ಬೆಂಗಳೂರು ಗ್ರಾಮಾಂತರ | ಕೆಲಸಗಾರ ಸಂಸದ, ಸಜ್ಜನ ವೈದ್ಯ ; ಕ್ಷೇತ್ರದ ಜನರ ಒಲವು ಯಾರ ಕಡೆಗೆ?

Date:

Advertisements
ಮಂಜುನಾಥ್‌ ಅವರಿಗೆ ಇರುವ ಪ್ರಸಿದ್ಧಿಯನ್ನು ಬಳಸಿಕೊಂಡು ಪ್ರಬಲ ನಾಯಕ ಸುರೇಶ್‌ ಅವರನ್ನು ಕಟ್ಟಿ ಹಾಕುವ ಜೆಡಿಎಸ್‌ ಮತ್ತು ಬಿಜೆಪಿ ಮಾಸ್ಟರ್‌ ಪ್ಲಾನ್‌ಗೆ ಕ್ಷೇತ್ರದ ಜನ ಯಾವ ರೀತಿಯ ಮನ್ನಣೆ ನೀಡಲಿದ್ದಾರೆ ಎಂಬ ಕುತೂಹಲವಂತು ಇದೆ. ಹೀಗಾಗಿ ಇದು ಸಹಜವಾಗಿಯೇ ಡಿಕೆ ಸಹೋದರರಿಗೆ ಪ್ರತಿಷ್ಠೆಯ ಕಣವಾಗಲಿದೆ.

 

ಕ್ಷೇತ್ರ ಪುನರ್ ವಿಂಗಡಣೆಗೆ ಮುನ್ನ ದೇಶದ ಅತಿ ದೊಡ್ಡ ಲೋಕಸಭೆ ಕ್ಷೇತ್ರಗಳಲ್ಲಿ ಒಂದಾಗಿದ್ದ ಕನಕಪುರದ ಭಾಗವಾಗಿದ್ದ ಈಗಿನ ಬೆಂಗಳೂರು ಗ್ರಾಮಾಂತರ ಕ್ಷೇತ್ರ 2013ರ ನಂತರ ಹೊಸ ಕ್ಷೇತ್ರವಾಗಿ ರಚನೆಯಾಯಿತು. ಈ ಕ್ಷೇತ್ರವು ತುಮಕೂರಿನ ಕುಣಿಗಲ್, ರಾಮನಗರ ಜಿಲ್ಲೆಯ ರಾಮನಗರ, ಕನಕಪುರ, ಮಾಗಡಿ, ಚನ್ನಪಟ್ಟಣ, ಬೆಂಗಳೂರು ದಕ್ಷಿಣ, ಆನೇಕಲ್, ರಾಜರಾಜೇಶ್ವರಿ ನಗರ ಕ್ಷೇತ್ರ ವ್ಯಾಪ್ತಿ ಒಳಗೊಂಡಿದೆ. 17 ಲಕ್ಷ ಮತದಾರರ ಪೈಕಿ ಬೆಂಗಳೂರು ದಕ್ಷಿಣ, ಆನೇಕಲ್, ರಾಜರಾಜೇಶ್ವರಿ ನಗರದಲ್ಲೇ 10 ಲಕ್ಷ ಮತದಾರರು ಬರಲಿದ್ದಾರೆ.

