಸ್ ಖರೀದಿ ಮಾಡುತ್ತಿದ್ದವನ ಬಳಿ ಹೆಚ್ಚು ಹಣ ಇರಬಹುದೆಂದು ಅಪಹರಣ: ಆರೋಪಿಗಳ ಬಂಧನ
ನಾಗಾ ದಂಗೆಕೋರರು ಮೂರು ಪೂರ್ವ ಜಿಲ್ಲೆಗಳಾದ ತಿರಾಪ್, ಚಾಂಗ್ಲಾಂಗ್ ಮತ್ತು ಲಾಂಗ್ಡಿಂಗ್‌ಗಳಲ್ಲಿ ಸಕ್ರಿಯರಾಗಿದ್ದಾರೆ. ಅಪಹರಣ, ಸುಲಿಗೆ ಮತ್ತು ಇತರ ಸಮಾಜವಿರೋಧಿ ಚಟುವಟಿಕೆ ನಡೆಸುತ್ತಾರೆ. ಕಳೆದ ಕೆಲವು ವರ್ಷಗಳಲ್ಲಿ, ಈ ಪ್ರದೇಶದಲ್ಲಿ ವಿವಿಧ ದಂಗೆಕೋರ ಗುಂಪುಗಳ ಹಲವಾರು ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಲಾಂಗ್‌ಡಿಂಗ್‌ನಲ್ಲಿ ಅಭ್ಯರ್ಥಿಯೊಬ್ಬರು ಬಂಡಾಯಗಾರರನ್ನು ಬಳಸುತ್ತಿದ್ದಾರೆ ಎಂಬ ಆರೋಪದ ಬಗ್ಗೆ ಮಾತನಾಡಿದ ಪವನ್ ಕುಮಾರ್ ಸೇನ್ ಯಾವುದೇ ಅಭ್ಯರ್ಥಿಯು ಅಂತಹ ಚಟುವಟಿಕೆಗಳಲ್ಲಿ ತೊಡಗಿರುವುದು ಕಂಡುಬಂದರೆ, ಚುನಾವಣಾ ಆಯೋಗವು ಅವರನ್ನು ಅನರ್ಹಗೊಳಿಸುತ್ತದೆ ಎಂದು ತಿಳಿಸಿದ್ದಾರೆ.