ಮಯನ್ಮಾರ್‌ನಲ್ಲಿ ಬಂಡುಕೋರ ಪಡೆಗಳು ಮತ್ತು ಜುಂಟಾ ಆಡಳಿತದ ನಡುವೆ ಆಂತರಿಕ ಸಂಘರ್ಷ ನಡೆಯುತ್ತಿದೆ. ಇದರ ನಡುವೆಯೇ ಸುಮಾರು 600ಕ್ಕೂ ಹೆಚ್ಚು ಮಯನ್ಮಾರ್ ಸೈನಿಕರು ಭಾರತಕ್ಕೆ ಕಾಲಿಟ್ಟು, ಆಶ್ರಯ ಕೋರಿರುವುದಾಗಿ ವರದಿಯಾಗಿದೆ.
ಮಯನ್ಮಾರ್‌ನೊಂದಿಗೆ ಗಡಿ ಹಂಚಿಕೊಂಡಿರುವ ಭಾರತದ ರಾಜ್ಯವಾಗಿರುವ ಮಿಝೋರಾಂನ ಕೆಲವು ಪ್ರದೇಶಗಳ ಮೂಲಕ ಸೈನಿಕರು ಪ್ರವೇಶಿಸುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ.
ಭಾರತ-ಮಯನ್ಮಾರ್-ಬಾಂಗ್ಲಾದೇಶದ ಗಡಿ ಭಾಗದ ಜಂಕ್ಷನ್ ಎಂದು ಗುರುತಿಸಲಾಗಿರುವ ಮಿಜೋರಾಂನ ಬಂಡುಕ್ಬಂಗಾ ಗ್ರಾಮದೊಳಗೆ ಬುಧವಾರ ಮಧ್ಯಾಹ್ನ ಕನಿಷ್ಠ 276 ಮಯನ್ಮಾರ್ ಸೇನೆಯ ಸಿಬ್ಬಂದಿಗಳು ಭಾರತದ ಭೂಪ್ರದೇಶದೊಳಗೆ ಪ್ರವೇಶಿಸುತ್ತಿರುವ ದೃಶ್ಯವು ಹರಿದಾಡಿದೆ.
Visual of Myanmar army entering Indian territory emerges, at least 276 Myanmar army personnel entered Mizoram’s Bandukbanga village, located on the India-Myanmar-Bangladesh trijunction on Wednesday afternoon. pic.twitter.com/rtY1WYadAf
— Jon Suante (@jon_suante) January 18, 2024
ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಮಿಝೋರಾಂ ಸರ್ಕಾರವು ಕೇಂದ್ರ ಸರ್ಕಾರದ ಗಮನಕ್ಕೆ ತಂದಿದ್ದು, ಈ ಬಗ್ಗೆ ಶೀಘ್ರವೇ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಎಚ್ಚರಿಸಿದೆ. ನೆರೆಯ ರಾಷ್ಟ್ರದ ಸೈನಿಕರನ್ನು ಹಿಂದಕ್ಕೆ ಕಳುಹಿಸುವ ಬಗ್ಗೆ ತ್ವರಿತವಾಗಿ ಖಚಿತಪಡಿಸಿ ಎಂದು ಒತ್ತಾಯಿಸಿದೆ.
ಮಯನ್ಮಾರ್‌ನಲ್ಲಿ ತೀವ್ರ ಘರ್ಷಣೆಯ ನಡುವೆ ಸುಮಾರು 600 ಮ್ಯಾನ್ಮಾರ್ ಸೇನೆಯ ಸೈನಿಕರು ಭಾರತವನ್ನು ದಾಟಿದ್ದಾರೆ. ಪಶ್ಚಿಮ ಮಯನ್ಮಾರ್ ರಾಜ್ಯದ ರಾಖೈನ್‌ನಲ್ಲಿ ಜನಾಂಗೀಯ ಸಶಸ್ತ್ರ ಗುಂಪು ಅರಕನ್ ಆರ್ಮಿ (ಎಎ) ಉಗ್ರಗಾಮಿಗಳು ತಮ್ಮ ಶಿಬಿರಗಳನ್ನು ವಶಪಡಿಸಿಕೊಂಡ ನಂತರ ಸೈನಿಕರು ಭಾರತದೊಳಗೆ ಬಂದಿದ್ದು, ಸೈನಿಕರು ಅಸ್ಸಾಂ ರೈಫಲ್ಸ್ ಶಿಬಿರದಲ್ಲಿ ಆಶ್ರಯ ಪಡೆದಿದ್ದಾರೆ ಎಂದು ವರದಿಯಾಗಿದೆ.
ಈ ಬೆಳವಣಿಗೆಯ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ತುರ್ತು ಮಾತುಕತೆ ನಡೆಸುವಂತೆ ಮಿಝೋರಾಂ ಮುಖ್ಯಮಂತ್ರಿ ಲಾಲ್ದುಹೋಮ ಆಗ್ರಹಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಮಿಝೋರಾಂ ಮುಖ್ಯಮಂತ್ರಿ ಲಾಲ್ದುಹೋಮ, “ಜನರು ಆಶ್ರಯಕ್ಕಾಗಿ ಮಯನ್ಮಾರ್‌ನಿಂದ ನಮ್ಮ ದೇಶಕ್ಕೆ ಪಲಾಯನ ಮಾಡುತ್ತಿದ್ದಾರೆ. ನಾವು ಅವರಿಗೆ ಮಾನವೀಯ ಆಧಾರದ ಮೇಲೆ ಸಹಾಯ ಮಾಡುತ್ತಿದ್ದೇವೆ. ಮಯನ್ಮಾರ್ ಸೈನಿಕರು ಕೂಡ ಬರುತ್ತಲೇ ಇದ್ದು, ಆಶ್ರಯ ಪಡೆಯುತ್ತಿದ್ದಾರೆ. ಸುಮಾರು 450 ಸೇನಾ ಸಿಬ್ಬಂದಿಯನ್ನು ವಾಪಸ್ ಕಳುಹಿಸಲಾಗಿದೆ” ಎಂದು ಹೇಳಿದರು.