ಇದೇ ಮೊದಲ ಬಾರಿಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಕಂಬಳದ ಜೋಡು ಕರೆಯನ್ನು ಉದ್ಘಾಟನೆ ಮಾಡುವ ಮೂಲಕ ಅಶ್ವಿನಿ ಪುನೀತ್ ರಾಜ್‌ಕುಮಾರ್ ‘ಬೆಂಗಳೂರು ಕಂಬಳ’ಕ್ಕೆ ಚಾಲನೆ ನೀಡಿದರು.
ವಿಶೇಷ ದೀಪ ಬೆಳಗಿಸುವ ಮೂಲಕ ‘ರಾಜ-ಮಹಾರಾಜ’ ಹೆಸರಿನಲ್ಲಿ ನಿರ್ಮಿಸಲಾಗಿರುವ ಕಂಬಳದ ಜೋಡು ಕರೆಯನ್ನು ಪುನೀತ್ ರಾಜ್‌ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ದೀಪ ಬೆಳಗಿಸಿ, ಗಂಗಾರತಿ ಮಾಡಿ ಕರೆಯನ್ನು ಉದ್ಘಾಟನೆ ಮಾಡಿದರು.
ಕಂಬಳ ಸಮಿತಿ ಅಧ್ಯಕ್ಷ ಶಾಸಕ ಅಶೋಕ್ ರೈ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಡಿವಿ ಸದಾನಂದ ಗೌಡ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಹಾಜರಿದ್ದರು.
Prarthane – Yakshagana Bhagavathike! Absolutely love this… what a beautiful start to Bengaluru Kambala! pic.twitter.com/pyaAz7gDk4
— Vilas Nayak (@VilasNayak) November 25, 2023
ರಾಜ್ಯ ರಾಜಧಾನಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಇದೇ ಮೊದಲ ಬಾರಿಗೆ ಕಂಬಳ ನಡೆಯುತ್ತಿದೆ. ಇಂದು ಮತ್ತು ನಾಳೆ ನಡೆಯಲಿರುವ ಕಂಬಳಕ್ಕೆ ಅನುಷ್ಕಾ ಶೆಟ್ಟಿ, ರಿಷಬ್ ಶೆಟ್ಟಿ, ಪೂಜಾ ಹೆಗ್ಡೆ, ವಿವೇಕ್ ಒಬೆರಾಯ್, ರಕ್ಷಿತ್ ಶೆಟ್ಟಿ ಸೇರಿದಂತೆ ಹಲವು ಸಿನಿಮಾ ತಾರೆಯರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿರುವ ಗಣ್ಯರು ಭಾಗವಹಿಸಿ, ಮೆರುಗು ನೀಡಲಿದ್ದಾರೆ.
ಸಾರ್ವಜನಿಕರಿಗೆ ಉಚಿತ ಪ್ರವೇಶ
ಕಂಬಳದ ಸಂಭ್ರಮದ ನಡುವೆ ಕೆಲವು ಸಾಧಕರಿಗೆ ಸನ್ಮಾನ ಮಾಡಲಾಗುತ್ತದೆ. ಮಿಂಚಿನ ಓಟದಲ್ಲಿ ಓಡಿ ಪ್ರಶಸ್ತಿ ಮುಡಿಗೇರಿಸಲು 200 ಜೋಡಿ ಕೋಣಗಳು ಸಜ್ಜಾಗಿವೆ.
ಕಂಬಳ ವೀಕ್ಷಿಸಲು ವಿವಿಐಪಿಗಳಿಗೆ ಫನ್ ವರ್ಲ್ಡ್ ಕಡೆಯಿಂದ ಪ್ರತ್ಯೇಕ ಆಗಮನ ವ್ಯವಸ್ಥೆ ಮಾಡಲಾಗಿದೆ. ಅರಮನೆ ಮೈದಾನದ ಗೇಟ್ ನಂಬರ್ 1, 2, 3 ಹಾಗೂ 4ರಲ್ಲಿ ಸಾರ್ವಜನಿಕರಿಗೆ ಪ್ರವೇಶ ಇರಲಿದೆ. ಪ್ರವೇಶ ಉಚಿತವಾಗಿರಲಿದೆ. ಯಾವುದೇ ಟಿಕೆಟ್ ಇಲ್ಲದೆ ಉಚಿತವಾಗಿ ಪ್ರವೇಶ ಮಾಡಬಹುದು. ಆದರೆ ವಿಐಪಿಗಳಿಗೆ ಪ್ರತ್ಯೇಕ ಪಾಸ್ ವ್ಯವಸ್ಥೆ ಕಲ್ಪಿಸಲಾಗಿದೆ.
ಕಂಬಳವನ್ನು ನೋಡಲು ಜನರಿಗೆ ಗ್ಯಾಲರಿ ವ್ಯವಸ್ಥೆ ಮಾಡಲಾಗಿದೆ. 6 ರಿಂದ 7 ಸಾವಿರ ಜನರು ಗ್ಯಾಲರಿಯಲ್ಲಿ ಕುಳಿತುಕೊಂಡು ಕಂಬಳ ನೋಡಬಹುದು. ಎರಡು ದಿನದಲ್ಲಿ ಸುಮಾರು 6ರಿಂದ 7 ಲಕ್ಷ ಜನ ಬರುವ ನಿರೀಕ್ಷೆ ಇದೆ.