ಕಾಂಗ್ರೆಸ್‌ನಿಂದ ಹಾಲಿ ಸಂಸದ ಡಿ.ಕೆ ಸುರೇಶ್, ಬಿಜೆಪಿ -ಜೆಡಿಎಸ್ ಮೈತ್ರಿ ಕೂಟದಿಂದ ಖ್ಯಾತ ಹೃದ್ರೋಗ ತಜ್ಞ, ಮಾಜಿ ಪ್ರಧಾನಿ ದೇವೇಗೌಡರ ಅಳಿಯ ಡಾ. ಸಿ.ಎನ್ ಮಂಜುನಾಥ್ ಅಭ್ಯರ್ಥಿಯಾಗಿದ್ದಾರೆ. ಟಿಕೆಟ್ ಘೋಷಣೆಗೂ ಮುನ್ನ ಮಂಜುನಾಥ್‌ ಅವರು ಬಿಜೆಪಿಗೆ ಅಧಿಕೃತವಾಗಿ ಸೇರಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಸ್ವಂತ ಮಾವನ ಪಕ್ಷ ಬಿಟ್ಟು ಬಿಜೆಪಿಗೆ ಸೇರಿರುವುದರ ಹಿಂದೆ ಲೆಕ್ಕಾಚಾರ ಇಲ್ಲದೇನಿಲ್ಲ. ಜೆಡಿಎಸ್‌ ಬಿಜೆಪಿ ಮೈತ್ರಿಯಾಗಿರುವ ಕಾರಣ ಮುಂದೆ ಮೋದಿ ಸರ್ಕಾರ ಅಧಿಕಾರ ಹಿಡಿದರೆ ಮಂತ್ರಿ ಸ್ಥಾನದ ಬೇಡಿಕೆ ಇಡುವ ಮಾತುಗಳು ಕೇಳಿ ಬಂದಿತ್ತು. ಆ ಮೂಲಕ ಆರೋಗ್ಯ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಗುಮಾನಿ ಇತ್ತು.

ಮಂಜುನಾಥ್‌ ಅವರಿಗೆ ಇರುವ ಪ್ರಸಿದ್ಧಿಯನ್ನು ಬಳಸಿಕೊಂಡು ಪ್ರಬಲ ನಾಯಕ ಸುರೇಶ್‌ ಅವರನ್ನು ಕಟ್ಟಿ ಹಾಕುವ ಜೆಡಿಎಸ್‌ ಮತ್ತು ಬಿಜೆಪಿ ಮಾಸ್ಟರ್‌ ಪ್ಲಾನ್‌ಗೆ ಕ್ಷೇತ್ರದ ಜನ ಯಾವ ರೀತಿಯ ಮನ್ನಣೆ ನೀಡಲಿದ್ದಾರೆ ಎಂಬ ಕುತೂಹಲವಂತು ಇದೆ. ಹೀಗಾಗಿ ಇದು ಸಹಜವಾಗಿಯೇ ಡಿಕೆ ಸಹೋದರರಿಗೆ ಪ್ರತಿಷ್ಠೆಯ ಕಣವಾಗಲಿದೆ. ಒಕ್ಕಲಿಗ ಮತದಾರರೇ ಅಧಿಕ, ಇಬ್ಬರು ಅಭ್ಯರ್ಥಿಗಳು ಅದೇ ಸಮುದಾಯಕ್ಕೆ ಸೇರಿದವರು. ಹಿಂದುಳಿದ, ದಲಿತ, ಮುಸ್ಲಿಂ ಮತಗಳೇ ನಿರ್ಣಾಯಕ. ಮುಸ್ಲಿಂ ಮತಗಳು ಕಾಂಗ್ರೆಸ್‌ ಕೈ ಬಿಡಲ್ಲ. ಗ್ಯಾರಂಟಿ ಯೋಜನೆಗಳಿಂದಾಗಿ ಈ ಬಾರಿ ಹಿಂದುಳಿದ ಮತ್ತು ದಲಿತ ಮತಗಳೂ ಕಾಂಗ್ರೆಸ್‌ ಜೊತೆ ಇರಲಿವೆ ಎಂಬ ಲೆಕ್ಕಾಚಾರವನ್ನು ತಳ್ಳಿ ಹಾಕುವಂತಿಲ್ಲ.

