ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ದ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣವನ್ನು ಹೈಕೋರ್ಟ್‌ನಲ್ಲಿ ಇತ್ಯರ್ಥಪಡಿಸಿಕೊಳ್ಳುವಂತೆ ಸಿಬಿಐಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ಇತ್ತೀಚೆಗೆ, ಡಿಕೆ ಶಿವಕುಮಾರ್ ವಿರುದ್ಧದ ಪ್ರಕರಣವನ್ನು ತನಿಖೆ ನಡೆಸದಂತೆ ಸಿಬಿಐಗೆ ಹೈಕೋರ್ಟ್ ವಿಭಾಗೀಯ ಪೀಠ ತಡೆ ನೀಡಿತ್ತು. ಹೈಕೋರ್ಟ್ ತಡೆಯಾಜ್ಞೆಯನ್ನು ಪ್ರಶ್ನಿಸಿ ಸಿಬಿಐ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಶುಕ್ರವಾರ ಮೇಲ್ಮನವಿಯ ವಿಚಾರಣೆ ನಡೆಸಿರವು ಸುಪ್ರೀಂ ಕೋರ್ಟ್, ಪ್ರಕರಣವನ್ನು ಹೈಕೋರ್ಟ್‌ನಲ್ಲೇ ಇತ್ಯರ್ಥಪಡಿಸಿಕೊಳ್ಳುವಂತೆ ಸೂಚಿಸಿದೆ.
2017ರಲ್ಲಿ ಡಿಕೆ ಶಿವಕುಮಾರ್ ನಿವಾಸಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು. ಇಲಾಖೆ ನೀಡಿದ ವರದಿ ಆಧರಿಸಿ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿತ್ತು. ಆ ಬಳಿಕ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲಾಗಿತ್ತು.
ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿದ್ದನ್ನು ಪ್ರಶ್ನಿಸಿ ಡಿಕೆ ಶಿವಕುಮಾರ್ ಅವರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ವಿಭಾಗೀಯ ಪೀಠ, ಸಿಬಿಐ ತನಿಖೆಗೆ ತಡೆ ನೀಡಿತ್ತು.
ಹೈಕೋರ್ಟ್ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದ ಸಿಬಿಐ, ತಡೆಯನ್ನು ತೆರವುಗೊಳಿಸುವಂತೆ ಮನವಿ ಮಾಡಿತ್ತು. ಆದರೆ, ಪ್ರಕರಣವನ್ನು ಹೈಕೋರ್ಟ್‌ನಲ್ಲೇ ಇತ್ಯರ್ಥ ಮಾಡಿಕೊಳ್ಳುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.