ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ರಾಮಮಂದಿರದಲ್ಲಿ ಪ್ರತಿಷ್ಠಾಪನೆಯಾಗಿರುವ ರಾಮಲಲ್ಲಾನ ದರ್ಶನ ಪಡೆಯಲು ಮೊದಲ ದಿನವೇ ಲಕ್ಷಾಂತರ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿದ ಕಾರಣ, ನೂಕುನುಗ್ಗಲು ಉಂಟಾಗಿದೆ. ಹೀಗಾಗಿ, ರಾಮಮಂದಿರ ತೀರ್ಥ ಕ್ಷೇತ್ರ ಟ್ರಸ್ಟ್ ಮಂದಿರದ ಬಾಗಿಲನ್ನು ಮುಚ್ಚಿರುವುದಾಗಿ ವರದಿಯಾಗಿದೆ.
ನೂಕುನುಗ್ಗಲಿನ ದೃಶ್ಯ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದ್ದು, ವಯೋವೃದ್ಧ ಸಂತರೂ ಕೂಡ ಈ ಜನಜಂಗುಲಿಯಲ್ಲಿ ಸಿಲುಕಿ ಒದ್ದಾಡುತ್ತಿರುವ ದೃಶ್ಯ ದಾಖಲಾಗಿದೆ.
#WATCH | Ayodhya, Uttar Pradesh: Heavy rush outside the Ram Temple as devotees throng the temple to offer prayers and have Darshan of Shri Ram Lalla on the first morning after the Pran Pratishtha ceremony pic.twitter.com/gQHInJ5FTz
— ANI (@ANI) January 23, 2024
ನಿನ್ನೆ(ಜ.22) ಪ್ರಧಾನಿ ನರೇಂದ್ರ ಮೋದಿ ಹಲವು ಗಣ್ಯರ ಸಮ್ಮುಖದಲ್ಲಿ ನಡೆಸಿದ ಪ್ರಾಣ ಪ್ರತಿಷ್ಠಾ ಸಮಾರಂಭದ ನಂತರ ಸಾರ್ವಜನಿಕರ ದರ್ಶನಕ್ಕೆ ಇಂದು(ಜ.23) ಅನುವು ಮಾಡಿಕೊಡಲಾಗಿತ್ತು. ಆದರೆ ಬೆಳಗ್ಗೆ ಮೂರು ಗಂಟೆಯಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರಿಂದ ಈ ರೀತಿಯ ಬೆಳವಣಿಗೆ ಉಂಟಾಗಿದೆ. ಮೈ ಕೊರೆಯುವ ಚಳಿ ಇದ್ದರೂ ಕೂಡ ಜನರು ಪ್ರಮುಖ ದ್ವಾರದ ಬಳಿ ಗುಂಪಾಗಿ ಕಾಯುತ್ತಿರುವ ದೃಶ್ಯ ಕೂಡ ಕಂಡುಬಂದಿದೆ.
#WATCH | Uttar Pradesh: People break through security at Shri Ram Janmabhoomi Temple in Ayodhya.
The Pran Pratishtha ceremony was done yesterday at Shri Ram Janmabhoomi Temple. pic.twitter.com/vYEANsXQkP
— ANI (@ANI) January 23, 2024
ಬೆಳಗ್ಗೆ 7ಕ್ಕೆ ಬಾಗಿಲು ತೆರೆದು ಮತ್ತು 11.30 ರವರೆಗೆ ಹಾಗೂ ಆ ಬಳಿಕ ಮಧ್ಯಾಹ್ನ 2 ರಿಂದ 7ರವರೆಗೆ ಪ್ರವೇಶಕ್ಕೆ ಅವಕಾಶವಿರಲಿದೆ ಎಂದು ದೇವಾಲಯದ ಟ್ರಸ್ಟ್ ತಿಳಿಸಿತ್ತು. ಆದರೆ ವ್ಯಾಪಕ ನೂಕುನುಗ್ಗಲು ಸಂಭವಿಸಿ, ಜನರ ಪ್ರಾಣಾಪಾಯ ಉಂಟಾಗುವ ಸಾಧ್ಯತೆ ಇರುವ ಕಾರಣಕ್ಕೆ ರಾಮ ಮಂದಿರದ ಬಾಗಿಲನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ ಎಂದು ವರದಿಯಾಗಿದೆ. ಅಲ್ಲದೇ, ಸ್ಥಳದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಕೂಡ ಏರ್ಪಡಿಸಲಾಗಿದೆ ಎಂದು ವರದಿಯಾಗಿದೆ.
ಈ ನಡುವೆ ಪೊಲೀಸ್ ಭದ್ರತಾ ವ್ಯವಸ್ಥೆಯನ್ನೂ ಮುರಿದ ಕೆಲವು ಮಂದಿ, ಪೊಲೀಸರನ್ನೇ ದೂಡಿಕೊಂಡು ದೇವಸ್ಥಾನದೊಳಗೆ ಪ್ರವೇಶಿಸಿರುವ ಘಟನೆ ಕೂಡ ನಡೆದಿದೆ.