Advertisements

8 ಕ್ಷೇತ್ರಗಳ ಪೈಕಿ ಕುಣಿಗಲ್, ಆನೇಕಲ್, ರಾಮನಗರ, ಕನಕಪುರ, ಮಾಗಡಿಯಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಬೆಂಗಳೂರು ದಕ್ಷಿಣ, ರಾಜರಾಜೇಶ್ವರಿ ನಗರದಲ್ಲಿ ಬಿಜೆಪಿ ಹಾಗೂ ಚನ್ನಪಟ್ಟಣದಲ್ಲಿ ಜೆಡಿಎಸ್ ಶಾಸಕರಿದ್ದಾರೆ. ಅತಿ ದೊಡ್ಡ ಕ್ಷೇತ್ರವಾಗಿದ್ದು, ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್, ಮೂರರಲ್ಲಿ ಬಿಜೆಪಿ-ಜೆಡಿಎಸ್ ಪಕ್ಷಗಳ ಪ್ರಾಬಲ್ಯವಿದೆ. ಬಿಜೆಪಿಗೆ ಅಭ್ಯರ್ಥಿಗಳೇ ಇಲ್ಲವಾಗಿದ್ದ ಕ್ಷೇತ್ರಗಳ ಪೈಕಿ ಈ ಕ್ಷೇತ್ರ ಕೂಡ ಒಂದು. ಅಂತಹ ಕ್ಷೇತ್ರದಲ್ಲಿ ದೇವೇಗೌಡ ಮತ್ತು ಕುಮಾರಸ್ವಾಮಿಯವರು, ಮೈತ್ರಿಯ ನೆಪದಲ್ಲಿ ಕುಟುಂಬದ ಮತ್ತೊಂದು ಕುಡಿಯನ್ನು ಕಣಕ್ಕಿಳಿಸಿದ್ದಾರೆ. ಗೆದ್ದರೆ ಬಿಜೆಪಿಗೆ ಒಂದು ಸ್ಥಾನ. ಆದರೆ ಗೌಡರ ಕುಟುಂಬಕ್ಕೆ ಅದು ಪ್ರತಿಷ್ಠೆಯ ಪ್ರಶ್ನೆ. ಜೊತೆಗೆ ಜಯಂಟ್ ಕಿಲ್ಲರ್ ಎಂದು ಕೇಂದ್ರದಲ್ಲಿ ಸಚಿವ ಸ್ಥಾನಕ್ಕಾಗಿ ಲಾಬಿ ಮಾಡಬಹುದು. ಇದು ಗೌಡರ ದೂರಾಲೋಚನೆ.

bengaluru rural

ಡಿಕೆ ಸುರೇಶ್‌ಗೆ ಕೆಲಸಗಾರ, ಹಾರ್ಡ್ ವರ್ಕರ್ ಎಂಬುದು ಪ್ಲಸ್ ಪಾಯಿಂಟ್‌. ಕೊರೋನ ಸಂದರ್ಭದಲ್ಲಿ ಆರೋಗ್ಯ ಕಾರ್ಯಕರ್ತರಂತೆ ಕೆಲಸ ಮಾಡಿದ್ದಾರೆ. ಕುಟುಂಬವಿದ್ದೂ ಕೊರೋನ ಕಾರಣಕ್ಕೆ ಶವದ ಹತ್ತಿರ ಸುಳಿಯದಿರುವ ಸಂದರ್ಭದಲ್ಲಿ ಅನಾಥ ಶವಗಳ ಸಂಸ್ಕಾರವನ್ನು ಸುರೇಶ್‌ ಸ್ವತಃ ಮಾಡಿದ್ದಾರೆ. ಅಷ್ಟೇ ಅಲ್ಲ ಕ್ಷೇತ್ರದ ಜನರ, ಪಕ್ಷದ ಮುಖಂಡರ ಜತೆ ನಿರಂತರ ಸಂಪರ್ಕ ಸಾಧಿಸಿ ಹಿಡಿತ ಹೊಂದಿದ್ದಾರೆ. ಮನೆ ಮನೆಗೆ ತೆರಳಿ ಜನರ ಕಷ್ಟ ಕೇಳುವ ಸಹೃದಯಿ ಎಂಬ ಮಾತೂ ಇದೆ. ಸಹೋದರ ಉಪಮುಖ್ಯಮಂತ್ರಿಯೂ ಆಗಿರುವ ಕಾರಣ ಕ್ಷೇತ್ರಕ್ಕೆ ಅನುದಾನ ತರುವುದು ಕಷ್ಟವೇನಲ್ಲ. ಆ ಮೂಲಕ ಕ್ಷೇತ್ರದ ಅಭಿವೃದ್ಧಿಯ ಹೆಸರು ಹೇಳಿ ಮತ ಕೇಳಬಹುದು.

ಡಾ. ಮಂಜುನಾಥ್ ವೈದ್ಯರಾಗಿ ಒಳ್ಳೆಯ ಹೆಸರು ಹೊಂದಿದ್ದಾರೆ. ಸಂಭಾವಿತ, ಆದರೆ ರಾಜಕಾರಣಿಯಾಗಿ
ಜನರ ಸಂಕಷ್ಟಕ್ಕೆ ಸ್ಪಂದನೆ ಇವರಿಂದ ಸಾಧ್ಯವಾ ಎಂಬ ಪ್ರಶ್ನೆಯೂ ಇದೆ. ಕೆಲ ದಿನಗಳ ಹಿಂದೆ ಮಾಧ್ಯಮದವರು ರಾಮನಗರದ ರೇಷ್ಮೆ ಮಾರುಕಟ್ಟೆಯಲ್ಲಿ ಕೆಲವು ರೈತರನ್ನು ಮಾತನಾಡಿಸಿದಾಗ ಸುರೇಶ್‌ ಏನೇನೂ ಕೆಲಸ ಮಾಡಿಲ್ಲ ಎಂದು ಹೇಳಿದ್ದೂ ಇದೆ. ಬೇರೆ ಪಕ್ಷದ ಒಲವಿರುವವರು ಹೀಗೆ ಹೇಳಿದ್ರಲ್ಲಿ ಅಚ್ಚರಿಯೇನಿಲ್ಲ. ಅದೇ ಜನ “ಮಂಜುನಾಥ್‌ ಆರೋಗ್ಯ ನೋಡ್ಕೊತಾರೆ. ಆರೋಗ್ಯ ಮುಖ್ಯ ಅಲ್ವರಾ” ಅಂತ ಮರು ಪ್ರಶ್ನೆ ಹಾಕಿದ್ರು. ಜನರ ಮುಗ್ಧತೆಯೂ ಕೆಲವೊಮ್ಮೆ ಮತವಾಗಿ ಪರಿಣಮಿಸುವುದನ್ನು ಒಪ್ಪಬೇಕಾಗುತ್ತದೆ.

ಇದುವರೆಗೆ ಸರ್ಕಾರಿ ವೈದ್ಯರಾಗಿದ್ದ ಮಂಜುನಾಥ್‌ ಈಗ ನಿವೃತ್ತರಾದ ನಂತರ ರಾಜಕಾರಣಕ್ಕೆ ಬಂದಿದ್ದಾರೆ. ಮೈತ್ರಿಯ ಕಾರಣಕ್ಕೆ ಒತ್ತಾಯಪೂರ್ವಕವಾಗಿಯೇ ರಾಜಕೀಯ ಪ್ರವೇಶ ಮಾಡಿದ್ದಾರೆ ಎಂದು ಮೇಲ್ನೋಟಕ್ಕೆ ಅನ್ನಿಸುತ್ತದೆ. ಸಂಸದರಾಗಲು ಹೊರಟ ಅವರು ಮತದಾರರ ಆರೋಗ್ಯ ನೋಡಿಕೊಳ್ಳುವುದು ಸಾಧ್ಯವೇ? ಜನ ಹೃದಯದ ಖಾಯಿಲೆ ಬಗ್ಗೆ ಸಲಹೆ, ಚಿಕಿತ್ಸೆ ಪಡೆಯಲು ಮಂಜುನಾಥ್‌ ಸಂಸದರೋ, ಮಂತ್ರಿಯೋ ಆಗಬೇಕಿಲ್ಲ. ಅದು ಅವರ ವೃತ್ತಿ. ಅವರು ವೈದ್ಯರಾಗಿ ವೃತ್ತಿ ಮುಂದುವರಿಸಿದರಷ್ಟೇ ಆ ಸೇವೆ ಜನರಿಗೆ ಸಿಗಬಹುದು. ಅದೆಲ್ಲ ಈ ಚುನಾವಣಾ ಕಣದಲ್ಲಿ ನಗಣ್ಯ.

ಇದನ್ನು ಓದಿ ಈದಿನ ಮೆಗಾ ಸರ್ವೆ 1 | ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ 17 ಮತ್ತು ಬಿಜೆಪಿ-ಜೆಡಿಎಸ್‌ ಮೈತ್ರಿಗೆ 11 ಸ್ಥಾನ; 7 ಕ್ಷೇತ್ರಗಳಲ್ಲಿ ತೀವ್ರ ಹಣಾಹಣಿ

ಆದರೂ ‘ಸಜ್ಜನ, ಹೃದ್ರೋಗ ತಜ್ಞ’ ಎಂಬ ಕಾರಣಕ್ಕೆ ಬಿಜೆಪಿ- ಜೆಡಿಎಸ್‌ ಮತ ಕೇಳಿದರೆ ಅಷ್ಟಕ್ಕೇ ಮತ ನೀಡುವಷ್ಟು ಜನ ಮುಗ್ಧರೇನಲ್ಲ. ಚುನಾವಣೆಯ ಸುಗ್ಗಿ ಕಾಲದಲ್ಲಿ ಆಮಿಷಕ್ಕೆ ಬಲಿಯಾಗದವರ ಸಂಖ್ಯೆ ಬಹಳ ಕಡಿಮೆ. ಕ್ಷೇತ್ರದ ಜನರಿಗೆ ಮಂಜುನಾಥ್‌ ಹೊಸ ಮುಖ. ಗೆಲುವು ಅಷ್ಟು ಸುಲಭವಿಲ್ಲ. ಡಿ.ಕೆ ಸುರೇಶ್‌ ಅವರಿಗೆ ತಮ್ಮ ಸಾಂಪ್ರದಾಯಿಕ ಮತಗಳು ಬೇರೆಡೆ ಹೋಗದಂತೆ ಕಾಪಾಡುವುದು ಕಷ್ಟವೇನಲ್ಲ. ಕಳೆದ ವಿಧಾನಸಭಾ ಚುನಾವಣೆ ಫಲಿತಾಂಶ, ಕಾಂಗ್ರೆಸ್‌ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಎಲ್ಲವೂ ಅವರ ಗೆಲುವಿಗೆ ಪೂರಕವಾಗಿಯೇ ಇದೆ. ಮೈಮರೆಯುವಂತಿಲ್ಲ ಎಂಬುದು ವಾಸ್ತವ.

ಕ್ಷೇತ್ರದ ಜಾತೀವಾರು ಮತದಾರರ ವಿವರ
ಒಕ್ಕಲಿಗ- 7.10 ಲಕ್ಷ
ಪ.ಜಾ, ಪ.ಪಂ- 5.20ಲಕ್ಷ
ಲಿಂಗಾಯತ- 2.6ಲಕ್ಷ
ಕುರುಬರು- 1 ಲಕ್ಷ
ಮುಸ್ಲಿಂ-2.5 ಲಕ್ಷ
ಇತರೆ- 4 ಲಕ್ಷ
ಪುರುಷರು: 14,06042
ಮಹಿಳೆಯರು: 13,57,547
ಇತರ: 321

07e0d3e8 3f8a 4b81 8fd5 641335b91d85
ಹೇಮಾ ವೆಂಕಟ್‌
+ posts

ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು.
ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ.
ಮೂರು ಪುಸ್ತಕಗಳು ಪ್ರಕಟಗೊಂಡಿವೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಹೇಮಾ ವೆಂಕಟ್‌
ಹೇಮಾ ವೆಂಕಟ್‌
ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು. ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ. ಮೂರು ಪುಸ್ತಕಗಳು ಪ್ರಕಟಗೊಂಡಿವೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

2029ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ: ತೇಜಸ್ವಿ ಯಾದವ್

2029ರ ಲೋಕಸಭೆ ಚುನಾವಣೆಯಲ್ಲಿ ಸದ್ಯ ಲೋಕಸಭೆ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ...

ಸಾರ್ವಜನಿಕ ಸಭೆಯಲ್ಲಿ ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು

ಬುಧವಾರ(ಆಗಸ್ಟ್ 20) ಬೆಳಿಗ್ಗೆ ತಮ್ಮ ನಿವಾಸದಲ್ಲಿ ನಡೆದ ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ...

ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ: ಕಲ್ಲೆ ಶಿವೋತ್ತಮರಾವ್

2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್...

ದಾವಣಗೆರೆ | ಕೆ.ಎನ್‌. ರಾಜಣ್ಣ, ನಾಗೇಂದ್ರರ ಮರಳಿ ಸಂಪುಟ ಸೇರ್ಪಡೆಗೆ ವಾಲ್ಮೀಕಿ ಸಮಾಜ ಆಗ್ರಹ

"ಇತ್ತೀಚೆಗೆ ಚುನಾವಣೆ ಆಯೋಗದ ವಿರುದ್ಧ ಕಾಂಗ್ರೆಸ್ ಆರೋಪಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿ...

Download Eedina App Android / iOS

X